Advertisement

Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್‌; ತನಿಖೆ ಚುರುಕು

09:21 PM Nov 23, 2024 | Team Udayavani |

ಕಾರ್ಕಳ: ಪೀತಬೈಲಿನಲ್ಲಿ ಡಿ.18ರಂದು ನಡೆದ ನಕ್ಸಲ್‌ ವಿಕ್ರಂ ಗೌಡ ಎನ್‌ಕೌಂಟರ್‌ ಪ್ರಕರಣಕ್ಕೆ ಸಂಬಂಧಿಸಿ ತನಿಖೆ  ಚುರುಕುಗೊಂಡಿದೆ.

Advertisement

ವಿಕ್ರಂಗೌಡನ ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಗುಂಡು ತಗಲಿ  ಸ್ಥಳದಲ್ಲೇ ಮೃತಪಟ್ಟಿದ್ದ. ಈ ಘಟನೆಗೆ ಸಂಬಂಧಿಸಿ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದ್ದು, ಕಾರ್ಕಳ ಡಿವೈಎಸ್‌ಪಿ ಅರವಿಂದ್‌ ಕಳಗುಜ್ಜಿ  ನೇತೃತ್ವದಲ್ಲಿ ತನಿಖೆ  ನಡೆಯುತ್ತಿದೆ. ಹಲವರನ್ನು ಈಗಾಗಲೆ ವಿಚಾರಣೆ ನಡೆಸಲಾಗಿದ್ದು, ಮಹತ್ವದ ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದಾರೆ. ಫಾರೆನ್ಸಿಕ್‌ ತಂಡವು ಸ್ಥಳಕ್ಕೆ ಭೇಟಿ ಹಲವು ಮಾಹಿತಿ ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಿದೆ.

ಎಎನ್‌ಎಫ್ ಸಿಬಂದಿಯೂ ವಿಚಾರಣೆ:

ಘಟನೆ ಸಂಬಂಧ ಕಾರ್ಯಾಚರಣೆಯಲ್ಲಿ ಭಾಗಿಯಾದ ಎಎನ್‌ಎಫ್ ಸಿಬಂದಿ ಹಾಗೂ ಅಧಿಕಾರಿಗಳನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳೀಯ ಕೆಲವು ನಿವಾಸಿಗಳನ್ನೂ ವಿಚಾರಣೆ ನಡೆಸಿದ್ದಾರೆ. ಶನಿವಾರ ತನಿಖಾಧಿಕಾರಿಗಳ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು,  ಬೇರೆಬೇರೆ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ.

ಮುಂದುವರಿದ ಕೂಂಬಿಂಗ್‌ :

Advertisement

ಎನ್‌ಕೌಂಟರ್‌ ನಡೆದ ದಿನ  ಪರಾರಿಯಾಗಿದ್ದಾರೆ ಎನ್ನಲಾದ ಮೂರ್ನಾಲ್ಕು ಮಂದಿ ನಕ್ಸಲರ ಹುಡುಕಾಟಕ್ಕೆ ಎಎನ್‌ಎಫ್ ಬಲೆ ಬೀಸಿದ್ದು, ಪಶ್ಚಿಮಘಟ್ಟದ ತಪ್ಪಲು, ದಟ್ಟಾರಣ್ಯದಲ್ಲಿ ಹದ್ದಿನ ಕಣ್ಣಿರಿಸಿದೆ. ಕಾರ್ಯಾಚರಣೆಯಲ್ಲಿ ಉಳಿದ ನಕ್ಸಲರಲ್ಲಿ ಯಾರಾದರೂ ಗಾಯಗೊಂಡಿರಬಹುದೇ?  ಅವರು ಯಾವ ಕಡೆಗೆ ಪರಾರಿಯಾಗಿರಬಹುದು ಅಥವಾ ಪಶ್ಚಿಮಘಟ್ಟದ ಕಾಡಿನಲ್ಲೇ ಇರಬಹುದೇ  ಎಂಬ ನಿಟ್ಟಿನಲ್ಲಿ ಗುಪ್ತಚರ ವಿಭಾಗದ ಮಾಹಿತಿ ಆಧಾರದಲ್ಲಿ ಎಎನ್‌ಎಫ್ ಕಾರ್ಯಾಚರಣೆ ರೂಪಿಸುತ್ತಿದೆ. ಇನ್ನೊಂದೆಡೆ ಉಡುಪಿ – ದ. ಕ. ಜಿಲ್ಲೆಯ ಗಡಿಭಾಗದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಕಾರ್ಕಳ, ಬೆಳ್ತಂಗಡಿ, ಹೆಬ್ರಿ, ಕುದುರೆಮುಖ, ಆಗುಂಬೆ, ಶೃಂಗೇರಿ ಸಹಿತ ಕೆಲವು ಕಡೆಗಳಲ್ಲಿ ವಿವಿಧ ತಂಡಗಳಾಗಿ ಎಎನ್‌ಎಫ್ ಶೋಧ  ಮುಂದುವರಿದಿದೆ.

ಪೀತಬೈಲಿನಲ್ಲಿ ನಡೆದ ನಕ್ಸಲ್‌ ಎನ್‌ಕೌಂಟರ್‌ ಪ್ರಕರಣಕ್ಕೆ ಸಂಬಂಧಿಸಿ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ಸಂಬಂಧಿಸಿ ಎಲ್ಲ ಆಯಾಮಗಳಿಂದಲೂ ತನಿಖೆ ಪ್ರಕ್ರಿಯೆ ನಡೆಯುತ್ತಿದೆ.– ಅರವಿಂದ ಕಳಗುಜ್ಜಿ, ಡಿವೈಎಸ್‌ಪಿ ಕಾರ್ಕಳ

 

Advertisement

Udayavani is now on Telegram. Click here to join our channel and stay updated with the latest news.

Next