Advertisement

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

11:15 PM Apr 29, 2024 | Team Udayavani |

ನವಲಗುಂದ: ಪ್ರಧಾನಿ ಅಭ್ಯರ್ಥಿ ಯಾರು ಎಂದು ಹೇಳಲಾಗದ ಕಾಂಗ್ರೆಸ್ ಹಣ, ಹೆಂಡ, ಅಧಿಕಾರ, ತೊಳ್ಬಲದ ಮೂಲಕ ಅಧಿಕಾರ ಹಿಡಿಯುವ ಭ್ರಮೆಯಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತದಾರರಿಗೆ ಕರೆ ನೀಡಿದರು.

Advertisement

ನವಲಗುಂದ ಪಟ್ಟಣದಲ್ಲಿ ಬಿಜೆಪಿ ಸೋಮವಾರ ಸಂಜೆ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಪರ ಬೃಹತ್ ರೋಡ್ ಶೋ ನಡೆಸಿದ ಬಳಿಕ ಲಿಂಗರಾಜ ವೃತ್ತದಲ್ಲಿ ನೆರದ ಮತದಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸಮಾಜದ ಜನರಲ್ಲಿ ಜಾತಿ ಜಾತಿ ಮಧ್ಯೆ ವಿಷದ ಬೀಜ ಬಿತ್ತುವ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಯಾರು ಎಂಬುದು ಸ್ಪಷ್ಟಪಡಿಸಲಿ ಎಂದು ಸೋನಿಯಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸವಾಲ್ ಹಾಕಿದರು.

ಕಾಂಗ್ರಾಸ್ ನಾನು ಸಿಎಂ ಇದ್ದಾಗ ಬಡವರಿಗೆ ನೀಡಿದ ಭಾಗ್ಯಲಕ್ಷ್ಮ, ಸುವರ್ಣ ಗ್ರಾಮ ಯೋಜನೆ, ಪಿಎಂ ಕಿಸಾನ್ ಅಡಿ ನೀಡುವ ನಾಲ್ಕು ಸಾವಿರ ರೈತರ ಹಣದ ಯೋಜನೆ ನಿಲ್ಲಿಸಿದೆ. ಇಂತಹ ಕಾಂಗ್ರೆಸ್ ಗೆ ಅಧಿಕಾರ ನೀಡದಂತೆ ಮನವಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಸಾಕಷ್ಟು ಜನಪರ ಯೋಜನೆಗಳು ಜಾರಿಗೆ ತಂದಿದ್ದಾರೆ. ಜೋಶಿ ಸಹ ಸಾಕಷ್ಟು ಕೆಲಸ ಮಾಡಿದ್ದು, ಅವರಿಗೆ ಮತ ನೀಡುವ ಮೂಲಕ 3 ಲಕ್ಷ ಮತಗಳ ಅಂತರದಿಂಗೆ ಗೆಲ್ಲಿಸಲು ಮತದಾರರಲ್ಲಿ ವಿನಂತ ಮಾಡಿದರು.

Advertisement

ಅಭ್ಯರ್ಥಿ ಪ್ರಹ್ಲಾದ್ ಜೋಶಿ ಮಾತನಾಡಿ, ಕಾಂಗ್ರೆಸ್ ಪಕ್ಷ ಕಳಸಾ-ಬಂಡೂರಿಗೆ ಅಡ್ಡಗಾಲು ಹಾಕಿದೆ. ಕರ್ನಾಟಕದ ಹುಲಿ ಪ್ರಾಧಿಕಾರದ ಅನುಮತಿ ಪಡೆದರೆ, ಕೇಂದ್ರದ ಪರಿಸರ ಇಲಾಖೆ ಪರವಾನಿಗೆ ಕೊಡಿಸಿ, ಯಲ್ಲಮ್ಮನ ಪಾದಕ್ಕೆ ನೀರು ಹರಿಸುವ ಜವಾಬ್ದಾರಿ ನನ್ನದು ಎಂದು ವಾಗ್ದಾನ ಮಾಡಿದರು.

