Advertisement

ಮಕ್ಕಳಿಗಾಗಿ ಸಾಲ ಬೇಕೆ?

01:53 PM Dec 10, 2018 | |

ಮಕ್ಕಳನ್ನು ಜಾಸ್ತಿ ಓದಿಸಬೇಕು, ಸಾಧ್ಯವಾದರೆ, ವಿದೇಶದಲ್ಲೇ  ಓದಿಸಬೇಕು ಎಂಬ ಹಿರಿಯಾಸೆ ಹೆಚ್ಚಿನ ಪೋಷಕರಿಗೆ ಇರುತ್ತದೆ. ಆದರೆ, ಶಿಕ್ಷಣ ವೆಚ್ಚ ದುಬಾರಿಯಾಗಿರುವುದರಿಂದ, ಎಲ್ಲ ಖರ್ಚು ಹೊಂದಿಸುವ ತ್ರಾಣವಿಲ್ಲದೆ ಕಂಗಾಲಾಗುತ್ತಾರೆ. ಅಂಥ ಸಂದರ್ಭದಲ್ಲಿ ನೆರವಾಗುವುದೇ ಎಜುಕೇಷನ್‌ ಲೋನ್‌. ಮಕ್ಕಳ ಶಿಕ್ಷಣಕ್ಕೆ, ಅವರ ಭವಿಷ್ಯ ರೂಪಿಸಲಿಕ್ಕೆ ಹೀಗೆ ಸಾಲ ಮಾಡುವುದರಿಂದ ಅನೇಕ ರೀತಿಯಲ್ಲಿ ಲಾಭವೂ ಇದೆ, ನಷ್ಟವೂ ಇದೆ. ಹೀಗಿರುವಾಗ ಸಾಲ ಮಾಡುವ ಮುನ್ನ ವಿವಿಧ ಹಂತಗಳಲ್ಲಿ ಯೋಚನೆ ನಡೆಸುವುದು ಉತ್ತಮ.

Advertisement

ಮಕ್ಕಳಿಗಾಗಿ ಆಸ್ತಿ ಕೂಡಿಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಅನ್ನೋ ಮಾತಿದೆ. ಆದರೆ, ಯಾರೂ ಹಣ ಆಸ್ತಿ ಕೂಡಿಡುವುದನ್ನು ಮಾತ್ರ ಬಿಡುವುದಿಲ್ಲ. ತಮ್ಮ ಪುತ್ರ ಪೌತ್ರರಿಗಾಗಿ ಹಣ, ಆಸ್ತಿ ಕೂಡಿಡುವುದು ನಮ್ಮ ಸುತ್ತಲ ಬಹುತೇಕರ ಮನಃಸ್ಥಿತಿಯಲ್ಲಿ ಸ್ಥಾಪಿತವಾಗಿರುವ ಸಂಗತಿ. ಹೀಗೆ ಮಾಡುವುದು ತಪ್ಪಲ್ಲ. ಆದರೆ ಮಕ್ಕಳಿಗಾಗಿ ನಾವು ಮಾಡುವ ಖರ್ಚು ನಮಗೆ ಹೊರೆಯಾಗಬಾರದು.

ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ವೃತ್ತಿಪರ ಕೋರ್ಸ್‌ಗಳಿಗಾಗಿ, ಉನ್ನತ ವ್ಯಾಸಂಗಕ್ಕಾಗಿ, ವಿದೇಶದಲ್ಲಿನ ಓದಿಗಾಗಿ ಮಕ್ಕಳಿಗೆ ವ್ಯಯಿಸುವ ಹಣವಿದೆಯಲ್ಲ ಅದಕ್ಕೆ ಸಾಲಸೌಲಭ್ಯವನ್ನು ಖಾಸಗಿ ಸಹಿತ ಅನೇಕ ರಾಷ್ಟ್ರೀಕೃತ ಬ್ಯಾಂಕ್‌ಗಳು ನೀಡುತ್ತಿವೆ. ಒಂದೊಂದು ಬ್ಯಾಂಕಿನಲ್ಲೂ ಒಂದು ವಿಶಿಷ್ಟತೆ ಇದೆ. ಬೇರೆ ಸಾಲಗಳಿಗೆ ಹೋಲಿಸಿದಲ್ಲಿ ಬಡ್ಡಿ ದರವೂ ಕಡಿಮೆ. ಇಂತಹ ಸಾಲಗಳನ್ನು ಮಾಡುವುದರಿಂದ ಏನು ಪ್ರಯೋಜನ ಗೊತ್ತಾ?

