Advertisement

ಅಂಕಗಳನ್ನಾಧರಿಸಿ ಶಿಕ್ಷಕರ ಅಳೆಯಬೇಕೇ?

12:30 AM Oct 06, 2018 | |

ಪೂರ್ವಜ್ಞಾನವೂ ಮಗುವಿನ ಶೈಕ್ಷಣಿಕ ಪ್ರಗತಿಯನ್ನು ನಿರ್ಧರಿಸುತ್ತದೆ. ಪ್ರಾಥಮಿಕ ಶಾಲೆಗಳಲ್ಲಿ ಕೆಲವು ಪಾಠಗಳನ್ನೇ ಮಾಡದೆ ಇದ್ದಾಗ ಮುಂದಿನ ತರಗತಿಗಳಲ್ಲಿ ಮುಂದು ವರೆಯುವ ಅದೇ ಪಾಠಗಳಿಗೆ ಸೂಕ್ತ ಪೂರ್ವಜ್ಞಾನ ದೊರೆಯುವುದಿಲ್ಲ. ಸಮಯದ ಅಭಾವವೂ ಇರುವುದರಿಂದ ಪ್ರಸ್ತುತ ವಿಷಯವನ್ನೂ ಮಾಡುವುದರೊಂದಿಗೆ ಪೂರ್ವಜ್ಞಾನವನ್ನೂ ಒದಗಿಸುವುದು ಕಷ್ಟಸಾಧ್ಯವೆಂದೇ ಹೇಳಬಹುದು.

Advertisement

ಶಿಕ್ಷಣವೆಂಬುದು ಮಹಾಸಾಗರದಂತೆ ವಿಶಾಲವಾದ ಅರ್ಥವನ್ನು ಹೊಂದಿದೆ. ಜೀವನಕ್ಕೆ ಬೇಕಾದ ಎಲ್ಲಾ ಕೌಶಲಗಳನ್ನೂ ಕಲಿಸಿ, ಪ್ರೋತ್ಸಾಹಿಸುತ್ತಾ ಮಗುವನ್ನು ಸಮಾಜಮುಖೀಯನ್ನಾಗಿ ಮತ್ತು ಪರಿಪೂರ್ಣ ಸತøಜೆಯನ್ನಾಗಿಸುವ ಮೂಲ ಉದ್ದೇಶ ಶಿಕ್ಷಣ ವ್ಯವಸ್ಥೆಗಿರಬೇಕು. ಹಿಂದಿನ ಶಿಕ್ಷಣ ಕ್ರಮವು ಮಗುವಿನಲ್ಲಿರುವ ಕೌಶಲಗಳನ್ನು ಆಧರಿಸಿರುತ್ತಿತ್ತು. ಗುರುಕುಲ ಮಾದರಿಯ ಶಿಕ್ಷಣ ಕ್ರಮದಲ್ಲಿ ಸಾಮಾಜಿಕ, ದೈಹಿಕ, ಆಧ್ಯಾತ್ಮಿಕ, ಕೌಶಲಗಳು, ಕಲಾತ್ಮಕ ಮುಂತಾದ ಕ್ಷೇತ್ರಗಳಲ್ಲಿನ ಮಗುವಿನ ಬೆಳವಣಿಗೆಗೆ ಮುಕ್ತ ಅವಕಾಶಗಳಿರುತ್ತಿದ್ದವು. ಮಗುವಿನ ಸರ್ವತೋಮುಖ ಬೆಳವಣಿಗೆ ಸಾಧ್ಯವೆನಿಸುತ್ತಿತ್ತು. ಆದರೆ ಇಂದಿನ ಶಿಕ್ಷಣ ಪದ್ಧತಿ ಕೇವಲ ಅಂಕಗಳನ್ನು ಪಡೆಯುವ ಮಾರ್ಗವೆನಿಸಿರುವುದು ವಿಪರ್ಯಾಸ. ಶಿಕ್ಷಣದ ಎಲ್ಲಾ ಉದ್ದೇಶಗಳು ಗಾಳಿಗೆ ತೂರಿದಂತಾಗಿದೆ ಇಂದಿನ ಪರಿಸ್ಥಿತಿ. ಬದಲಾದ ಪ್ರಪಂಚಕ್ಕೆ ಮಕ್ಕಳನ್ನು ಒಗ್ಗಿಸುವ ಭರದಲ್ಲಿ ಅಂಕಗಳಿಗೆ ಮಾತ್ರ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ. ಮಗುವಿನ ಕಲಿಕೆಯ ಮಟ್ಟ ಅವನ ಬುದ್ಧಿಮತ್ತೆಯನ್ನು ಮತ್ತು ಅವನಿರುವ ಪರಿಸರವನ್ನು ಅವಲಂಬಿಸಿರುತ್ತದೆ. ಇನ್ನೂ ಅನೇಕ ಅಂಶಗಳು ಮಗುವಿನ ಕಲಿಕೆಯ ಗತಿಯನ್ನು ನಿರ್ಧರಿಸುತ್ತವೆ. ಇದನ್ನು ಮೀರಿ ಅಂಕಗಳನ್ನು ಪಡೆಯುವ ಭರಾಟೆ ಮಕ್ಕಳಲ್ಲಿ ಮತ್ತು ಶಿಕ್ಷಕರಲ್ಲಿ ಒತ್ತಡವನ್ನು ಉಂಟು ಮಾಡುತ್ತದೆ. 

