ಉರ್ವಸ್ಟೋರ್- ಚಿಲಿಂಬಿ ರಸ್ತೆಯ ಎಡಭಾಗದಲ್ಲಿ ವಾಹನಗಳ ನಿಲುಗಡೆಗೆ ಮೀಸಲಿಟ್ಟಿರುವ ರಸ್ತೆಯ ಜಾಗದಲ್ಲಿ ಕೆಲವು ಕಡೆ ವಿದ್ಯುತ್ ದೀಪದ ಕಂಬಗಳಿದ್ದು, ಅದನ್ನು ಈ ಮೊದಲೇ ರಸ್ತೆಯ ಅಂಚಿಗೆ ಅಳವಡಿಸಬಹುದಿತ್ತು. ಆದರೆ ಈಗ ಅದಕ್ಕೆ ತಾಗಿಕೊಂಡೇ ಹಂಪ್ ಮತ್ತು ಎಂ. ಟ್ರ್ಯಾಕ್‌ನ ಬಗ್ಗೆ ಫಲಕವನ್ನು ಇರಿಸಿರುವುದು ಅಪಾಯವನ್ನು ಆಹ್ವಾನಿಸಿದಂತಾಗಿದೆ.
ಹೆಚ್ಚಿನ ಬಸ್, ದೊಡ್ಡ ದೊಡ್ಡ ವಾಹನಗಳು ಈ ರಸ್ತೆಯಲ್ಲಿ ಸಾಗುವುದರಿಂದ ಎದುರುಗಡೆಯಿಂದ ಬರುವ ವಾಹನಕ್ಕೆ ಅಥವಾ ಇನ್ಯಾವುದೋ ಕಾರಣಕ್ಕೆ ವಾಹನಗಳು ಸ್ವಲ್ಪ ಎಡ ಗಡೆಗೆ ಬಂದರೆ ಫಲಕಕ್ಕೆ ಮತ್ತು ಅದರ ಕೆಳಗೆ ಅಳವಡಿಸಿರುವ ಕಬ್ಬಿಣದ ಕೋಲಿಗೆ ತಾಗುವ ಸಾಧ್ಯತೆ ಇದೆ. ಇದರಿಂದ ವಾಹನ ಹಾಗೂ ಪ್ರಯಾಣಿಕರಿಗೆ ತೊಂದರೆಯಾಗಬಹುದು.
ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ವಿದ್ಯುತ್ ಕಂಬಗಳನ್ನು ರಸ್ತೆಯ ಬದಿಗೆ ಸರಿಸಿ, ಫಲಕ ವಾಹನ ಚಾಲಕರಿಗೆ ಸರಿಯಾಗಿ ಕಾಣುವಂತೆ ಮಾಡಬೇಕು. ವಿದ್ಯುತ್ ಕಂಬ ಸರಿಸಲು ಸಾಧ್ಯವಿಲ್ಲವೆಂದಾದರೆ ಸುತ್ತಲೂ ತಡೆಗೋಡೆಯನ್ನು ಅಳವಡಿಸಿ, ಕಂಬದ ಬಳಿ ಅಪಾಯ ಸೂಚನೆಯ ಫಲಕವನ್ನು ಅಳವಡಿಸಬೇಕು.
ವಿಶ್ವನಾಥ್ ಕೋಟೆಕಾರ್, ಮಂಗಳೂರು