Advertisement
ಬಸವ ಚೇತನ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 62ನೇ ಸ್ಮರಣೋತ್ಸವ, ಶರಣ ಸಂಸ್ಕೃತಿ ಉತ್ಸವದ ಅಂತಿಮ ದಿನ ಭಾನುವಾರದ ಸರ್ವ ಧರ್ಮ ಸಮಾವೇಶದಲ್ಲಿ ಬಹುತ್ವದ ಭಾರತ: ಆತಂಕಗಳು ಮತ್ತು ಸವಾಲುಗಳು… ವಿಷಯ ಕುರಿತು ಅಧ್ಯಕ್ಷೀಯ ನುಡಿಗಳಾಡಿದರು.
Related Articles
Advertisement
ಜಾತ್ಯತೀತ, ಭಾವೈಕ್ಯತೆ, ಸಮಾನತೆಯ ಬಸವಣ್ಣನವರ ವಚನ ಸಂವಿಧಾನವನ್ನು ಭಾರತ ಏನಾದರೂ ಒಪ್ಪಿಕೊಂಡಿದ್ದೇ ಆಗಿದ್ದಲ್ಲಿ ಭಾರತದ ಚಿತ್ರಣವೇ ಬದಲಾಗುತ್ತಿತ್ತು. ಆದರೆ, ಬುದ್ಧ, ಬಸವಣ್ಣನನ್ನು ಯಾರೂ ಒಪ್ಪಿಕೊಳ್ಳಲೇ ಇಲ್ಲ. ವಿವೇಕಾನಂದರನ್ನೂ ಅರ್ಧಂಬರ್ಧ ಒಪ್ಪಿಕೊಂಡಿದ್ದಾರೆ. ಇಂತಹ ಕಾಲಘಟ್ಟದಲ್ಲಿ ಭಾರತದ ಸಮಗ್ರತೆ ಸಾಧಿಸುವ ನಿಟ್ಟಿನಲ್ಲಿ ಬಸವಾದಿ ಶರಣರ ಜಾತ್ಯತೀತ ಪರಿಕಲ್ಪನೆ ಬೇಕಾಗಿದೆ ಎಂದರು.
ನಾವು ಬಸವಣ್ಣನವರ ಆಶಯಗಳನ್ನ ಅಂತರಂಗ ಮತ್ತು ಬಹಿರಂಗವಾಗಿ ಆಚರಣೆ ಮಾಡುತ್ತಿದ್ದೇವೆ. ಕೆಲವರು ಬಹಿರಂಗವಾಗಿ ಬಸವಣ್ಣನವರ ವಚನಗಳ ಹೇಳುತ್ತಾರೆ. ಅಂತರಂಗದಲ್ಲಿ ವೈದಿಕತೆಯ ಅನುಸರಿಸುತ್ತಾರೆ. ರುದ್ರಾಭಿಷೇಕ ಮಾಡುತ್ತಾರೆ. ನಾವು 18 ಜಾತಿಯವರನ್ನ ಹತ್ತಿರಕ್ಕೆ ಕರೆದು, ಮಾನವ ಪ್ರೀತಿಯಿಂದ ಕಾಣುತ್ತಿರುವುದಕ್ಕಾಗಿಯೇ ಎಲ್ಲರೂ ತಮ್ಮನ್ನು ಪ್ರೀತಿಸುತ್ತಾರೆ, ಗೌರವಿಸುತ್ತಾರೆ ಎಂದರು.
ಮಠಾಧೀಶರು, ಸ್ವಾಮಿತ್ವ ಎಂಬುದು ಕೆಲವರಿಗೆ ಮಾತ್ರ ಸೀಮಿತ ಎಂಬ ವಾತಾವರಣ, ವೈಧಿಕ ಧರ್ಮದಿಂದ ದೂರ ಇಟ್ಟಂತಹವರಿಗೆ ಸಮಾಜ ಸೇವೆ ದೀಕ್ಷೆ ನೀಡುತ್ತಿದ್ದೇವೆ. ಬಸವಣ್ಣನವರ ಬಗ್ಗೆ ಸರಿಯಾಗಿ ಅಧ್ಯಯನ ಮಾಡದೇ ಇದ್ದಂತಹವರು ಮುರುಘಾ ಶರಣರು ಎಲ್ಲಾ ಜಾತಿಯವರಿಗೆ ಮಠ ಮಾಡಿಕೊಡುತ್ತಿದ್ದಾರೆ ಎಂಬ ಟೀಕೆ ಮಾಡುತ್ತಿದ್ದಾರೆ. ನಾವು ಜಾತಿಗೊಂದು ಮಠ ಮಾಡುತ್ತಿರುವುದು ಜಾತಿ ಪ್ರೀತಿಯಿಂದ ಅಲ್ಲವೇ ಅಲ್ಲ. ಮಾನವ ಪ್ರೀತಿಯಿಂದ ಎನ್ನುವ ಮೂಲಕ ತಮ್ಮ ನಿಲುವನ್ನ ಪ್ರಬಲವಾಗಿ ಸಮರ್ಥಿಸಿಕೊಂಡರು.
ಜಾತ್ಯತೀತತೆ, ಭಾವೈಕ್ಯತೆ, ಮಾನವೀಯತೆ, ಜೀವಕಾರುಣ್ಯ, ಜೀವ, ಜನಪರ ಚಿಂತನೆ ಯಾವತ್ತೂ ಬೇಕು. ಕಾಲ, ವೃತ್ತಿ, ಜೀವನ ಧರ್ಮ ನಾವೆಲ್ಲರೂ ಮುಂದುವರೆಸಬೇಕು ಎಂದು ಶ್ರೀಗಳು ಆಶಿಸಿದರು.
ನಂದಿಗುಡಿಯ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಿವಮೊಗ್ಗದ ಡಾ| ಫ್ರಾನ್ಸಿಸ್ ಸೆರಾವೋ ಸಾನ್ನಿಧ್ಯ ವಹಿಸಿದ್ದರು. ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಪ್ರಗತಿ ಚಿಂತಕ ರಂಜಾನ್ ದರ್ಗಾ, ಸಾಮಾಜಿಕ ಹೋರಾಟಗಾರ ನಿಕೇತ್‌ರಾಜ್, ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕ ಶಾಮನೂರು ಶಿವಶಂಕರಪ್ಪ, ಕೆಪಿಟಿಸಿಎಲ್ ನಿರ್ದೇಶಕ ಶಿವಕುಮಾರ್, ಡಿ. ಬಸವರಾಜ್, ಡಾ| ಎಸ್.ಎಂ. ಎಲಿ ಇತರರು ಇದ್ದರು.
ಹುಬ್ಬಳ್ಳಿಯ ಕಾರಟಗಿ ಆಸ್ಪತ್ರೆಯ ಡಾ| ರಾಮಚಂದ್ರ ಕಾರಟಗಿ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಜೀ ಕನ್ನಡ ಸರಿಗಮಪ ಪ್ರಶಸ್ತಿ ವಿಜೇತರಾದ ಚನ್ನಪ್ಪ ಹುದ್ದಾರ್, ವಿಶ್ವಪ್ರಸಾದ್ ಮಲ್ಲಿಕಾರ್ಜುನ ಗಾಣಿಗ, ಪ್ರೇರಣಾ ಎಂ. ಧರ್ಮರಾಜ್ ಸಾಂಸ್ಕೃತಿಕ ಸಂಭ್ರಮ ನಡೆಸಿಕೊಟ್ಟರು.