ಉಡುಪಿ: ಇಲ್ಲಿಯೂ ಈಗ ಉದ್ಘಾಟನೆ- ಶಿಲಾನ್ಯಾಸಗಳ ಭರಾಟೆ. ಫೆಬ್ರವರಿ ಮೊದಲ ವಾರದಲ್ಲಿ ಉಸ್ತುವಾರಿ ಸಚಿವರು ಕಾಲಿಗೆ ಚಕ್ರ ಕಟ್ಟಿದವರಂತೆ ಓಡಾಡಿದರು, ಆ ವೇಗ ಈಗಲೂ ಇದೆ.
ಒಂದು ದಿನ ಅಧಿಕಾರಿಗಳು 48 ಕಾರ್ಯಕ್ರಮ ನಿಗದಿಗೊಳಿಸಿದ್ದರು! ಬೆಳಗ್ಗೆ 8ಕ್ಕೆ ಕಾರ್ಯಕ್ರಮ ಆರಂಭಿಸಿದ ಸಚಿವರು ವೇಗವಾಗಿ ಸಾಗುತ್ತಾ ಹೋದರು. ಆದರೆ ಸಚಿವರ ವೇಗಕ್ಕೆ ಸರಿಯಾಗಿ ನಿಗದಿತ ಸ್ಥಳಗಳಲ್ಲಿ ಜನ ಸೇರಬೇಕಲ್ಲವೆ? ಇದು ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ಸವಾಲಾಯಿತು. ಸಚಿವರ ಕಾರ್ಯಕ್ರಮ ಪೂರ್ವನಿಗದಿತವೇ ಆದರೂ ಜನರನ್ನು ಸೇರಿಸುವುದು ಹೇಗೆ ಎಂಬ ಚಿಂತೆ ಅವರದು. ಕೊನೆಗೆ ಸಚಿವರ ವೇಗಕ್ಕೆ ನಿಯಂತ್ರಣ ಹಾಕಲು ಅಧಿಕಾರಿಗಳು ಪ್ರಯತ್ನಿಸಿದರು. “ಸಾರ್… ಅಲ್ಲಿನ ಸದಸ್ಯರು ಬಂದಿಲ್ಲ. ನಾವು ಅವರಿಗೆ ಕೊಟ್ಟ ಸಮಯಕ್ಕಿಂತ ತುಂಬಾ ಮುಂಚೆ ಬಂದಿದ್ದೇವೆ’ ಎಂದರು. ಇದನ್ನು ಕೇಳಿ ಸಚಿವರು, “ಅಲ್ಲರೀ… ನಾನು ಫಾಸ್ಟ್ ಎಂಬುದು ಗೊತ್ತಿಲ್ವಾ? ಬೇಗ ಟೈಮ್ ಕೊಡಬೇಕಿತ್ತಲ್ವಾ’ ಎಂದರು.
ಅಂತೂ ಸಚಿವರು ಬೇರೆ ದಾರಿ ಕಾಣದೆ ಮುಂದಿನ ಕಾರ್ಯಕ್ರಮವನ್ನು ಸ್ವಲ್ಪ ವಿಳಂಬಿಸಲು ನಿರ್ಧರಿಸಿ ಅಲ್ಲಿಯೇ ಇದ್ದ ಬೈಕ್‌ಗೆ ಒರಗಿ ನಿಂತರು. ಕೆಮರಾಕ್ಕೆ ಒಳ್ಳೆಯ ಆಹಾರ ಸಿಕ್ಕಿತು ಎಂದುಕೊಂಡ ಕೆಲವು ಸುದ್ದಿ ಚಿತ್ರ ಗ್ರಾಹಕರು ಫೋಟೋ ಕ್ಲಿಕ್ಕಿಸಲು ಮುಂದಾ ದಾಗ ಸಚಿವರು, “ಫೋಟೋ ತೆಗೆಯುವು ದಾದರೆ ಪೂರ್ತಿ ತೆಗೆಯಿರಿ, ಕಾಲು ನೆಲಕ್ಕೆ ತಾಗಿರುವುದನ್ನು ಕೂಡ ತೋರಿಸಿ. ನಾನು ಬೈಕ್ ಓಡಿಸುತ್ತಿಲ್ಲ, ಕುಳಿತದ್ದು ಮಾತ್ರ ಎಂದು ಗೊತ್ತಾಗಲಿ. ಇಲ್ಲವಾದರೆ ನಾಳೆ “ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸಿದ ಸಚಿವರು’ ಎಂಬ ಸುದ್ದಿ ನಿಮ್ಮಲ್ಲೇ ಬರಬಹುದು. ಮೊನ್ನೆ ಹೀಗೆಯೇ ಆಗಿ ಪೊಲೀಸರಿಗೆ ಫೈನ್ ಕಟ್ಟಿ ಬಂದಿದ್ದೇನೆ’ ಎಂದರು!
