ಬೆಂಗಳೂರು: ಪೌರ ಕಾರ್ಮಿಕರ ಬ್ಯಾಂಕ್ ಖಾತೆ ಉಪಮುಖ್ಯಮಂತ್ರಿಗಳು ಮಾಡಿಸಿ ಕೊಡಬೇಕಾ? ಪೌರಕಾರ್ಮಿಕರ ವೇತನ ಪಾವತಿಸಬೇಕಾದವರು ಯಾರು? ಹೆಚ್ಚುವರಿ ಪೌರಕಾರ್ಮಿಕರನ್ನು ಹೇಗೆ ನೇಮಿಸಿಕೊಂಡಿರಿ? ಸುಬ್ರಹ್ಮಣ್ಯ ಸಾವಿಗೆ ಕಾರಣ ಯಾರು? ಹಣ ಇದ್ದರೂ ಸಂಬಳ ಏಕೆ ಕೊಡಲಿಲ್ಲ? ಮಂಗಳವಾರ ಮಲ್ಲೇಶ್ವರದ ಪಾಲಿಕೆಯ ಪಶ್ಚಿಮ ವಲಯ ಕಚೇರಿಯಲ್ಲಿ ಗುತ್ತಿಗೆ ಪೌರಕಾರ್ಮಿಕರಿಗೆ ವೇತನ ಪಾವತಿಯ ಕುರಿತು ಅಧಿಕಾರಿಗಳ ಜತೆ ನಡೆಸಿದ ಸಭೆಯಲ್ಲಿ ಮೇಯರ್ ಆರ್.ಸಂಪತ್‌ರಾಜ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿಯಿದು.
ಒಬ್ಬ ಪೌರಕಾರ್ಮಿಕ ಸಾವನ್ನಪ್ಪಿದರೂ, ಉಪ ಮುಖ್ಯಮಂತ್ರಿಗಳು ವೇತನ ನೀಡುವಂತೆ ಸೂಚನೆ ನೀಡಿದರೂ ಈವರೆಗೆ 551 ಪೌರಕಾರ್ಮಿಕರಿಗೆ 6 ತಿಂಗಳ ವೇತನ ಪಾವತಿಯಾಗದಿರುವ ವಿಷಯ ತಿಳಿದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಬಾಕಿ ವೇತನ ಪಾವತಿಸದಿದ್ದರೆ ಸಂಬಂಧಿಸಿದ ಅಧಿಕಾರಿಯನ್ನೇ ಹೊಣೆಯಾಗಿಸಲಾಗುವುದು ಎಂದು ಎಚ್ಚರಿಸಿದರು.
ಸಾವಿಗೆ ಕಾರಣ ಯಾರೆಂದು ಉತ್ತರಿಸಿ: ಸುಬ್ರಹ್ಮಣ್ಯ ಸಾವಿಗೆ ಕಾರಣ ಯಾರು ಎಂದು ಪ್ರಶ್ನಿಸಿದ ಮೇಯರ್, ಅಧಿಕಾರಿಗಳು ಮಾಡುವ ತಪ್ಪಿಗೆ ಜನಪ್ರತಿನಿಧಿಗಳು ತಲೆ ಕೊಡಬೇಕು. ಸುಬ್ರಹ್ಮಣ್ಯ ಸಾವಿಗೆ ಸಂಬಂಧಿಸಿದಂತೆ ಒಂದು ದಿನದಲ್ಲಿ ಲಿಖೀತ ಸ್ಪಷ್ಟನೆ ನೀಡಬೇಕು ಈ ಕುರಿತು ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸುಬ್ರಹ್ಮಣ್ಯ ಮಕ್ಕಳಿಗೆ ವಿದ್ಯಾಭ್ಯಾಸ: ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಪತ್‌ರಾಜ್, ವೇತನ ದೊರೆಯದೆ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆ ಪೌರಕಾರ್ಮಿಕ ಸುಬ್ರಹ್ಮಣ್ಯ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಸರ್ಕಾರದ ವತಿಯಿಂದ ಭರಿಸಲಾಗುತ್ತದೆ. ಅಲ್ಲದೆ, ಕೊಳೆಗೇರಿ ಮಂಡಳಿಯಿಂದ ನಿರ್ಮಿಸಲಾಗಿರುವ ಮನೆ ದೊರಕಿಸಿಕೊಡಲಾಗು ವುದು. 