Advertisement

NDA V/s INDIA: ಹೇಗಿದೆ ಬಲಾಬಲ… ಈ ಕುರಿತ ಒಂದು ನೋಟ ಇಲ್ಲಿದೆ…

12:05 AM Jul 19, 2023 | Team Udayavani |

2024ರ ಲೋಕಸಭೆ ಚುನಾವಣೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಕಾಂಗ್ರೆಸ್‌ ನೇತೃತ್ವದ ಐಎನ್‌ಡಿಐಎ(ಇಂಡಿಯಾ) ಮೈತ್ರಿಕೂಟಗಳು ಸಮರೋಪಾದಿಯಲ್ಲಿ ಸಜ್ಜಾಗಿವೆ. ಕಾಂಗ್ರೆಸ್‌ ಮೈತ್ರಿಕೂಟ ಪಟ್ನಾದಲ್ಲಿ ಮೊದಲನೇ ಮತ್ತು ಬೆಂಗಳೂರಿನಲ್ಲಿ ಎರಡನೇ ಸಭೆ ನಡೆಸಿದ್ದು, ಮುಂದಿನ ಕಾರ್ಯತಂತ್ರಗಳ ಬಗ್ಗೆ ಸಮಾಲೋಚನೆ ಮಾಡಿದೆ. ಅತ್ತ ಬಿಜೆಪಿ ನೇತೃತ್ವದ ಎನ್‌ಡಿಎ, ಮಂಗಳವಾರ ಮೊದಲ ಸಭೆ ನಡೆಸಿದೆ. ಹಾಗಾದರೆ ಈ ಎರಡೂ

Advertisement

ಕೂಟಗಳಲ್ಲಿನ ಪಕ್ಷಗಳು ಯಾವುವು? ಬಿಜೆಪಿ ಮತ್ತು ಕಾಂಗ್ರೆಸ್‌ ಹೊರತುಪಡಿಸಿದರೆ, ಬಹುತೇಕ ಪಕ್ಷಗಳು ಪ್ರಾದೇಶಿಕ ಪಕ್ಷಗಳೇ. ಅವುಗಳ ರಾಜ್ಯಗಳಲ್ಲಿ ಪ್ರಭಾವ ಹೇಗಿದೆ? ಈ ಕುರಿತ ಒಂದು ನೋಟ ಇಲ್ಲಿದೆ…

ಯುಪಿಎ ಜಾಗದಲ್ಲಿ ಇನ್ನು “ಇಂಡಿಯಾ”

ಇದು ಕಾಂಗ್ರೆಸ್‌ ನೇತೃತ್ವದ ಹೊಸದಾಗಿ ರಚನೆಯಾಗಿರುವ ಮೈತ್ರಿಕೂಟ. ಈ ಮೂಲಕ ಮೊದಲಿದ್ದ ಯುಪಿಎ ಮೈತ್ರಿಕೂಟಕ್ಕೆ ಇತಿಶ್ರೀ ಹಾಡಲಾಗಿದೆ. ಬೆಂಗಳೂರಿನ ಸಭೆಯ ಪ್ರಮುಖ ನಿರ್ಧಾರವೇ ಹೊಸ ಹೆಸರು. ಮೈತ್ರಿಕೂಟಕ್ಕೆ ಇಂಡಿಯನ್‌ ನ್ಯಾಷನಲ್‌ ಡೆವಲಪ್‌ಮೆಂಟಲ್‌ ಇನ್‌ಕ್ಲುಸಿವ್‌ ಅಲಯನ್ಸ್‌(ಐಎನ್‌ಡಿಐಎ)ಎಂಬ ಹೆಸರು ಇರಿಸಿಕೊಳ್ಳಲಾಗಿದ್ದು, ಈ ಮೂಲಕ ಇಂಡಿಯಾ ವರ್ಸಸ್‌ ಎನ್‌ಡಿಎ ಎಂಬ ಲೆಕ್ಕಾಚಾರದಲ್ಲಿ ಸ್ಪರ್ಧೆ ನಡೆಯುವುದು ಖಚಿತವಾಗಿದೆ.

