Advertisement

ಕುಡಿಯುವ ನೀರು ನಿರ್ವಹಣೆಗೆ ಅಗತ್ಯ ಕ್ರಮ

11:17 PM Aug 29, 2019 | Lakshmi GovindaRaj |

ಬೆಂಗಳೂರು: “ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಪೂರೈಕೆ ಹಾಗೂ ಶುದ್ಧ ಕುಡಿಯುವ ನೀರು ಘಟಕಗಳ ಸಮರ್ಪಕ ಕಾರ್ಯನಿರ್ವಹಣೆ ಬಗ್ಗೆ ಹೆಚ್ಚು ಗಮನಹರಿಸಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದ್ದಾರೆ.

Advertisement

ವಿಕಾಸಸೌಧದಲ್ಲಿ ಗುರುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, “ಇಲಾಖೆಯಲ್ಲಿ ಜಾರಿಯಲ್ಲಿರುವ ಯೋಜನೆಗಳು, ಅನುಷ್ಠಾನ ದಲ್ಲಿನ ಅಡೆತಡೆ, ಆರ್ಥಿಕ ನೆರವಿನ ಅಗತ್ಯತೆ ಕುರಿತು ಮಾಹಿತಿ ಪಡೆಯಲು ಭಾನುವಾರ ಹಾಗೂ ಸೋಮವಾರ ಬೆಳಗಾವಿಯ ಸುವರ್ಣ ಸೌಧದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಲಾಗುವುದು’ ಎಂದು ಹೇಳಿದರು.

ಭಾನುವಾರ ಇಲಾಖೆಯ ಉನ್ನತಾಧಿಕಾರಿಗಳು, ಜಿಲ್ಲಾ ಪಂಚಾಯತ್‌ ಸಿಇಒಗಳ ಸಭೆ ನಡೆಸಲಾಗು ವುದು. ಸೋಮವಾರ ಜಿಲ್ಲಾ ಪಂಚಾಯತ್‌ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಗ್ರಾಮೀಣ ಭಾಗದ ಮುಖ್ಯ ರಸ್ತೆ, ಸಂಪರ್ಕ ರಸ್ತೆ ಅಭಿವೃದ್ಧಿ, ಶೌಚಾಲಯ ನಿರ್ಮಾಣ, ಉದ್ಯೋಗ ಖಾತರಿ ಯೋಜನೆಯಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗುವುದು. ಜಿಪಂ ವ್ಯಾಪ್ತಿಗಳಲ್ಲಿ 20 ಸಾವಿರ ಕೆರೆಗಳಿದ್ದು ಅವುಗಳ ಸಮಗ್ರ ನಿರ್ವಹಣೆ, ಗ್ರಾಮೀಣ ಭಾಗಗಳಲ್ಲಿ ಸವಾಲಾಗಿರುವ ಘನತ್ಯಾಜ್ಯ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರ ಸಂಕಷ್ಟಕ್ಕೆ ನೆರವಾಗಲು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಿಂದಲೂ ಕ್ರಮ ಕೈಗೊಳ್ಳಲಾಗುತ್ತಿದೆ. ಇಲಾಖೆ ವ್ಯಾಪ್ತಿಯಲ್ಲಿ ಗ್ರಾಮೀಣ ಭಾಗದ ಜನರು ಹಾಗೂ ರೈತರಿಗೆ ಅಗತ್ಯ ಸಹಾಯ ಕಲ್ಪಿಸಲಾಗುವುದು ಎಂದು ತಿಳಿಸಿದರು.

Advertisement

ಈ ಹಿಂದೆ ಪ್ರವಾಹ ಸಂದರ್ಭದಲ್ಲಿ ಬಾಗಲ ಕೋಟೆ ಸೇರಿ ಉತ್ತರ ಕರ್ನಾಟಕ ಭಾಗದಲ್ಲಿ ಮನೆಗಳನ್ನು ನಿರ್ಮಿಸಲಾಗಿತ್ತು. ಆದರೆ, ಫ‌ಲಾನುಭವಿಗಳು ಮನೆ ಪಡೆದು ಅಲ್ಲಿಗೆ ಹೋಗದೆ ಬಾಡಿಗೆಗೆ ಕೊಟ್ಟು ಹಳೇ ಮನೆಯಲ್ಲೇ ಇದ್ದರು. ಇದೀಗ ಆ ಮನೆ ಮತ್ತೆ ಕುಸಿದಿದೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಬೇಕಿದೆ. ವಾಸಿಸುವವರಿಗೆ ಮಾತ್ರ ಮನೆ ಹಂಚಿಕೆಯಾಗಬೇಕಿದೆ ಎಂದು ಹೇಳಿದರು.

ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್‌.ಕೆ.ಅತೀಕ್‌ ಮಾತನಾಡಿ, ಜಲಧಾರೆ ಯೋಜನೆಯಡಿ ನಾಲ್ಕು ಜಿಲ್ಲೆಗಳಲ್ಲಿ ಪೈಲಟ್‌ ಯೋಜನೆಯಡಿ ಕುಡಿಯುವ ನೀರು ಪೂರೈಕೆಗೆ ಯೋಜನೆ ರೂಪಿಸಲಾಗಿದೆ. ಮೊದಲಿಗೆ ಮಂಡ್ಯ ಹಾಗೂ ವಿಜಯಪುರದಲ್ಲಿ ಟೆಂಡರ್‌ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗುವುದು. ನಂತರ ರಾಯಚೂರು ಹಾಗೂ ಕೊನೆಯ ಹಂತದಲ್ಲಿ ಕೋಲಾರ ಜಿಲ್ಲೆಯಲ್ಲಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

“ಸಿದ್ದರಾಮಯ್ಯ ಶತದಡ್ಡ’: “ನನ್ನನ್ನು ದಡ್ಡ ಎಂದು ಹೇಳುವ ಸಿದ್ದರಾಮಯ್ಯ ಶತದಡ್ಡ’ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ವಾಗ್ಧಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶತದಡ್ಡ ಸಿದ್ದರಾಮಯ್ಯ ಮಾತಿಗೆ ನಾನು ಉತ್ತರಿಸಬೇಕಾದ ಪರಿಸ್ಥಿತಿ ಬಂದಿದೆ ಎಂದು ಲೇವಡಿ ಮಾಡಿದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರು ಬಿಜೆಪಿ ಪಾಲಿಗೆ ಅಳಿಯಂದಿರೇ, ಅವರಿಂದಲೇ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿದೆ.

ಅವರನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಹೇಳಿದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರನ್ನು ಪಕ್ಷದ್ರೋಹಿಗಳು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ರಾಜ್ಯದಲ್ಲಿ ಆಪರೇಷನ್‌ ಪ್ರಾರಂಭವಾಗಿದ್ದೇ ಅವರಿಂದ, ಜೆಡಿಎಸ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅವರು ಕಾಂಗ್ರೆಸ್‌ ಸೇರಿದ್ದರು. ಜೆಡಿಎಸ್‌ಗೆ ದ್ರೋಹ ಬಗೆದಿದ್ದರಿಂದಲೇ ಅವರನ್ನು ಉಚ್ಚಾಟಿಸಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮ್ಮದು ಮೊದಲಿನಿಂದಲೂ ಒಂದೇ ಪಕ್ಷ. ಪಕ್ಷವೇ ನಮಗೆ ತಾಯಿ.

ಸಿದ್ದರಾಮಯ್ಯ ಸಾಕಷ್ಟು ಪಕ್ಷಗಳನ್ನು ಬದಲಿಸಿರುವುದರಿಂದ ಅವರಿಗೆ ಎಷ್ಟು ತಾಯಂದಿರು ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ನನ್ನನ್ನು ಕೋಮುವಾದಿ ಅಂತಾರೆ ಆದರೆ ಅವರು ಜಾತಿವಾದಿ. ಅವರು ಎಲ್ಲೇ ಹೋದರು ಕುರುಬ ಎಂದು ಗುರುತಿಸಿಕೊಳ್ಳುತ್ತಾರೆ ಎಂದು ಟೀಕಿಸಿದರು. ಸಿದ್ದರಾಮಯ್ಯ ಅವರ ಪರ ಸ್ವಾಮೀಜಿಯೊಬ್ಬರು ಮಾತನಾಡಿದ್ದು ನೋಡಿದ್ದೇನೆ. ಸ್ವಾಮೀಜಿಯವರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ, ಸಿದ್ದರಾಮಯ್ಯ ಅವರನ್ನು ಬೇರೆ ಯಾವುದೇ ಸಮುದಾಯದ ಸ್ವಾಮೀಜಿಗಳು ಗೌರವಿಸುವುದಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next