Advertisement

ಬಡವರ ಫ್ರಿಡ್ಜ್ ಬೇಕೇನು?

12:30 AM Mar 20, 2019 | |

ಗಂಡನ ದುಡಿಮೆಯಿಂದ ಸಂಸಾರ ನಡೆಯುವುದು ಕಷ್ಟ ಅನ್ನಿಸಿದಾಗ, ಮಡಕೆ ವ್ಯಾಪಾರಕ್ಕೆ ಮುಂದಾದರು ಲಕ್ಷ್ಮಮ್ಮ. ಆ ವ್ಯಾಪಾರವೇ ಈಗ ಇಡೀ ಕುಟುಂಬಕ್ಕೆ ಅನ್ನದ ದಾರಿ ತೋರಿಸಿದೆ…

Advertisement

ಆಧುನಿಕ ಹೆಣ್ಣು ವಿದ್ಯಾವಂತಳು. ವ್ಯವಹಾರ ಚಾತುರ್ಯ ಉಳ್ಳವಳು. ವ್ಯಾಪಾರ, ಉದ್ಯಮ ಕ್ಷೇತ್ರಗಳಲ್ಲಿ ಆಕೆಯ ಹೆಜ್ಜೆಗುರುತುಗಳು ಶ್ಲಾಘನೀಯ. ಸ್ವಾರಸ್ಯವೆಂದರೆ, ಓದು- ಬರಹವಿಲ್ಲದ, ಬಡ ಕುಟುಂಬದಿಂದ ಬಂದ ಕೆಲವು ಮಹಿಳೆಯರು ಕೂಡಾ, ವ್ಯಾಪಾರದಲ್ಲಿ ಹಿಂದೆ ಬಿದ್ದಿಲ್ಲ. ಬದುಕಿನಲ್ಲಿ ಎದುರಾದ ಅನಿವಾರ್ಯಗಳೇ ಅವರಲ್ಲಿ ಛಲ ಹುಟ್ಟಿಸಿ, ಸ್ವಾವಲಂಬಿ ಬದುಕಿಗೆ ದಾರಿ ಕಂಡುಕೊಳ್ಳುವಂತೆ ಮಾಡಿದೆ.

ಈಕೆಯ ಹೆಸರು ಲಕ್ಷ್ಮಮ್ಮ. ನಾಲ್ಕು ಜನರಿರುವ ಬಡ ಕುಟುಂಬ ಆಕೆಯದ್ದು. ಗಂಡನಿಗೆ ನಿಶ್ಚಿತ ಆದಾಯವಿಲ್ಲ. ಗಂಡನ ಆದಾಯದಿಂದ ಕುಟುಂಬ ನಿರ್ವಹಣೆ ಅಸಾಧ್ಯ ಎಂದಾದಾಗ, ಲಕ್ಷ್ಮಮ್ಮನ ಕೈ ಹಿಡಿದಿದ್ದು ಮಡಕೆ ವ್ಯಾಪಾರ. ಅದಕ್ಕೆ ಗಂಡ-ಮಕ್ಕಳೂ ನೆರವಾಗುತ್ತಿದ್ದಾರೆ.