ಈ ಮೈತ್ರಿಕೂಟದಲ್ಲಿ ಕಾಂಗ್ರೆಸ್‌ ಪ್ರಮುಖ ಪಕ್ಷ. ಸದ್ಯಕ್ಕೆ ಇದೇ ಈ ಮೈತ್ರಿಕೂಟದ ನೇತೃತ್ವ ವಹಿಸಿದೆ. ಇದಕ್ಕೆ ಕಾರಣವೂ ಇದೆ. ಈ ಮೈತ್ರಿಕೂಟದಲ್ಲಿರುವ ಬಹುತೇಕ ಪಕ್ಷಗಳು ಒಂದು ಅಥವಾ ಎರಡು ರಾಜ್ಯಗಳಿಗೆ ಮಾತ್ರ ಸೀಮಿತವಾಗಿವೆ. ಆದರೆ ಕಾಂಗ್ರೆಸ್‌ ಇಡೀ ದೇಶಾದ್ಯಂತ ತನ್ನ ಪ್ರಭಾವ ಉಳಿಸಿಕೊಂಡಿದೆ. ಹಾಗೆಯೇ ಇಂದಿಗೂ ಅಪಾರ ಪ್ರಮಾಣದ ಸಾಂಪ್ರದಾಯಿಕ ಮತ ಪ್ರಮಾಣವನ್ನೂ ಹೊಂದಿದೆ.

Advertisement

ಕಾಂಗ್ರೆಸ್‌ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆ ಮತ್ತು ರಾಹುಲ್‌ ಗಾಂಧಿಯವರ ಫೇಸ್‌ ಇರಿಸಿಕೊಂಡು ಚುನಾವಣೆಗೆ ಧುಮುಕುವ ಆಲೋಚನೆಯಲ್ಲಿದೆ. ಇದಕ್ಕಾಗಿಯೇ ಭಾರತ್‌ ಜೋಡೋ ಯಾತ್ರೆ ನಡೆಸಿ, ದೇಶಾದ್ಯಂತ ಹೊಸ ವರ್ಚಸ್ಸನ್ನೇ ಗಳಿಸಿಕೊಂಡಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ಭಾರತ್‌ ಜೋಡೋ ಯಾತ್ರೆ ಮುಗಿದ ಬಳಿಕ ನಡೆದ ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್‌ ಅಭೂತಪೂರ್ವವಾಗಿ ಗೆದ್ದಿದೆ. ಇನ್ನು ಈ ವರ್ಷಾಂತ್ಯದಲ್ಲಿ ನಡೆಯಲಿರುವ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ, ಮಿಜೋರಾಂ ಚುನಾವಣೆಗಳಲ್ಲಿ ತನ್ನ ಸಾಮರ್ಥ್ಯ ತೋರಿಸಿದಲ್ಲಿ ಕಾಂಗ್ರೆಸ್‌ನ ಹಿಡಿತ ಮತ್ತಷ್ಟು ಹೆಚ್ಚಾಗಲಿದೆ.

ಹಾಗಂಥ ಒಕ್ಕೂಟದಲ್ಲಿ ಕಾಂಗ್ರೆಸ್‌ನ ನಡೆ ತೀರಾ ಸುಲಭವಾಗಿಯೇನೂ ಇಲ್ಲ. ದೇಶದ ಲೆಕ್ಕಾಚಾರದಲ್ಲಿ ಈ ಎಲ್ಲ ಪಕ್ಷಗಳು ಒಂದಾಗಿದ್ದರೆ, ರಾಜ್ಯಗಳಲ್ಲಿ ಪರಸ್ಪರ ಎದುರಾಳಿಗಳಾಗಿವೆ. ಅಂದರೆ ಕಾಂಗ್ರೆಸ್‌ಗೆ ಕೇರಳದಲ್ಲಿ ಎಡಪಕ್ಷಗಳೇ ನೇರ ಎದುರಾಳಿ. ದಿಲ್ಲಿಯಲ್ಲಿ ಆಪ್‌ ಕೂಡ ಅಷ್ಟೇ ಪ್ರಬಲವಾಗಿ ಸ್ಪರ್ಧೆಯೊಡ್ಡಿದೆ. ಇನ್ನು ಪಶ್ಚಿಮ ಬಂಗಾಲದಲ್ಲಿ ಟಿಎಂಸಿ ಜತೆ ಸ್ಥಳೀಯ ನಾಯಕರು ಕಾಳಗವನ್ನೇ ನಡೆಸಿದ್ದಾರೆ. ಉಳಿದ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಅಂಥ ಸಮಸ್ಯೆ ತಲೆದೋರದು.

ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಿಜೆಪಿಗೆ ಕಾಂಗ್ರೆಸ್‌ ನೇರ ಎದುರಾಳಿ. ಆದರೆ ಉತ್ತರ ಪ್ರದೇಶ ಮತ್ತು ಝಾರ್ಖಂಡ್‌ನಲ್ಲಿ ಮಾತ್ರ ಕಾಂಗ್ರೆಸ್‌ ಬಲ ಕುಗ್ಗಿದೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಕಾಂಗ್ರೆಸ್‌ಗಿಂತ ಹೆಚ್ಚು ಶಕ್ತಿ ಹೊಂದಿದ್ದರೆ, ಝಾರ್ಖಂಡ್‌ನಲ್ಲಿ ಝಾರ್ಖಂಡ್‌ ಮುಕ್ತಿ ಮೋರ್ಚಾ ಪ್ರಬಲವಾಗಿದೆ. ಈ ಹಿಂದಿನ ಚುನಾವಣೆಗಳಲ್ಲಿಯೂ ಈ ಪಕ್ಷಗಳು ಒಟ್ಟಿಗೆ ಸ್ಪರ್ಧೆ ಮಾಡಿದ್ದವು. ಆದರೆ ಅಂಥ ಪರಿಣಾಮ ಸಿಕ್ಕಿರಲಿಲ್ಲ.

ಇನ್ನು ತೀರಾ ಸಂಕಷ್ಟಕ್ಕೆ ಕಾರಣವಾಗುವ ರಾಜ್ಯವೆಂದರೆ ಪಶ್ಚಿಮ ಬಂಗಾಲ. ಇಲ್ಲಿ ಟಿಎಂಸಿ ವರ್ಸಸ್‌ ಬಿಜೆಪಿ ವರ್ಸಸ್‌ ಎಡಪಕ್ಷಗಳು ವರ್ಸಸ್‌ ಕಾಂಗ್ರೆಸ್‌ ಎಂಬಂಥ ಸ್ಥಿತಿ ಇದೆ. ಸ್ಥಳೀಯವಾಗಿ ಕಾಂಗ್ರೆಸ್‌ ಮತ್ತು ಎಡಪಕ್ಷಗಳು ಒಂದಾಗಬಹುದು. ಆದರೆ ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ಹೇಗೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇಲ್ಲಿ ಕಾಂಗ್ರೆಸ್‌ ಮತ್ತು ಎಡಪಕ್ಷಗಳ ನೆರವಿಲ್ಲದೇ ಮಮತಾ ಬ್ಯಾನರ್ಜಿ ಅವರು ಹೆಚ್ಚು ಸ್ಥಾನ ಗೆಲ್ಲಬಲ್ಲರು. ಬಿಜೆಪಿಗೆ ಪ್ರಬಲ ಪ್ರತಿಸ್ಪರ್ಧೆಯನ್ನೇ ಒಡ್ಡಬಲ್ಲರು. ಹೀಗಾಗಿ ಕಾಂಗ್ರೆಸ್‌ ಮತ್ತು ಎಡಪಕ್ಷಗಳಿಗೆ ಹೆಚ್ಚು ಸೀಟು ಕೊಡುವರೇ ಎಂಬ ಪ್ರಶ್ನೆ ಇದೆ.

ಬಿಹಾರದಲ್ಲಿ ಸೀಟು ಹಂಚಿಕೆಯಲ್ಲಿ ಅಂಥ ಸಮಸ್ಯೆ ಯಾಗದು. ಇಲ್ಲಿದೆ ಜೆಡಿಯು ಮತ್ತು ಆರ್‌ಜೆಡಿ ಹೆಚ್ಚು ಸ್ಥಾನಗಳನ್ನು ಇರಿಸಿಕೊಂಡು, ಕಾಂಗ್ರೆಸ್‌ಗೆ ಕಡಿಮೆ ಸ್ಥಾನ ನೀಡಬಹುದು. ಹೀಗಾಗಿ ಇಲ್ಲಿ ಕೊಂಚ ಹಿನ್ನಡೆಯಾಗಬಹುದು.

ಪ್ರಮುಖವಾಗಿ ಉತ್ತರ ಪ್ರದೇಶ. ಈ ಮೈತ್ರಿಕೂಟ ಗೆಲ್ಲಲೇಬೇಕು ಎಂದಾದರೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಅಥವಾ ಎಸ್‌ಪಿ ಹೆಚ್ಚು ಸ್ಥಾನ ಗೆಲ್ಲಲೇಬೇಕು. ಈ ಹಿಂದೆಯೂ ಎಸ್‌ಪಿ-ಬಿಎಸ್‌ಪಿ-ಕಾಂಗ್ರೆಸ್‌ ಮೈತ್ರಿಕೂಟ ಬಿಜೆಪಿ ಎದುರು ಸೋತಿವೆ. ಈ ಬಾರಿ ಹೇಗೆ ಕಾರ್ಯತಂತ್ರ ರೂಪಿಸಲಿವೆ ಎಂಬುದನ್ನು ನೋಡಬೇಕಾಗಿದೆ. ಈ ಬಾರಿ ಬಿಎಸ್‌ಪಿಯನ್ನು ಹೊರಗಿಟ್ಟಿರುವುದರಿಂದ ಮಾಯಾವತಿ ಸೆಳೆಯುವ ಮತಗಳು ಎಸ್‌ಪಿ-ಕಾಂಗ್ರೆಸ್‌ ಮೈತ್ರಿಕೂಟಕ್ಕೆ ಪೆಟ್ಟು ಕೊಡುವ ಸಾಧ್ಯತೆ ಇದೆ.