551 ಕಾರ್ಮಿಕರ 6 ತಿಂಗಳ ವೇತನವನ್ನು ಕೂಡಲೇ ಪಾವತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ಕುರಿತು ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸೇವೆಯಿಂದ ವಜಾ ಇಲ್ಲ: ಪಾಲಿಕೆಯ ಅಧಿಕಾರಿಗಳು ಕೆಲ ವಾರ್ಡ್‌ಗಳಲ್ಲಿ ಹೆಚ್ಚುವರಿ ಪೌರ ಕಾರ್ಮಿಕರಿಗೆ ವೇತನ ನೀಡಿ ಸೇವೆಯಿಂದ ಬಿಡುಗಡೆಗೊಳಿಸಿದ್ದಾರೆ. ಅದೇ ರೀತಿ ಎಲ್ಲ ವಾರ್ಡ್‌ಗಳಲ್ಲಿ ಮಾಡಿದ್ದರೆ ಈ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಪ್ರಸ್ತುತ ಹೆಚ್ಚುವರಿ ಪೌರ ಕಾರ್ಮಿಕರನ್ನು ತಾತ್ಕಾಲಿಕವಾಗಿ ಸೇವೆಯಿಂದ ಬಿಡುಗಡೆಗೊಳಿಸುವುದಿಲ್ಲ ಎಂದು ಮೇಯರ್ ಹೇಳಿದರು.
ಸೋಮವಾರ ಗಾಂಧಿನಗರ ವಿಧಾನ ಸಭಾ ಕ್ಷೇತ್ರದ ಕೆಲ ವಾರ್ಡ್‌ಗಳಿಗೆ ದ್ವಿಚಕ್ರ ವಾಹನದಲ್ಲಿ ತೆರಳಿ ಪೌರಕಾರ್ಮಿಕರನ್ನು ಮಾತನಾಡಿಸಿ ಅವರ ಸಮಸ್ಯೆ ತಿಳಿಸಿದ್ದೇನೆ. ಅವರಲ್ಲಿ ಕೆಲವರಿಗೆ ಬ್ಯಾಂಕ್ ಖಾತೆಗಳೇ ಇಲ್ಲ. ನಿಯಮದ ಪ್ರಕಾರ 65 ಪೌರಕಾರ್ಮಿಕರು ಕೆಲಸ ಮಾಡಬೇಕು. ಹೆಚ್ಚುವರಿ ಕಾರ್ಮಿಕರು ನೇಮಕಗೊಂಡಿದ್ದೇಗೆ ಅರ್ಥವಾಗುತ್ತಿಲ್ಲ.
●ಆರ್.ಸಂಪತ್‌ರಾಜ್, ಮೇಯರ್
ಈಗಾಗಲೇ ವೇತನ ಪಾವತಿಸದೆ ಗುತ್ತಿಗೆ ಪೌರಕಾರ್ಮಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಪಾಲಿಕೆಯ ಸಿಬ್ಬಂದಿ ವೇತನ ಪಾವತಿಸದಿದ್ದರೆ ಅವರು ಜೀವನ ನಡೆಸುವುದು ಹೇಗೆ? ಆಡಳಿತ ನಡೆಸುವಲ್ಲಿ ಕಾಂಗ್ರೆಸ್-ಜೆಡಿಎಸ್ ವಿಫಲವಾಗಿದ್ದು, ಕೂಡಲೇ ಸಿಬ್ಬಂದಿಗೆ ವೇತನ ಬಿಡುಗಡೆಗೊಳಿಸಬೇಕು.
●ಪದ್ಮನಾಭರೆಡ್ಡಿ, ವಿರೋಧ ಪಕ್ಷ ನಾಯಕ