ನವದೆಹಲಿ: ಉತ್ತರಪ್ರದೇಶ ಮತ್ತು ಉತ್ತರಾಖಂಡದ ರಾಜ್ಯಸಭೆ ಸ್ಥಾನಗಳಿಗೆ ನಡೆದ ಚುನಾವಣೆಯಿಂದಾಗಿ ಲೋಕಸಭೆಯ ಮೇಲ್ಮನೆಯಲ್ಲಿ ಭಾರತೀಯ ಜನತಾ ಪಕ್ಷದ ಸಂಖ್ಯಾಬಲ ಮತ್ತಷ್ಟು ಹೆಚ್ಚಳವಾದಂತಾಗಿದೆ. ಇದರೊಂದಿಗೆ ಬಿಜೆಪಿ ನೇತೃತ್ವದ ಎನ್ ಡಿಎಗೆ ಇದೀಗ ರಾಜ್ಯಸಭೆಯಲ್ಲಿ ಸ್ಪಷ್ಟ ಬಹುಮತ ದೊರಕಿದಂತಾಗಿದೆ. ಅಷ್ಟೇ ಅಲ್ಲ ಇದೇ ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಖ್ಯಾ ಬಲ ತೀವ್ರ ಕುಸಿತ ಕಂಡಿದೆ ಎಂದು ವರದಿ ತಿಳಿಸಿದೆ.
ಉತ್ತರಪ್ರದೇಶದ 11 ಮತ್ತು ಉತ್ತರಾಖಂಡ್ ನ ಒಂದು ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಎಲ್ಲಾ 12 ಸದಸ್ಯರು ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಇದರೊಂದಿಗೆ ರಾಜ್ಯಸಭೆಯಲ್ಲಿ ಭಾರತೀಯ ಜನತಾ ಪಕ್ಷದ ಸಂಖ್ಯಾಬಲ 92ಕ್ಕೆ ಏರಿಕೆಯಾದಂತಾಗಿದೆ.
ಪ್ರಸ್ತುತ 242 ಸದಸ್ಯಬಲದ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ 38ಕ್ಕೆ ಇಳಿದಿದೆ. ಎನ್ ಡಿಎ ಮೈತ್ರಿಕೂಟದ ಎಐಎಡಿಎಂಕೆ 9 ಸಂಸದರನ್ನು ಹಾಗೂ ಜೆಡಿಯು 5 ರಾಜ್ಯಸಭಾ ಸದಸ್ಯರನ್ನು ಹೊಂದಿದೆ. ಇನ್ನುಳಿದಂತೆ ಆರ್ ಪಿಐ ಅಠಾವಳೆ, ಅಸೋಮ್ ಗಣ ಪರಿಷತ್(ಎಜಿಪಿ), ಮಿಜೋ ನ್ಯಾಶನಲ್ ಫ್ರಂಟ್ (ಎಂಎನ್ ಎಫ್), ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎನ್ ಪಿಪಿ), ನಾಗಾ ಪೀಪಲ್ಸ್ ಫ್ರಂಟ್ (ಎನ್ ಪಿಎಫ್), ಪಟ್ಟಾಳಿ ಮಕ್ಕಳ್ ಕಚೈ(ಪಿಎಂಕೆ) ಮತ್ತು ಬೋಡೋ ಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ರಾಜ್ಯಸಭೆಯಲ್ಲಿ ಏಳು ಸದಸ್ಯರನ್ನು ಹೊಂದಿದೆ.
ರಾಜ್ಯಸಭೆಯಲ್ಲಿ ಈಗ ಎನ್ ಡಿಎ ಸದಸ್ಯರ ಸಂಖ್ಯೆ 111ಕ್ಕೆ ಏರಿಕೆಯಾಗಿದೆ. ಆ ನಿಟ್ಟಿನಲ್ಲಿ ರಾಜ್ಯಸಭೆಯಲ್ಲಿ ಬಹುಮತಕ್ಕೆ ಇನ್ನೂ 12 ಸ್ಥಾನಗಳ ಅಗತ್ಯವಿದೆ. 242 ಸದಸ್ಯಬಲದ ರಾಜ್ಯಸಭೆಯಲ್ಲಿ ಬಹುಮತಕ್ಕೆ 121 ಸದಸ್ಯರ ಅಗತ್ಯವಿದೆ. ಆದರೆ ರಾಜ್ಯಸಭೆಯಲ್ಲಿ ಬಹುಮತ ಪಡೆಯುವುದು ಎನ್ ಡಿಎಗೆ ಕಷ್ಟದ ಕೆಲಸವೇನಲ್ಲ, ಬಿಜೆಡಿ, ಟಿಆರ್ ಎಸ್ ಮತ್ತು ವೈಎಸ್ ಆರ್ ಸಿಪಿ ಜತೆ ಉತ್ತಮ ಬಾಂಧವ್ಯ ಹೊಂದಿದೆ. ಇದರಲ್ಲಿ ಬಿಜೆಪಿ 09 , ಟಿಆರ್ ಎಸ್ ಏಳು ಹಾಗೂ ವೈಎಸ್ ಆರ್ ಪಿ ಆರು ಸದಸ್ಯರನ್ನು ಹೊಂದಿದೆ ಎಂದು ವರದಿ ವಿವರಿಸಿದೆ.