ಚಂಡೀಗಢ: ದೇಶದ ಪ್ರಗತಿ ಮತ್ತು ಬಡವರ ಅಭಿವೃದ್ಧಿಗೆ ಎನ್‌ಡಿಎ ಮೈತ್ರಿಕೂಟ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಚಂಡೀಗಢದಲ್ಲಿ ಗುರುವಾರ ಎನ್‌ಡಿಎ ನಾಯಕರ ಮತ್ತು ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. ಜನರ ಜೀವನ ಸುಧಾರಿಸುವುದಕ್ಕೆ, ದೇಶದ ಪ್ರಗತಿ ಬಗ್ಗೆ ಕೈಗೊಳ್ಳಬೇಕಾದ ಅಂಶಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಸಭೆಯ ಬಳಿಕ ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಹರಿಯಾಣ ಹಾಗೂ ಜಮ್ಮು-ಕಾಶ್ಮೀರ ಚುನಾವಣೆ ಮುಗಿದ ಬೆನ್ನಲ್ಲೇ ಈ ಸಭೆ ನಡೆದಿರುವುದು ಮಹತ್ವ ಪಡೆದಿದೆ. ಮುಂದಿನ ತಿಂಗಳು ಮಹಾರಾಷ್ಟ್ರ, ಝಾರ್ಖಂಡ್ ಚುನಾವಣೆ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದಿದೆ. ಹರಿಯಾಣದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಬಿಜೆಪಿ ಜಮ್ಮು- ಕಾಶ್ಮೀರದಲ್ಲೂ ತನ್ನ ಸ್ಥಾನವನ್ನು ಹೆಚ್ಚಿಸಿ ಕೊಂಡು ಒಂದು ರೀತಿಯ ಪ್ರಗತಿ ಸಾಧಿಸಿದೆ. ಇದೇ ರೀತಿ ಮುಂಬರುವ ಮಹಾರಾಷ್ಟ್ರ, ಝಾರ್ಖಂಡ್ ಚುನಾವಣೆಯಲ್ಲೂ ಗೆಲುವು ಸಾಧಿಸುವ ಗುರಿ ಎನ್‌ಡಿಎ ಹೊಂದಿದೆ.
ಪ್ರಧಾನಿ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಜೆಪಿ ನಡ್ಡಾ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ, ಗೋವಾ, ಉತ್ತ ರಾಖಂಡ, ಸಿಕ್ಕಿಂ ಸಹಿತ ಹಲವು ರಾಜ್ಯಗಳ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದಾರೆ.
18 ಎನ್‌ಡಿಎ ಸಿಎಂಗಳ ಸಮ್ಮುಖ ಸೈನಿ ಪ್ರಮಾಣ
ದಲಿತ, ಬ್ರಾಹ್ಮಣ, ಜಾಟ್‌ಗೆ ತಲಾ2 , ಒಬಿಸಿಗೆ 4 ಸಚಿವ ಸ್ಥಾನ , ಪ್ರಧಾನಿ ಮೋದಿ, ಅಮಿತ್ ಶಾ, ರಾಜನಾಥ್ ಸೇರಿ ಪ್ರಮುಖರು ಭಾಗಿ
ಒಬಿಸಿ ನಾಯಕ ನಯಾಬ್ ಸಿಂಗ್ ಸೈನಿ ಅವರು ಸತತ 2ನೇ ಬಾರಿಗೆ ಹರಿಯಾಣದ ಮುಖ್ಯಮಂತ್ರಿ ಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವಾಲ್ಮೀಕಿ ಜಯಂತಿಯಂದೇ ಪಂಚಕುಲದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಎನ್‌ಡಿಎ ಪ್ರಮುಖ ನಾಯಕರ ಸಮ್ಮುಖದಲ್ಲಿ ಸೈನಿ(54) ಹಾಗೂ ಅವರ ಸಂಪುಟದ 12 ಸಚಿವರು ಪ್ರಮಾಣ ಸ್ವೀಕರಿಸಿದ್ದಾರೆ.
