Advertisement

ನವರಾತ್ರಿ  ಸಾಹಸದ ಪ್ರತೀಕ; ಸಂಯಮಕ್ಕೆ  ಪ್ರೇರಣೆ 

01:13 PM Oct 15, 2018 | |

ಜೀವನದಲ್ಲಿ ಎದುರಾಗುವ ಕಷ್ಟ, ಸೋಲುಗಳಿಗೆ ಅಂಜಿ ನಾವು ನಮ್ಮ ಶಕ್ತಿ, ಸಾಮರ್ಥ್ಯವನ್ನು ಪ್ರದರ್ಶಿಸುವುದನ್ನೇ ಬಿಟ್ಟುಬಿಡುತ್ತೇವೆ. ಆಗ ನಾವು ಯುದ್ಧ ಮಾಡದೆ ಸೋಲೋಪ್ಪಿಕೊಂಡಂತೆ. ನವರಾತ್ರಿ ಉತ್ಸವ ಎನ್ನುವುದು ಕೇವಲ ಒಂದು ಹಬ್ಬವಲ್ಲ. ಬದಲಾಗಿ ನಮ್ಮೊಳಗಿನ ಸಾಹಸ ಶಕ್ತಿಯನ್ನು ಪರಿಚಯಿಸುವ, ನಮ್ಮೊಳಗಿನ ಅಸುರ ತಣ್ತೀಗಳ ವಿರುದ್ಧ ಹೋರಾಡುವ, ಬದುಕಿನ ಧ್ಯೇಯೋದ್ದೇಶಗಳ ಸಾಧನೆಗಾಗಿ ಸಾಗಬೇಕಿರುವ ದಾರಿಯನ್ನು ಪರಿಚಯಿಸುತ್ತದೆ. ನಮಗಾಗಿ ನಾವೇ ಹೋರಾಡಬೇಕು ಎನ್ನುವ ನೀತಿಯನ್ನು ಸಾರುತ್ತದೆ. ನವದುರ್ಗೆಯ ಒಂಬತ್ತು ರೂಪಗಳು ಬದುಕಿನ ದಾರಿ ಯಾವ ರೀತಿಯಲ್ಲಿರಬೇಕು ಎಂಬುದನ್ನು ತಿಳಿಸುತ್ತದೆ. ಇದರಲ್ಲಿ ಒಂದಷ್ಟು ಅಂಶಗಳು ನಮ್ಮ ಬದುಕಿನಲ್ಲೂ ಅಳವಡಿಸಿಕೊಂಡರೆ ನೆಮ್ಮದಿಯ ಬದುಕು ನಮ್ಮದಾಗಲು ಸಾಧ್ಯವಿದೆ.

Advertisement

ಬದುಕಿನಲ್ಲಿ ಎಲ್ಲರೂ ಅರಸುವುದು ಸುಖ, ಶಾಂತಿ, ನೆಮ್ಮದಿಯನ್ನು. ಅದಕ್ಕಾಗಿ ಆಸ್ತಿಕರು ದೇವರ ಮೊರೆ ಹೋದರೆ, ನಾಸ್ತಿಕರು ಯೋಗ, ಧ್ಯಾನವೆಂದುಕೊಂಡು ತಮ್ಮೊಳಗೆ ದೇವರನ್ನು ಹುಡುಕುತ್ತಿರುತ್ತಾರೆ. ಆದರೆ ಎಲ್ಲರ ಆಶಯ ಒಂದೇ ಬದುಕಿನ ನೆಮ್ಮದಿ. ದೇಶಾದ್ಯಂತ ಈಗ ನವರಾತ್ರಿ ಸಂಭ್ರಮ. ಎಲ್ಲೆಡೆಯೂ ದುರ್ಗೆಯ ಆರಾಧನೆಯ ವೈಭವ. ನವರಾತ್ರಿಯಲ್ಲಿ ಪೂಜಿಸಲ್ಪಡುವ ದೇವಿಯ ಒಂಬತ್ತು ರೂಪಗಳಿಗೂ ನಮ್ಮ ಬದುಕಿಗೂ ಅವಿನಾಭಾವ ಸಂಬಂಧವಿದೆ. ಬದುಕಿನಲ್ಲಿ ನಾವು ಅರಸುವ ನೆಮ್ಮದಿಯನ್ನು ಒದಗಿಸುವ ದಾರಿಯನ್ನು ಈ ಒಂಬತ್ತು ರೂಪಗಳು ತೋರಿಸಿಕೊಡುತ್ತವೆ. ಜತೆಗೆ ಬದುಕು ಹೇಗಿರಬೇಕು, ಯಾವ ದಾರಿಯಲ್ಲಿ ಸಾಗಬೇಕು, ಬದುಕಿನ ಸತ್ಯಾಸತ್ಯತೆ ಏನು ಎಂಬುದನ್ನು ಹೇಳಿಕೊಡುತ್ತವೆ ಎಂದರೆ ತಪ್ಪಾಗಲಾರದು.