ಯಾರಿಗೆ ಅಗತ್ಯ?
ಇಂದು ವಿದ್ಯಾಭ್ಯಾಸದ ವೆಚ್ಚ ತುಂಬಾ ತುಟ್ಟಿಯಾಗಿರುವುದು ಎಲ್ಲರಿಗೂ ಗೊತ್ತು. ಸ್ನಾತಕ ಅಥವಾ ಸ್ನಾತಕೋತ್ತರ ಪದವಿ, ವೃತ್ತಿಪರ ಕೋರ್ಸ್‌, ಡಿಪ್ಲೊಮಾ… ಹೀಗೆ ಅನೇಕ ಬಗೆಯ ವಿದ್ಯಾಭ್ಯಾಸ ಮಾಡುವವರಿಗೆ ಹಣಕಾಸಿನ ಸಂಪನ್ಮೂಲ ಇರಲೇಬೇಕು. ಇಲ್ಲವಾದಲ್ಲಿ ಅಂದುಕೊಂಡಿದ್ದನ್ನು ಪಡೆಯಲು ಸಾಧ್ಯವಿಲ್ಲ. ಎಲ್ಲರೂ ಹುಟ್ಟಿನಿಂದ ಶ್ರೀಮಂತರಾಗಿರುವುದಿಲ್ಲ, ಪೋಷಕರೂ ಅವರದೇ ಸಮಸ್ಯೆಗಳಲ್ಲಿರುತ್ತಾರೆ. ಹೀಗಿರುವುದರಿಂದಲೇ, ವಿದ್ಯಾರ್ಜನೆಗೆ ಸಾಲ ಕೊಡುವ ಪರಿಕಲ್ಪನೆ ಬಹಳ ವರ್ಷಗಳ ಹಿಂದೆಯೇ ಜಾರಿಗೆ ಬಂದಿದೆ. ತಮ್ಮ ಮಕ್ಕಳು ವಿದೇಶಿ ಯುನಿವರ್ಸಿಟಿಯಲ್ಲಿ ಓದಬೇಕು, ಪೋಸ್ಟ್  ಗ್ರಾಜ್ಯುಯೇಶನ್‌ ಮಾಡಬೇಕು, ಉನ್ನತ ಶಿಕ್ಷಣವನ್ನು ಹೆಸರಾಂತ ಯುನಿವರ್ಸಿಟಿಯಲ್ಲಿ ಪಡೆಯಬೇಕು ಎಂಬ ಮಹದಾಸೆ ಬಹುತೇಕ ಎಲ್ಲರ ಪೋಷಕರ ಮನದಲ್ಲಿ ಇರುತ್ತದೆ. ಅದನ್ನು ನೀಗಿಸುವ ನಿಟ್ಟಿನಲ್ಲಿ ಸಹಾಯಕವಾಗುವುದು ಎಜ್ಯುಕೇಶನ್‌ ಲೋನ್‌ ಎಂಬ ಮಂತ್ರದಂಡ.

