Advertisement

ನವರಾತ್ರಿ ಇಂದಿನ ಆರಾಧನೆ; ದುಷ್ಟರ ಅಳಿಸಿ ಶಿಷ್ಟರ ರಕ್ಷಿಸೋ ಶುಭಂಕರಿ

11:32 PM Oct 01, 2022 | Team Udayavani |

ಏಕವೇಣಿ ಜಪಾಕರ್ಣಪೂರ ನಗ್ನಾ ಖರಾಸ್ಥಿತಾ|
ಲಂಬೋಷ್ಠಿ ಕರ್ಣಿಕಾಕರ್ಣಿ ತೈಲಾಭ್ಯಕ್ತಶರೀರಿಣೀ||
ವಾಮಪಾದೋಲ್ಲಸಲ್ಲೋಹಲತಾಕಂಟಕ ಭೂಷಣಾ|
ವರ್ಧನ್ಮೂರ್ಧಧ್ವಜಾ ಕೃಷ್ಣಾ ಕಾಲರಾತ್ರಿರ್ಭಯಂಕರೀ||
ಜಗನ್ಮಾತೆ ದುರ್ಗೆಯ ಏಳನೇ ಶಕ್ತಿಯೇ ಕಾಲರಾತ್ರಿ ಎಂಬ ಹೆಸರಿನಿಂದ ಅಭಯ ನೀಡುತ್ತ ಬರುತ್ತಿರುವಳು. ನವದುರ್ಗೆಯರಲ್ಲಿ ಭಯ ಹುಟ್ಟಿಸುವಂಥ ರೂಪ ಈ ಕಾಲರಾತ್ರಿ.

Advertisement

ಇದು ತಾಯಿಯ ಕರ್ಗತ್ತಲು ಸಮಯದ ರೂಪವಾಗಿದೆ. ಇವಳ ಶರೀರದ ಬಣ್ಣವು ದಟ್ಟವಾದ ಅಂಧಕಾರದಂತೆ ಕಪ್ಪಾಗಿಯೂ, ಕೇಶರಾಶಿಯು ಹರಡಿಕೊಂಡಂತೆ, ನಾಸಿಕದ ಉಚ್ಛಾಸ-ನಿಚ್ಛಾಸದಿಂದ ಅಗ್ನಿಯ ಜ್ವಾಲೆಗಳು ಹೊರಹೊಮ್ಮುವಂತೆ ಭಯಂಕರವಾದ ರೂಪ ಕಾಳರಾತ್ರಿ ದೇವಿಯದ್ದು . ಕಾಳರಾತ್ರಿ ದೇವಿಗೆ ನಾಲ್ಕು ಕೈಗಳಿದ್ದು ಒಂದರಲ್ಲಿ ಬೆಂಕಿ ಮತ್ತೂಂದರಲ್ಲಿ ಖಡ್ಗವಿದೆ. ಇನ್ನೆರಡು ಕೈಗಳು ರಾಕ್ಷಸರ ಸಂಹಾರಕ್ಕಾಗಿ ಬಳಸಲೆಂದೇ ಇರುವಂತಿದೆ. ಕತ್ತಿನಲ್ಲಿ ಮಿಂಚಿನಂತೆ ಹೊಳೆಯುವ ಮಾಲೆ, ಬ್ರಹ್ಮಾಂಡದಂತೆ ಗೋಲವಾಗಿರುವ ಮೂರು ಕಣ್ಣುಗಳು ಹೀಗೆ ವಿಚಿತ್ರ ರೂಪದಲ್ಲಿ ಕಾಣುವ ದೇವಿಯು ಕಾಳರಾತ್ರಿಯಾಗಿ ರೂಪಧಾರಣೆ ಮಾಡಿ ತನ್ನ ಬಂಗಾರದ ಮೈಬಣ್ಣದ ಚರ್ಮವನ್ನು ಕಿತ್ತು ರಾಕ್ಷಸರ ವಿರುದ್ಧ ಹೋರಾಡಲು ತಯಾರಾದಂತಿದೆ.

ಅತ್ಯಂತ ಭಯಂಕರ ರೂಪಧಾರಿಯಾಗಿದ್ದರೂ ಸದಾ ಶುಭ ಫಲವನ್ನು ನೀಡುವವಳು. ಆದ್ದರಿಂದಲೋ ಏನೋ ಅವಳನ್ನು ಶುಭಂಕರೀ ಎಂದೂ ಕರೆಯುತ್ತಾರೆ. ಒಂದು ರೀತಿಯಲ್ಲಿ ಹೇಳುವುದಾದರೆ ಅವಳು ಎಲ್ಲ ದುಷ್ಟಶಕ್ತಿ, ದುಷ್ಟತೆ, ನಕಾರಾತ್ಮಕ ಶಕ್ತಿ ಹಾಗೂ ಭೀತಿಯನ್ನು ನಿವಾರಿಸುವವಳು. ಕೆಲವು ಸ್ಥಳಗಳಲ್ಲಿ ಆಕೆಯನ್ನ ರುಂಡಮಾಲಿನಿಯಾಗಿ ರಕ್ಕಸನ ಸಂಹಾರ ಮಾಡುವ ರೀತಿಯೂ ಚಿತ್ರಿಸುತ್ತಾರೆ.

