ನವದೆಹಲಿ: ಮಾಜಿ ಕ್ರಿಕೆಟಿಗ, ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧುಗೆ ಭಾರೀ ಹಿನ್ನಡೆ ಉಂಟಾಗಿದ್ದು, ಸುಮಾರು 20 ವರ್ಷಗಳ ಹಿಂದಿನ ಹಾದಿ ರಂಪದಲ್ಲಿ ವ್ಯಕ್ತಿಯೊಬ್ಬನ ಸಾವಿಗೆ ಕಾರಣವಾಗಿದ್ದ ಪ್ರಕರಣ ಪುನರ್ ಪರಿಶೀಲಿಸಲು ಸುಪ್ರೀಂಕೋರ್ಟ್ ಬುಧವಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಸಿಧುವನ್ನು ಜೈಲಿಗೆ ಹಾಕುತ್ತೋ ಅಥವಾ ಬಿಡುಗಡೆ ಮಾಡುತ್ತೋ ಎಂಬುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
1998ರ ಡಿಸೆಂಬರ್ 27ರಂದು ಸಿಧು ಹಾಗೂ ಗೆಳೆಯ ರೂಪಿಂದರ್ ಸಿಂಗ್ ಪಟಿಯಾಲದಲ್ಲಿ ಕಾರು ಪಾರ್ಕಿಂಗ್ ಗೆ ಸಂಬಂಧಿಸಿದಂತೆ ಗರ್ನಾಮ್ ಸಿಂಗ್ ಜೊತೆ ಜಗಳಕ್ಕಿಳಿದಿದ್ದರು. ಬಳಿಕ ಗುರ್ನಾಮ್ ಸಿಂಗ್ ಅವರನ್ನು ಕಾರಿನಿಂದ ಹೊರಗೆ ಎಳೆದು ಮಾರಣಾಂತಿಕವಾಗಿ ಹೊಡೆದಿದ್ದರು. ಆ ವ್ಯಕ್ತಿ ಬಳಿಕ ಸಾವನ್ನಪ್ಪಿದ್ದರು.
ವಿಚಾರಣಾ ಕೋರ್ಟ್ ಸಿಧುವನ್ನು ಆರೋಪದಿಂದ ಖುಲಾಸೆಗೊಳಿಸಿತ್ತು. ಆದರೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ 2006ರಲ್ಲಿ ದೋಷಿ ಎಂದು ತೀರ್ಪು ನೀಡಿ, 3 ವರ್ಷ ಜೈಲುಶಿಕ್ಷೆ ವಿಧಿಸಿತ್ತು. ತದನಂತರ ಸಿಧು ಹಾಗೂ ಗೆಳೆಯ ರೂಪಿಂದರ್ 2007ರಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ಹೈಕೋರ್ಟ್ ವಿಧಿಸಿದ್ದ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು, ಜಾಮೀನು ನೀಡಿತ್ತು.
ಏತನ್ಮಧ್ಯೆ ಈ ಆದೇಶವನ್ನು ಪ್ರಶ್ನಿಸಿ ಕುಟುಂಬಸ್ಥರು ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪೀಠದ ಜಸ್ಟೀಸ್ ಎಎಂ ಖಾನ್ ವಿಲ್ಕರ್ ಹಾಗೂ ಜಸ್ಟೀಸ್ ಸಂಜಯ್ ಕಿಶನ್ ಕೌಲ್ ಸಿಧುಗೆ, ನಿಮಗೆ ಯಾಕೆ ಕಠಿಣ ಶಿಕ್ಷೆ ನೀಡಬಾರದು ಎಂದು ಪ್ರಶ್ನಿಸಿ ಉತ್ತರ ನೀಡುವಂತೆ ನೋಟಿಸ್ ನೀಡಿದೆ.
ಮೇ ತಿಂಗಳಿನಲ್ಲಿ ಕಾಂಗ್ರೆಸ್ ಮುಖಂಡ ಸಿಧುವಿನ 1998ರ ಪ್ರಕರಣದಲ್ಲಿ ದೋಷಿ ಎಂದು ಸುಪ್ರೀಂಕೋರ್ಟ್ ಪೀಠದ ಜಸ್ಟೀಸ್ ಜೆ ಚಲಮೇಶ್ವರ್ ಹಾಗೂ ಜಸ್ಟೀಸ್ ಸಂಜಯ್ ಕಿಶನ್ ಕೌಲ್ ತೀರ್ಪು ನೀಡಿ, ಒಂದು ಸಾವಿರ ರೂಪಾಯಿ ದಂಡ ವಿಧಿಸಿದ್ದರು. ಏತನ್ಮಧ್ಯೆ ಜಸ್ಟೀಸ್ ಚಲಮೇಶ್ವರ್ ನಿವೃತ್ತಿಯಾಗಿದ್ದಾರೆ. ಇದೀಗ ಪ್ರಕರಣ ಮತ್ತೆ ಸುಪ್ರೀಂ ಕಟಕಟೆಗೆ ಬಂದಿದ್ದು, ಜಸ್ಟೀಸ್ ಖಾನ್ ವಿಲ್ಕರ್ ಹಾಗೂ ಜಸ್ಟೀಸ್ ಸಂಜಯ್ ಕಿಶನ್ ಕೌಲ್ ಅವರಿದ್ದ ಪೀಠ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.