Advertisement

ಕುದ್ರೋಳಿ, ಮಂಗಳಾದೇವಿ; ನವರಾತ್ರಿ ಉತ್ಸವ ಆರಂಭ 

07:44 PM Oct 07, 2021 | Team Udayavani |

ಮಹಾನಗರ: ಭಕ್ತಿ ಸಂಭ್ರಮ ದೊಂದಿಗೆ ನಾಡಿನಾದ್ಯಂತ ಆಚರಿಸುವ ನವರಾತ್ರಿ ಉತ್ಸವವು ಮಂಗಳೂರು ನಗರ ಮತ್ತು ಗ್ರಾಮಾಂತರದ ವಿವಿಧ ದೇವಸ್ಥಾನಗಳಲ್ಲಿ ಗುರುವಾರದಿಂದ ಆರಂಭಗೊಂಡಿದೆ. ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವ ಮುಖೇನ ದೇವಸ್ಥಾನಗಳಲ್ಲಿ ನವರಾತ್ರಿ ಸಡಗರಕ್ಕೆ ಚಾಲನೆ ದೊರೆತಿದೆ.

Advertisement

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಇದಕ್ಕೂ ಮುನ್ನ ನವದುರ್ಗೆಯರು ಹಾಗೂ ಶ್ರೀ ಶಾರದಾ ಮಾತೆಯ ಪ್ರತಿಷ್ಠಾಪನೆ ಜರಗಿತು.

ಬೆಳಗ್ಗೆಯಿಂದ ಗುರು ಪ್ರಾರ್ಥನೆ, ಕಲಶ ಪ್ರತಿಷ್ಠೆ, ಪುಷ್ಪಾಲಂಕಾರ, ಮಹಾಪೂಜೆ, ಭಜನೆ ಸಹಿತ ಹಲವು ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು. ಮಂಗಳೂರು ದಸರಾ ಉದ್ಘಾಟನೆ ಸಂದರ್ಭ ಹುಲಿ ವೇಷವು ಮತ್ತಷ್ಟು ಮೆರುಗು ನೀಡಿತು. ಶಾರದಾ ಪ್ರತಿಷ್ಠೆಯ ಸಂದರ್ಭ ಹುಲಿ ವೇಷಧಾರಿಗಳ ನರ್ತನ ಗಮನಸೆಳೆಯಿತು.

ಮಂಗಳೂರು ದಸರಾ ಹಿನ್ನೆಲೆಯಲ್ಲಿ ಶಾರದಾ ಪ್ರತಿಷ್ಠಾಪನೆ ಮಾಡಿರುವ ದರ್ಬಾರು ಮಂಟಪ ಈ ಬಾರಿಯೂ ಆಕರ್ಷಕವಾಗಿ ಕಂಗೊಳಿಸುತ್ತಿದೆ. ಚಂದ್ರಶೇಖರ್‌ ಸುವರ್ಣ ಮೂಲ್ಕಿ ನೇತೃ ತ್ವದ ತಂಡ ದರ್ಬಾರು ಮಂಟಪವನ್ನು ಸಿದ್ಧಪಡಿಸಿದ್ದಾರೆ. ಕುದ್ರೋಳಿ ಕ್ಷೇತ್ರದಲ್ಲಿ ಅ. 8ರಂದು ಬೆಳಗ್ಗೆ ದುರ್ಗಾಹೋಮ, ಮಧ್ಯಾಹ್ನ ಪುಷ್ಪಾಲಂಕಾರ ಮಹಾಪೂಜೆ, ಭಜನೆ ನಡೆಯಲಿದೆ.

ಉರ್ವ ಮಾರಿಯಮ್ಮ ದೇವಸ್ಥಾನ:

Advertisement

ಉರ್ವ ಬೋಳೂರು ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಗುರುವಾರದಿಂದ ಆರಂಭವಾಗಿದೆ. ಗುರುವಾರ ಬೆಳಗ್ಗೆ ನವಕಲಶಾಭಿಷೇಕ, ಮಧ್ಯಾಹ್ನ ಸರ್ವಾಲಂಕಾರ ಪೂಜೆ, ಮಹಾಪೂಜೆ ನೆರವೇರಿತು. ಹೊರಗಿನ ದರ್ಶನ ಬಲಿ ಪೂಜೆ ಜರಗಿತು.

ಕೊಡಿಯಾಲಬೈಲ್‌ನ ಕುದ್ರೋಳಿ ಶ್ರೀ ಭಗವತೀ ದೇವಸ್ಥಾನ, ಬೋಳಾರ ಶ್ರೀ ಮಾರಿಯಮ್ಮ ದೇವಸ್ಥಾನ ಸಹಿತ ನಗರದ ವಿವಿಧ ದೇವಸ್ಥಾನಗಳಲ್ಲಿ ನವರಾತ್ರಿ ಉತ್ಸವ ಆರಂಭವಾಯಿತು.

ಶ್ರೀ ಮಂಗಳಾದೇವಿ: ನವರಾತ್ರಿ ಉತ್ಸವಕ್ಕೆ ಚಾಲನೆ :

ನಗರದ ಮಹತೋಭಾರ ಶ್ರೀ ಮಂಗಳಾ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವಕ್ಕೆ ಗುರುವಾರ ಚಾಲನೆ ನೀಡಲಾಯಿತು. ಗಣಪತಿ ಪ್ರಾರ್ಥನೆ ನೆರವೇರಿತು. ಶ್ರೀ ಕ್ಷೇತ್ರದಲ್ಲಿ ಕೊಪ್ಪರಿಗೆ ಇಡುವ ಸಂದರ್ಭ ದಲ್ಲಿ ಮೇಯರ್‌ ಪ್ರೇಮಾನಂದ ಶೆಟ್ಟಿ ಮಾತನಾಡಿ, ನವರಾತ್ರಿಯ ಮುಖೇನ ನಾಡಿಗೆ ಸುಭೀಕ್ಷೆಯಾಗಲಿ ಎಂದರು.