ಕಾಳಿ ಹಾಗೂ ಕಾಲರಾತ್ರಿಯಲ್ಲಿ ವ್ಯತ್ಯಾಸವಿದೆ. ಒಂದು ಪುರಾಣದ ಪ್ರಕಾರ ಆಕೆ ರಾತ್ರಿ ಹಗಲುಗಳಲ್ಲಿ ರಾತ್ರಿಯನ್ನ ನಿಭಾಯಿಸುವವಳು. ಸಹಸ್ರಾರು ಚಕ್ರಗಳನ್ನು ಧರಿಸಿದ್ದರಿಂದ ಆ ದಿನ ಉಪಾಸನೆ ಮಾಡಿದ ಭಕ್ತರಿಗೆ ಬ್ರಹ್ಮಾಂಡದ ಎಲ್ಲ ಸಿದ್ಧಿಗಳ ಬಾಗಿಲು ತೆರೆದುಕೊಳ್ಳುತ್ತದೆ ಎನ್ನುವ ನಂಬಿಕೆ. ಅವಳ ಸಾಕ್ಷಾತ್ಕಾರದಿಂದ ಸಿಗುವ ಅಭಯ ಅವನ ಸಮಸ್ತ ಪಾಪಗಳನ್ನು ಪರಿಹಾರ ಮಾಡಿ ಅಕ್ಷಯ ಪುಣ್ಯ ಲೋಕಗಳ ಪ್ರಾಪ್ತಿಯಾಗುತ್ತದೆ. ಜಗನ್ಮಾತೆಯು ದುಷ್ಟರ ಅಳಿಸಿ ಶಿಷ್ಟರ ರಕ್ಷಿಸೋ ಶುಭಂಕರಿ. ಭೂತ, ಪ್ರೇತ, ಗ್ರಹ ಬಾಧೆಗಳು ಕೂಡ ದೂರವಾಗಿ ಮನಸ್ಸಿಗೆ ನೆಮ್ಮದಿ, ಶಾಂತಿ ದೊರಕುವಂತೆ ಮಾಡುವ ಮಹಾಶಕ್ತಿ ಕಾಳರಾತ್ರಿ. ಅಗ್ನಿಭಯ, ಜಲಭಯ, ಶತ್ರುಭಯ, ರಾತ್ರಿ ಭಯಗಳಿಂದ ಮುಕ್ತನಾಗಿ ಸಂತಸದ ಬದುಕು ನಡೆಸುವಲ್ಲಿ ಆಕೆಯ ಅಭಯ ಹಸ್ತವೇ ಪುಣ್ಯ ಪ್ರಧಾನ. ದೇವಿಯ ಉಪಾಸಕರಾದ ನಾವು ಏಕನಿಷ್ಠ ಮನೋಭಾವದಿಂದ ಉಪಾಸನೆ ಮಾಡುತ್ತಾ ಯಮ,ನಿಯಮ, ಸಂಯಮಗಳನ್ನೂ ಪಾಲಿಸುತ್ತಾ ಧ್ಯಾನ ಪೂಜೆ ಮಾಡುತ್ತಾ ತನು-ಮನ ಶುಭ್ರವಾಗಿಟ್ಟಲ್ಲಿ ಯಾವ ಭಯವೂ ಇಲ್ಲದೆ ನಿಶ್ಚಿಂತೆಯಿಂದಿರಬಹುದು.

ದಿನಾಂಕ
02.10.2022 ರವಿವಾರ
ಶರದೃತು ಅಶ್ವಯುಜ ಶುಕ್ಲಪಕ್ಷ ಸಪ್ತಮಿ
ದೇವತೆ;ಕಾಲರಾತ್ರಿ
ಬಣ್ಣ: ಕಿತ್ತಳೆ

Advertisement

 

-ಎಂ. ಎಸ್‌. ಕೋಟ್ಯಾನ್‌,
ಧಾರ್ಮಿಕ ಚಿಂತಕರು, ಮಂಗಳೂರು

 

 

Advertisement

Udayavani is now on Telegram. Click here to join our channel and stay updated with the latest news.

Next