Advertisement

ಈ ಸಲವೂ ಬರ ಚಿಂತನೆ ಅಗತ್ಯ 

09:43 AM Dec 28, 2018 | |

ರಾಜ್ಯಕ್ಕೆ ಈ ಸಲವೂ ಬರದ ಬೇಗೆ ತಟ್ಟಿದೆ. 156 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಅಂದರೆ ರಾಜ್ಯದ ಶೇ. 88 ಭಾಷ ಬರಕ್ಕೆ ತುತ್ತಾಗಿದೆ ಎಂದಾಯಿತು. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳನ್ನು ಮಾತ್ರ ಬರಪೀಡಿತ ಪ್ರದೇಶಗಳ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ರಾಜ್ಯಕ್ಕೆ ಈ ಸಲ ಮುಂಗಾರು ಮತ್ತು ಹಿಂಗಾರು ಎರಡೂ ಮಳೆ ಹಂಗಾಮು ಕೈಕೊಟ್ಟಿದೆ. ಮುಂಗಾರು ಮಳೆ ಕೊರತೆಯಾದ ಹಿನ್ನೆಲೆಯಲ್ಲಿ ಅರಂಭದಲ್ಲೇ 100 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿತ್ತು. ಇದೀಗ ಹಿಂಗಾರು ಮಳೆಯೂ ಬಾರದ ಕಾರಣ ಇನ್ನೂ 56 ತಾಲುಕುಗಳನ್ನು ಬರದ ವ್ಯಾಪ್ತಿಗೆ ಘೋಷಿಸಲಾಗಿತ್ತು. 

Advertisement

ನಾಲ್ಕು ಜಿಲ್ಲೆಗಳನ್ನು ಬರದ ವ್ಯಾಪ್ತಿಯಿಂದ ಹೊರಗಿಟ್ಟಿದ್ದರೂ ಇಲ್ಲಿ ಸಮೃದ್ಧ ಪರಿಸ್ಥಿತಿ ಇದೆ ಎಂದು ಆಡಳಿತದಲ್ಲಿರುವವರು ಭಾವಿಸಬೇಕಾಗಿಲ್ಲ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಆಗಸ್ಟ್‌ ತಿಂಗಳಲ್ಲಿ ಮಾತ್ರ ಧಾರಾಳ ಮಲೆ ಸುರಿದಿದೆ. ಬೇಸಿಗೆ ಕಾಲಿಡುವ ಮೊದಲೇ ನದಿ, ಕೆರೆಗಳು ಒಣಗಿ ಈ ಸಲ ಏಪ್ರಿಲ್‌-ಮೇ ತಿಂಗಳಲ್ಲಿ ಕುಡಿಯುವ ನೀರಿಗೆ ತತ್ವಾರವಾದೀತು ಎಂಬ ಆತಂಕ ಆವರಿಸಿದೆ. ಕರಾವಳಿ ಭಾಗಕ್ಕೂ ಹಿಂಗಾರು ಕೈಕೊಟ್ಟಿದೆ. ಪರಿಸ್ಥಿತಿ ಇಷ್ಟು ಕಳವಳಕಾರಿ ಹಂತದಲ್ಲಿದ್ದರೂ ಕಿಂಡಿ ಅಣೆಕಟ್ಟೆಗಳಿಗೆ ಹಲಗೆ ಅಳವಡಿಸುವಂಥ ಚಿಕ್ಕಪುಟ್ಟ ಕೆಲಗಳೂ ಆಗದೆ ಜನರು ಕಂಗಾಲಾಗಿದ್ದಾರೆ. ಕ್ರಮೇಣ ಈ ಭಾಗವೂ ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ. 