ದಕ್ಷಿಣ ಭಾರತದಲ್ಲಿ ಕಾಂಗ್ರೆಸ್‌ಗೆ ಲಾಭ ತಂದುಕೊಡಬಲ್ಲ ರಾಜ್ಯವೆಂದರೆ ಕರ್ನಾಟಕ. ಇಲ್ಲಿ ಸದ್ಯ ಕಾಂಗ್ರೆಸ್‌ ಆಡಳಿತದಲ್ಲಿರುವುದರಿಂದ ಹೆಚ್ಚು ಸ್ಥಾನಗಳ ಗೆಲುವಿಗೆ ಶ್ರಮಿಸಬಹುದು. ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಎನ್‌ಸಿಪಿ ಹೋಳಾಗಿದ್ದು, ಎಂವಿಎಗೆ ಹಿನ್ನಡೆಯಾಗಿದೆ. ಇದನ್ನು ಸರಿಪಡಿಸಿಕೊಂಡು ಶರದ್‌ ಪವಾರ್‌ ಮತ್ತು ಉದ್ಧವ್‌ ಠಾಕ್ರೆ ಗೆಲುವಿಗೆ ಶ್ರಮಿಸಬೇಕಾಗಿದೆ. ಕಾಂಗ್ರೆಸ್‌ ಕೂಡ ಇಲ್ಲಿ ಹಿರಿಯಣ್ಣನ ಪಾತ್ರ ವಹಿಸುವ ಸಾಧ್ಯತೆಗಳು ಕಡಿಮೆ ಇವೆ.

ಉಳಿದಂತೆ ತಮಿಳುನಾಡಿನಲ್ಲಿ ಡಿಎಂಕೆ ಬಿಗ್‌ ಪ್ಲೇಯರ್‌ ಆಗಿದೆ. ಕೇರಳದಲ್ಲಿ ಎಡಪಕ್ಷಗಳು, ಕಾಂಗ್ರೆಸ್‌ ನಡುವೆ ಸೀಟು ಹಂಚಿಕೆಯಾಗುತ್ತದೆಯೋ ಅಥವಾ ಎರಡು ಪರಸ್ಪರ ಎದುರಾಳಿಗಳಾಗಿ ಸ್ಪರ್ಧೆ ಮಾಡಲಿವೆಯೋ ಎಂಬುದನ್ನು ಕಾದು ನೋಡಬೇಕಾಗಿದೆ.

ಪ್ರಮುಖವಾಗಿ ದ್ಲಿಲಿಯಲ್ಲಿ ಆಪ್‌ ಮತ್ತು ಕಾಂಗ್ರೆಸ್‌ ನಡುವಿನ ಸೀಟು ಹಂಚಿಕೆಯೂ ತಲೆನೋವಾಗುವ ಸಾಧ್ಯತೆ ಇದೆ. ಇಲ್ಲಿ ಕಾಂಗ್ರೆಸ್‌ನ ಸ್ಥಳೀಯ ನಾಯಕರಿಗೆ ಆಪ್‌ ಜತೆ ಹೋಗುವುದು ಇಷ್ಟವಿಲ್ಲ. ಇದನ್ನು ಸರಿಪಡಿಸಿಕೊಂಡು ಹೋಗುವ ಅನಿವಾರ್ಯತೆ ಇದೆ. ಪಂಜಾಬ್‌ನಲ್ಲಿಯೂ ಇದೇ ಸ್ಥಿತಿ ತಲೆದೋರುವ ಸಾಧ್ಯತೆಗಳಿವೆ.

