ಹಿಂದೂ ಪುರಾಣಗಳಲ್ಲಿ ನವರಾತ್ರಿ ಹಬ್ಬಕ್ಕೆ ವಿಶೇಷ ಪ್ರಾಮುಖ್ಯವಿದ್ದು, 9 ದಿನಗಳಿಗೂ ಅದರದೇ ಆದ ವಿಭಿನ್ನ ವೈಶಿಷ್ಟ್ಯವಿದೆ.
ಒಂದೊಂದು ದಿನ ಶ್ರೀದೇವಿಯನ್ನು ಬೇರೆ ಬೇರೆ ರೂಪ, ನಾಮಗಳಲ್ಲಿ ಆರಾಧಿಸಲಾಗುತ್ತದೆ. ನವರಾತ್ರಿಯ ಮೊದಲ ದಿನ ಪೂಜಿಸಲ್ಪಡುವ ದೇವಿಯ ಅವತಾರ ಶೈಲಪುತ್ರಿ. ಅಂದರೆ ಪರ್ವತ ರಾಜ ಹಿಮವಂತನ ಮಗಳು ಪಾರ್ವತಿ ದೇವಿ. ಈಕೆಯನ್ನು ಆದಿಶಕ್ತಿಯೆಂದು ಗುರುತಿಸಲಾಗುತ್ತದೆ.
ಶ್ವೇತ ವಸ್ತ್ರಧಾರಿಯಾಗಿರುವ ಶೈಲಪುತ್ರಿಯು ಮಲ್ಲಿಗೆ ಪ್ರಿಯಳು. ಕೆಲವೆಡೆಗಳಲ್ಲಿ ದೇವಿಯ ಮಣ್ಣಿನ ಮೂರ್ತಿ ಮಾಡಿ, ಪೂಜೆ ಮಾಡುವ ಸಂಪ್ರದಾಯವಿದೆ.
ಪೂಜಾ ಫಲ – ಶೈಲಪುತ್ರಿ ದೇವಿಯ ಆರಾಧನೆಯಿಂದ “ಧರ್ಮಾರ್ಥ ಕಾಮ ಮೋಕ್ಷ ಚತುಭುìವಿಧಂ ಪುರುಷಾರ್ಥ ಫಲವ”ಎನ್ನುವಂತೆ ಎಲ್ಲ ಫಲವು ಸಿಗುತ್ತದೆ. ಮನಸ್ಸಿನ ಕಾಮನೆಗಳೆಲ್ಲ ಈಡೇರುತ್ತವೆ. ಸಕಲ ಸಂಕಷ್ಟಗಳು ನಿವಾರಣೆಯಾಗುತ್ತವೆ. ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿ, ಇಂದ್ರಿಯ ನಿಗ್ರಹ ಶಕ್ತಿಯು ಒದಗುತ್ತದೆ. ಶೈಲಪುತ್ರಿಯ ರೂಪವು ನಾವು ಪಾಲಿಸಬೇಕಾದ ಬದುಕಿನ ತಣ್ತೀವನ್ನು ಸೂಚಿಸುವುದಲ್ಲದೆ, ಶಾಂತಿಯುತವಾದ ನಡವಳಿಕೆಯನ್ನು ಬೆಳೆಸಿಕೊಳ್ಳಲು ಪ್ರೇರಣೆಯಾಗಿದ್ದಾಳೆ.
ಶೈಲಪುತ್ರಿಯು ಶಾಂತ ಸ್ವಭಾವದಳಾಗಿದ್ದಾಳೆ. ಈ ದಿನ ಬಿಳಿ ಬಣ್ಣದ ಬಟ್ಟೆಯನ್ನು ಧರಿಸುವುದರಿಂದ ಭಕ್ತಿ ಹಾಗೂ ಶಾಂತಿ ಭಾವ ಮೂಡುತ್ತದೆ. ದೇಹ-ಮನಸ್ಸು ಮಲಿನವಾಗದಂತೆ, ಸಮಾಜಕ್ಕೆ ಹಾನಿಯಾಗದಂತೆ ಪಾರದರ್ಶಕವಾಗಿದ್ದಾಗ ಮಾತ್ರ ದೇವರನ್ನು ಒಲಿಸಿಕೊಳ್ಳಬಹುದು ಎನ್ನುವುದನ್ನು ಈ ಶ್ವೇತ ವರ್ಣವು ತಿಳಿಸಿಕೊಡುತ್ತದೆ.
-ಸುಬ್ರಹ್ಮಣ್ಯ ಅಡಿಗ, ಅರ್ಚಕರು, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