ಗೋವಾ ಚುನಾವಣೆ ವೇಳೆ ಸ್ವತಃ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕರ್ನಾಟಕಕ್ಕೆ ಹನಿ ನೀರು ಕೊಡಲ್ಲ ಅಂತ ಹೇಳಿದ್ದರು. ಅವರೇ ಯೋಜನೆಗೆ ಅಡ್ಡಗಾಲು ಹಾಕಿದ್ದು, ಇದೀಗ ಬಿಜೆಪಿ ಸರ್ಕಾರದ ಮೇಲೆ ಗೂಭೆ ಕೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಅಲ್ಲದೇ, ನ್ಯಾಯಾಧೀಕರಣಕ್ಕೆ ಕೊಡುವ ಮೊದಲೇ ನೀರು ಹರಿಸಲು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮಾಡಿದ ಮನವಿಗೂ ಸ್ಪಂದಿಸಲಿಲ್ಲ. ನ್ಯಾಯಾಧೀಕರಣ ರಚಿಸಿದರೂ, ಎರಡ್ಮೂರು ವರ್ಷ ಕಟ್ಟಡ ನೀಡಿಲ್ಲ‌. ನ್ಯಾಯಾಧೀಶರ ನೇಮಕವೂ ಸಹ ಮಾಡಲಿಲ್ಲ ಎಂದು ಆರೋಪಿಸಿದರು.

ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವು ನ್ಯಾಯಾಧೀಕರಣಕ್ಕೆ ಕಟ್ಟಡ, ಮೂಲಭೂತ ಸೌಲಭ್ಯ ಒದಗಿಸುವುದರ ಜೊತೆಗೆ ನ್ಯಾಯಾಧೀಶರ ನೇಮಕವೂ ಕೂಡ ಮಾಡಿತು. ಮಹದಾಯಿ ಯೋಜನೆ ಕುರಿತು ಬಿಜೆಪಿ ಎಂದಿಗೂ ತಾತ್ಸರ ಭಾವನೆ ತಾಳಿಲ್ಲ ಎಂದು ರೈತರಿಗೆ ಸ್ಪಸ್ಟನೆ ನೀಡಿದರು.

ಸದ್ಯ ಕಳಸಾ-ಬಂಡೂರಿ ಯೋಜನೆ ಕುರಿತಂತೆ ಈಗಾಗಲೇ, ಕೇಂದ್ರ ಸರ್ಕಾರ ಗೆಜೆಟ್ ನೋಟಿಫೀಕೇಶನ್ ಹೊರಡಿಸಿದೆ. ವಿಸ್ತ್ರತ ಯೋಜನಾ ವರದಿಗೂ ಅನಮತಿ ನೀಡಲಾಗಿದೆ. ವನ್ಯಜೀವಿ ಮಂಡಳಿ ಅನುಮತಿ ಪಡೆದರೆ, ಕೇಂದ್ರ ಪರಿಸರ ಇಲಾಖೆ ಅನುಮತಿ ಕೊಡಿಸುವ ಜೊತೆಗೆ ಕೆಲಸ ಪ್ರಾರಂಭಿಸುವುದಾಗಿಯೂ ರೈತರಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಕೆ.ಎನ್.ಗಡ್ಡಿ, ಶಂಕರ ಪಾಟೀಲ ಮುನೇನಕೊಪ್ಪ, ನಿಂಗಪ್ಪ ಸುತಗಟ್ಟಿ, ಪ್ರಕಾಶ ಅಂಗಡಿ, ಷಣ್ಮುಖಪ್ಪ ಗುರಿಕಾರ, ದೇವರಾಜ ದಾಡಿಭಾವಿ, ಎಸ್.ಬಿ.ದಾನಪ್ಪಗೌಡರ, ರಾಯನಗೌಡ ಪಾಟೀಲ, ಎನ್.ಪಿ.ಕುಲಕರ್ಣಿ, ಸಿದ್ದನಗೌಡ ಪಾಟೀಲ, ಶಂಕರಗೌಡ ರಾಯನಗೌಡರ, ಶಿವಾನಂದ ಹೊಸಹಳ್ಳಿ, ನಿಂಗಪ್ಪ ಬಾರಕೇರಿ, ಪವಮ ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next