ಮೀರಾರೋಡ್: ಮೀರಾ ರೋಡ್ ಪೂರ್ವದ ಗೀತಾ ನಗರದಲ್ಲಿರುವ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯಲ್ಲಿ ಅ. 9ರಂದು ನವರಾತ್ರಿ ಉತ್ಸವದ ಪ್ರಯುಕ್ತ ಚಂಡಿಕಾ ಹೋಮ ಹಾಗೂ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ಪಲಿಮಾರು ಮಠದ ಹಿರಿಯ ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀಗಳಾದ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಜರಗಿತು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಶ್ರೀಗಳು ಪಲಿಮಾರು ಮಠದ ಪಟ್ಟದ ದೇವರಾದ ಶ್ರೀರಾಮಚಂದ್ರ ದೇವರಿಗೆ ಪೂಜೆ ಸಲ್ಲಿಸಿ ದುರ್ಗಾ ದೇವಿಗೆ ಕಲಶಾಭಿಷೇಕ ಮಾಡಿ ಆರತಿ ಬೆಳಗಿಸಿ, ಶ್ರೀ ಚಂಡಿಕಾ ಮಹಾ ಯಜ್ಞಕುಂಡಕ್ಕೆ ಪ್ರದಕ್ಷಿಣೆ ಮಾಡಿ ಸಾಷ್ಟಾಂಗ ನಮಸ್ಕರಿಸಿದರು. ಇದೇ ಸಂದರ್ಭದಲ್ಲಿ ಶುದ್ಧ ಪುಣ್ಯಾಹ ವಾಚನ, ಸಂಕಲ್ಪ, ಕಲಶ ಪ್ರತಿಷ್ಠಾಪನೆ, ಪ್ರಧಾನ ಹೋಮ, ಕಲೊ³àಕ್ತ ಪೂಜೆ, ಪೂರ್ಣಾ
ಹುತಿ, ಸುವಾಸಿನಿ ಪೂಜೆಯ ಬಳಿಕ ಭಕ್ತರಿಂದ ಮಂಗಲ ದ್ರವ್ಯ, ಮಂಗಲ ವಸ್ತ್ರ, ಫಲಪುಷ್ಪ ಸುವಸ್ತುಗಳನ್ನು ಯಜ್ಞಕುಂಡಕ್ಕೆ ಸಮರ್ಪಿಸಲಾಯಿತು. ಮಧ್ಯಾಹ್ನ ಮಹಾಪೂಜೆ ಬಳಿಕ ಕೋವಿಡ್ ನಿಯಮ ದಂತೆ ಪ್ರಸಾದ ವಿತರಿಸಲಾಯಿತು.
ಪಲಿಮಾರು ಮಠದ ಟ್ರಸ್ಟಿ ಸಚ್ಚಿದಾನಂದ ರಾವ್, ಟ್ರಸ್ಟಿ ಮತ್ತು ಪ್ರಬಂಧಕ ವಾಸುದೇವ ಎಸ್. ಉಪಾಧ್ಯಾಯ ಅವರು ಭಕ್ತರ ಸುರಕ್ಷೆ ಬಗ್ಗೆ ಮಾಹಿತಿ ನೀಡಿದರು. ಸಂಜೆ ಶ್ರೀಗಳಿಂದ ಪ್ರವಚನ, ಅನಂತರ ಶ್ರೀ ಬಾಲಾಜಿ ಸನ್ನಿಧಿಯ ಮಹಿಳಾ ಸದಸ್ಯೆಯರಿಂದ ಭಜನೆ, ರಾತ್ರಿ ರಂಗಪೂಜೆ ಮತ್ತು ಪರಿವಾರ ದೇವರಾದ ಶ್ರೀ ಗಣಪತಿ, ಓಂಕಾರ ಇರುವ ಮಾಣಿಕ್ಯ ಲಿಂಗ ಶ್ರೀ ಮುಂಗೇಶಿ ಮಹಾ ಮೃತ್ಯುಂಜಯ ರುದ್ರ ದೇವರು, ಶ್ರೀ ಪದ್ಮಾಂಬಿಕೆ, ಶ್ರೀ ಅಂಜನೇಯ, ಶ್ರೀ ನಾಗದೇವರು, ನವಗ್ರಹ ದೇವರಿಗೆ ವಿಶೇಷ ಪೂಜೆಗಳನ್ನು ಆಯೋಜಿಸಲಾಗಿತ್ತು.
ಪೂಜಾ ಕಾರ್ಯದಲ್ಲಿ ಧರೆಗುಡ್ಡೆ ಶ್ರೀನಿವಾಸ ಭಟ್, ಗೋಪಾಲ ಭಟ್, ಭಕ್ರೆ ಮಠ ಸಂತೋಷ ಭಟ್, ಕೃಷ್ಣಮೂರ್ತಿ ಉಪಾಧ್ಯಾಯ, ರಾಮಚಂದ್ರ ಹಿಪ್ಪರಗಿ, ಪ್ರಶಾಂತ್ ಭಟ್, ಅನಂತರಾಮ ಭಟ್ ಸಹಕರಿಸಿದರು.
-ಚಿತ್ರ-ವರದಿ: ರಮೇಶ ಅಮೀನ್