Advertisement

ನಂದಿನಿ ನದಿಯ ವಿಶಾಲ ಸೇತುವೆಯಲಿ ಬೇಕಿದೆ ಮುನ್ನೆಚ್ಚರಿಕೆ

12:36 PM Oct 23, 2017 | Team Udayavani |

ಸಸಿಹಿತ್ಲು: ಅಂತಾರಾಷ್ಟ್ರೀಯವಾಗಿ ಗುರುತಿಸಿಕೊಂಡಿರುವ ಸಸಿಹಿತ್ಲು ಬೀಚ್‌ ಹಾಗೂ ಕರಾವಳಿಯ ಶ್ರದ್ಧಾಕೇಂದ್ರಗಳಲ್ಲಿ ಒಂದಾಗಿರುವ ಶ್ರೀ ಭಗವತಿ ದೇವಸ್ಥಾನ ಪ್ರದೇಶದ ಸಂಪರ್ಕಕ್ಕೆ ಒಂದು ವರ್ಷದಿಂದ ತೆರೆದುಕೊಂಡಿರುವ ವಿಶಾಲವಾದ ಕದಿಕೆ ಸೇತುವೆ ಇದೀಗ ಜನಾಕರ್ಷಣೆ ಪಡೆಯುತ್ತಿದೆ.

Advertisement

ಶಾಸಕ ಕೆ. ಅಭಯಚಂದ್ರ ಜೈನ್‌ ಅವರು ವಿಶೇಷವಾಗಿ ಲೋಕೋಪಯೋಗಿ ಇಲಾಖೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಮೂಲಕ ನಬಾರ್ಡ್‌ನ ಯೋಜನೆಯಾಗಿ ಒಟ್ಟು 5 ಕೋಟಿ ರೂ. ವೆಚ್ಚದ ಸೇತುವೆ ಸುಮಾರು ಮೂರು ವರ್ಷದ ಕಾಲಮಿತಿಯಲ್ಲಿ ನಿರ್ಮಾಣವಾಗಿದೆ. ಅಂದಾಜು 300 ಮೀ. ಉದ್ದದ 40 ಮೀ. ಅಗಲದ ಈ ಸೇತುವೆ ಸಸಿಹಿತ್ಲು ಪ್ರದೇಶಕ್ಕೆ ಸಂಚರಿಸಲು ಹಳೆಯಂಗಡಿ, ಪಡುಪಣಂಬೂರು ಹೆದ್ದಾರಿಯಿಂದ ನೇರ ಸಂಪರ್ಕಕ್ಕೆ ಸಹಕಾರಿಯಾಗಿದೆ.

ಜನಾಕರ್ಷಣೆ ಪಡೆಯುತ್ತಿದೆ
ವಿಶಾಲವಾದ ಸೇತುವೆ ಪ್ರವಾಸಿಗರಿಗೆ ಸಂಚರಿಸಲು ಅನುಕೂಲವಾಗಿದೆ. ನಂದಿನಿ ನದಿಯಲ್ಲಿ ಗಾಳ ಹಾಕಿ ಮೀನು ಹಿಡಿಯುವವರ ಸಂಖ್ಯೆಯೂ ಹೆಚ್ಚಾಗಿದೆ. ಸಂಜೆ ವೇಳೆ ವಿಹಾರಿಗಳ ತಂಡ ಸೇತುವೆಯನ್ನು ಬಳಸುತ್ತಿದೆ. ಎಡ-ಬಲದಲ್ಲಿ ವಿಶಾಲವಾದ ನಂದಿನಿ ನದಿಯ ತೀರ ಇರುವುದರಿಂದ ಕೆಮರಾ ಕಣ್ಣಿಗೆ ಸೊಗಸಾದ ದೃಶ್ಯ ಕಾವ್ಯವೂ ಸಿಗುತ್ತದೆ. ಈ ಪ್ರದೇಶದ ಮನೆಯವರು ತಮ್ಮ ವಿಳಾಸವನ್ನು ಕದಿಕೆ ನೂತನ ಸೇತುವೆಯ ಬಳಿ ಎಂದೇ ಹೇಳುತ್ತಿದ್ದಾರೆ.

