ರಾಯಚೂರು: ಈಚೆಗೆ ಸುರಿದ ಭಾರೀ ವರ್ಷಧಾರೆಗೆ ಜಿಲ್ಲೆಯಲ್ಲೂ ಅಪಾರ ಹಾನಿಯಾಗಿದ್ದು, ವಾರದೊಳಗೆ ಮಳೆ ಹಾನಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ 33 ಮಿ.ಮೀ ಮಳೆ ಸುರಿದಿದ್ದು, ದೊಡ್ಡ ಹಾನಿಯಾಗಿದೆ. ಜಿಲ್ಲೆಯಲ್ಲೂ ಸಿಡಿಲು ಬಡಿದು 30 ಜಾನುವಾರುಗಳ ಜೀವ ಬಲಿಯಾಗಿದೆ. ಅಲ್ಲದೇ, 52 ಹೆಕ್ಟೇರ್ ಕೃಷಿ, 40 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಪಪ್ಪಾಯ, ಮಾವು ಹಾಳಾಗಿದೆ. ಜಾನುವಾರುಗಳ ಮಾಲೀಕರಿಗೆ 24 ಗಂಟೆಯಲ್ಲಿ ಪರಿಹಾರ ವಿತರಣೆಗೆ ಕ್ರಮ ವಹಿಸಲಾಗಿದೆ. ಮನೆ ಕಳೆದುಕೊಂಡವರಿಗೆ ಖಾತೆಗೆ ಶೀಘ್ರದಲ್ಲೇ ಹಣ ಜಮೆ ಮಾಡಲಾಗುವುದು ಎಂದು ವಿವರಿಸಿದರು.
ಲೋಕೋಪಯೋಗಿ ರಸ್ತೆಗಳು ಹಾನಿಗೀಡಾಗಿದ್ದು, ಸಮೀಕ್ಷೆ ನಡೆಸಿ ದುರಸ್ತಿ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಲಿಂಗಸುಗೂರಿನಲ್ಲಿ ಮೃತಪಟ್ಟ ವ್ಯಕ್ತಿ ಮನೆಗೆ ಭೇಟಿ ನೀಡಲಾಗುವುದು. ಜಿಲ್ಲಾಧಿಕಾರಿ ಖಾತೆಯಲ್ಲಿ 14 ಕೋಟಿ ರೂ. ಹಣವಿದ್ದು, ತುರ್ತು ಕೆಲಸಗಳಿಗೆ ಬಳಸಲು ಸೂಚಿಸಲಾಗಿದೆ. ಮಳೆಯಿಂದ ಹಾನಿಗೀಡಾದ ಮನೆಗಳ ನಿವಾಸಿಗಳಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ವಿವರಿಸಿದರು.
ಹಟ್ಟಿಚಿನ್ನದಗಣಿ: ಹಟ್ಟಿ ಪಟ್ಟಣದ ಕುಡಿವ ನೀರಿನ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಕೈಮಗ್ಗ, ಜವಳಿ, ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಹೇಳಿದರು.
ಹಟ್ಟಿಚಿನ್ನದಗಣಿ ಕಂಪನಿ ಅತಿಥಿಗೃಹದಲ್ಲಿ ಸೋಮವಾರ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಕಲಿ ಬೀಜ-ರಸಗೊಬ್ಬರ ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಸರಿಯಾದ ಸಮಯಕ್ಕೆ ರೈತರಿಗೆ ಬೀಜ-ಗೊಬ್ಬರ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸಿಡಿಲಿಗೆ ಆಡು-ಕುರಿ ಬಲಿಯಾಗಿರುವುದು ದುರದೃಷ್ಟಕರ. ಬಲಿಯಾದ ಕುರಿಗಾಹಿಗಳಿಗೆ 24 ಗಂಟೆಯೊಳಗೆ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಗಣಿ ಕಂಪನಿಯ ಸಿಎಸ್ ಆರ್ ಅನುದಾನ ಸ್ಥಳೀಯವಾಗಿಯೇ ಬಳಸಿಕೊಳ್ಳಲು ಗಣಿ ಕಂಪನಿ ಆಡಳಿತ ವರ್ಗಕ್ಕೆ ಸೂಚಿಸುವುದಾಗಿ ತಿಳಿಸಿದರು.
ಈ ವೇಳೆ ಸಂಸದ ರಾಜಾ ಅಮರೇಶ್ವರ ನಾಯಕ, ಲಿಂಗಸುಗೂರು ಶಾಸಕ ಡಿ.ಎಸ್. ಹೂಲಗೇರಿ, ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ್, ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ್ ನಾಯಕ್, ಎಸಿ ರಾಹುಲ್ ಸಂಕನೂರು, ಆಹಾರ ಇಲಾಖೆ ಉಪ ನಿರ್ದೇಶಕ ಅರುಣ ಕುಮಾರ್, ವ್ಯವಸ್ಥಾಪಕ ಅಹ್ಮದ್ ಹುಸೇನ್, ಬಿಜೆಪಿ ಮುಖಂಡರಾದ ಶಂಕರಗೌಡ ಬಳಗಾನೂರು, ಎನ್. ಸ್ವಾಮಿ ನಾಯಿಕೋಡಿ, ರಮೇಶ್ ಉಳಿಮೇಶ್ವರ, ವೆಂಕೋಬ ಪವಾಡೆ, ಶಿವು ಇದ್ದರು.