ಇಂಡಿಯಾ (ಲೋಕಸಭೆ ಬಲ)

ಕಾಂಗ್ರೆಸ್‌(52), ಟಿಎಂಸಿ(22), ಡಿಎಂಕೆ(23), ಜೆಡಿಯು(16), ಶಿವಸೇನೆ(18), ಎಎಪಿ(1), ಆರ್‌ಜೆಡಿ(0), ಜೆಎಂಎಂ(1), ಎನ್‌ಸಿಪಿ(5), ಎಸ್‌ಪಿ(5),  ಆರ್‌ಎಲ್‌ಡಿ(0), ಅಪ್ನಾ ದಳ (ಕಮೇರವಾಡಿ)(0), ಎನ್‌ಸಿ(0), ಪಿಡಿಪಿ(0), ಕಮ್ಯೂನಿಸ್ಟ್‌ ಪಾರ್ಟಿ ಆಫ್ ಇಂಡಿಯಾ(ಸಿಪಿಐ)(2), ಕಮ್ಯೂನಿಸ್ಟ್‌ ಪಾರ್ಟಿ ಆಫ್ ಇಂಡಿಯಾ(ಮಾರ್ಕ್ಸಿಸ್ಟ್‌)(3), ಕಮ್ಯೂನಿಸ್ಟ್‌ ಪಾರ್ಟಿ ಆಫ್ ಇಂಡಿಯಾ(ಮಾರ್ಕ್ಸಿಸ್ಟ್‌-ಲೆನಿನಿಸ್ಟ್‌) ಲಿಬರೇಷನ್‌(0), ರೆವಲೂಷನರಿ ಸೋಶಯಲಿಸ್ಟ್‌ ಪಾರ್ಟಿ(ಆರ್‌ಎಸ್‌ಪಿ)(1), ಆಲ್‌ ಇಂಡಿಯಾ ಫಾರ್ವರ್ಡ್‌ ಬ್ಲಾಕ್‌(0), ಎಂಡಿಎಂಕೆ(0), ವಿಸಿಕೆ(1), ಕೆಎಂಡಿಕೆ(0), ಎಂಎಂಕೆ(0), ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌(3), ಕೇರಳ ಕಾಂಗ್ರೆಸ್‌(ಎಂ)(1), ಕೇರಳ ಕಾಂಗ್ರೆಸ್‌(ಜೋಸೆಫ್)(0)

“ಎನ್‌ಡಿಎ”ಗೆ ಈಗ ಹೊಸ ಮಿತ್ರರ ಶಕ್ತಿ

ಸತತ ಒಂಬತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ, ಸದ್ಯ 38 ಪಕ್ಷಗಳನ್ನು ಒಳಗೊಂಡಿದೆ. ವಿಶೇಷವೆಂದರೆ ಬಿಜೆಪಿ ಹೊರತುಪಡಿಸಿದರೆ ಉಳಿದ ಎಲ್ಲ ಪಕ್ಷಗಳು ಸಣ್ಣಪುಟ್ಟವೇ ಆಗಿವೆ. ಕೆಲವು ಹಳೇ ದೋಸ್ತಿಗಳಾದರೆ, ಇನ್ನೂ ಕೆಲವು ಹೊಸದಾಗಿ ಸೇರ್ಪಡೆಯಾಗಿವೆ.

ಹಿಂದಿ ರಾಜ್ಯಗಳಲ್ಲಿ ತನ್ನದೇ ಆದ ಪ್ರಭಾವ ಹೊಂದಿರುವ ಬಿಜೆಪಿ, ಸದ್ಯಕ್ಕೆ ಎನ್‌ಡಿಎದಲ್ಲಿ ಅತೀ ದೊಡ್ಡ ಪಕ್ಷ. 301 ಸ್ಥಾನಗಳನ್ನು ಹೊಂದಿರುವ ಇದು, 2024ರಲ್ಲಿ ಪ್ರಾದೇಶಿಕ ಪಕ್ಷಗಳೊಂದಿಗೆ ಸೇರಿ ಒಕ್ಕೂಟ ಮಾಡಿಕೊಂಡು ಸೆಣೆಸುವ ಇರಾದೆ ಹೊಂದಿದೆ. ತನಗೆ ನೆಲೆ ಇಲ್ಲದ ಕಡೆಗಳಲ್ಲಿ ಮಾತ್ರ ದೊಡ್ಡ ಪ್ರಾದೇಶಿಕ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚಿಂತನೆ ಇದೆ. ಸದ್ಯ ಬಿಜೆಪಿ ಮತ್ತು 38 ಪಕ್ಷಗಳಿವೆ. ಮಹಾರಾಷ್ಟ್ರದಲ್ಲಿ ಈ ಹಿಂದೆ ಶಿವಸೇನೆ ಜತೆಗೆ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ, ಹೆಚ್ಚು ಕಡಿಮೆ ಶೇ.90ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆದ್ದಿತ್ತು. ಆದರೆ ಈಗ ಉದ್ಧವ್‌ ಠಾಕ್ರೆಯವರ ಶಿವಸೇನೆ ಜತೆಯಲ್ಲಿಲ್ಲ. ಆದರೆ ಶಿವಸೇನೆಯ ಏಕನಾಥ ಶಿಂಧೆ ಬಣ ಬಿಜೆಪಿ ಜತೆಗಿದೆ. ಹಾಗೆಯೇ ಎನ್‌ಸಿಪಿ ಹೋಳಾಗಿದ್ದು, ಅಜಿತ್‌ ಪವಾರ್‌ ಬಣವೂ ಬಿಜೆಪಿ ಜತೆ ಸೇರಿದೆ. ಇದು ಬಿಜೆಪಿಗೆ ಬಲ ನೀಡಲಿದ್ದು, ಸೀಟು ಹಂಚಿಕೆ ತಲೆನೋವಾಗುವ ಸಾಧ್ಯತೆ ಇದೆ. ಈ ಬಾರಿ ಬಿಜೆಪಿ ಶಿವಸೇನೆ ಮತ್ತು ಎನ್‌ಸಿಪಿಯ ಜತೆಗೂ ಸೀಟುಗಳನ್ನು ಹಂಚಿಕೊಳ್ಳಬೇಕಾಗಿದೆ.