ರಾಜ್ಯಕ್ಕೆ ಬರವೇನೂ ಹೊಸತಲ್ಲ. ಜತೆಗೆ ಬರ ಪರಿಹಾರ ಎಂಬ ವಿಫ‌ಲ ಪ್ರಹಸನವನ್ನೂ ಜನತೆ ಸಾಕಷ್ಟು ನೋಡಿದ್ದಾರೆ. ಅಧಿಕಾರಿಗಳು, ಸಚಿವರ ಮತ್ತು ಕೇಂದ್ರದ ತಂಡ ಹೋಗಿ ಪರಿಶೀಲನೆ ನಡೆಸುವುದು, ಇವರು ನೀಡುವ ವರದಿಯನ್ನಾಧರಿಸಿ ಪರಿಹಾರ ಕ್ರಮಗಳಿಗೆ ಅನುದಾನ ಬಿಡುಗಡೆ ಯಾಗುವುದು, ಇದು ಸಂತ್ರಸ್ತರ ಕೈ ಸೇರುವಾಗ ಯಾವುದೋ ಕಾಲ ವಾಗುವುದು. ಕೆಲವಾರು ವರ್ಷಗಳಿಂದ ರಾಜ್ಯ ಪದೇ ಪದೇ ಬರಕ್ಕೆ ತುತ್ತಾಗುತ್ತಿದೆ. ಅದರಲ್ಲೂ ಕಳೆದ ಮೂರು ವರ್ಷಗಳಿಂದೀಚೆಗೆ ಬರ ಬಿಡದೆ ಕಾಡಿದೆ. ಇಂಥ ಪರಿಸ್ಥಿತಿಯಲ್ಲಿ ಯಾವುದೇ ಆಡಳಿತ ವ್ಯವಸ್ಥೆಯಾದರೂ ತಕ್ಷಣದ ಪರಿಹಾರದ ಜತೆಗೆ ಶಾಶ್ವತ ಪರಿಹಾರದ ಕ್ರಮಗಳನ್ನೂ ಕೈಗೊಳ್ಳಬೇಕಿತ್ತು.  ಬರ ಪೀಡಿತ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆ, ಜಾನುವಾರು ಗಳಿಗೆ ಮೇವು ಒದಗಿಸುವುದು, ಜನರು ಗುಳೇ ಹೋಗುವುದನ್ನು ತಡೆಯಲು ಉದ್ಯೋಗ ಖಾತರಿಯಡಿಯಲ್ಲಿ ಉದ್ಯೋಗ ಒದಗಿಸುವುದೆಲ್ಲ ತತ್‌ಕ್ಷಣಕ್ಕೆ ಆಗಬೇಕಾದ ಕೆಲಸಗಳೇ. ಹಾಗೆಂದು ಪ್ರತಿ ವರ್ಷವೂ ಇದನ್ನೇ ಮಾಡುತ್ತಿದ್ದರೆ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದು ಯಾವಾಗ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ರೈತರನ್ನು ಪರಂಪರಾಗತ ಮಳೆ ಆಧಾರಿತ ಕೃಷಿ ಪದ್ಧತಿಯಿಂದ ನವೀನ ಪದ್ಧತಿಗಳತ್ತ ತಿರುಗಿಸುವ ಯೋಜನೆಗಳನ್ನು ಜಾರಿಗೆ ತರುವ ಗಂಭೀರ ಪ್ರಯತ್ನವನ್ನು ಯಾವ ಸರಕಾರವೂ ಮಾಡಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇಸ್ರೇಲ್‌ ಮಾದರಿಯ ಕೃಷಿ ಪದ್ಧತಿಯ ಕುರಿತು ಪ್ರಸ್ತಾಪ ಮಾಡುತ್ತಿದ್ದರೂ ಅನುಷ್ಠಾನದತ್ತ ಮುತುವರ್ಜಿ ತೋರಿಸುತ್ತಿಲ್ಲ. 

ಕೃಷಿ ಪದ್ಧತಿಯನ್ನು ಬದಲಾಯಿಸಬೇಕು ಎಂಬ ಸಂಕಲ್ಪ ಅವರಿಗಿರಬಹುದು. ಆದರೆ ಅಧಿಕಾರಕ್ಕೇರಿ ಆರು ತಿಂಗಳು ಕಳೆದಿದ್ದರೂ ಇನ್ನೂ ಸಮ್ಮಿಶ್ರ ಸರಕಾರದೊಳಗಿನ ಗೊಂದಲಗಳೇ ಮುಗಿದಿಲ್ಲ. ಮಂತ್ರಿ ಮಂಡಲ ವಿಸ್ತರಣೆ, ಅತೃಪ್ತರ ಮುನಿಸು ಶಮನ, ಖಾತೆ ಹಂಚಿಕೆಯಂತಹ ಸಮಸ್ಯೆಗಳ ಬಲೆಯಲ್ಲಿ ಸಿಲುಕಿ ತೊಳಲಾಡುತ್ತಿರುವ ಈ ಸಮ್ಮಿಶ್ರ ಸರಕಾರದಿಂದ ಬರ ಸಂತ್ರಸ್ತರ ಕಲ್ಯಾಣವಾದೀತೆ ಎಂಬ ಅನುಮಾನ ಜನತೆಯಲ್ಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next