ಕರ್ಣಾಟಕ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಮಹಾಬಲೇಶ್ವರ ರಾವ್‌ ಮತ್ತು ಅನ್ನಪೂರ್ಣಾ ಎಂ. ರಾವ್‌ ಹಾಗೂ ಬ್ಯಾಂಕ್‌ ಆಫ್‌ ಬರೋಡಾದ ಜಿಎಂ ಗಾಯತ್ರಿ ಆರ್‌., ಮೀನುಗಾರಿಕೆ ನಿಗಮದ ಅಧ್ಯಕ್ಷ ನಿತಿನ್‌ ಕುಮಾರ್‌, ವಿದ್ಯಾಂಗ ಉಪನಿರ್ದೇಶಕ ಮಲ್ಲೇಸ್ವಾಮಿ, ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿ, ಆನುವಂಶಿಕ ಮುಖ್ಯಸ್ಥರಾಗಿರುವ ರಘುರಾಮ್‌ ಉಪಾಧ್ಯಾಯ, ಮಂಗಳಾದೇವಿ ದೇವಸ್ಥಾನದ ಬೋರ್ಡ್‌ ಟ್ರಸ್ಟಿಗಳಾದ ಬಿ. ರಾಮನಾಯಕ ಕೋಟೆಕಾರ್‌ ಮತ್ತು ಪ್ರೇಮಲತಾ ಎಸ್‌. ಕುಮಾರ್‌,  ಪ್ರಧಾನ ಅರ್ಚಕರಾದ ಎಂ. ಅರುಣ ಐತಾಳ್‌ ಉಪಸ್ಥಿತರಿದ್ದರು. ಆಡಳಿತ ಮೊಕ್ತೇಸರರಾದ ಪಿ.ರಮಾನಾಥ ಹೆಗ್ಡೆ ಸ್ವಾಗತಿಸಿ, ಸುಧಾಕರ ರಾವ್‌ ಪೇಜಾವರ ವಂದಿಸಿದರು. ಕೆ ವಿನಯಾನಂದ ಕಾನಡ್ಕ  ನಿರೂಪಿಸಿದರು.

ಕಟೀಲು: ದೇವಿಗೆ ರಂಗಪೂಜೆ :

ಕಟೀಲು: ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಆರಂಭಗೊಂಡಿತು. ರಾತ್ರಿ ದೇಗುಲದಲ್ಲಿ ತಾಳದ ಮನೆಯವರಿಂದ ಸಂಕೀರ್ತನೆ ನಡೆಯಿತು. ದೇವರಿಗೆ ವಿಶೇಷ ರಂಗಪೂಜೆ, ಹೂವಿನ ಪೂಜೆ ನಡೆಯಿತು. ಈ ಸಂದರ್ಭ ದೇವಿಗೆ ಬಂಗಾರ ಹಾಗೂ ಹೂವಿನಿಂದ ಅಲಂಕರಿಸಲಾಗಿತ್ತು.

ಗುರುವಾರ ಅದಮಾರು ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ದೇಗುಲಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಈ ಸಲವೂ ಕಟೀಲಿನಲ್ಲಿ ನವರಾತ್ರಿಯನ್ನು ಸರಳವಾಗಿ ಆಚರಿಸಲಾಗುವುದು ಎಂದು ದೇಗುಲದ ಮೂಲಗಳು ತಿಳಿಸಿವೆ. ಅನ್ನದಾನಕ್ಕೆ ಅಕ್ಕಿ, ಬೆಲ್ಲ, ತುಪ್ಪ, ಅರಸಿನ, ಎಣ್ಣೆ ಇತ್ಯಾದಿ ವಸ್ತುಗಳನ್ನು ಕೊಡಲಿಚ್ಛಿಸುವ ಭಕ್ತರಿಗೆ ಅನುಕೂಲವಾಗುವಂತೆ ದೇಗುಲದಲ್ಲಿ ಹೊಸದಾಗಿ ಕೌಂಟರ್‌ ಆರಂಭವಾಗಲಿದೆ.

ಬಪ್ಪನಾಡು: ಮಹಾಚಂಡಿಕಾಯಾಗ:

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಗುರುವಾರ ವಿಶೇಷ ಪೂಜೆ ಜರಗಿ ದವು. ಬೆಳಗ್ಗೆ 10ಕ್ಕೆ ಮಹಾ ಚಂಡಿಕಾಯಾಗ, ಮಧ್ಯಾಹ್ನ ಮಹಾಪೂಜೆ, ರಾತ್ರಿ ರಂಗಪೂಜೆ, ಸುವಾಸಿನಿ ಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು.

ಕೋವಿಡ್‌ ನಿಯಮಗಳನ್ನು ಪಾಲಿಸಿ ಭಕ್ತರು ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಕೊರೊನಾ ನಿರ್ಮೂಲನೆಗೆ ವಿಶೇಷ ಪ್ರಾರ್ಥನೆ ನೆರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next