ಸಾಹಸ, ಶೌರ್ಯ, ವಿಜಯ ಮತ್ತು ವೀರತೆಯ ಪ್ರತೀಕವಾಗಿ ಆಚರಿಸಲ್ಪಡುವ ನವರಾತ್ರಿ ಉತ್ಸವದ ಮೂಲ ಉದ್ದೇಶ ನಮ್ಮೊಳಗಿನ ಅಸುರ ಗುಣಗಳಾದ ಅನೀತಿ, ಅನಾಚಾರ, ದುರ್ಬಲ, ದುರ್ಗುಣ, ಲೋಭ, ಮೋಹವನ್ನು ತ್ಯಜಿಸಿ ಸಜ್ಜನ ದಾರಿಯಲ್ಲಿ ನಡೆಯುವುದಾಗಿದೆ. ಬದುಕಿನಲ್ಲಿ ಚೇತನ, ಸಂಯಮವನ್ನು ಸಾಧಿಸಲು ನವರಾತ್ರಿಯ ಒಂಬತ್ತು ದಿನಗಳಲ್ಲಿ ಪೂಜಿಸಲ್ಪಡುವ ದುರ್ಗೆಯ ಒಂಬತ್ತು ರೂಪಗಳು ಪ್ರೇರಣೆ ನೀಡುತ್ತವೆ.

ಶೈಲ ಪುತ್ರಿ
ದೇವಿಯ ಮೊದಲ ಸ್ವರೂಪವಿದು. ಬದುಕಿನಲ್ಲಿ ಯೋಗಾರಾಧನೆಯ ಮಹತ್ವವನ್ನು ಸಾರುತ್ತದೆ. ಯೋಗಾರಾಧನೆ ಸುಲಭವಲ್ಲ. ಆದರೆ ಆ ಮೂಲಕ ಬದುಕಿನ ನೆಮ್ಮದಿಯನ್ನು ಪಡೆಯಲು ಸಾಧ್ಯವಿದೆ ಎಂದು ಸಾರುವ ಶೈಲಪುತ್ರಿ ಪರ್ವತ ರಾಜ ಹಿಮವಂತನ ಮಗಳು ಎಂಬುದನ್ನು ಕಥೆಗಳು ಸಾರುತ್ತವೆ.

ಬ್ರಹ್ಮಚಾರಿಣಿ
ದುರ್ಗಾ ದೇವಿಯ ಎರಡನೇ ಸ್ವರೂಪ. ಬ್ರಹ್ಮ ಎಂದರೆ ತಪಸ್ಸು. ಕಠಿಣ ತಪ್ಪಸನ್ನಾಚರಿಸಿದವಳೇ ಬ್ರಹ್ಮಚಾರಿಣಿ ಎಂಬರ್ಥವಿದೆ. ಬದುಕಿನಲ್ಲಿ ಎಷ್ಟೇ ಕಷ್ಟಗಳು ಬಂದರೂ ಎದೆಗುಂದ ಬಾರದು ಎಂಬುದನ್ನು ಸಾರುವ ದೇವಿಯ ಈ ಸ್ವರೂಪ ತಪಸ್ಸು, ತ್ಯಾಗ, ವೈರಾಗ್ಯ, ಸದಾಚಾರ ಬದುಕಿನಲ್ಲಿ ಎಷ್ಟು ಪ್ರಾಮುಖ್ಯವನ್ನು ಪಡೆದಿದೆ ಎಂಬುದನ್ನು ಸೂಚಿಸುತ್ತದೆ. ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಮನಸ್ಸು ಕರ್ತವ್ಯದ ಪಥದಿಂದ ವಿಚಲಿತವಾಗಬಾರದು. ಬದುಕಿನ ಗುರಿಯತ್ತ ಸಂಚರಿಸುತ್ತಲೇ ಇರಬೇಕು. ಆಗ ಯಶಸ್ಸು ನಮ್ಮದಾಗುತ್ತದೆ. ಬದುಕಿನ ನಿಜವಾದ ಮೌಲ್ಯವೇನು ಎಂಬುದನ್ನು ನಾವು ಅರಿಯಲು ಸಾಧ್ಯವಾಗುತ್ತದೆ ಎಂಬುದನ್ನೇ ಬ್ರಹ್ಮಚಾರಿಣಿಯ ಈ ರೂಪ ತಿಳಿಸುತ್ತದೆ.