ಅತ್ತ ಬಿಹಾರದಲ್ಲಿ ಈ ಹಿಂದೆ ಜತೆಯಲ್ಲಿದ್ದ ಜೆಡಿಯು, ಕಾಂಗ್ರೆಸ್‌ ಜತೆಗೆ ಹೋಗಿದೆ. ಆದರೆ ಹಿಂದುಳಿದ ವರ್ಗದವರ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ರಾಮ್‌

ವಿಲಾಸ್‌ ಪಾಸ್ವಾನ್‌ ಅವರ ಎಲ್‌ಜೆಪಿಯೊಂದಿಗೆ ಸ್ನೇಹ ಮಾಡಿಕೊಂಡಿದೆ. ಎಲ್‌ಜೆಪಿಯಲ್ಲೂ ಎರಡು ಬಣಗಳಾಗಿದ್ದು, ಇವುಗಳನ್ನು ಒಂದುಗೂಡಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಮಂಗಳವಾರದ ಎನ್‌ಡಿಎ ಸಭೆಗೆ ಎರಡೂ ಪಕ್ಷಗಳ ನಾಯಕರು ಆಗಮಿಸಿದ್ದರು. ಅಲ್ಲದೆ ಕಳೆದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಚಿರಾಗ್‌ ಪಾಸ್ವಾನ್‌, ನಿತೀಶ್‌ ಕುಮಾರ್‌ಗೆ ಭಾರೀ ಪ್ರಮಾಣದ ಹಿನ್ನಡೆಯುಂಟು ಮಾಡಿದ್ದರು.

ಈಗ ಬಿಹಾರದಲ್ಲಿ ಜೆಡಿಯು, ಆರ್‌ಜೆಡಿ, ಕಾಂಗ್ರೆಸ್‌, ಎಸ್‌ಪಿ, ಎಡಪಕ್ಷಗಳು ಒಟ್ಟಾಗಿರುವುದರಿಂದ ಅಲ್ಪಸಂಖ್ಯಾಕ, ದಲಿತ, ಹಿಂದುಳಿದ ವರ್ಗಗಳ ಮತಗಳು ಕ್ರೋಡೀಕರಣವಾಗುತ್ತವೆ ಎಂಬ ಆತಂಕ ಬಿಜೆಪಿಗಿದೆ. ಹೀಗಾಗಿಯೇ ಅಲ್ಲಿನ ಎಲ್‌ಜೆಪಿಯ ಎರಡೂ ಬಣಗಳು, ಮಾಂಝೀ ಅವರ ಎಚ್‌ಎಎಂ ಸೇರಿದಂತೆ ಒಂದಷ್ಟು ಸಣ್ಣ ಪಕ್ಷಗಳನ್ನು ಎನ್‌ಡಿಎನೊಳಗೆ ಸೇರಿಸಿಕೊಳ್ಳಲಾಗಿದೆ. ಈ ಮೂಲಕ ದಲಿತ ಮತ್ತು ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯುವ ಇರಾದೆ ಎನ್‌ಡಿಎನದ್ದು.

ತಮಿಳುನಾಡಿನ ಎಐಎಡಿಎಂಕೆ ಕೂಡ ಬಿಜೆಪಿ ಜತೆಯಲ್ಲಿದೆ. ತಮಿಳುನಾಡಿನಲ್ಲಿ ಬಿಜೆಪಿ ಬಲವಿಲ್ಲದಿದ್ದರೂ, ಅದನ್ನು ವಿಸ್ತರಿಸಿಕೊಳ್ಳುವ ಚಿಂತನೆಯಲ್ಲಿದೆ. ಹೀಗಾಗಿ ಎಐಎಡಿಎಂಕೆ ಜತೆ ಗೆಳೆತನ ಬೆಳೆಸಿಕೊಂಡಿದೆ. ಇಲ್ಲಿ ಸ್ಥಾನಗಳ ಹಂಚಿಕೆ ಅಷ್ಟೇನೂ ಸಮಸ್ಯೆಯಾಗುವ ಸಾಧ್ಯತೆಗಳಿಲ್ಲ.

