Advertisement

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ

03:16 AM Nov 23, 2024 | Team Udayavani |

ಉಡುಪಿ: ಸುಮಾರು 20 ವರ್ಷಗಳ ಕಾಲ ನಕ್ಸಲ್‌ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ ವಿಕ್ರಂ ಗೌಡ ತಮಿಳುನಾಡು, ಕೇರಳ ಹಾಗೂ ರಾಜ್ಯದಲ್ಲಿ ಅದರಲ್ಲೂ ಮಲೆನಾಡು ಭಾಗದಲ್ಲಿ ಹೆಚ್ಚು ಓಡಾಡುತ್ತ ಈ ಭಾಗದ ಅರಣ್ಯದಂಚಿನ ಮನೆಗಳಲ್ಲಿ ದಿನಸಿ ಇನ್ನಿತರ ಅಗತ್ಯಗಳಿಗೆ ಭೇಟಿ ನೀಡುತ್ತಿದ್ದ.

Advertisement

ಕೊಡಗು-ದ.ಕ. ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಅಲ್ಲಲ್ಲಿ ನಕ್ಸಲರ ತಂಡ ಕಾಣಿಸಿಕೊಳ್ಳುತ್ತಿದ್ದ ವೇಳೆಯಲ್ಲಿ ತಂಡದಲ್ಲಿ ವಿಕ್ರಂ ಇರುವುದು ಅನೇಕ ಬಾರಿ ಸಾಬೀತಾಗಿತ್ತು. ತಂಡದಲ್ಲಿ ಕೇರಳಿಗರು ಇದ್ದು, ಕಾಡಂಚಿನ ಮನೆಗಳಿಗೆ ದಿನಸಿ ಕೇಳಲು ಬಂದಾಗಲೆಲ್ಲ ವಿಕ್ರಂ ಒಬ್ಬನೇ ಕನ್ನಡದಲ್ಲಿ ಮನೆ ಮಂದಿ ಜತೆ ಮಾತಾಡುತ್ತಿದ್ದ. ಇದರಿಂದ ಮನೆಯವರಿಗೂ ಆತನ ಬಗ್ಗೆ ಸಲುಗೆ ಬೆಳೆದಿತ್ತು.

ಆತ ಸ್ಥಳೀಯ ಭಾಷೆಯಲ್ಲಿ ಮಾತನಾಡುತ್ತ ಮನೆಯವರಿಗೆ ಧೈರ್ಯ ತುಂಬುತ್ತಾ ತನ್ನ ಉದ್ದೇಶ, ಹೋರಾಟದ ಆಶಯಗಳನ್ನು ಹಂಚಿಕೊಳ್ಳುವಾಗ ಭೇಟಿ ನೀಡಿದ ಮನೆಯವರ ಭೀತಿ ದೂರವಾಗುತ್ತಿತ್ತು. ಭೇಟಿ ಸಮಯದಲ್ಲಿ ಆತ ಮನೆಮಂದಿಯ ಜತೆ ಸೌಮ್ಯವಾಗಿ, ಮೃದುವಾಗಿ ಮಾತನಾಡುತ್ತಿದ್ದ ಎನ್ನುವ ಸುದ್ದಿ ಈಗ ಕಾಡಿನಂಚಿನ ನಾಗರಿಕರಲ್ಲಿ ಕೇಳಿ ಬರುತ್ತಿವೆ.

ಶರಣಾತಿಗೆ ಅವಕಾಶವಿದ್ದರೂ ಒಪ್ಪಲಿಲ್ಲ
ವಿಕ್ರಂ ಗೌಡನ ಕುಟುಂಬದವರು ಹಾಗೂ ಊರವರು ಹೇಳುವಂತೆ ವಿಕ್ರಂ ಗೌಡ ಬಾಲ್ಯದಿಂದ ಪರೋಪಕಾರಿಯಾಗಿದ್ದ. ಆತ ನಕ್ಸಲ್‌ ಸಂಘಟನೆಗೆ ಸೇರಿ ಬಂದೂಕು ಬೆನ್ನಿಗೇರಿಸಿ ಕಾಡು ಸೇರಿರುವುದು ತಪ್ಪು ಎನ್ನುವ ಸ್ಥಳೀಯರು, ಆತನ ಈಗಿನ ಸ್ಥಿತಿಗೆ ಅನುಕಂಪವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಕಟ್ಟಾ ನಕ್ಸಲ್‌ ತತ್ವ ಪಾಲಿಸುತ್ತಿದ್ದ ಆತ ಶರಣಾಗತಿಗೆ ಅವಕಾಶವಿದ್ದರೂ ಅದಕ್ಕೆ ಒಪ್ಪಿಲ್ಲ ಎಂದು ಮೂಲಗಳು ತಿಳಿಸಿವೆ.

40 ಮಂದಿಯ ವಿಶೇಷ ತಂಡದಿಂದ ಕಾರ್ಯಾಚರಣೆ
ಪೀತಬೈಲಿನ ಮನೆಯೊಂದಕ್ಕೆ ವಿಕ್ರಂ ಗೌಡ ಆಗಮಿಸುವ ಬಗ್ಗೆ ಪೂರ್ವ ಮಾಹಿತಿ ಪೊಲೀಸರಿಗೆ ದೊರಕಿದ್ದ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಪೂರ್ವ ಯೋಜನೆ ಸಿದ್ಧಪಡಿಸಲಾಗಿತ್ತು. ಕರ್ನಾಟಕ ಸ್ಟೇಟ್‌ ಇಂಡಸ್ಟ್ರೀಯಲ್‌ ಸೆಕ್ಯೂರಿಟಿ ಫೋರ್ಸ್‌ನ 40 ಸಿಬಂದಿಯ ವಿಶೇಷ ತಂಡ ಕಾರ್ಯಾಚರಣೆ ನಡೆಸಿದೆ. ಇದರಲ್ಲಿ ಸ್ಥಳೀಯರಿಗೆ ಅವಕಾಶ ನೀಡಲಾಗಿರಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next