ಅರೆಮರ್ಲೆರ್‌ ಸಿನೆಮಾದಲ್ಲಿ ಬಳಕೆ
ದೇವದಾಸ್‌ ಕಾಪಿಕಾಡ್‌ ಅವರು ನಿರ್ದೇಶಿಸಿರುವ ಯಶಸ್ವಿ ತುಳು ಚಿತ್ರ ‘ಅರೆಮರೆಲರ್‌’ದ ನಾಯಕ- ನಾಯಕಿಯ ಯುಗಳ ಗೀತೆಗೆ ಈ ಸೇತುವೆಯನ್ನು ಸಮರ್ಥವಾಗಿ ಬಳಸಿಕೊಳ್ಳಲಾಗಿದೆ. ಇದು ಇತರ ಸಿನೆಮಾಗಳ ನಿರ್ದೇಶಕರಿಗೂ ಪ್ರೇರಣೆಯಾಗುವ ಸಾಧ್ಯತೆಯಿದೆ.

ಸೇತುವೆಯ ದುರ್ಬಳಕೆ
ಕದಿಕೆ ಸೇತುವೆಯನ್ನು ದುರ್ಬಳಕೆ ಮಾಡುವವರ ಸಂಖ್ಯೆಯೂ ಕಡಿಮೆಯೇನಿಲ್ಲ, ಸೇತುವೆಯಲ್ಲಿ ಅಡ್ಡಾದಿಡ್ಡಿ ವಾಹನ ಚಲಾವಣೆ, ಬೈಕ್‌ನಲ್ಲಿ ವೀಲಿಂಗ್‌ ಮಾಡುವುದು, ರಾತ್ರಿ ವೇಳೆ ಮದ್ಯಪಾನ ಮಾಡಿ ಬಾಟಲಿಗಳನ್ನು ಪಕ್ಕದ ತೋಟಗಳಿಗೆ ಎಸೆಯುವುದು, ಸೇತುವೆಯ ಮೇಲಿಟ್ಟು ಕಲ್ಲು ಹೊಡೆಯುವುದು, ಸಭ್ಯ ಪ್ರವಾಸಿಗರಿಗೆ ಕಿರುಕುಳ ನೀಡುವ ಪುಂಡರೂ ಬರುತ್ತಿದ್ದಾರೆ. ಸೇತುವೆ ಪಕ್ಕದ ತೋಟಗಳಿಂದ ಎಳನೀರು ಕದ್ದು ಕುಡಿಯುವವರೂ ಇದ್ದಾರೆ. ಈ ಬಗ್ಗೆ ಪಡುಪಣಂಬೂರು ಗ್ರಾಮ ಸಭೆಯಲ್ಲೂ ಗ್ರಾಮಸ್ಥರು ಅಹವಾಲು ತೋಡಿಕೊಂಡಿದ್ದರು. ಸೇತುವೆಯಲ್ಲಿ ನಡೆಯುವ ಅಸಭ್ಯ ವರ್ತನೆ ತಡೆಯಲು ಪೊಲೀಸ್‌ ಬೀಟ್‌ ಅಗತ್ಯವಿದೆ. ಕತ್ತಲಲ್ಲಿರುವ ಈ ಸೇತುವೆಗೆ ಸುಸಜ್ಜಿತವಾದ ದಾರಿದೀಪ ಹಾಗೂ ಎಚ್ಚರಿಕೆಯ ಫ‌ಲಕಗಳನ್ನು ಅಳವಡಿಸಬೇಕಾಗಿದೆ

Advertisement

ಉದ್ಘಾಟನೆಯಾಗದೇ ಸಂಚಾರಕ್ಕೆ ಮುಕ್ತ
ಕದಿಕೆ ಸೇತುವೆ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದರೂ ಅ ಧಿಕೃತವಾಗಿ ಉದ್ಘಾಟನೆಯಾಗಿಲ್ಲ. ಸಸಿಹಿತ್ಲುವಿನ ಮುಂಡ ಬೀಚ್‌ನಲ್ಲಿ ಮೊದಲ ಬಾರಿಗೆ ನಡೆದ ರಾಷ್ಟ್ರೀಯ ಮಟ್ಟದ ಓಪನ್‌ ಸರ್ಫಿಂಗ್ ಸ್ಪರ್ಧೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದರೆ ಅವರಿಂದಲೇ ಆಗ ಸೇತುವೆಯ ಉದ್ಘಾಟನೆ ಮಾಡಿಸಲು ಚಿಂತನೆ ನಡೆದಿತ್ತು. ಕೊನೆ ಕ್ಷಣದಲ್ಲಿ ಸಿಎಂ ಭೇಟಿ ರದ್ದಾಗಿತ್ತು. ಹೀಗಾಗಿ ಸೇತುವೆಯಲ್ಲಿ ಉದ್ಘಾಟನಾ ಫ‌ಲಕ ಅಳವಡಿಸುವ ಸ್ಥಳ ಖಾಲಿ ಬಿದ್ದಿದೆ. ಆದರೂ ಜನ ಸಂಚಾರಕ್ಕೆ ವರ್ಷದ ಹಿಂದೆಯೇ ಮುಕ್ತಗೊಳಿಸಲಾಗಿದೆ.

