Advertisement

ಗಂಡು ಆಮೆಗಳು ಹುಟ್ಟುತ್ತಲೇ ಇಲ್ಲ! ಜಾಗತಿಕ ತಾಪಮಾನದಿಂದ ಆಮೆ ಸಂತತಿ ಅಪಾಯದಲ್ಲಿ

12:33 PM Aug 07, 2022 | Team Udayavani |

ತಲ್ಲಹಸ್ಸೀ (ಫ್ಲೋರಿಡಾ): ಸಮುದ್ರದ ದಡದಲ್ಲಿ ಮೊಟ್ಟೆ ಇಟ್ಟು ಹೋಗುತ್ತಿರುವ ಆಮೆಗಳಲ್ಲಿ ಇತ್ತೀಚೆಗೆ ಗಂಡು ಆಮೆಗಳು ಹುಟ್ಟುತ್ತಲೇ ಇಲ್ಲ! ಮೊಟ್ಟೆಗಳಿಂದ ಶೇ. 99ರಷ್ಟು ಬರೀ ಹೆಣ್ಣು ಆಮೆಗಳೇ ಜನ್ಮ ಪಡೆಯುತ್ತಿವೆ. ಫ್ಲೋರಿಡಾದಲ್ಲಿ ಕರಾವಳಿ ತೀರದಲ್ಲಿ ನಡೆಸಲಾಗಿರುವ ಅಧ್ಯಯನದಿಂದ ಈ ವಿಚಾರ ಬೆಳಕಿಗೆ ಬಂದಿದೆ. ಅದಕ್ಕೆ ಜಾಗತಿಕ ತಾಪಮಾನ ಕಾರಣ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ!

Advertisement

ಆಮೆಗಳ ಲಿಂಗ, ಇತರ ಪ್ರಾಣಿಗಳಂತೆ ಅನುವಂಶಿಕವಲ್ಲ. ಅದು ಸಮುದ್ರದ ಸುತ್ತಲಿನ ವಾತಾವರಣದ ಉಷ್ಣಾಂಶವನ್ನು ಅವಲಂಬಿಸಿರುತ್ತದೆ. ಹೆಣ್ಣು ಆಮೆಗಳು, ಸಮುದ್ರದ ದಡಕ್ಕೆ ಬಂದು ಮೊಟ್ಟೆಯಿಟ್ಟು ಹೋಗುತ್ತವೆ. ಮರಳಿನಲ್ಲಿರುವ ಉಷ್ಣಾಂಶ 27 ಡಿಗ್ರಿ ಸೆಲ್ಸಿಯೆಸ್‌ಗಿಂತ ಕಡಿಮೆಯಿದ್ದರೆ, ಮೊಟ್ಟೆಯಲ್ಲಿರುವ ಭ್ರೂಣ ಗಂಡು ಆಮೆಯಾಗಿ ಮಾರ್ಪಡುತ್ತದೆ. 31 ಡಿಗ್ರಿ ಸೆಲ್ಸಿಯೆಸ್‌ಗಿಂತ ಹೆಚ್ಚಿದ್ದರೆ ಅದು ಹೆಣ್ಣು ಆಮೆಯಾಗುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಜಾಗತಿಕವಾಗಿ ತಾಪಮಾನ ಏರಿಕೆಯಾಗಿರುವುದರಿಂದಾಗಿ ಶೇ. 99ರಷ್ಟು ಮೊಟ್ಟೆಗಳಿಂದ ಹೆಣ್ಣು ಆಮೆಗಳೇ ಜನಿಸುತ್ತಿವೆ ಎಂದು ಅಧ್ಯಯನ ವರದಿ ಹೇಳಿದೆ. 2018ರ ವರದಿಯ ಪ್ರಕಾರ ಆಸ್ಟ್ರೇಲಿಯಾದಲ್ಲಿ ಶೇ.90 ಆಮೆಗಳು ಹೆಣ್ಣಾಗಿದ್ದರೆ, ಬೇರೆ ತಂಪಾದ ರಾಷ್ಟ್ರಗಳಲ್ಲಿ ಶೇ.65ರಿಂದ ಶೇ.69 ಹೆಣ್ಣು ಆಮೆಗಳಾಗಿವೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.

ಪರಿಣಾಮವೇನು?
ಜಾಗತಿಕ ತಾಪಮಾನ ಹೆಚ್ಚಳದಿಂದಾಗಿ, ಹೆಣ್ಣು ಆಮೆಗಳೇ ಹೆಚ್ಚು ಜನಿಸುತ್ತಾ ಹೋದರೆ, ಮುಂದೊಂದು ದಿನ ಆಮೆಗಳ ಆಮೆಗಳ ಸಂತಾನೋತ್ಪತ್ತಿಗೆ ಸಮಸ್ಯೆಯಾಗಿ ಅವುಗಳ ಸಂತತಿಯೇ ಅಳಿಸಿಹೋಗುವ ಸಾಧ್ಯತೆಗಳಿರುತ್ತವೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next