Advertisement

ಆರ್ಥಿಕ ಪುನರುಜ್ಜೀವನದ ಕುರಿತು ಯೋಚಿಸುವ ಅಗತ್ಯವಿದೆ: ಶರದ್

05:01 PM Jul 26, 2020 | Suhan S |

ನಾಸಿಕ್‌, ಜು. 25: ಕೋವಿಡ್ ಲಾಕ್‌ಡೌನ್‌ ಮಧ್ಯೆ ಮಹಾರಾಷ್ಟ್ರದ ಕೈಗಾರಿಕಾ ಕೇಂದ್ರಗಳಲ್ಲಿ ಚಟುವಟಿಕೆಗಳನ್ನು ಪುನರಾರಂಭಿಸುವ ಮೂಲಕ ಆರ್ಥಿಕ ಪುನರುಜ್ಜೀವನದ ಕಡೆಗೆ ಗಮನಹರಿಸುವ ಅಗತ್ಯವಿದೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಹೇಳಿದ್ದಾರೆ.

Advertisement

ಜಿಲ್ಲೆಯ ಕೋವಿಡ್ ಪರಿಸ್ಥಿತಿಯನ್ನು ಪರಿಶೀಲಿಸಿ ಮಾತನಾಡಿದ ಅವರು, ಸದ್ಯ ಇರುವ ಆರೋಗ್ಯ ಬಿಕ್ಕಟ್ಟಿನ ಜತೆ ರಾಜ್ಯ ಆರ್ಥಿಕ ಬಿಕ್ಕಟ್ಟನ್ನು ಕೂಡ ಎದುರಿಸುವ ಪರಿಸ್ಥಿತಿ ಉಂಟಾಗಬಹುದು. ಈ ಹಿನ್ನೆಲೆ ನಾವು ಕೈಗಾರಿಕೆಗಳ ಪುನರುಜ್ಜೀವನದ ಬಗ್ಗೆಯೂ ಯೋಚಿಸಬೇಕಾಗಿದೆ. ತಳಮಟ್ಟದ ಕೋವಿಡ್ ಪರಿಸ್ಥಿತಿ ಕುರಿತು ನಿರ್ಣಯಿಸಿದ ಬಳಿಕ ಜು. 31ರ ವರೆಗೆ ಜಾರಿಯಲ್ಲಿರುವ ಲಾಕ್‌ಡೌನ್‌ ವಿಸ್ತರಣೆಯ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು ಎಂದವರು ನುಡಿದಿದ್ದಾರೆ.

ಲಾಕ್‌ಡೌನ್‌ ಸಂದರ್ಭ ತಮ್ಮ ತವರು ರಾಜ್ಯಗಳಿಗೆ ಮರಳಿರುವ ವಲಸೆ ಕಾರ್ಮಿಕರು ಮಹಾರಾಷ್ಟ್ರಕ್ಕೆ ಹಿಂತಿರುಗಲು ಬಯಸಿದ್ದಾರೆ. ಅವರನ್ನು ಹೇಗೆ ಕರೆತರಬಹುದು ಎಂಬ ಬಗ್ಗೆಯೂ ಯೋಚಿಸಬೇಕಾಗಿದೆ ಎಂದು ಶರದ್‌ ಹೇಳಿದರು. ಕೈಗಾರಿಕಾ ಚಟುವಟಿಕೆಗಳನ್ನು ಪೂರ್ಣ ಸಾಮರ್ಥ್ಯದಲ್ಲಿ ಪುನರಾರಂಭಿಸುವ ಮೂಲಕ ರಾಜ್ಯದ ಆರ್ಥಿಕತೆಯನ್ನು ಪುನರುಜ್ಜೀವನ ಗೊಳಿಸುವ ಬಗ್ಗೆ ಕಾಳಜಿ ವಹಿಸುವ ಆವಶ್ಯಕತೆಯಿದೆ ಎಂದು ಪವಾರ್‌ ಹೇಳಿದ್ದಾರೆ.

ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಕಳೆದ ಕೆಲವು ತಿಂಗಳುಗಳಿಂದ ಕೋವಿಡ್ ಪರಿಸ್ಥಿತಿ ನಿಭಾಯಿಸುವ ಕಡೆಗೆ ಗಮನಹರಿಸುತ್ತಿದ್ದಾರೆ ಎಂದ ಪವಾರ್‌, ಠಾಕ್ರೆ ನಿರ್ದಿಷ್ಟವಾಗಿ ಮುಂಬಯಿಯ ಪರಿಸ್ಥಿತಿಯ ಬಗ್ಗೆ ಗಮನ ಹರಿಸಿದ್ದಾರೆ. ಮುಂಬಯಿ ಒಂದು ದೊಡ್ಡ ನಗರವಾಗಿರುವುದರಿಂದ ಇದು ಆವಶ್ಯಕವಾಗಿದೆ. ಇದೀಗ ಮಹಾನಗರದಲ್ಲಿ ಪರಿಸ್ಥಿತಿ ಸುಧಾರಣೆಯಾಗಿದೆ ಎಂದವರು ಹೇಳಿದ್ದಾರೆ. ಠಾಕ್ರೆ ಅವರು ನಾಸಿಕ್‌ ಸೇರಿದಂತೆ ರಾಜ್ಯದ ಇತರ ಭಾಗಗಳಿಗೂ ಅವರು ಭೇಟಿ ನೀಡಲು ಬಯಸಿದ್ದಾರೆ ಎಂದು ತಿಳಿಸಿದರು.

ಪರೀಕ್ಷೆಗಳ ಹೆಚ್ಚಳವು ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದ ಶರದ್‌ ಪವಾರ್‌ ಅವರು, ಮುಂದಿನ ದಿನಗಳಲ್ಲಿ ರಾಜ್ಯ ಆರೋಗ್ಯ ಇಲಾಖೆಯು ಸೋಂಕಿತರಿಗೆ ಹಾಸಿಗೆಗಳನ್ನು ಹೆಚ್ಚಿಸಲಿದೆ ಎಂದರು. ಲಾಕ್‌ ಡೌನ್‌ ಮಧ್ಯೆ ರಂಜಾನ್‌ ಈದ್‌ ಸಂದರ್ಭ ಜನರು ಅಧಿಕಾರಿಗಳೊಂದಿಗೆ ಸಹಕರಿಸಿದ್ದಾರೆ. ಮುಂದಕ್ಕೂ ಸಹಕರಿಸುತ್ತಾರೆ ಎಂದು ನನಗೆ ವಿಶ್ವಾಸವಿದೆ ಎಂದು ಪವಾರ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next