Advertisement

ಕುಡಿಯಲು ಯೋಗ್ಯವಲ್ಲದ ನೀರನ್ನೇ ಕುಡಿಯಬೇಕಾದ ಸ್ಥಿತಿ!

02:58 PM Nov 28, 2018 | |

ಬೆಳ್ತಂಗಡಿ: ಪ್ರಸ್ತುತ ಎಲ್ಲಾ ಕಡೆಯೂ ಸ್ಥಳೀಯಾಡಳಿತದ ನಳ್ಳಿ ನೀರೇ ಜನತೆಗೆ ಆಧಾರವಾಗಿದ್ದು, ಒಂದು ದಿನ ನೀರಿನ ಬಣ್ಣ ಮಾಸಿದರೂ ಜನರು ನೀರು ಕುಡಿಯುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ. ಆದರೆ ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾ.ಪಂ.ನ ಕಾಲನಿವೊಂದಕ್ಕೆ ನಿತ್ಯವೂ ಬಣ್ಣ ಮಾಸಿದ ನೀರೇ ಪೂರೈಕೆಯಾಗುತ್ತಿದೆ! ಗ್ರಾಮ ಪಂಚಾಯತ್‌ ಸವಣಾಲು ಗ್ರಾಮದ ಹಿರಿಯಾಜೆಯ ಸುಮಾರು 20ಕ್ಕೂ ಅಧಿಕ ಮನೆಗಳಿಗೆ ನೀರು ಪೂರೈಕೆ ಮಾಡುವುದಕ್ಕೆ ಗ್ರಾಮದ ದೇವಸ್ಥಾನವೊಂದರ ಪಕ್ಕದಲ್ಲಿ ನೀರಿನ ಹಳ್ಳವೊಂದರ ಸಮೀಪ ರಿಂಗ್‌ ಅಳವಡಿಸಿ ಬಾವಿಯಂತೆ ಮಾಡಿ ಅದರಿಂದ ನೀರು ಪೂರೈಕೆ ಮಾಡಲಾಗುತ್ತದೆ. ಆದರೆ ಅದರ ನೀರನ್ನು ಕಣ್ಣಾರೆ ನೋಡಿದವರು ಒಂದು ಹನಿಯೂ ಕುಡಿಯಲಿಕ್ಕಿಲ್ಲ. ರಿಂಗ್‌ ಹಾಕಿದ ಬಾವಿಯ ಹತ್ತಿರ ಹೋದರೆ ನೀರಿನ ನಿಜರೂಪದ ಅರಿವಾಗುತ್ತದೆ.

Advertisement

ಮಾಸಿದ ನೀರಿನ ಬಣ್ಣ
ನೀರಿನ ಬಣ್ಣ ಪೂರ್ತಿ ಮಾಸಿದ್ದು, ಅದರ ಮೇಲಾºಗದಲ್ಲಿ ಎಣ್ಣೆಯ ರೀತಿಯಲ್ಲಿ ಪೂರ್ತಿ ಕೆಂಪಗಿನ ಸ್ಥಿತಿ ಇದೆ. ಆದರೆ ಇದಕ್ಕೆ ಕಾರಣವೆಂದು ಕೇಳಿದರೆ ಸಮರ್ಪಕ ಉತ್ತರವಿಲ್ಲ. ಅಲ್ಲಿನ ಹಳ್ಳಕ್ಕೆ ಕಿಂಡಿ ಅಣೆಕಟ್ಟು ನಿರ್ಮಿಸಿದ ಬಳಿಕ ಹಾಗಾಗಿದೆ. ರಿಂಗ್‌ ಅಳವಡಿಸುವ ಸಂದರ್ಭ ಕಾಮಗಾರಿ ಕಳಪೆಯಾಗಿರುವ ಕಾರಣ ನೀರಿನ ಬಣ್ಣ ಬದಲಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಕುಡಿಯುವುದು ಅನಿವಾರ್ಯ!
ನೀರಿನ ಬಣ್ಣ ಹಾಗೂ ವಾಸನೆ ಬದಲಾಗಿರುವ ವಿಚಾರ ಹಿರಿಯಾಜೆ ಭಾಗದ ಎಲ್ಲರಿಗೂ ಗೊತ್ತಿದೆ. ಆದರೆ ಆ ಭಾಗದ ನಿವಾಸಿಗಳಿಗೆ ಬದುಕಬೇಕಾದರೆ ಆ ನೀರನ್ನು ಕುಡಿಯಲೇಬೇಕಾದ ಸ್ಥಿತಿ ಇದೆ. ಕೆಲವೊಂದು ಮನೆಯವರು ಕುಡಿಯುವುದಕ್ಕೆ ಬಾವಿಯ ನೀರನ್ನು ಉಪಯೋಗಿಸಿದರೆ, ಇನ್ನು ಕೆಲವು ಮನೆಗಳಿಗೆ ಅದೇ ನೀರು ಅಮೃತವಾಗಿದೆ. ಸ್ಥಳೀಯ ದೇವಸ್ಥಾನಕ್ಕೂ ಅದೇ ನೀರು ಪೂರೈಕೆಯಾಗುತ್ತಿದೆ.