ವಿಜಯಪುರದ ದರ್ಬಾರ ಹೈಸ್ಕೂಲ್‌ ರಸ್ತೆ ಪಕ್ಕದ ಜಾಗ ಲಕ್ಷ್ಮಮ್ಮನ ಅಂಗಡಿ ಇರುವ ಸ್ಥಳ. ಸಾಲ ಮಾಡಿ, ಆ ಹಣದಿಂದ ಮಡಕೆ ಖರೀದಿಸಿ ತಂದು, ಬಿರುಬಿಸಿಲಿನಲ್ಲೇ ವ್ಯಾಪಾರ ನಡೆಸುತ್ತಾರೆ. ಮಡಕೆಯ ಗಾತ್ರದ ಮೇಲೆ ದರ ನಿಗದಿಯಾಗುತ್ತದೆ. ಅಂದರೆ ಸಣ್ಣ ಮಡಕೆಗೆ 100- 150 ರೂ., ದೊಡ್ಡ ಮಡಕೆಗಳಿಗೆ 400- 500 ರೂಪಾಯಿ. ಬೇಸಿಗೆಯ ದಿನಗಳಲ್ಲಿ ಮಡಕೆಯ ವ್ಯಾಪಾರ ಜೋರಾಗಿರುತ್ತದೆ. ಉಳಿದ ದಿನಗಳಲ್ಲಿ ಸಾಧಾರಣ ವ್ಯಾಪಾರ ನಡೆಯುತ್ತದೆ. ಮಳೆಗಾಲದಲ್ಲಿ ಕುಂಡಾಳಿ (ಹೂವಿನ ಕುಂಡ)ಗಳನ್ನು ಮಾರುತ್ತಾರೆ. “ಬೇಸಿಗೆಯಲ್ಲಿ ಒಂದು ದಿನಕ್ಕೆ 1000-1500 ರೂ.ವರೆಗೂ ಗಳಿಸಬಹುದು. ಆದರೆ, ಕೆಲವು ದಿನ ಖಾಲಿ ಕೈಯಲ್ಲಿ ಮರಳಿದ್ದೂ ಇದೆ’ ಅನ್ನುತ್ತಾರೆ ಲಕ್ಷ್ಮಮ್ಮ.

ಬಡ್ಡಿ, ಬಾಡಿಗೆ ಖರ್ಚು
ಈ ವ್ಯಾಪಾರದಿಂದ ಬಂದ ಹಣದಿಂದ ಸಾಲ- ಬಡ್ಡಿ ಮರುಪಾವತಿ ಮಾಡಿ, ಉಳಿದ ಹಣದಿಂದ ಜೀವನ ಸಾಗಿಸುತ್ತಿದ್ದಾರೆ. ಸ್ವಂತ ಮನೆಯೂ ಇಲ್ಲದ ಕಾರಣ, ಮನೆಯ ಬಾಡಿಗೆಯ ಖರ್ಚೂ ಇವರಿಗಿದೆ. ಇದ್ದುದರಲ್ಲಿಯೇ ಸಂತೋಷದಿಂದ ಜೀವನ ನಡೆಸಬೇಕು ಎಂಬುದು ಲಕ್ಷ್ಮಮ್ಮನ ಮಾತು. 

Advertisement

ಮಡಕೆ, ಕುಂಡಾಳಿ ವ್ಯಾಪಾರವೇ ನಮ್ಮ ಕುಲ ಕಸುಬು. ನಮ್ಮ ಮನೆಯವರು ಬೇರೆ ಕೆಲಸಕ್ಕೆ ಹೋಗುವುದಿಲ್ಲ. ಬಡತನದಿಂದ ಸಂಸಾರ ನಡೆಸುವುದೇ ಕಷ್ಟವಾದಾಗ ನಾನೇ ವ್ಯಾಪಾರಕ್ಕೆ ಇಳಿದೆ. ಅದರಿಂದ ಬಂದ ಹಣದಿಂದ ಮನೆ ಬಾಡಿಗೆ ಮತ್ತು ಇತರೆ ಖರ್ಚನ್ನು ನಿಭಾಯಿಸುತ್ತೇನೆ. ಮಗಳು ಪಿಯುಸಿ ಓದುತ್ತಿದ್ದಾಳೆ. ಅವಳ ಓದಿನ ಖರ್ಚು ಕೂಡ ಇದರಲ್ಲೇ ಕಳೆಯುತ್ತದೆ.
ಲಕ್ಷ್ಮಮ್ಮ ನಾಗಪ್ಪ

ಸಂಗೀತಾ ಗ. ಗೊಂಧಳೆ

Advertisement

Udayavani is now on Telegram. Click here to join our channel and stay updated with the latest news.

Next