ಉತ್ತರ ಪ್ರದೇಶದಲ್ಲಿ ಅನುಪ್ರಿಯಾ ನೇತೃತ್ವದ ಅಪ್ನಾದಳ(ಸೋನೆಲಾಲ್‌) ಬಿಜೆಪಿ ಜತೆಗಿದ್ದು, ಕೆಲವೊಂದು ಭಾಗದಲ್ಲಿ ತನ್ನದೇ ಆದ ಪ್ರಾಬಲ್ಯ ಹೊಂದಿದೆ.

ಆಂಧ್ರ ಪ್ರದೇಶದಲ್ಲಿ ಪವನ್‌ ಕಲ್ಯಾಣ್‌ ನೇತೃತ್ವದ ಜನಸೇನಾ ಜತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಪವನ್‌ ಕಲ್ಯಾಣ್‌ ಸಭೆಗೆ ಹೋಗಿದ್ದರು. ಇಲ್ಲಿ ರಾಜಕೀಯ ಸ್ಥಿತ್ಯಂತರಗಳಾಗುವ ಸಾಧ್ಯತೆಗಳಿದ್ದು, ಅನಂತರವಷ್ಟೇ ಸೀಟು ಹಂಚಿಕೆ ಬಗ್ಗೆ ತೀರ್ಮಾನವಾಗಲಿದೆ. ಪವನ್‌ ಕಲ್ಯಾಣ್‌ ಅವರಿಗೆ ಅಪಾರ ಅಭಿಮಾನಿಗಳ ಬೆಂಬಲವಿದೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿ ಹೆಚ್ಚು ಪ್ರಚಲಿತದಲ್ಲಿದ್ದಾರೆ. ಬಿಜೆಪಿ ಜತೆಗೆ ಮೊದಲಿನಿಂದಲೂ ಒಂದಷ್ಟು ಸಖ್ಯ ಹೊಂದಿರುವ ಅವರು ಈಗ ಎನ್‌ಡಿಎಗೆ ಅಧಿಕೃತವಾಗಿಯೇ ಸೇರ್ಪಡೆಯಾಗಿದ್ದಾರೆ. ಅಲ್ಲದೆ  ಈ ರಾಜ್ಯದಲ್ಲಿ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಕೂಡ ಎನ್‌ಡಿಎಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ.

ಝಾರ್ಖಂಡ್‌ನಲ್ಲಿ ಜೆಎಂಎಂ ಮತ್ತು ಕಾಂಗ್ರೆಸ್‌ ಒಂದಾಗಿದ್ದು, ಇಲ್ಲಿ ಬಿಜೆಪಿ, ಆಲ್‌ ಝಾರ್ಖಂಡ್‌ ಸ್ಟುಡೆಂಟ್‌ ಯೂನಿಯನ್‌(ಎಜೆಎಸ್‌ಯು) ಪಕ್ಷದ ಜತೆ ಸಖ್ಯ ಮಾಡಿಕೊಂಡಿದೆ. ಇಲ್ಲಿಯೂ ಹಿಂದುಳಿದ ವರ್ಗಗಳ ಮತಗಳ ಮೇಲೆ ಕಣ್ಣು ಹಾಕಿಕೊಂಡೇ ಈ ಪಕ್ಷವನ್ನು ಎನ್‌ಡಿಎಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ.

ಉಳಿದಂತೆ ಬಹುತೇಕ ಪಕ್ಷಗಳು ಈಶಾನ್ಯ ಭಾರತಕ್ಕೆ ಸೇರಿದವುಗಳಾಗಿದ್ದು, ಅಲ್ಲಿ ಅವುಗಳದ್ದೇ ಹೆಚ್ಚು ಪ್ರಾಬಲ್ಯವಿದೆ. ಹೀಗಾಗಿ ಇಲ್ಲಿ ಸೀಟು ಹಂಚಿಕೆಯಲ್ಲಿ ಅಂಥ ಸಮಸ್ಯೆಯಾಗುವ ಸಾಧ್ಯತೆಗಳು ಕಡಿಮೆ ಇವೆ.

