ನವದೆಹಲಿ: ಶೈಕ್ಷಣಿಕ ತಂತ್ರಜ್ಞಾನ ಕಂಪನಿಯಾದ ಬೈಜೂಸ್ ತನ್ನ ಕೋರ್ಸ್‌ಗಳನ್ನು ಖರೀದಿಸುವಂತೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಆಮಿಷವೊಡ್ಡುವ ಮೂಲಕ ಅಕ್ರಮದಲ್ಲಿ ತೊಡಗಿದೆ ಎಂಬ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ರಾಷ್ಟ್ರೀಯ ಆಯೋಗ(ಎನ್‌ಸಿಪಿಸಿಆರ್) ಬೈಜೂಸ್ ಸಿಇಒಗೆ ಸಮನ್ಸ್ ಜಾರಿ ಮಾಡಿದೆ.
ಮುಂದಿನ ವಾರದೊಳಗಾಗಿ ತಮ್ಮ ಮುಂದೆ ಹಾಜರಾಗಬೇಕು. ಜತೆಗೆ, ಬೈಜೂಸ್‌ನ ಎಲ್ಲ ಕೋರ್ಸ್‌ಗಳ ವಿವರಗಳು, ಅವುಗಳ ಸ್ವರೂಪ, ಪ್ರತಿ ಕೋರ್ಸ್‌ಗೆ ನೋಂದಣಿಯಾಗಿರುವ ವಿದ್ಯಾರ್ಥಿಗಳ ಸಂಖ್ಯೆ, ಶುಲ್ಕ ಮತ್ತಿತರ ಎಲ್ಲ ವಿವರಗಳನ್ನೂ ಹಾಜರುಪಡಿಸಬೇಕು ಎಂದು ಸಿಇಒ ಬೈಜು ರವೀಂದ್ರನ್ ಅವರಿಗೆ ಎನ್‌ಸಿಪಿಸಿಆರ್ ಸೂಚನೆ ನೀಡಿದೆ.
ಪೋಷಕರು ಮತ್ತು ವಿದ್ಯಾರ್ಥಿಗಳನ್ನು ಸಾಲ ಆಧರಿತ ಒಪ್ಪಂದದೊಳಗೆ ಸಿಲುಕಿಸಿ, ಅವರನ್ನು ಶೋಷಣೆಗೆ ಒಳಪಡಿಸಲಾಗುತ್ತಿತ್ತು. ಕೋರ್ಸ್‌ಗಳ ಹೆಸರಲ್ಲಿ ಬೈಜೂಸ್ ಅಕ್ರಮವೆಸಗುತ್ತಿತ್ತು ಎಂಬ ಆರೋಪವನ್ನು ಪರಿಗಣಿಸಿ ಸಮನ್ಸ್ ಜಾರಿ ಮಾಡಿರುವುದಾಗಿ ಎನ್‌ಸಿಪಿಸಿಆರ್ ತಿಳಿಸಿದೆ.
ಸಾಮಾಜಿಕ ಜಾಲತಾಣಗಳಲ್ಲೂ ಅನೇಕರು ಬೈಜೂಸ್ ಕುರಿತು ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ. ನಮ್ಮನ್ನು ಬೈಜೂಸ್ ವಂಚಿಸಿದೆ ಮತ್ತು ಶೋಷಿಸಿದೆ. ನಮ್ಮೆಲ್ಲ ಉಳಿತಾಯಗಳು ಹಾಗೂ ಭವಿಷ್ಯವನ್ನೂ ಡೋಲಾಯಮಾನವಾಗಿಸಿದೆ ಎಂದು ದೂರಿದ್ದಾರೆ.
ಬೈಜೂಸ್‌ನ ಪ್ರತಿನಿಧಿಗಳು ನಮ್ಮನ್ನು ಒಂದೇ ಸಮನೆ ಟಾರ್ಗೆಟ್ ಮಾಡುತ್ತಿದ್ದರು. ಕೋರ್ಸ್‌ಗಳಿಗೆ ಹಣ ಪಾವತಿ ಮಾಡುವಂತೆ ಬಲವಂತ ಮಾಡಿ, ಕೊನೆಗೆ ಸಾಲ ಪಡೆಯುವಂತೆ ಮಾಡುತ್ತಿದ್ದರು ಎಂದೂ ಹೇಳಿದ್ದಾರೆ.