ನಾಯಕನಹಟ್ಟಿ: ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಬಸವಣ್ಣನವರ ಅನುಭವ ಮಂಟಪ ಪ್ರೇರಣೆಯಾಗಿದೆ ಎಂದು ರಾಷ್ಟ್ರೀಯ ಬಸವ ದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ವೀರೇಶ್‌ಕುಮಾರ್ ಹೇಳಿದರು.
ಸಮೀಪದ ತಿಮ್ಮಪ್ಪಯ್ಯನಹಳ್ಳಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
700 ವರ್ಷಗಳ ಹಿಂದೆಯೇ ಬಸವಣ್ಣನವರು ತಮ್ಮ ವಚನಗಳ ಮೂಲಕ ಸಾಮಾಜಿಕ ಬದಲಾವಣೆಗೆ ಪ್ರಯತ್ನ ನಡೆಸಿದರು. ಮೂಢನಂಬಿಕೆ ಹಾಗೂ ಅಂಧ ಶ್ರದ್ಧೆಗಳ ವಿರುದ್ಧ ಪರಿವರ್ತನೆಯ ಹೋರಾಟ ನಡೆಸಿದ್ದರು. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಎಲ್ಲ ಜಾತಿಗಳಿಗೆ ಸಮಾನ ಅವಕಾಶವಿತ್ತು ಎಂದರು.
ಎಲ್ಲ ವರ್ಗಗಳಿಗೆ ಮೀಸಲಾತಿ ನೀಡುವ ಸ್ವಾತಂತ್ರ್ಯಾ ನಂತರದ ಸಂವಿಧಾನವನ್ನು ಬಸವಣ್ಣನವರು ಪ್ರತಿಪಾದಿಸಿದ್ದರು. ಅವರು ಪ್ರತಿಪಾದಿಸಿದ ಅನುಭವ ಮಂಟಪದಲ್ಲಿ ಎಲ್ಲ ಜಾತಿಗಳಿಗೆ ಹಾಗೂ ಮಹಿಳಾ ಪ್ರತಿನಿಧಿಗಳಿಗೆ ಅವಕಾಶವಿತ್ತು. ಶ್ರಮ ವಿಭಜನೆ ಆಧಾರದ ಸಮಾಜ ಹಾಗೂ ಸೇವೆಯ ಮಹತ್ವವನ್ನು ಬಸವಣ್ಣನವರು ಸಾರಿದರು. ಮಾದಾರ ಚನ್ನಯ್ಯ, ಮೋಳಿಗೆ ಮಾರಯ್ಯ ಸೇರಿದಂತೆ ಸಮಾಜದಲ್ಲಿನ ಎಲ್ಲ ಜನರಿಗೆ ಸೇವೆ ಸಲ್ಲಿಸುವ ವೃತ್ತಿಪರ ಜನರಿಗೆ ವಿಶೇಷ ಆದ್ಯತೆ ನೀಡಿದರು. ತುಳಿತಕ್ಕೆ ಒಳಗಾದ ಜನರನ್ನು ಮೇಲೆತ್ತುವ ಹಾಗೂ ಕಾಯಕದ ಮಹತ್ವವನ್ನು ವಿವರಿಸಿದ್ದರು. ದೇವರು, ಧರ್ಮದ ಹೆಸರಿನಲ್ಲಿ ಉಂಟಾಗುವ ಶೋಷಣೆಯನ್ನು ಖಂಡಿಸಿದರು. ಇಷ್ಟಲಿಂಗ ಪೂಜೆ ಮಾತ್ರ ಸರಿಯಾದ ಆಚರಣೆ ಎಂಬುದು ಬಸವಣ್ಣನವರ ನಿಲುವಾಗಿತ್ತು ಎಂದು ತಿಳಿಸಿದರು.
ಗಜ್ಜುಗಾನಹಳ್ಳಿ ಗ್ರಾಮದ ಕೆ. ನಾಗರಾಜ್ ಹಾಗೂ ಗೌರಮ್ಮ ಬಸವ ಧರ್ಮ ಧ್ವಜಾರೋಹಣ ನೆರವೇರಿಸಿದರು. ಗಂಜಿಗಟ್ಟಿ ಕೃಷ್ಣಮೂರ್ತಿಬಸವ ತತ್ವ ಹಾಗೂ ಲಾವಣಿ ಪದಗಳನ್ನು ಗಳನ್ನು ಹಾಡಿದರು. ಮುಖಂಡರುಗಳಾದ ಬಸವರಾಜಯ್ಯ, ಸತೀಶ್, ಬಸವರಾಜ್, ವಿಜಯ ಕುಮಾರ್, ಪ್ರಸನ್ನಕುಮಾರ್, ಎಲೆಯಾರ್, ಕೆ.ಎಸ್. ತಿಪ್ಪೇಸ್ವಾಮಿ, ರಾಜಣ್ಣ ಮತ್ತಿತರರು ಇದ್ದರು.