Advertisement

ಕರಾವಳಿಯಲ್ಲಿ ನವರಾತ್ರಿ ಉತ್ಸವ: ಮಾರ್ಗಸೂಚಿ ಪಾಲಿಸಿ ಆಚರಿಸಲು ನಿರ್ಧಾರ

02:15 AM Oct 02, 2021 | Team Udayavani |

ಮಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಮುಂಬರುವ ನವರಾತ್ರಿ (ದಸರಾ) ಉತ್ಸವವನ್ನು ಜಿಲ್ಲೆಯ ಶ್ರೀ ಕಟೀಲು ದುರ್ಗಾಪರಮೇಶ್ವರಿ, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಹಾಗೂ ಶ್ರೀ ಮಂಗಳಾದೇವಿ ದೇವಸ್ಥಾನ ಸಹಿತ ಹಲವು ದೇವಸ್ಥಾನಗಳಲ್ಲಿ ದ.ಕ. ಜಿಲ್ಲಾಡಳಿತವು ಕಳೆದ ವರ್ಷ ಹೊರಡಿಸಿದ ಮಾರ್ಗಸೂಚಿಯಂತೆ ಈ ಬಾರಿಯೂ ಆಚರಿಸಬಹುದು ಎಂದು ಮೀನುಗಾರಿಕಾ ಸಚಿವ ಎಸ್‌.ಅಂಗಾರ ತಿಳಿಸಿದ್ದಾರೆ.

Advertisement

ದ.ಕ. ಜಿಲ್ಲೆಯಲ್ಲಿ ನವರಾತ್ರಿ ಉತ್ಸವ ಆಚರಣೆ ಸಂಬಂಧ ಶುಕ್ರವಾರ ನಗರದಲ್ಲಿ ನಡೆದ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಬಾರಿ ನವರಾತ್ರಿ ಉತ್ಸವ ಆಚರಣೆ ಕುರಿತಂತೆ ಜಿಲ್ಲಾಡಳಿತ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. ಅದರಂತೆ ದೇವಸ್ಥಾನಗಳ ಆಡಳಿತ ಮಂಡಳಿಗಳು, ಪ್ರಮುಖವಾಗಿ ಭಕ್ತರು ಸಹಕರಿಸಿದ್ದಾರೆ. ಆದರೆ ಕೋವಿಡ್ 3ನೇ ಅಲೆ ಎದುರಾದಲ್ಲಿ ಮತ್ತೂಮ್ಮೆ ಜಿಲ್ಲೆಯಲ್ಲಿ ಲಾಕ್‌ಡೌನ್‌ ಮಾಡುವ ಸಂದರ್ಭವನ್ನೂ ತಳ್ಳಿಹಾಕುವಂತಿಲ್ಲ. ಹೀಗಾಗಿ ಸಮಸ್ಯೆ ಬಿಗಡಾಯಿಸದಂತೆ ನಮಗೆ ನಾವೇ ತಡೆ ಹಾಕಿಕೊಳ್ಳಬೇಕಿದೆ ಎಂದರು.

ದೇವಸ್ಥಾನಗಳಿಗೆ ಬರುವ ಭಕ್ತರಿಗೆ ಕೋವಿಡ್ ಲಸಿಕೆ ಪ್ರಯೋಜನದ ಬಗ್ಗೆ ದೇವಸ್ಥಾನಗಳಲ್ಲಿ ಜಾಗೃತಿ ಮೂಡಿಸಬೇಕು. ದೇವಸ್ಥಾನದ ಆವರಣದಲ್ಲಿಯೇ ಜಿಲ್ಲಾಡಳಿತದ ಸಹಯೋಗದಲ್ಲಿ ಲಸಿಕಾ ಶಿಬಿರವನ್ನು ಏರ್ಪಡಿಸಬೇಕು ಎಂದರು.

ಇದನ್ನೂ ಓದಿ:ಕೋಲ್ಕತಾ ನೈಟ್‌ರೈಡರ್ ವಿರುದ್ಧ ಪಂಜಾಬ್‌ ಕಿಂಗ್ಸ್‌ ಗೆ 5 ವಿಕೆಟ್‌ಗಳ ಜಯ

Advertisement

ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಮಾತನಾಡಿ, ದಸರಾ ಸಂದರ್ಭದಲ್ಲಿ ಕೊರೊನಾ ಸಮುಚಿತ ವರ್ತನೆಯನ್ನು ಪಾಲಿಸಿಕೊಂಡು ದೇವಸ್ಥಾನದಲ್ಲಿ ದರ್ಶನ ಹಾಗೂ ಸೇವೆಯನ್ನು ನಿರ್ವಹಿಸಬೇಕು. ಮಾಸ್ಕ್ ಧಾರಣೆ ಕಡ್ಡಾಯ ಹಾಗೂ ಸಾಮಾಜಿಕ ಅಂತರ ಪಾಲನೆ ಎಲ್ಲರ ಜವಾಬ್ದಾರಿಯಾಗಿದೆ ಎಂದರು.

ಜಿಲ್ಲೆಯಾದ್ಯಂತ ಅ. 2ರಿಂದ ಸ್ವಚ್‌ ಭಾರತ್‌ ಅಭಿಯಾನ ಹಮ್ಮಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸ್ವಯಂ ಸೇವಕರು ಹಾಗೂ ಭಕ್ತರ ಸಹಕಾರದಲ್ಲಿ ಜಿಲ್ಲೆಯ ಎಲ್ಲಾ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸಂಗ್ರಹಿಸಿ ಅದರ ವಿಲೇವಾರಿಗೆ ಸಹಕರಿಸುವಂತೆಯೂ ಅವರು ಕರೆ ನೀಡಿದರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರವಿಶಂಕರ್‌ ಮಿಜಾರು, ಡಾ| ಕಿಶೋರ್‌, ಗಿರಿಪ್ರಸಾದ್‌ ಮುಂತಾ ದವರು ಉಪಸ್ಥಿತರಿದ್ದರು.

ನಿರ್ಬಂಧ ಪಾಲಿಸಿ ಸರಳವಾಗಿ ಆಚರಿಸಿ
ಉಡುಪಿ: 400ಕ್ಕಿಂತ ಹೆಚ್ಚು ಜನರು ಏಕಕಾಲದಲ್ಲಿ ಸೇರದಂತೆ ನವರಾತ್ರಿ/ ದಸರಾ ಉತ್ಸವವನ್ನು ಆಚರಿಸಬೇಕು ಎಂದು ಸರಕಾರ ನಿರ್ದೇಶನ ನೀಡಿದೆ. ಅದರಂತೆ ಸರಳವಾಗಿ ನವರಾತ್ರಿ ಆಚರಣೆ ಮಾಡಬೇಕು. ಸಾರ್ವಜನಿಕರು ಭೌತಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next