ಆ ರಿಂಗ್‌ ಬಾವಿಯಿಂದ ನೀರನ್ನು ಸ್ಥಳೀಯ ಟ್ಯಾಂಕೊಂದಕ್ಕೆ ಲಿಫ್ಟ್‌ ಮಾಡಿ ಬಳಿಕ ಸ್ಥಳೀಯರಿಗೆ ಪೂರೈಕೆ ಮಾಡುತ್ತಾರೆ. ಆ ಟ್ಯಾಂಕ್‌ನಲ್ಲೂ ಪೂರ್ತಿ ಕೆಸರು ತುಂಬಿಕೊಂಡಿದೆ ಎಂಬುದು ಸ್ಥಳೀಯರ ಆರೋಪವಾಗಿದೆ. ಬಾವಿಯಿಂದ ನೀರು ಟ್ಯಾಂಕ್‌ಗೆ ಬೀಳುವ ಸಂದರ್ಭ ಮಣ್ಣು ಮೇಲಕ್ಕೆ ಬಂದು ನೇರವಾಗಿ ಅದು ಮನೆಗಳಿಗೆ ಪೂರೈಕೆಯಾಗುತ್ತದೆ.

ಪರೀಕ್ಷೆ ಮಾಡಿಸಿ
ನೀರಿನ ಗುಣಮಟ್ಟವನ್ನು ಖಾತ್ರಿ ಪಡಿಸುವ ದೃಷ್ಟಿಯಿಂದ ನೀರನ್ನು ಪರೀಕ್ಷೆ ಮಾಡಿಸಿ ವರದಿ ನೀಡಲಿ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ. ಮತ್ತೊಂದೆಡೆ ಸ್ಥಳೀಯವಾಗಿ ಹೊಸತ್ತೊಂದು ಕೊಳವೆ ಬಾವಿ ನಿರ್ಮಾಣವಾಗಿ ಅದರಲ್ಲಿ ನೀರಿದ್ದರೂ, ಅದಕ್ಕೆ ಪಂಪು ಹಾಕಿಲ್ಲ. ಮತ್ತೊಂದು ಕೊಳವೆಬಾವಿ ಜಲ ಮರು ಪೂರಣ ಘಟಕ ನಿರ್ಮಾಣದ ಸಂದರ್ಭ ಕೆಟ್ಟು ಹೋಗಿದೆ ಎಂಬುದು ಸ್ಥಳೀಯರ ಆರೋಪ.

Advertisement

ಹತ್ತಿರದಿಂದ ನೀರಿನ ಸ್ಥಿತಿ ನೋಡಲಿ
ಹಿರಿಯಾಜೆಗೆ ಪೂರೈಕೆ ಮಾಡುವ ನೀರನ್ನು ಹತ್ತಿರದಿಂದ ನೋಡಿದವರು ಒಂದು ಹನಿ ನೀರು ಕುಡಿಯುವುದಕ್ಕೂ ಸಾಧ್ಯವಿಲ್ಲ. ರಿಂಗ್‌ ಹಾಕಿರುವ ಹಳ್ಳದ ಹತ್ತಿರ ಹೋಗಿ ನೋಡಿದರೆ ಅಲ್ಲಿನ ಸ್ಥಿತಿಯ ಅರಿವಾಗುತ್ತದೆ. ಸಂಬಂಧಪಟ್ಟ ಗ್ರಾ.ಪಂ.ನವರ ಮನೆಗೆ ಆ ರೀತಿಯ ನೀರು ಪೂರೈಕೆಯಾದರೆ ಅವರು ಅಂತಹ ನೀರನ್ನು ಕುಡಿಯುವುದಕ್ಕೆ ಸಾಧ್ಯವೇ ಎಂದು ಉತ್ತರಿಸಲಿ.
 – ಜಯಾನಂದ ಪಿಲಿಕಳ
ಸ್ಥಳೀಯ ನಿವಾಸಿ

ಪರ್ಯಾಯ ವ್ಯವಸ್ಥೆ ಇಲ್ಲ
ನೀರು ಶುದ್ಧವಿಲ್ಲ ಎಂಬ ಕಾರಣಕ್ಕೆ ದೂರು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ಮಾಡಿದ್ದೇವೆ. ಆದರೆ ನೀರು ಪೂರೈಕೆಗೆ ಅಲ್ಲಿ ಪರ್ಯಾಯ ವ್ಯವಸ್ಥೆಗಳಿಲ್ಲ. ಹೀಗಾಗಿ ಕೊಳವೆಬಾವಿಗಾಗಿ ಶಾಸಕರು ಹಾಗೂ ಜಿ.ಪಂ.ಗೆ ಬರೆದಿದ್ದೇವೆ. ಅನುದಾನ ಬಂದರೆ ಕೊಳವೆಬಾವಿ ಮಾಡಲಾಗುವುದು. ಗ್ರಾಮದ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಉದ್ಯೋಗ ಖಾತರಿಯಲ್ಲಿ ಕೆರೆ ಅಭಿವೃದ್ಧಿಗೆ ಚಿಂತನೆ ನಡೆಸಲಾಗಿದೆ.
– ಮಹಾದೇವ,
ಅಭಿವೃದ್ಧಿ ಅಧಿಕಾರಿ, ಗ್ರಾ.ಪಂ.ಮೇಲಂತಬೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next