ಸೆಕ್ಯುರಿಟಿ ಇಲ್ಲ
ನಮ್ಮ ದೇಶದಲ್ಲಿ ಬಹುತೇಕ ಎಲ್ಲ ಸಾರ್ವಜನಿಕ ವ್ಯವಹಾರದ ಬ್ಯಾಂಕ್‌ಗಳು ಈ ಸಾಲವನ್ನು ಕೊಡುತ್ತವೆ. ನಾಲ್ಕು ಲಕ್ಷದವರೆಗಿನ ಸಾಲವನ್ನು ಪಡೆಯಲು ಯಾವುದೇ ಸೆಕ್ಯುರಿಟಿ ಅಥವಾ ಮಾರ್ಜಿನ್‌ ಮನಿ ಅಗತ್ಯವಿರುವುದಿಲ್ಲ. ನಾಲ್ಕು ಲಕ್ಷದಿಂದ ಮೇಲ್ಪಟ್ಟ ಮೊತ್ತದ ಸಾಲವಾಗಿದ್ದಲ್ಲಿ ಥರ್ಡ್‌ ಪಾರ್ಟಿ ಗ್ಯಾರಂಟಿ ಅಗತ್ಯವಿರುತ್ತದೆ. ದೇಶೀಯವಾಗಿ ಯಾವುದೇ ಯೂನಿವರ್ಸಿಟಿ ಅಥವಾ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಲು ಸಾಲ ಬೇಕಿದ್ದಲ್ಲಿ ಹತ್ತು ಲಕ್ಷ ರೂ. ವರೆಗಿನ ಸಾಲ ಪಡೆಯುವುದಕ್ಕೆ ಅವಕಾಶವಿರುತ್ತದೆ. ಒಂದು ವೇಳೆ ದೇಶದಲ್ಲಿ ವಿದ್ಯಾಭ್ಯಾಸ ಮಾಡುವುದಕ್ಕೆ ಸಾಲದ ಅಗತ್ಯವಿದ್ದರೆ 30 ಲಕ್ಷ ರೂ. ವರೆಗಿನ ಮೊತ್ತದ ಸಾಲ ಪಡೆಯುವುದಕ್ಕೆ ಅವಕಾಶವಿರುತ್ತದೆ. ವಿದೇಶದಲ್ಲಿಯೇ ಓದುವುದಾದರೆ ವಿದೇಶ ಪ್ರಯಾಣಕ್ಕೆ ಹೋಗಲು ತಗಲುವ ವೆಚ್ಚವನ್ನೂ ಈ ಸಾಲದಲ್ಲಿ ಸೇರಿಸಿಕೊಳ್ಳಬಹುದು. 

Advertisement

ಇವೆಲ್ಲ ಸೇರಿಸಿ
ಉದ್ದೇಶಿತ ಕೋರ್ಸ್‌ ಅನ್ನು ಪೂರ್ಣಗೊಳಿಸಲು ಬೇಕಾಗುವ ಎಲ್ಲ ಖರ್ಚುಗಳು, ಅಧ್ಯಯನ ಪ್ರವಾಸ, ಥೀಸಿಸ್‌ ಇಂಥವೇ ವಿಚಾರಗಳಿಗೆ ತಗಲುವ ಖರ್ಚನ್ನು ಕೂಡ ಸಾಲದ ಬೇಡಿಕೆಯಲ್ಲಿ ಸೇರಿಸಿಕೊಳ್ಳಬಹುದು. ಸಾಲದ ಮೊತ್ತವನ್ನು ನೇರವಾಗಿ ವಿದ್ಯಾಸಂಸ್ಥೆಗೆ ಆಯಾ ಕಾಲಮಿತಿಯಲ್ಲಿ ಡಿ.ಡಿ. ಅಥವಾ ಆನ್‌ಲೈನ್‌ ಪೇಮೆಂಟ್‌ ಮೂಲಕ ಬ್ಯಾಂಕ್‌ಗಳು ಪಾವತಿಸುತ್ತವೆ.

ಮರುಪಾವತಿ ಹೀಗೆ
ಸಾಲ ಪಡೆದು ಓದಿದ ಅನಂತರದಲ್ಲಿ ಅಂದರೆ ಉದ್ದೇಶಿತ ಪದವಿ ಪಡೆದ ಆರು ತಿಂಗಳ ಬಳಿಕ ಸಾಲದ ಮರುಪಾವತಿ ಆರಂಭವಾಗುತ್ತದೆ. ಹನ್ನೆರಡು ವರ್ಷಗಳಲ್ಲಿ ಸಾಲವನ್ನು ಸಂಪೂರ್ಣವಾಗಿ ಚುಕ್ತಾ ಮಾಡಬೇಕಾಗುತ್ತದೆ. ಸಾಲದ ಅಸಲು ಮರುಪಾವತಿ ಆರಂಭ ಮಾಡುವ ತನಕ ಅವಧಿಗೆ ಬಡ್ಡಿಯನ್ನು ಮಾತ್ರ ವಿಧಿಸಲಾಗುತ್ತದೆ.

