Advertisement

ಮಡಂತ್ಯಾರು ವ್ಯಾಪ್ತಿಗೆ ಬೇಕಿದೆ ಹಿಂದೂ ರುದ್ರಭೂಮಿ

01:06 PM Feb 27, 2017 | |

ಮಡಂತ್ಯಾರು:  ಬೆಳ್ತಂಗಡಿ ತಾಲೂಕಿನ ಮಡಂತ್ಯಾರು  ಹಲವು  ಮೂಲ  ಸೌಲಭ್ಯ ಹೊಂದಿದ್ದರೂ  ಶವ ದಹನ  ಕ್ರಿಯೆಗೆ ಜಾಗವಿಲ್ಲದೆ ಪರದಾಡುವ ಸ್ಥಿತಿ ಎದುರಾಗಿದೆ.  ಪಾರೆಂಕಿ ಗ್ರಾಮದ ಬ್ರಹ್ಮಗಿರಿ ಸಮೀಪ ಸರ್ವೆ ನಂ.98/2ರಲ್ಲಿ 1.5 ಎಕರೆ ಸರಕಾರಿ ಜಾಗ ರುದ್ರಭೂಮಿಗೆ ನೀಡಬೇಕು ಎಂದು ಬೇಡಿಕೆ ಇಡಲಾಗಿದ್ದು  ಸದ್ಯಕ್ಕೆ ಅದೇ ಜಾಗವನ್ನು  ಶ್ಮಶಾನ ಎಂದು ಗುರುತಿಸಿ  ದಹನ ಕ್ರಿಯೆ ನಡೆಯುತ್ತಿದೆ. ಆದರೆ ಕಂದಾಯ ಇಲಾಖೆ ಮಾತ್ರ ಇನ್ನೂ ಅನುಮೋದನೆ ನೀಡಿಲ್ಲ.

Advertisement

ಅರಣ್ಯ ಇಲಾಖೆ ತಡೆ
ಬ್ರಹ್ಮಗಿರಿ ಮಡಂತ್ಯಾರು- ಬಂಗೇರಕಟ್ಟೆ ಮಧ್ಯಭಾಗದಲ್ಲಿದ್ದು   ಮಾರಿಗುಡಿ, ಹಾರಬೆ, ಮುಡಾಯೂರು, ಸಾಲುಮರ  ಈ ಭಾಗಕ್ಕೆ ಸಂಬಂಧಪಟ್ಟಂತೆ  ಇಲ್ಲಿ ಸುಮಾರು 600ಕ್ಕೂ ಹೆಚ್ಚು   ಹಿಂದೂ ಕುಟುಂಬಗಳಿವೆ. 5 ಸೆಂಟ್ಸ್‌ ಜಾಗದಲ್ಲಿ ಮನೆಕಟ್ಟಿ  ವಾಸಿಸುವವರು, ಕಡಿಮೆ ಜಾಗ ಇರುವವರು  ಇಲ್ಲಿ ಹೆಚ್ಚಾಗಿದ್ದಾರೆ. ಬ್ರಹ್ಮಗಿರಿಯಲ್ಲಿ ಸರಕಾರಿ ಗುಡ್ಡ ಜಾಗದಲ್ಲಿ ಹಲವು ವರ್ಷಗಳ ಹಿಂದೆ ಶವದಹನ ಕ್ರಿಯೆ  ನಡೆಯುತ್ತಿದ್ದು   ಸರಿಯಾದ ಕಾಲುದಾರಿ ಇಲ್ಲದಂತಾಗಿದೆ. ಪಂಚಾಯತ್‌ ರಸ್ತೆ ಮಾಡಲು ಹೊರಟಾಗ  ಅರಣ್ಯ ಇಲಾಖೆ ಮತ್ತು  ಕಂದಾಯ ಇಲಾಖೆ ಆಕ್ಷೇಪ ಮಾಡಿವೆ.

ಶ್ಮಶಾನ,  ಘನತ್ಯಾಜ್ಯ ಘಟಕಕ್ಕೆ ಬೇಡಿಕೆ
ಸ್ವತ್ಛತೆಯ ದೃಷ್ಟಿಯಿಂದ ನೋಡಿದರೆ ಮಡಂತ್ಯಾರು ಪ್ರದೇಶಕ್ಕೆ ತ್ಯಾಜ್ಯ ವಿಲೇವಾರಿ ಮಾಡಲು ಸೂಕ್ತ ಜಾಗವಿಲ್ಲ. ಬ್ರಹ್ಮಗಿರಿಯಲ್ಲಿ ಸುಮಾರು 4.10 ಎಕರೆ ಸರಕಾರಿ ಜಾಗವಿದ್ದು  ಈ ಎರಡು ಘಟಕ (ತಾಜ್ಯ ವಿಲೇವಾರಿ ಘಟಕ, ಶ್ಮಶಾನ)ಕ್ಕೆ  ಜಾಗ ನೀಡಬೇಕು ಎಂದು ಪಂಚಾಯತ್‌ನಿಂದ ಬೇಡಿಕೆ ಇಡಲಾಗಿದೆ. ಸದ್ಯಕ್ಕೆ ಇಲ್ಲಿಗೆ ತೆರಳಲು  ತಾತ್ಕಾಲಿಕ ಕಾಲುದಾರಿ ಮಾತ್ರ ನಿರ್ಮಾಣ ಮಾಡಲಾಗಿದೆ.

