ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಯೋಧರ ಮೇಲೆ ಉಗ್ರರು ದಾಳಿ ನಡೆಸಿದ ಘಟನೆ ಬಳಿಕ ಕಳೆದ ತಡರಾತ್ರಿ ಪ್ರತ್ಯೇಕವಾದಿಗಳನ್ನು ಬಂಧಿಸಿದ್ದು, ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 10ಸಾವಿರ(ನೂರು ಕಂಪನಿ) ಅರೆಸೇನಾಪಡೆಯನ್ನು ಕಳುಹಿಸಿದೆ.
ಶುಕ್ರವಾರ ತಡರಾತ್ರಿ ಪ್ರತ್ಯೇಕತಾವಾದಿ ಮುಖಂಡ ಯಾಸಿನ್ ಮಲಿಕ್ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರಕ್ಕೆ ಹೆಚ್ಚುವರಿಯಾಗಿ 10ಸಾವಿರ ಅರೆಸೇನಾಪಡೆಯನ್ನು ರವಾನಿಸುವಂತೆ ಕೇಂದ್ರ ಗೃಹಸಚಿವಾಲಯ ಸಿಎಪಿಎಫ್ ಗೆ ನೋಟಿಸ್ ಮೂಲಕ ಮನವಿ ಮಾಡಿಕೊಂಡಿತ್ತು.
ಜಮಾತ್ ಇಸ್ಲಾಮಿ ಸಂಘಟನೆಯ ಸದಸ್ಯರು, ಅಮಿರ್ ಜಮಾತ್, ಜಹೀದ್ ಅಲಿ, ಹಮೀದ್ ಫಯಾಜ್, ಮುದಾಸಿರ್ ಅಹಮ್ಮದ್, ಅಬ್ದುಲ್ ರವೂಫ್, ಬಕ್ತಾವರ್ ಅಹ್ಮದ್ ಸೇರಿದಂತೆ ಹಲವು ಪ್ರತ್ಯೇಕತಾವಾದಿ ಮುಖಂಡರನ್ನು ಪೊಲೀಸರು ಬಂಧಿಸಿದ್ದರು.
ನವದೆಹಲಿಯಿಂದ 10ಸಾವಿರ ಯೋಧರನ್ನು ಏರ್ ಲಿಫ್ಟ್ ಮೂಲಕ ಜಮ್ಮು-ಕಾಶ್ಮೀರಕ್ಕೆ ಕಳುಹಿಸಲಾಗಿದೆ. ಅರೆಸೇನಾಪಡೆಯಲ್ಲಿ ಒಂದು ಕಂಪನಿ ಅಂದರೆ ಸುಮಾರು 80ರಿಂದ 150 ಸೈನಿಕರು ಇರುತ್ತಾರೆ. ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 100 ಕಂಪನಿಯಷ್ಟು ಸೈನಿಕರನ್ನು ಕಳುಹಿಸಿದ್ದು, ಸುಮಾರು 10 ಸಾವಿರ ಸೈನಿಕರನ್ನು ರವಾನಿಸಿದೆ.
ಪುಲ್ವಾಮಾದಲ್ಲಿ ಭಯೋತ್ಪಾದನಾ ದಾಳಿ ನಡೆದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂಜಾಗ್ರತಾ ಕ್ರಮವಾಗಿ ಭದ್ರತಾ ಪಡೆಯನ್ನು ನಿಯೋಜಿಸಲಾಗುತ್ತಿದೆ. ಇನ್ನಷ್ಟು ಸೈನಿಕರ ನಿಯೋಜನೆ ಬಗ್ಗೆ ಹಂತ, ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ವಿವರಿಸಿದ್ದಾರೆ.