ಸಾಗರ: ಪ್ರತಿವರ್ಷ ನೆರೆಯಿಂದ ಬೆಳೆನಾಶವಾಗಿ, ಜನಜೀವನ ಅಸ್ತವ್ಯಸ್ತಗೊಳಿಸುವ ಕಾನ್ಲ ಸಮೀಪದ ಕನ್ನಹೊಳೆ ಪ್ರವಾಹದ ನೀರನ್ನು ಮುಂದಿನ ಒಂದು ವರ್ಷದೊಳಗೆ ವ್ಯವಸ್ಥಿತ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸೊರಬ ಶಾಸಕ ಕುಮಾರ ಬಂಗಾರಪ್ಪ ತಿಳಿಸಿದರು.
ತಾಲೂಕಿನ ತಾಳಗುಪ್ಪ ಹೋಬಳಿಯ ಸೈದೂರು ಗ್ರಾಪಂ ವ್ಯಾಪ್ತಿಯ ಪ್ರವಾಹಪೀಡಿತ ಕನ್ನಹೊಳೆ ಸೇತುವೆ ಪ್ರದೇಶಕ್ಕೆ ಶುಕ್ರವಾರ ನೀರಾವರಿ ಇಲಾಖೆಯ ಅಧಿ ಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಈ ಭಾಗದಲ್ಲಿ ಹರಿಯುವ ವರದಾ ನದಿ ಕೃಷ್ಣ ನದಿಗೆ ಸೇರುವುದರಿಂದ ನದಿಪಾತ್ರದ ನೀರು ಬಳಕೆ ಮಾಡಿಕೊಳ್ಳುವಂತೆ ಇಲ್ಲ ಎಂದರು.
ಪ್ರತಿವರ್ಷ ನೆರೆಯಿಂದ ಉಕ್ಕುವ ನೀರನ್ನು ಲಿಂಗನಮಕ್ಕಿ ಆಣೆಕಟ್ಟಿಗೆ ತಿರುಗಿಸಿದರೆ ಅದು ಸಹ ವ್ಯರ್ಥವಾಗಿ ಸಮುದ್ರ ಸೇರುತ್ತದೆ. ನೆರೆ ನೀರು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಹೊಸ ಚಿಂತನೆ ನಡೆಸಲಾಗಿದೆ. ಆನವಟ್ಟಿವರೆಗೆ ರೈತರ ಜಮೀನಿಗೆ ಈ ನೀರನ್ನು ಹರಿಸುವ ಯೋಜನೆ ತಯಾರಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಸುಮಾರು 400 ಕೋಟಿ ರೂ. ಅಂದಾಜು ಯೋಜನೆ ತಯಾರಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದು ಅವರು ಮೌಖೀಕ ಒಪ್ಪಿಗೆ ನೀಡಿದ್ದಾರೆ ಎಂದರು.
ಇಷ್ಟು ವರ್ಷ ಕನ್ನಹೊಳೆ ಪ್ರವಾಹದ ನೀರು ಜುಲೈ ತಿಂಗಳವರೆಗೆ ನೋಡುವಂತೆ ಆಗಿತ್ತು. ನೀರು ಸದ್ಭಳಕೆ ಕುರಿತು ಗಂಭೀರ ಚಿಂತನೆ ನಡೆದಿರಲಿಲ್ಲ. ನೆರೆಯಿಂದ ಹೊಳೆಯ ಸುತ್ತಮುತ್ತಲಿನ ಸುಮಾರು 500 ಎಕರೆ ಬೆಳೆ ನಾಶವಾಗುತ್ತಿತ್ತು. ಮುಂದಿನ ಒಂದು ವರ್ಷದಲ್ಲಿ ಪ್ರವಾಹದ ನೀರನ್ನು ಸಂಗ್ರಹಿಸಿ ಇರಿಸಿಕೊಳ್ಳಲು ಮತ್ತು ಬೇಸಿಗೆ ಬೆಳೆ ತೆಗೆಯಲು ಅನುಕೂಲವಾಗುವಂತೆ ಕೃತಕ ಕೆರೆ ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಬೆಂಗಳೂರಿನ ನೀರಾವರಿ ಇಲಾಖೆಯ ಅಭಿಯಂತರ ಸಂದೀಪ್, ಸಂತೋಷ್, ಸತೀಶ್, ಸ್ಥಳೀಯರಾದ ಸೋಮಶೇಖರ್ ಟಿ.ಜಿ. ಇನ್ನಿತರರು ಇದ್ದರು.