ವಿಮಾ ಸೌಲಭ್ಯವಿದೆಯೇ?
ಹೌದು, ಎಲ್ಲ ಸಾಲಗಳಿಗೂ ವಿಮಾ ಕವರೇಜ್‌ ಮಾಡಿಸುವುದು ಕಡ್ಡಾಯ. ಅದರಂತೆ ಈ ಸಾಲಕ್ಕೂ ವಿಮೆ ಮಾಡಿಸಬೇಕಾಗುತ್ತದೆ. ಅದಕ್ಕೆ ತಗಲುವ ಪ್ರೀಮಿಯಂ ಮೊತ್ತವನ್ನು ಸಾಲಗಾರ ಕಟ್ಟಬೇಕಾಗುತ್ತದೆ. ಒಂದೊಮ್ಮೆ ಸಾಲ ಪಡೆದ ವ್ಯಕ್ತಿ ಮರುಪಾವತಿಯ ಅವಧಿಗೆ ಮುನ್ನ ಮರಣಿಸಿದಲ್ಲಿ ವಿಮಾ ಸಂಸ್ಥೆ ಆ ಸಾಲದ ಬಾಕಿ ಮೊತ್ತವನ್ನು ಪಾವತಿಸುತ್ತದೆ ಮತ್ತು ಅವಲಂಬಿತರಿಗೆ ಯಾವುದೇ ಹೊರೆ ಬೀಳುವುದಿಲ್ಲ.

ಕೇಂದ್ರ ಸರಕಾರದ ಬಡ್ಡಿ ಸಬ್ಸಿಡಿ ಯೋಜನೆ
ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆಯ ಅಡಿಯಲ್ಲಿ ಸಹಾಯಧನ ಯೋಜನೆ ರೂಪಿತವಾಗಿದ್ದು, ವಾರ್ಷಿಕ ಗರಿಷ್ಠ 4.50 ಲಕ್ಷ ರೂ. ಒಳಗಿನ ವರಮಾನ ಹೊಂದಿರುವ ಪೋಷಕರ ಮಕ್ಕಳಿಗೆ ಈ ಸೌಲಭ್ಯ ಬಳಸಿಕೊಳ್ಳಬಹುದು. ಇದು ವಿದೇಶೀಯವಾಗಿ ಪಡೆಯಲಾಗುವ ವಿದ್ಯಾಸಾಲಕ್ಕೆ ಮಾತ್ರ ಅನ್ವಯವಾಗುವುದಾಗಿದ್ದು, ಈ ಸೌಲಭ್ಯವನ್ನು ಮಧ್ಯದಲ್ಲಿ ಕೋರ್ಸ್‌ ಕೈಬಿಡುವ ವಿದ್ಯಾರ್ಥಿಗಳಿಗೆ ಕೊಡಲಾಗುವುದಿಲ್ಲ.

ಎಜುಕೇಶನ್‌ ಲೋನ್‌ – ಲಾಭಗಳೇನು?
ವಿದ್ಯಾರ್ಥಿ ತನ್ನ ವಿದ್ಯಾರ್ಜನೆಯ ಅವಧಿಯಲ್ಲಿ ಬ್ಯಾಂಕ್‌ ಸಾಲ ಮಾಡಿ ಓದುವವನಾಗಿದ್ದರೆ ಆತನಲ್ಲಿ ಜವಾಬ್ದಾರಿ ಮೂಡುತ್ತದೆ. ಹೀಗಾಗಿ, ಬೇಕಾಬಿಟ್ಟಿಯಾಗಿ ಕಾಲ ಕಳೆಯುವುದಿಲ್ಲ. ತಾನು ಓದಿದ ಅನಂತರ ಉದ್ಯೋಗಸ್ಥನಾಗಿ ಸಾಲ ತೀರುವಳಿ ಮಾಡಬೇಕು ಎಂಬ ಹೊಣೆಗಾರಿಕೆ ಆತನಲ್ಲಿ ಮೂಡುವುದರ ಜತೆಗೆ, ತಾನು ಸರಿದಾರಿಯಲ್ಲಿ ಮುನ್ನುಗ್ಗಬೇಕು ಎಂಬ ಮೂಗುದಾರವಾಗಿ ಈ ವಿದ್ಯಾಸಾಲ ಕೆಲಸ ಮಾಡುತ್ತದೆ. ಪ್ರತಿವರ್ಷ ತಾನು ಪಡೆದ ಅಂಕಗಳ ಮಾಹಿತಿಯನ್ನು ಸಾಲದಾತ ಬ್ಯಾಂಕಿಗೆ ಸಲ್ಲಿಸುತ್ತಿರಬೇಕು  ಜತೆಗೆ ಫೇಲ್‌ ಆಗುವಂತಿಲ್ಲ. ತೀರಾ ಕಡಿಮೆ ಅಂಕಗಳನ್ನು ಪಡೆಯುವಂತೆಯೂ ಇಲ್ಲ. ಆದ್ದರಿಂದ ಎಜುಕೇಷನ್‌ ಲೋನ್‌ ಪಡೆದವರು ಆತ ಹೆಚ್ಚು ಅಂಕ ಪಡೆಯಲು ಪ್ರಯತ್ನಗಳನ್ನು ಹಾಕುತ್ತಲೇ ಇರುತ್ತಾರೆ.

