ಉಡುಪಿ: ರಾಜ್ಯ ಸರಕಾರ ಈ ಹಿಂದೆ ಬಿಡುಗಡೆ ಮಾಡಿದ ಮೋಸ್ಟ್ ವಾಂಟೆಡ್ ನಕ್ಸಲರ ಪಟ್ಟಿಯಲ್ಲಿ 22 ಮಂದಿಯ ಭಾವಚಿತ್ರಗಳಿದ್ದವು. ಅದರಲ್ಲಿ ಕೆಲವರು ಎನ್ಕೌಂಟರ್ಗೆ ಬಲಿಯಾದರೆ ಇನ್ನು ಕೆಲವರು ಶರಣಾಗಿದ್ದಾರೆ.
ಈ ಸಂಖ್ಯೆ ಸುಮಾರು 12 ಆಗಿದ್ದು ಅವರಲ್ಲಿ 6ರಿಂದ 8 ಮಂದಿ ನಕ್ಸಲ್ ಚಟುವಟಕೆಯಲ್ಲಿ ಸಕ್ರಿಯರಾಗಿದ್ದಾರೆ ಎನ್ನಲಾಗಿತ್ತು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ನಕ್ಸಲರ ಸಂಖ್ಯೆ ಕ್ಷೀಣಿಸಿದೆ. ಇವರಲ್ಲಿ ಕೆಲವರು ರಾಜ್ಯದವರಾಗಿದ್ದು, ಇನ್ನು ಕೆಲವರು ಇತರ ರಾಜ್ಯಗಳಿಂದ ಬಂದವರಾಗಿದ್ದಾರೆ.
ಕೇರಳ, ಝಾರ್ಖಂಡ್ ಮತ್ತು ಛತ್ತೀಸ್ಗಢದಲ್ಲಿ ಅಲ್ಲಿನ ಸರಕಾರಗಳು ನಕ್ಸಲರನ್ನು ಮಟ್ಟ ಹಾಕಲು ಭಾರೀ ಕಾರ್ಯಾಚರಣೆ ನಡೆಸುತ್ತಿರುವುದು ಹಾಗೂ ಕೇರಳದಲ್ಲಿ ನಕ್ಸಲ್ ಗುಂಪಿನ ನಡುವೆ ಆಂತರಿಕ ಭಿನ್ನಾಭಿಪ್ರಾಯ ಉಂಟಾಗಿ ಅವರ ನಡುವೆಯೇ ಸಂಘರ್ಷ, ನಾಗರಿಕರಿಂದ ಬೆಂಬಲ ದೊರಕದೆ ಇರುವುದು ಇವೆಲ್ಲ ಕಾರಣದಿಂದ ಬಲ ಕ್ಷೀಣಗೊಂಡು ಅವರನ್ನು ಅಭದ್ರತೆ ಕಾಡುತ್ತಿತ್ತು.
2010ರಲ್ಲಿ ವೆಂಕಟೇಶ್, ಜಯಾ, ಸರೋಜ, ಮಲ್ಲಿಕಾ, 2014ರಲ್ಲಿ ಸಿರಿಮನೆ ನಾಗರಾಜ್, ಸೂರ್ ಜುಲ್ಫಿಕರ್, 2016ರಲ್ಲಿ ಭಾರತಿ, ಫಾತೀಂ, ಪದ್ಮನಾಭ್, ಪರಶುರಾಮ್, 2017ರಲ್ಲಿ ಕನ್ಯಾಕುಮಾರಿ, ಶಿವು, ಚೆನ್ನಮ್ಮ, ಜಿಲ್ಲಾಡಳಿತದ ಮೂಲಕ ಶರಣಾಗತಿಯಾಗಿದ್ದರು.
ಮಲೆನಾಡು, ಪ.ಘಟ್ಟ ಪ್ರದೇಶದಲ್ಲಿ ಮುಂಚೂಣಿಯಲ್ಲಿದ್ದ ಬಿ.ಜಿ. ಕೃಷ್ಣಮೂರ್ತಿ, ಸಾವಿತ್ರಿ ಬಂಧನದ ಬಳಿಕ ಮಲೆನಾಡಿನಲ್ಲಿ ನಕ್ಸಲ್ ನೆಲೆಗೆ ಕಡಿವಾಣ ಬಿದ್ದಿತ್ತು. ಅನಂತರ ವಿಕ್ರಂ ಗೌಡ ತಂಡವನ್ನು ಮುನ್ನಡೆಸುತ್ತಿದ್ದ. ಪ್ರಸ್ತುತ ಆತನೂ ಹತನಾಗಿರುವುದರಿಂದ ಬಲ ಕ್ಷೀಣಿಸಿದೆ.