ಭೋಪಾಲ್/ಮುಂಬಯಿ: ಮುಂದಿನ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ವಿರುದ್ಧದ ಮೈತ್ರಿಕೂಟ ರಚನೆಯಾಗಲಾರದು ಎಂದಿದ್ದಾರೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್. ಇದರ ಹೊರತಾಗಿಯೂ ಬಿಜೆಪಿಯೇತರ ಪಕ್ಷಗಳನ್ನು ಮೈತ್ರಿಗಾಗಿ ಕರೆ ತರುವ ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ.
ಮುಂಬಯಿಯಲ್ಲಿ “ಆಜ್‌ತಕ್’ ಸುದ್ದಿ ವಾಹಿನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ವೇಳೆ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಚುನಾವಣೆಯಲ್ಲಿ ಸೋತರೆ, ಹೆಚ್ಚಿನ ಸ್ಥಾನಗಳನ್ನು ಪಡೆಯುವ ಪಕ್ಷ ಪ್ರಧಾನಿ ಹುದ್ದೆ ತನಗೆ ಎಂದು ಘೋಷಿಸಿಕೊಳ್ಳಬಹುದು ಎಂದಿದ್ದಾರೆ.
ಕೇಂದ್ರದ ಮಾಜಿ ಸಚಿವ ಶರದ್ ಪವಾರ್ ಮುಂದಿನ ಲೋಕಸಭೆ ಚುನಾವಣೆ ಒಳಗಾಗಿ ಬಿಜೆಪಿ ವಿರುದ್ಧದ ವಿಪಕ್ಷಗಳ ಮೈತ್ರಿಕೂಟ ರಚನೆಯಾಗಲಾರದು ಎಂದು ಎರಡನೇ ಬಾರಿಗೆ ಪುನರುಚ್ಚರಿಸಿದ್ದಾರೆ. 2004ರ ಚುನಾವಣೆ ವೇಳೆ ದೇಶದಲ್ಲಿ ಯಾವ ಪರಿಸ್ಥಿತಿ ಇತ್ತೋ ಅದುವೇ ಮರುಕಳಿಸಿದೆ. ಹೊಸದಿಲ್ಲಿ, ಮಹಾರಾಷ್ಟ್ರದಲ್ಲಿನ ಸರಕಾರಗಳು ಬದಲಾಗಲಿವೆ. ಲೋಕಸಭೆ ಚುನಾವಣೆ ಬಳಿಕ ಮೋದಿ ಪ್ರಧಾನಿಯಾಗಿ ಇರಲಾರರು ಎಂದಿದ್ದಾರೆ ಪವಾರ್.
ಪಕ್ಷ ಹಾಳಾಗಲಿ: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪರ ಬಿರುಸಿನ ಪ್ರಚಾರ ನಡೆಯುತ್ತಿರುವ ನಡುವೆಯೇ, ಪಕ್ಷದ ಶಾಸಕನೇ ಪಕ್ಷಕ್ಕೆ ಇರುಸು ಮುರುಸು ಉಂಟು ಮಾಡಿದ್ದಾರೆೆ. ರೌ ಕ್ಷೇತ್ರದ ಶಾಸಕ ಜಿತು ಪಟ್ವಾರಿ ಚುನಾವಣೆ ಪ್ರಚಾರದ ವೇಳೆ “ಪಕ್ಷ ಹಾಳಾಗಿ ಹೋಗಲಿ; ಕ್ಷೇತ್ರದ ಜನರಾದ ನೀವು ನನ್ನ ಗೌರವ ಕಾಪಾಡಬೇಕು’ ಎಂದು ಮನವಿ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೂಡಲೇ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಜಿತು ಪಟ್ವಾರಿ, ರೌ ವಿಧಾನಸಭಾ ಕ್ಷೇತ್ರದಲ್ಲಿರುವ ಪ್ರತಿಯೊಬ್ಬನೂ ನನ್ನ ಕುಟುಂಬ ಸದಸ್ಯನಂತೆ. ನಾನು ಸಾಮಾನ್ಯ ವ್ಯಕ್ತಿಯಂತೆ ಮತ್ತು ಪಕ್ಷದ ಪರವಾಗಿ ಎಲ್ಲರ ಜತೆಯೂ ಮಾತನಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದು ಬಿಜೆಪಿಯ ಸಂಚು ಎಂದೂ ಆರೋಪಿಸಿದ್ದಾರೆ.
ಬಿಜೆಪಿಗೆ ರಾಜೀನಾಮೆ: ಮಧ್ಯ ಪ್ರದೇಶದ ಮಂಡ್‌ಸೌರ್‌ನಲ್ಲಿ ರೈತರ ಪ್ರತಿಭಟನೆ ವೇಳೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಪರ ಮಾತನಾಡಿದ್ದ ಗುಣವರ್ಧನ್ ಪಟಿದಾರ್ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.
ರಮಣ್‌ಸಿಂಗ್ ನಾಮಪತ್ರ
ಛತ್ತೀಸ್‌ಗಢದ ರಾಜನಂದಗಾಂವ್ ಕ್ಷೇತ್ರದಿಂದ ಮುಖ್ಯಮಂತ್ರಿ ಡಾ.ರಮಣ್ ಸಿಂಗ್ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಪತ್ನಿ ವೀಣಾ ಸಿಂಗ್, ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಗಣ್ಯರು ಈ ಸಂದರ್ಭದಲ್ಲಿದ್ದರು. ನಾಮಪತ್ರ ಸಲ್ಲಿಕೆಗೆ ಮುನ್ನ ಅವರು ತಮಗಿಂತ 20 ವರ್ಷ ಕಿರಿಯರಾದ ಯೋಗಿ ಆದಿತ್ಯನಾಥ್‌ರ ಪಾದಮುಟ್ಟಿ ಆಶೀರ್ವಾದ ಪಡೆದರು.