ಪೋಷಕರಲ್ಲಿನ ನಿರೀಕ್ಷೆ ಮಕ್ಕಳಲ್ಲಿ ಒತ್ತಡವನ್ನುಂಟು ಮಾಡಿದರೆ ಶಿಕ್ಷಣ ಇಲಾಖೆಯ ನಿಯಮಗಳು ಮತ್ತು ನಿರೀಕ್ಷೆಗಳು ಶಿಕ್ಷಕರ ಮೇಲೆ ಬಹಳ ಒತ್ತಡ ಹೇರುತ್ತಿವೆ. ಮಗುವಿನ ಅಸಾಮರ್ಥ್ಯಕ್ಕೆ ಶಿಕ್ಷಕರನ್ನು ಹೊಣೆಯಾಗಿಸಿ ಅವರಿಗೆ ಸರ್ಕಾರದಿಂದ ದೊರೆಯುವ ಸವಲತ್ತು ಗಳನ್ನು ಶಿಕ್ಷೆಯ ರೂಪದಲ್ಲಿ ಕಡಿತಗೊಳಿ ಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಮೂಡುತ್ತದೆ. ಪ್ರಾಮಾಣಿಕವಾಗಿ ಶ್ರಮಿಸುವ ಅದೆಷ್ಟೋ ಶಿಕ್ಷಕರು ಇದ್ದಾರೆ. ಅವರ ಶ್ರಮದಲ್ಲಿ ಸ್ವಲ್ಪವೂ ಲೋಪವಾಗ ದಿದ್ದರೂ ಮಕ್ಕಳ ಕಳಪೆ ಪ್ರದರ್ಶನಕ್ಕೆ ಅವರನ್ನು ಕಾರಣೀಭೂತರನ್ನಾಗಿಸುವುದು ಸರಿಯೇ? ಎಸ್‌ಎಸ್‌ಎಲ್‌ಸಿ ಫ‌ಲಿತಾಂಶಕ್ಕೆ ಶಿಕ್ಷಕರನ್ನೇ ನೇರ ಹೊಣೆಯಾ ಗಿಸುವ ಇಲಾಖೆ ಮಗುವಿನ ಬುದ್ಧಿಮತ್ತೆಯನ್ನು ಪರಿಗಣಿಸುವುದಿಲ್ಲವೇಕೆ? ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಶಿಕ್ಷಣದ ಆರಂಭಿಕ ಹಂತವಾದ ಪ್ರಾಥಮಿಕ ಶಾಲೆಗಳಲ್ಲಿ ಒದಗಿಸುವ ವಿಷಯ ಜ್ಞಾನ ಸರಿಯಾದ ಮಟ್ಟದಲ್ಲಿದ್ದಾಗ ಮಾತ್ರ ಆ ಮಗು ಮುಂದಿನ ಹಂತದ ಜ್ಞಾನವನ್ನು ಪಡೆದುಕೊಳ್ಳುತ್ತಾ ಹೋಗುತ್ತದೆ. ಪಠ್ಯಕ್ರಮವೇ ಹಾಗೆ ಹಂತ ಹಂತವಾಗಿ ಆಯೋಜಿಸಲಾಗಿರುವುದರಿಂದ ಪೂರ್ವಜ್ಞಾನವೂ ಮಗುವಿನ ಶೈಕ್ಷಣಿಕ ಪ್ರಗತಿಯನ್ನು ನಿರ್ಧರಿಸುತ್ತವೆ. ಕೆಲವು ಪ್ರಾಥಮಿಕ ಶಾಲೆಗಳಲ್ಲಿ ಕೆಲವು ಪಾಠಗಳನ್ನೇ ಮಾಡದೆ ಇದ್ದಾಗ ಮುಂದಿನ ತರಗತಿಗಳಲ್ಲಿ ಮುಂದುವರೆಯುವ ಅದೇ ಪಾಠಗಳಿಗೆ ಸೂಕ್ತ ಪೂರ್ವಜ್ಞಾನ ದೊರೆಯುವುದಿಲ್ಲ. ಸಮಯದ ಅಭಾವವೂ ಇರುವುದರಿಂದ ಪ್ರಸ್ತುತ ವಿಷಯವನ್ನೂ ಮಾಡುವುದರೊಂದಿಗೆ ಪೂರ್ವಜ್ಞಾನವನ್ನೂ ಒದಗಿಸುವುದು ಕಷ್ಟಸಾಧ್ಯವೆಂದೇ ಹೇಳಬಹುದು. ಏಕೆಂದರೆ ಶಿಕ್ಷಕ ವೃತ್ತಿ ಕೇವಲ ಪಾಠಬೋಧನೆಗೆ ಮೀಸಲಾಗಿರದೆ ಸರಕಾರಿ ಕರ್ತವ್ಯಗಳಾದ ಚುನಾವಣೆ, ಗಣತಿ ಇತ್ಯಾದಿಗಳಲ್ಲಿಯೂ ತೊಡಗಬೇಕಾಗಿ ರುವುದರಿಂದ ಇದೆಲ್ಲದರೊಂದಿಗೆ ಶಾಲೆಯ ದಾಖಲೆಗಳನ್ನೂ ನಿರ್ವಹಿಸುವುದು ಸುಲಭದ ಮಾತಲ್ಲ. ಅದರಲ್ಲಿಯೂ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಪೂರ್ವಜ್ಞಾನ ಅತ್ಯಂತ ಅವಶ್ಯಕವಾದುದು. ಅದೆಷ್ಟೊ ಸಂದರ್ಭಗಳಲ್ಲಿ ಈ ಎರಡು ವಿಷಯಗಳಲ್ಲಿ ಮಕ್ಕಳ ಕೆಳಮಟ್ಟದ ಪ್ರದರ್ಶನಕ್ಕೆ ಪೂರ್ವಜ್ಞಾನದ ಕೊರತೆಯೂ ಮುಖ್ಯ ಕಾರಣವಾಗಿದೆ. 