ಸೇತುವೆ ದುರ್ಬಳಕೆ ವಿರುದ್ಧ ಕ್ರಮ
ಕದಿಕೆ ಸೇತುವೆ ಹಳೆಯಂಗಡಿ ಗ್ರಾ.ಪಂ. ವ್ಯಾಪ್ತಿಗೆ ಬರುವುದರಿಂದ ಸೇತುವೆ ಹಾಗೂ ಅದಕ್ಕೆ ಸಂಪರ್ಕಿಸುವ ಎರಡೂ ರಸ್ತೆಗಳಲ್ಲೂ ದಾರಿದೀಪ ಅಳವಡಿಸುವ ಯೋಜನೆಯನ್ನು ವಿಶೇಷ ಅನುದಾನದಲ್ಲಿ ರೂಪಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯ ಮೂಲಕ ಈ ಯೋಜನೆ ಕಾರ್ಯಗತಗೊಳಿಸಲು ಶಾಸಕರಲ್ಲಿ ವಿನಂತಿಸಿದ್ದೇವೆ. ಮುನ್ನೆಚ್ಚರಿಕೆ ಫಲಕವನ್ನು ಪಂಚಾಯತ್‌ನಿಂದಲೇ ಅಳವಡಿಸಲಾಗುವುದು. ಸೇತುವೆ ದುರ್ಬಳಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್‌ ಠಾಣೆಗೆ ಮಾಹಿತಿ ನೀಡಲಾಗಿದೆ.
ಜಲಜಾ, ಅಧ್ಯಕ್ಷರು, ಗ್ರಾ.ಪಂ. ಹಳೆಯಂಗಡಿ,

ಸೇತುವೆಯಿಂದ ಬೀಚ್‌ಗೆ ರಸ್ತೆ
ಕದಿಕೆ ಸೇತುವೆಯಿಂದ ನೇರವಾಗಿ ಬೀಚ್‌ನ್ನು ತಲುಪಲು ನಬಾರ್ಡ್‌ ಮೂಲಕ ಮೀನುಗಾರಿಕಾ ಇಲಾಖೆ ಜಂಟಿಯಾಗಿ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ 1.5 ಕಿ.ಮೀ. ಉದ್ದದ ರಸ್ತೆ ನಿರ್ಮಿಸಲು ಶಾಸಕ ಅಭಯಚಂದ್ರರು ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದು ಒಂದೆರಡು ತಿಂಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ. ಈ ರಸ್ತೆ ನಿರ್ಮಾಣದಿಂದ ಜೆಟ್ಟಿ ಪ್ರದೇಶ ಹಾಗೂ ನೇರವಾಗಿ ಬೀಚ್‌ಗೆ ಪ್ರವಾಸಿಗರು ಸೇತುವೆ ಮೂಲಕ ಸಂಚರಿಸುವುದಕ್ಕೆ ಅನುಕೂಲ ಕಲ್ಪಿಸಲಿದೆ. ಮುಕ್ಕದಿಂದ ಬರುವ ಪ್ರಯಾಣಿಕರೂ ಹಳೆಯಂಗಡಿಯ ಮೂಲಕವೇ ಆಗಮಿಸಬಹುದು.
ಎಚ್‌. ವಸಂತ ಬೆರ್ನಾಡ್‌,
ಅಧ್ಯಕ್ಷರು,ಸಸಿಹಿತ್ಲು ಬೀಚ್‌ ಅಭಿವೃದ್ಧಿ ಸಮಿತಿ

ನರೇಂದ್ರ ಕೆರೆಕಾಡು

Advertisement

Udayavani is now on Telegram. Click here to join our channel and stay updated with the latest news.

Next