Advertisement

ಚಂದ್ರ ಘಂಟಾ
ಬದುಕಿನಲ್ಲಿ ಶಾಂತಿ, ಶ್ರೇಯಸ್ಸಿಗಾಗಿ ನವರಾತ್ರಿಯ ಮೂರನೇ ಪೂಜಿಸಲ್ಪಡುವ ದೇವಿಯ ಈ ರೂಪ ಪರಾಕ್ರಮ, ನಿರ್ಭಯ, ಸೌಮ್ಯತೆ, ವಿನಮ್ರತೆಯ ಪ್ರತೀಕವಾಗಿದೆ. ಮನಸ್ಸು, ಮಾತು, ಮಾಡುವ ಕೆಲಸ, ದೇಹ ಶುದ್ಧ, ಪವಿತ್ರವಾಗಿದ್ದರೆ ಬದುಕಿನಲ್ಲಿ ಶಾಂತಿ, ಶ್ರೇಯಸ್ಸನ್ನು ಪಡೆಯಲು ಸಾಧ್ಯವಿದೆ. ಬದುಕಿನ ನಿಜ ಸ್ವರೂಪವನ್ನು ತೆರೆದಿಡುವ ದೇವಿಯ ಈ ಸ್ವರೂಪ ಬದುಕಿನಲ್ಲಿ ಶುಭ್ರತೆ ಎಷ್ಟು ಮುಖ್ಯ ಎಂಬುದನ್ನು ಸಾರುತ್ತದೆ. ಬದುಕು ಸ್ವಚ್ಛವಾಗಿದ್ದರೆ ಪರಿಪೂರ್ಣತೆಯತ್ತ ಸಾಗುವುದು ಸುಲಭವಾಗುತ್ತದೆ. ಆಗ ನಾವು ಯಾರಿಗೂ ಭಯಪಡಬೇಕಾಗಿ ಬರುವುದಿಲ್ಲ. ಬದುಕಿನಲ್ಲಿ ಸಾಧನೆಯ ಹಾದಿ ಸುಗಮವಾಗಲು ಸಾಧ್ಯವಿದೆ ಎನ್ನುತ್ತದೆ ದೇವಿಯ ಈ ರೂಪ.

ಕೂಷ್ಮಾಂಡಾ 
ಬದುಕಿನಲ್ಲಿ ಎಲ್ಲರೂ ಬಯಸುವುದು ದೀರ್ಘಾಯುಷ್ಯ, ಯಶಸ್ಸು, ಶಕ್ತಿ, ಆರೋಗ್ಯ. ಇದಕ್ಕಾಗಿಯೇ ಪೂಜಿಸಲ್ಪಡುವ ದೇವಿಯ ಈ ಸ್ವರೂಪ ಬದುಕಿನಲ್ಲಿ ನಾವು ಸಾಗಬೇಕಾದ ಗುರಿಯನ್ನು ನಿರ್ಧರಿಸಿಕೊಂಡು ಅದರತ್ತ ಸಾಗುವ ದಾರಿಯಲ್ಲಿ ಹೃದಯಪೂರ್ವಕ ಶರಣಾಗತಿ ಇದ್ದರೆ ನಮ್ಮ ಯಶಸ್ಸನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬುದನ್ನು ಸಾರುತ್ತದೆ. ಇಲ್ಲಿ ಶರಣಾಗತಿ ಎಂದರೆ ಸೋಲೊಪ್ಪಿಕೊಳ್ಳುವುದು ಎಂಬ ಅರ್ಥವಲ್ಲ. ಬದಲಿಗೆ ನಮ್ಮ ಸಾಮರ್ಥ್ಯವನ್ನು ಸಂಪೂರ್ಣ ಅರಿತುಕೊಳ್ಳುವುದು. ಈ ಮೂಲಕ ನಾವು ಸಾಧಿಸಬೇಕಾದ ಗುರಿಯತ್ತ ಸಾಗಲು ಮನಸ್ಸು, ಹೃದಯವನ್ನು ಸಿದ್ಧಪಡಿಸಿಕೊಳ್ಳುವುದಾಗಿದೆ. ನವರಾತ್ರಿಯ ನಾಲ್ಕನೇ ದಿನ ಆಚರಿಸಲ್ಪಡುವ ದೇವಿಯ ಈ ಸ್ವರೂಪವು ಬದುಕಿನಲ್ಲಿ ಸಂದರ್ಭಕ್ಕನುಗುಣವಾಗಿ ಶರಣಾಗತಿ ಎಷ್ಟು ಮುಖ್ಯ ಎಂಬುದನ್ನು ಸಾರುತ್ತವೆ.