ಯಾವ ದಾಖಲೆ ಬೇಕು?
· ಫೋಟೋ ಇರುವ ಗುರುತಿನ ಚೀಟಿ
· ವಾಸಸ್ಥಳದ ಪುರಾವೆಯನ್ನು ತೋರುವ ದಾಖಲೆ.
· ಸಾಲ ಪಡೆಯುವ ವ್ಯಕ್ತಿ ವೇತನದಾರನಾಗಿದ್ದಲ್ಲಿ
ಆತನ/ ಆಕೆಯ ಇತ್ತೀಚಿನ ಸಂಬಳ ಚೀಟಿ.
· ಸಾಲ ಪಡೆಯುವ ವ್ಯಕ್ತಿ ವಿದ್ಯಾರ್ಥಿ ಆಗಿದ್ದು, ವ್ಯಕ್ತಿಗತ ವರಮಾನ ಇಲ್ಲದೇ ಇದ್ದಲ್ಲಿ ತಂದೆಯ ಅಥವಾ ತಾಯಿಯ ವರಮಾನದ ಪುರಾವೆ- ಇತ್ತೀಚಿನ ಎರಡು ವರ್ಷಗಳದ್ದಾಗಿರಬೇಕು.
· ಉದ್ದೇಶಿತ ಕೋರ್ಸ್‌ ಮಾಡುವುದಕ್ಕೆ ಸಂಬಂಧಪಟ್ಟಂತೆ ಯುನಿವರ್ಸಿಟಿ ಅಥವಾ ವಿದ್ಯಾಸಂಸ್ಥೆ ನೀಡಿರುವ ಅಡ್ಮಿಶನ್‌ ಲೆಟರ್‌.
· ಭರ್ತಿ ಮಾಡಿದ ಸಾಲದ ಅರ್ಜಿ, ಇತ್ತೀಚಿನ ಎರಡು ಪಾಸ್‌ ಪೋರ್ಟ್‌ ಸೈಜಿನ ಭಾವಚಿತ್ರಗಳು,
ವಿದ್ಯಾಭ್ಯಾಸಕ್ಕೆ ತಗಲುವ ವೆಚ್ಚಗಳ ಕುರಿತಾದ ಸವಿವರ
· ಸಾಲ ಪಡೆಯುವ ವಿದ್ಯಾರ್ಥಿಯ ಪೋಷಕರ ಆಸ್ತಿ ಮತ್ತು ಹೊಣೆಗಾರಿಕೆಗಳ ಸ್ಟೇಟ್‌ಮೆಂಟ…,
ಪೋಷಕರ ವರಮಾನದ ಪ್ರೂಫ್.

ಈ ವೆಚ್ಚಗಳನ್ನೂ ಸೇರ್ಪಡೆ ಮಾಡಬಹುದು?
· ಟ್ಯೂಷನ್‌ ಫೀ ಮತ್ತು ಕೋರ್ಸ್‌ ಫೀ (ಪೂರ್ಣವಾಗಿ)
· ಪರೀಕ್ಷಾ ಶುಲ್ಕ, ಲೈಬ್ರರಿ ಮತ್ತು ಲ್ಯಾಬೋರೇಟರಿ ಶುಲ್ಕ
· ಕಾಷನ್‌ ಡಿಪಾಜಿಟ್‌ ಇದ್ದಲ್ಲಿ
· ಬೇಕಾಗುವ ಪುಸ್ತಕಗಳ, ಉಪಕರಣಗಳು ಮತ್ತು
ಇತರೆ ಪರಿಕರಗಳ ವೆಚ್ಚ

ನಿರಂಜನ 

Advertisement

Udayavani is now on Telegram. Click here to join our channel and stay updated with the latest news.

Next