ಸರಕಾರಿ ಅನಾದೀನ ಜಾಗ
ಇದು ಸರಕಾರಿ ಅನಾದೀನ ಜಾಗವಾಗಿದ್ದು ಅರಣ್ಯ ಇಲಾಖೆ ಸಾಮಾಜಿಕ ಅರಣ್ಯದ ಗಿಡಗಳನ್ನು ನೆಟ್ಟು  ಅರಣ್ಯ ಇಲಾಖೆಗೆ ಸೇರಿದ್ದು ಎಂದು ಹೇಳುತ್ತಿದೆ. 

ಹಿಂದೂ ರುದ್ರಭೂಮಿಗೆ ಮೀಸಲಿಟ್ಟ ಜಾಗ ಕಂದಾಯ ಇಲಾಖೆಯ ಅಡಗಲಿಯಲ್ಲಿದ್ದು ಆರ್‌ಟಿಸಿಗೆ ಸೇರ್ಪಡೆಯಾಗಲು  ಮಾತ್ರ ಬಾಕಿ ಇದೆ. ಸರಿಯಾಗಿ ಪರಿಶೀಲಿಸಿ ಶೀಘ್ರ ರುದ್ರಭೂಮಿಗೆ ಅನುಮತಿ ಕೊಟ್ಟು ಅಭಿವೃದ್ಧಿಗೆ ಸ್ಪಂದಿಸಬೇಕು ಎನ್ನುವುದು ಗ್ರಾಮಸ್ಥರ ಬೇಡಿಕೆಯಾಗಿದೆ.

Advertisement

ಉದ್ಯೋಗ ಖಾತರಿಯಲ್ಲಿ 
5.5 ಲಕ್ಷ ರೂ.ಅನುದಾನ

ಬ್ರಹ್ಮಗಿರಿಯಲ್ಲಿ ಹಿಂದೂ ರುದ್ರಭೂಮಿ ನಿರ್ಮಾಣಕ್ಕೆ ಮಡಂತ್ಯಾರು ಗ್ರಾ.ಪಂ.ನ ಉದ್ಯೋಗ ಖಾತರಿಯಲ್ಲಿ 5.5 ಲಕ್ಷ ರೂ. ಅನುದಾನ ಕ್ರಿಯಾ ಯೋಜನೆಯಲ್ಲಿ ಸೇರಿದೆ. ಕಂದಾಯ ಇಲಾಖೆಯಿಂದ ಜಮೀನು ಅನುಮೋದನೆ ಆದರೆ ತತ್‌ಕ್ಷಣ ಕಾಮಗಾರಿ  ಆರಂಭಿಸಬಹುದು.
 – ನಾಗೇಶ್‌ ಎಂ., ಮಡಂತ್ಯಾರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ

ಸಮಿತಿ ರಚನೆ
ಮಹಿಷಮರ್ದಿನಿ ಸೇವಾ ಪ್ರತಿಷ್ಠಾನ ಪಾರೆಂಕಿ ಮತ್ತು ಮಡಂತ್ಯಾರು ಗ್ರಾ.ಪಂ. ಸಮ್ಮುಖದಲ್ಲಿ ಕಳೆದ ವರ್ಷ  ಶ್ಮಶಾನ ಅಭಿವೃದ್ಧಿ ಸಮಿತಿ ರಚನೆಯಾಗಿದ್ದು 10 ಜನ ಸದಸ್ಯರನ್ನು ಒಳಗೊಂಡಿದೆ. ಬ್ರಹ್ಮಗಿರಿಯಲ್ಲಿ ರಸ್ತೆ ಕಾಮಗಾರಿ ನಡೆಯುವ ಸಂದರ್ಭ ಶ್ಮಶಾನ ಜಾಗಕ್ಕೆ ನೀರು ಸರಬರಾಜಿಗೆ ಪೈಪ್‌ ಕೂಡ ಅಳವಡಿಸಲಾಗಿದೆ. ಶ್ಮಶಾನ ಜಾಗ ಅನುಮೋದನೆಗೊಂಡರೆ ಅಭಿವೃದ್ಧಿಯಾಗಿ ಜನರಿಗೆ ಸಹಾಯವಾಗಬಹುದು. 

– ಡಾ| ಕೆ.ಎಸ್‌. ಬಲ್ಲಾಳ್‌,  ಶ್ಮಶಾನ ಅಭಿವೃದ್ಧಿ  ಸಮಿತಿ ಅಧ್ಯಕ್ಷರು

ಅಭಿವೃದ್ಧಿಗೆ ಸಂಪೂರ್ಣ ಸಹಕಾರ
ಮಡಂತ್ಯಾರು ವ್ಯಾಪ್ತಿಗೆ ಅತಿ  ಮುಖ್ಯವಾಗಿ ಬೇಕಾದ ಹಿಂದೂ ರುದ್ರಭೂಮಿಗೆ ಜನರ ಸಂಪೂರ್ಣ ಸಹಕಾರ ದೊರೆಯಲಿದೆ.  ಹಲವಾರು ದಾನಿಗಳು ಇದಕ್ಕೆ ಸಹಕಾರ ನೀಡಲು  ಮುಂದಾಗುತ್ತಿದ್ದಾರೆ. ವಿವಿಧ ಸಂಘ ಸಂಸ್ಥೆಗಳು  ಇದಕ್ಕೆ  ಸಹಕರಿಸಬಹುದು. 
 – ಶ್ರೀಧರ ಆಚಾರ್ಯ, ಸುಚಿತ್ರ ಜುವೆಲರ್ì, ಮಡಂತ್ಯಾರು.

– ಪ್ರಮೋದ್‌ ಬಳ್ಳಮಂಜ

Advertisement

Udayavani is now on Telegram. Click here to join our channel and stay updated with the latest news.

Next