ಸ್ಕಂದ ಮಾತಾ
ಜೀವನದಲ್ಲಿ ಯಾವುದು ಕೂಡ ಶಾಶ್ವತವಲ್ಲ ಎಂಬುದನ್ನು ಸಾರುವ ದೇವಿಯ ಈ ಸ್ವರೂಪ ನವರಾತ್ರಿಯ 5ನೇ ದಿನ ಪೂಜಿಸಲ್ಪಡುತ್ತದೆ. ಲೌಕಿಕ, ಸಾಂಸಾರಿಕ ವಿಷಯಗಳು ಬದುಕಿನ ಬಂಧನಗಳಷ್ಟೆ. ಇಲ್ಲಿ ಇಂದು ಇರುವಂಥದ್ದು ನಾಳೆ ಇರುವುದಿಲ್ಲ. ಹೀಗಾಗಿ ಕೋಪ, ತಾಪ, ಲೋಭ, ಮೋಹ, ಮದ, ಮತ್ಸರಗಳನ್ನು ತ್ಯಜಿಸಿ ಬದುಕಿನ ಉನ್ನತಿಯ ಹಾದಿಯಲ್ಲಿ ಸಾಗಬೇಕು. ಏಕಾಗ್ರತೆಯಿಂದ ಮನಸ್ಸನ್ನು ಪವಿತ್ರವಾಗಿಸಿಕೊಳ್ಳಬೇಕು ಎಂಬುದನ್ನು ಸ್ಕಂದಮಾತಾ ರೂಪವು ಸಾರುತ್ತದೆ. ಜೀವನದಲ್ಲಿ ಯಾವುದೇ ಕೆಲಸ ಮಾಡಬೇಕಾದರೂ ಏಕಾಗ್ರತೆ ಇರಲೇಬೇಕು. ಇಲ್ಲವಾದರೆ ಯಶಸ್ಸು ಪಡೆಯಲು ಸಾಧ್ಯವಿಲ್ಲ. ಬದುಕಿನಲ್ಲಿ ನೆಮ್ಮದಿ, ಸುಖ, ಸಂತೋಷಗಳು ಧಕ್ಕುವುದಿಲ್ಲ ಎಂಬುದನ್ನು ದೇವಿಯ ಈ ರೂಪ ತಿಳಿಸುತ್ತದೆ.

ಸಿದ್ಧಿಧಾತ್ರಿ
ಜೀವನದಲ್ಲಿ ಏನೇ ಸಾಧಿಸಬೇಕಿದ್ದರೂ ನಿರಂತರ ಪ್ರಯತ್ನ, ನಿಯಮ ನಿಷ್ಠರಾಗಿ ಉಪಾಸನೆ ಮಾಡಿದರೆ ಯಶಸ್ಸು, ನೆಮ್ಮದಿಯನ್ನು ಪಡೆಯಲು ಸಾಧ್ಯವಿದೆ. ನವರಾತ್ರಿಯ 9ನೇ ದಿನ ಪೂಜಿಸಲ್ಪಡುವ ದೇವಿಯ ಈ ಸ್ವರೂಪವು ಎಷ್ಟೇ ಕಷ್ಟ ಬರಲಿ ಪ್ರಯತ್ನವನ್ನು ಬಿಡಬಾರದು. ಸತ್‌ ಚಿಂತನೆಯ ಮೂಲಕ ಗುರಿಯತ್ತ ಲಕ್ಷ್ಯವಿರಿಸಿಕೊಂಡು ಮುನ್ನಡೆದಾಗ ಬದುಕಿನ ಹಾದಿ ಸುಗಮವಾಗುವುದು ಎಂಬುದನ್ನು ಸಾರುತ್ತದೆ.