ಉಳಿದಂತೆ ಬಹುತೇಕ ಬೇರೆ ಬೇರೆ ರಾಜ್ಯಗಳಲ್ಲಿ ಮೈತ್ರಿ ಮಾಡಿಕೊಂಡಿರುವ ಸಣ್ಣಪುಟ್ಟ ಪಕ್ಷಗಳು ಆಯಾ ಭಾಗದಲ್ಲಿ ತಮ್ಮದೇ ಆದ ಮತವರ್ಗವನ್ನು ಹೊಂದಿವೆ. ಲೋಕಸಭೆ ಚುನಾವಣೆಯಲ್ಲಿ ಸ್ಥಾನ ಗೆಲ್ಲದಿದ್ದರೂ, ಮತ ಪ್ರಮಾಣ ಹೆಚ್ಚಿಸುವಲ್ಲಿ ನೆರವಾಗಲಿವೆ ಎಂಬ ಕಾರಣಕ್ಕಾಗಿ ಈ ಮೈತ್ರಿ ಮಾಡಿಕೊಂಡಿದೆ. ಜತೆಗೆ ಕೆಲವೊಂದು ಪಕ್ಷಗಳು ವಿಧಾನಸಭೆಗಳಲ್ಲಿ ಪ್ರಾತಿನಿಧ್ಯ ಹೊಂದಿವೆ.

ಎನ್‌ಡಿಎ(ಲೋಕಸಭೆ ಬಲ)

ಬಿಜೆಪಿ(301), ಶಿವಸೇನಾ(ಶಿಂಧೆ ಬಣ)(12), ಎನ್‌ಸಿಪಿ(ಅಜಿತ್‌ ಪವಾರ್‌ ಬಣ), ಆರ್‌ಎಲ್‌ಜೆಪಿ(ಪರಸ್‌)(5), ಎಐಎಡಿಎಂಕೆ(0), ಅಪ್ನಾದಳ(ಸೋನೆಲಾಲ್‌)(2), ಎನ್‌ಪಿಪಿ(1), ಎನ್‌ಡಿಪಿಪಿ(1), ಎಜೆಎಸ್‌ಯು(1), ಎಸ್‌ಕೆಎಂ, ಎಂಎನ್‌ಎಫ್(1), ಐಪಿಎಫ್ಟಿ, ಎನ್‌ಪಿಎಫ್(ನಾಗಾಲ್ಯಾಂಡ್‌)(1), ಆರ್‌ಪಿಐ(ಅಠಾವಳೆ)(0), ಎಜಿಪಿ(0), ಪಿಎಂಕೆ(0), ತಮಿಳ್‌ ಮಾನಿಲಾ ಕಾಂಗ್ರೆಸ್‌(0), ಯುಪಿಪಿಎಲ್‌(0), ಸುಹಾಲೆªàವ್‌ ಭಾರತೀಯ ಸಮಾಜ್‌ ಪಾರ್ಟಿ(0), ಶಿರೋಮಣಿ ಅಕಾಲಿ ದಳ(ಸಂಯುಕ್ತ)(0), ಎಂಜಿಪಿ(0), ಜೆಜೆಪಿ(0), ಪಿಜೆಪಿ(0), ಆರ್‌ಎಸ್‌ಪಿ(0), ಜೆಎಸ್‌ಎಸ್‌ಪಿ(0), ಕೆಪಿಎ(0), ಯುಡಿಪಿ(ಮೇಘಾಲಯ)(0), ಎಚ್‌ಎಸ್‌ಪಿಡಿಪಿ(0), ನಿಶಾದ್‌ ಪಾರ್ಟಿ(0), ಆಲ್‌ ಇಂಡಿಯಾ ಎನ್‌ಆರ್‌ ಕಾಂಗ್ರೆಸ್‌(0), ಎಚ್‌ಎಎಂ(0), ಜನ ಸೇನಾ ಪಾರ್ಟಿ(0), ಹರಿಯಾಣ ಲೋಕ್‌ಹಿತ್‌ ಪಾರ್ಟಿ(0), ಭಾರತ್‌ ಧರ್ಮ ಜನಸೇನಾ(0), ಕೇರಳ ಕಾಮರಾಜ್‌ ಕಾಂಗ್ರೆಸ್‌(0), ಪುಟ್ಟಿಯಾ ತಮಿಳಗಮ್‌(0), ಎಲ್‌ಜೆಎಸ್‌ಪಿ(ರಾಮ್‌ ವಿಲಾಸ್‌ ಪಾಸ್ವಾನ್‌)(1), ಗೋರ್ಖಾ ನ್ಯಾಶನಲ್‌ ಲಿಬರೇಶನ್‌ ಫ್ರಂಟ್‌(0).

Advertisement

Udayavani is now on Telegram. Click here to join our channel and stay updated with the latest news.

Next