 ಮನೋವಿಜ್ಞಾನವೇ ಹೇಳುವಂತೆ ಪ್ರತಿಯೊಂದು ಮಗುವಿಗೂ ವಿಭಿನ್ನವಾದ ಬದ್ಧಿಮತ್ತೆಯಿರುತ್ತದೆ. ಒಂದು ಮಗು ಕಲಿಕೆಯಲ್ಲಿ ಜಾಣನಿದ್ದರೆ ಇನ್ನೊಂದು ಮಗು ಇನ್ನಾವುದೋ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿರುತ್ತದೆ. ಬುದ್ಧಿಮತ್ತೆ ಮತ್ತು ಜ್ಞಾಪಕಶಕ್ತಿಯ ಕೊರತೆಯಿರುವ ಮಕ್ಕಳನ್ನು ಉತ್ತೀರ್ಣರಾಗುವಂತೆ ಮಾಡುವುದು ಸುಲಭ ಸಾಧ್ಯವೇ? ಶಿಕ್ಷಕರು ಕಲಿಕೆಗೆ ಸಹಾಯ ಮಾಡಬಹುದೇ ಹೊರತು ಮಗುವಿನ ತಲೆಯಲ್ಲಿ ಒತ್ತಾಯ ಪೂರ್ವಕವಾಗಿ ಏನನ್ನೂ ತುಂಬಿಸಲಾಗುವುದಿಲ್ಲ. ಕಲಿಕೆಗೆ ಪ್ರೇರೇಪಿಸುವ ಕಾಯಕ ಶಿಕ್ಷಕರದ್ದು ಆದರೆ ಕಲಿತದ್ದನ್ನು ಅಥೆìçಸಿಕೊಂಡು ಮನನಗೊಳಿಸುವುದು ಮಗುವಿನ ಸಾಮರ್ಥ್ಯಕ್ಕೆ ಬಿಟ್ಟದ್ದು. ಸೂಕ್ತ ವಿದ್ಯಾರ್ಹತೆಯನ್ನು ಪಡೆದು, ಪಾರದರ್ಶಕವಾಗಿ ನೇಮಕಗೊಂಡ ಶಿಕ್ಷಕರ ವೃತ್ತಿಸೇವೆಗೆ ಈ ಕ್ರಮವು ಪರೋಕ್ಷವಾಗಿ ಎಸಗುವ ಅವಮಾನ. 