ಹೊಸ ಪ್ರಯೋಗ ಬೇಡ!
ಚುನಾವಣೆ ಹತ್ತಿರ ಬರುವಾಗ ಅಧಿಕಾರದಲ್ಲಿರುವವ ರದು ಹಗ್ಗದ ಮೇಲಿನ ನಡಿಗೆಯಂತಹ ಕಸರತ್ತು. ಹೆಚ್ಚು ವರಿ ಕೆಲಸ ಮಾಡಿಕೊಟ್ಟು ಜನರ ಮನಗೆಲ್ಲಬೇಕು. ಆದರೆ ಯಾವುದೇ ಕಾರಣಕ್ಕೂ ಎಡವಟ್ಟಾಗಿ ಜನರಿಗೆ ತೊಂದರೆ ಯಾಗಬಾರದು ಎಂಬ “ಎಚ್ಚರಿಕೆ’ ಚುನಾವಣೆ ಪೂರ್ವದ ದಿನಗಳಲ್ಲಿ ಹೆಚ್ಚು. ಉದಾಹರಣೆಗೆ, ರಸ್ತೆ ಅಗಲಗೊಳಿಸುವ ಕಾರ್ಯ ಕೈಗೆತ್ತಿಕೊಳ್ಳುವ ಯೋಚನೆ ಬಂದರೂ ಅದರಿಂದಾಗಿ ಭೂಮಿ ಕಳೆದುಕೊಳ್ಳುವವರ ವಿರೋಧ ಕಟ್ಟಿಕೊಳ್ಳಬೇಕಾಗಿ ಬಂದರೆ ಅದರಿಂದ ಹಿಂದೆ ಸರಿಯುತ್ತಾರೆ.
ಉಡುಪಿಯಲ್ಲಿ ಕುಡಿಯುವ ನೀರು ಮತ ತಂದು ಕೊಡುವ ಶಕ್ತಿ ಪಡೆದಿದೆ. ಅಧಿಕಾರಿಗಳು ಲಭ್ಯ ಇರುವ ನೀರನ್ನು ಎಲ್ಲರಿಗೂ ಹಂಚುವುದು ಹೇಗೆ ಎಂಬ ಲೆಕ್ಕಾಚಾರ ದಲ್ಲಿದ್ದಾರೆ. ಈ ಬಗ್ಗೆ ಇತ್ತೀಚೆಗೆ ಸಭೆ ನಡೆಯಿತು. ಉಸ್ತು ವಾರಿ ಸಚಿವರು ಹಾಜರಿದ್ದರು. ಅಧಿಕಾರಿಗಳು “ಸಾರ್… ನಾವು ನಗರವನ್ನು ಮೂರು ವಲಯಗಳಾಗಿ ವಿಂಗಡಿಸಿ ನೀರು ಪೂರೈಕೆ ಮಾಡುವ ಕುರಿತು ಹೊಸ ಪ್ರಯೋಗ ಮಾಡಲು ಸಿದ್ಧತೆ ನಡೆಸಿದ್ದೇವೆ’ ಎಂದರು. ಇದಕ್ಕೆ ಸಚಿವರು ಅತೃಪ್ತಿ ತೋರಿಸುತ್ತಾ “ನೋಡ್ರಿ… ಇದು ಎಲೆಕ್ಷನ್ ಟೈಮ್. ಹೊಸ ಪ್ರಯೋಗ, ಅದೂ ಇದೂ ಅಂತ ಎಡವಟ್ಟು ಮಾಡಲು ಹೋಗಬೇಡಿ. ಇರುವ ವ್ಯವಸ್ಥೆಯಲ್ಲೇ ಜನರಿಗೆ ಸಮಸ್ಯೆ ಆಗದಂತೆ ಹೇಗೆ ನೀರು ಪೂರೈಸಬಹುದು ನೋಡಿ’ ಎಂದರು! ಅಧಿಕಾರಿಗಳದ್ದು ಅತ್ತ ದರಿ ಇತ್ತ ಹುಲಿ ಎಂಬಂತಹ ಸ್ಥಿತಿ!
– ಸಂತೋಷ್ ಬೊಳ್ಳೆಟ್ಟು