ಮುಂಬಯಿ: ಎನ್‌ಸಿಪಿ ನಾಯಕ , ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರನ್ನು ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ಘೋಷಿಸಲಾಗಿದೆ.
ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕ ಜಯಂತ್ ಪಾಟೀಲ್ ಅವರು ವಿರೋಧ ಪಕ್ಷದ ನಾಯಕ(ಎಲ್ ಒಪಿ)ನ ಸ್ಥಾನಕ್ಕೆ ಪವಾರ್ ಅವರ ಹೆಸರನ್ನು ಪ್ರಸ್ತಾಪಿಸಿದ್ದರು.ಅದನ್ನು ವಿಧಾನಸಭೆ ಅನುಮೋದಿಸಿದೆ ಎಂದು ಮಹಾರಾಷ್ಟ್ರ ವಿಧಾನಸಭೆಯ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.
ಈ ಮಧ್ಯೆ ಏಕನಾಥ್ ಶಿಂಧೆ ನೇತೃತ್ವದ ಸರಕಾರವು 164- 99 ಅಂತರದಿಂದ ವಿಶ್ವಾಸಮತ ಯಾಚನೆಯಲ್ಲಿ ಗೆದ್ದು, ತನ್ನ ಸರಕಾರದ ಬಹುಮತವನ್ನು ಸಾಬೀತುಪಡಿಸಿ ರಾಜ್ಯದ ಮುಖ್ಯಮಂತ್ರಿ ಮತ್ತು ಶಿವಸೇನೆಯ ನಾಯಕನಾಗಿ ಅವರ ಸ್ಥಾನವನ್ನು ಭದ್ರಪಡಿಸಿತು.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅಜಿತ್ ಪವಾರ್ ಅವರು ವಿರೋಧ ಪಕ್ಷದ ನಾಯಕರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಸ್ಪೀಕರ್ ರಾಹುಲ್ ನಾರ್ವೇಕರ್ ಘೋಷಿಸಿದರು. ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಏಕೈಕ ಅತಿದೊಡ್ಡ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ ಎಂದು ಅವರು ಹೇಳಿದರು.
ರಾಜ್ಯದ ಮುಖ್ಯಮಂತ್ರಿಯಾಗಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಾಡಿದ ಚೊಚ್ಚಲ ಭಾಷಣದಲ್ಲಿ ಏಕನಾಥ್ ಶಿಂಧೆ ಅವರು ಅಜಿತ್ ಪವಾರ್ ಅವರನ್ನು ಪ್ರಬುದ್ಧ ರಾಜಕಾರಣಿ ಮತ್ತು ಆಡಳಿತಗಾರ ಎಂದು ಬಣ್ಣಿಸಿದರು.