ಶಿಕ್ಷಕರ ಬೋಧನೆಯೊಂದೇ ಮಕ್ಕಳ ಅಂಕಗಳನ್ನು ನಿರ್ಧರಿಸುವ ಅಂಶವಾಗಿರದೆ, ಮಗುವಿನ ಬುದ್ಧಿಮತ್ತೆ, ಕಲಿಕಾಮಟ್ಟ, ಜ್ಞಾಪಕಶಕ್ತಿ, ಏಕಾಗ್ರತೆ, ಪರಿಸರ, ಇತ್ಯಾದಿ ಅಂಶಗಳು ಕಾರಣವಾಗಿರುತ್ತವೆ. ಇವನ್ನೆಲ್ಲಾ ಗಮನಿಸಿಕೊಂಡು ಬೋಧಿಸುವ ಒತ್ತಡ ಶಿಕ್ಷಕರ ಮೇಲೆಯೂ ಇರುವುದರಿಂದ ಕೇವಲ ಮಕ್ಕಳ ಅಂಕಗಳನ್ನಾಧರಿಸಿ ಶಿಕ್ಷಕರ ಬೋಧನಾ ಸಾಮರ್ಥ್ಯವನ್ನು ಅಳೆದು ಅವರನ್ನು ಶಿಕ್ಷಿಸುವುದು ಅವೈಜ್ಞಾನಿಕ ಪದ್ಧತಿಯೆನಿಸಿಕೊಳ್ಳುತ್ತದೆ. 

Advertisement

ಹಿಂದೊಂದು ಕಾಲವಿತ್ತು ಶಿಕ್ಷಕ ವೃತ್ತಿಯೆಂದರೆ ಅದು ಗೌರವಾನ್ವಿತವಾದ ವೃತ್ತಿಯಾಗಿತ್ತು. ತನ್ನೆಲ್ಲ ಜ್ಞಾನವನ್ನು ಧಾರೆಯೆರೆಯುವ ವಿದ್ಯಾದಾನವನ್ನು ಮಾಡುವವನೇ ಗುರುವೆಂಬ ಗೌರವವಿರುತ್ತಿತ್ತು. ಆದರೆ ದಿನೇದಿನೇ ಬದಲಾಗುತ್ತಿರುವ ಶಿಕ್ಷಣ ಕ್ರಮಗಳ ಮತ್ತು ಕಾನೂನುಗಳ ಮಧ್ಯದಲ್ಲಿ ಪಾಠಮಾಡುವುದೇ ಕಷ್ಟಕರವೆಂಬ ಪರಿಸ್ಥಿತಿಯುಂಟಾಗಿದೆ. ದಂಡಿ ಸುವಂತಿಲ್ಲ, ಬೈಯುವಂತಿಲ್ಲ ಇತ್ಯಾದಿ ಇತ್ಯಾದಿ ಕಾನೂನುಗಳ ಮಧ್ಯದಲ್ಲಿ ಕೇವಲ ಪ್ರೇರೇಪಣೆಯಿಂದ ಎಲ್ಲರನ್ನೂ ಉತ್ತೀರ್ಣರನ್ನಾಗಿಸಬಹುದು ಎಂಬುದು ಹುಂಬತನವೆನಿಸುತ್ತದೆ. 

ಪ್ರಭಾ ಭಟ್‌ ಆತ್ರಾಡಿ

Advertisement

Udayavani is now on Telegram. Click here to join our channel and stay updated with the latest news.

Next