ಕಾಬೂಲ್ : ಅಫ್ಘಾನಿಸ್ಥಾನದ ರಾಜಧಾನಿ ಕಾಬೂಲ್‌ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಬಳಿ ಸೋಮವಾರ ನಡೆದ ಸ್ಫೋಟದಲ್ಲಿ ಕನಿಷ್ಠ ಇಬ್ಬರು ಮೃತ್ಯು ಹೊಂದಿದ್ದಾರೆ ಮತ್ತು 12 ಮಂದಿ ಗಾಯಗೊಂಡಿದ್ದಾರೆ ಎಂದು ಎನ್‌ಜಿಒ ಉಲ್ಲೇಖಿಸಿ ವರದಿಗಳು ತಿಳಿಸಿವೆ.
ನಾವು ಕೆಲವು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಇಟಾಲಿಯನ್ ಎನ್‌ಜಿಒ ಎಮರ್ಜೆನ್ಸಿಯ ಸ್ಟೆಫಾನೊ ಸೊಝಾ ಸೋಮವಾರ ಹೇಳಿದ್ದಾರೆ.
ಕಾಬೂಲ್‌ನಲ್ಲಿ ಯುಎಸ್ ಬೆಂಬಲಿತ ಸರಕಾರದ ಪತನದ ನಂತರ ತಾಲಿಬಾನ್ ಇನ್ನೂ ಅಂತಾರಾಷ್ಟ್ರೀಯ ಸಮುದಾಯದಿಂದ ಗುರುತಿಸಲ್ಪಟ್ಟಿಲ್ಲ. ಈ ರಾಜತಾಂತ್ರಿಕ ಪ್ರತ್ಯೇಕತೆಯ ಮಧ್ಯೆ, ಅಫ್ಘಾನ್ ವಿದೇಶಾಂಗ ಸಚಿವಾಲಯವು ಇತ್ತೀಚೆಗೆ ತನ್ನ ನೆರೆಹೊರೆಯಲ್ಲಿ ಬಾಂಬ್ ದಾಳಿಗಳನ್ನು ಕಂಡಿದೆ. ಜನವರಿಯಲ್ಲಿ, ಇದೇ ರೀತಿಯ ಘಟನೆಯಲ್ಲಿ, ಆತ್ಮಾಹುತಿ ಬಾಂಬ್ ಸ್ಫೋಟವು ರಾಜಧಾನಿಯಲ್ಲಿ ಭಾರೀ ಸಾವುನೋವುಗಳಿಗೆ ಕಾರಣವಾಗಿತ್ತು.
ತಾಲಿಬಾನ್‌ನಿಂದ ಯಾವುದೇ ದೃಢೀಕೃತ ವರದಿಗಳು ಮತ್ತು ಯಾವುದೇ ಪ್ರತಿಕ್ರಿಯೆಗಳಿಲ್ಲದಿದ್ದರೂ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನೌಕರರು ಇದು ಆತ್ಮಹತ್ಯಾ ಬಾಂಬ್ ದಾಳಿ ಎಂದು ತಮ್ಮ ಕಚೇರಿಗಳನ್ನು ತೊರೆದಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಖಾಮಾ ಪ್ರೆಸ್ ವರದಿ ಮಾಡಿದೆ.
ಎನ್‌ಜಿಒದ ಸಾಮಾಜಿಕ ಮಾಧ್ಯಮ ಪೋಸ್ಟ್ ಪ್ರಕಾರ, ಸ್ಫೋಟದಲ್ಲಿ ಮಗುವೂ ಗಾಯಗೊಂಡಿದೆ. ವಿದೇಶಾಂಗ ಸಚಿವಾಲಯದ ಬಳಿ ಈ ಘಟನೆ ನಡೆದಿದೆ.
ಇತ್ತೀಚಿನ ದಿನಗಳಲ್ಲಿ ತಾಲಿಬಾನ್ ಭದ್ರತಾ ಪಡೆಗಳು IS-K ಉಗ್ರಗಾಮಿಗಳ ವಿರುದ್ಧ ದಮನ ಕಾರ್ಯಾಚರಣೆ ನಡೆಸುತ್ತಿದ್ದು, ಈ ಗುಂಪು ಈ ಹಿಂದೆಯೂ ಇಂತಹ ದಾಳಿಗಳನ್ನು ನಡೆಸಿದೆ ಎಂದು ಹೇಳಲಾಗಿದೆ.