ನವದೆಹಲಿ: ಭಾರತೀಯ ಜನತಾ ಪಕ್ಷ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟನ್ನು ಸರಿಪಡಿಸಿಕೊಂಡು, ಶಿಸ್ತು ಮತ್ತು ಒಗ್ಗಟ್ಟಿನಿಂದ ಇರಬೇಕಾದ ಅಗತ್ಯವಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ಮುಖಂಡರಿಗೆ ಕರೆ ನೀಡಿದ್ದಾರೆ.
ಇದನ್ನೂ ಓದಿ:ಉಪಚುನಾವಣೆಯಲ್ಲಿ ಮೈಮರೆತ ಸರ್ಕಾರ ರೈತರನ್ನು ಮರೆತಿದೆ: ಸಿದ್ದರಾಮಯ್ಯ
ಮಂಗಳವಾರ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ರಾಜ್ಯಾಧ್ಯಕ್ಷರು ಹಾಗೂ ಇತರ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಸೋನಿಯಾ ಗಾಂಧಿ, ಬಿಜೆಪಿ, ಆರ್ ಎಸ್ ಎಸ್ ನ ಕುಟಿಲ ಅಭಿಯಾನದ ವಿರುದ್ಧ ನಾವು ಸೈದ್ಧಾಂತಿಕವಾಗಿ ಹೋರಾಡಬೇಕು. ಒಂದು ವೇಳೆ ನಾವು ಅವರ ತಪ್ಪು ಸಂದೇಶದ ವಿರುದ್ಧ ಗೆಲ್ಲಬೇಕಾದರೆ, ಜನರ ಮುಂದೆ ಅವರ ಸುಳ್ಳುಗಳನ್ನು ಬಹಿರಂಗಪಡಿಸಬೇಕು ಎಂದು ಹೇಳಿದರು.
ನಮ್ಮ ದೇಶ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಎಐಸಿಸಿ ಪ್ರತಿದಿನ ಪ್ರಮುಖ ಮತ್ತು ವಿವರವಾದ ಹೇಳಿಕೆಗಳನ್ನು ಬಿಡುಗಡೆ ಮಾಡುತ್ತಿದೆ. ಆದರೆ ಅದು ನಮ್ಮ ಪಕ್ಷದ ಬ್ಲಾಕ್ ಮತ್ತು ಜಿಲ್ಲಾಮಟ್ಟದವರೆಗೆ ತಲುಪುತ್ತಿಲ್ಲ ಎಂಬುದು ನನ್ನ ಅನುಭವಕ್ಕೆ ಬಂದಿದೆ. ನಮ್ಮ ರಾಜ್ಯ ಮಟ್ಟದ ನಾಯಕರಲ್ಲಿಯೂ ಸಹ ಸ್ಪಷ್ಟತೆ ಮತ್ತು ಒಗ್ಗಟ್ಟಿನ ಕೊರತೆಯನ್ನು ನಾನು ಕಂಡುಕೊಂಡಿರುವೆ ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.
ದೇಶದ ಹಲವಾರು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಬಂಡಾಯ ಮತ್ತು ಆಂತರಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಸೋನಿಯಾ ಗಾಂಧಿ ಪಕ್ಷದಲ್ಲಿ ಶಿಸ್ತು ಮತ್ತು ಒಗ್ಗಟ್ಟಿನಿಂದ ಇರಬೇಕಾದ ಅಗತ್ಯವಿದೆ ಎಂದು ಕರೆ ನೀಡಿದ್ದಾರೆ.