ಅನಿಲ್ ವಿಜ್, ಕೃಷ್ಣ ಲಾಲ್ ಪನ್ವಾರ್, ಕೃಷ್ಣ ಬೇಡಿ, ರಾವ್ ನರ್ಬೀರ್ ಸಿಂಗ್, ಮಹಿಪಾಲ್ ಧಂಡಾ, ವಿನೇಶ್ ಗೋಯೆಲ್, ಅರವಿಂದ ಶರ್ಮಾ, ಗೌರವ್ ಗೌತಮ್, ಶ್ರುತಿ ಚೌಧರಿ, ಆರತಿ ರಾವ್(ಕೇಂದ್ರ ಸಚಿವ ರಾವ್ ಇಂದ್ರಜಿತ್ ಪುತ್ರಿ), ರಣಬೀರ್ ಸಿಂಗ್ ಗಂಗ್ವಾ, ರಾಜೇಶ್ ನಗರ್ ಅವರೇ ಸೈನಿ ಸಂಪುಟಕ್ಕೆ ಸೇರಿದ ಸಚಿವರು. ಹರಿಯಾಣ ಸರಕಾರದಲ್ಲಿ ಮುಖ್ಯಮಂತ್ರಿ ಸೇರಿ ಗರಿಷ್ಠ 14 ಸಚಿವರಿರಬಹುದಾಗಿದೆ.
ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಬಿಜೆಪಿಯ ಪ್ರಮುಖ ನಾಯಕರು ಹಾಗೂ ಎನ್‌ಡಿಎ ಆಡಳಿತದ ರಾಜ್ಯಗಳ 18 ಮುಖ್ಯಮಂತ್ರಿಗಳು ಭಾಗಿಯಾಗಿ ದ್ದರು. ಮಹಾರಾಷ್ಟ್ರ ಮತ್ತು ಝಾರ್ಖಂಡ್ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಪಂಚಕುಲದಲ್ಲಿ ಎನ್‌ಡಿಎ ನಾಯಕರೆಲ್ಲರ ಶಕ್ತಿ ಪ್ರದರ್ಶನ ಮಹತ್ವ ಪಡೆದಿದೆ.
ಹೊಸ ಸಂಪುಟದ ಜಾತಿ ಸಮೀಕರಣ ಹೇಗಿದೆ?
ಅಸೆಂಬ್ಲಿ ಚುನಾವಣೆಯಲ್ಲಿ ಅಚ್ಚರಿಯ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಈ ಬಾರಿ ಹೊಸ ಸಂಪುಟಕ್ಕೆ ಸಚಿವರ ಆಯ್ಕೆ ವೇಳೆ ಸಮುದಾಯ ಮತ್ತು ಜಾತಿ ಸಮೀಕರಣದಲ್ಲಿ ಜಾಣ್ಮೆ ಪ್ರದರ್ಶಿಸಿದೆ. ಸೈನಿ ಸಂಪುಟಕ್ಕೆ ಸೇರ್ಪಡೆಯಾದ 13 ಶಾಸಕರ ಪೈಕಿ ದಲಿತ, ಬ್ರಾಹ್ಮಣ ಮತ್ತು ಜಾಟ್ ಸಮುದಾಯಕ್ಕೆ ತಲಾ 2, ಒಬಿಸಿ ಸಮುದಾಯಕ್ಕೆ 4, ಪಂಜಾಬಿ ಮತ್ತು ಬನಿಯಾ ಸಮುದಾಯದ ತಲಾ ಒಬ್ಬರಿಗೆ ಸಚಿವ ಸ್ಥಾನಗಳನ್ನು ನೀಡಲಾಗಿದೆ.
ಜಾಟ್‌ಯೇತರ ಮತ್ತು ಒಬಿಸಿ ಸಮುದಾಯದ ಮತಗಳ ಕ್ರೋಡೀಕರಣವೇ ಈ ಬಾರಿ ರಾಜ್ಯದಲ್ಲಿ ಬಿಜೆಪಿಯ ಉತ್ತಮ ಪ್ರದರ್ಶನಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದ್ದು, ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡೇ ಪಕ್ಷವು ಸಚಿವ ಸ್ಥಾನಗಳನ್ನು ಹಂಚಿದೆ.