ಕಾತ್ಯಾಯಿನಿ
ನವರಾತ್ರಿ ಉತ್ಸವದ 6ನೇ ದಿನ ಆರಾಧಿಸಲ್ಪಡುವ ದೇವಿಯ ಈ ರೂಪ ಬದುಕಿನಲ್ಲಿ ಯಶಸ್ಸು ಸಾಧಿಸಬೇಕಾದರೆ ಸ್ಥಿತವಾದ ಮನಸ್ಸು, ಪೂರ್ಣ ಆತ್ಮಸಮರ್ಪಣೆ ಇರಲೇಬೇಕು ಎಂಬುದನ್ನು ಹೇಳುತ್ತದೆ. ಧರ್ಮ, ಅರ್ಥ, ಕಾಮ, ಮೋಕ್ಷದ ಹಾದಿ ಸುಲಭವಲ್ಲ. ಇಲ್ಲಿ ಪ್ರತಿ ಕಾರ್ಯದಲ್ಲೂ ಮನಸ್ಸು ಸ್ಥಿತವಾಗಿರಬೇಕು, ಪೂರ್ಣ ಆತ್ಮ ಸಮರ್ಪಣೆ ಮಾಡಿಕೊಂಡು ಮುಂದುವರಿಯಬೇಕು. ಆಗ ಮಾತ್ರ ಯಶಸ್ಸಿನ ದಾರಿ ಸುಗಮವಾಗುವುದು. 

ಕಾಳರಾತ್ರಿ
ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕಾದರೆ ಮೊದಲಿಗೆ ಭಯವನ್ನು ತ್ಯಜಿಸಬೇಕು. ಯಾರು, ಏನಂತಾರೆ ಎಂದು ಚಿಂತಿಸುತ್ತಾ ಭಯಪಟ್ಟು ಕುಳಿತರೆ ನಮ್ಮ ಬದುಕು ಕತ್ತಲೆಯಂತಾಗುತ್ತದೆ. ಅಲ್ಲಿ ಬೆಳಕು ಹರಿಯಬೇಕಾದರೆ ಮೊದಲಿಗೆ ಭಯವನ್ನು ದೂರಮಾಡಬೇಕು. ಯಮ, ನಿಯಮ, ಸಂಯಮವನ್ನು ಪಾಲಿಸಿಕೊಂಡು ನಡೆ, ನುಡಿ, ದೇಹವನ್ನು ಪವಿತ್ರವಾಗಿಸಿಕೊಂಡು ಮುನ್ನಡೆದಾಗ ಭಯ ದೂರವಾಗುವುದು. ನವರಾತ್ರಿ ಉತ್ಸವದ 7ನೇ ದಿನ ಪೂಜಿಸಲ್ಪಡುವ ದೇವಿಯ ಈ ಸ್ವರೂಪವು ಶುಭಫ‌ಲದ ಸಂಕೇತ  ಎಂದೇ ಪರಿಗಣಿಸಲ್ಪಟ್ಟಿದೆ. 

ಮಹಾಗೌರಿ
ಧ್ಯಾನದ ಶ್ರೇಷ್ಠತೆಯನ್ನು ಸಾರುವ ದೇವಿಯ ಈ ಸ್ವರೂಪ ಬದುಕಿನಲ್ಲಿ ಧ್ಯಾನದ ಮಹತ್ವ ಎಷ್ಟಿದೆ ಎಂಬುದನ್ನು ಸಾರುತ್ತದೆ. ಬದುಕಿನ ನೆಮ್ಮದಿಗೆ ಧ್ಯಾನ ಬಹುಮುಖ್ಯ. ಧ್ಯಾನದಿಂದ ಚಂಚಲ ಮನಸ್ಸನ್ನು ಸ್ಥಿರತೆಯತ್ತ ತಂದು ಮಾಡುವ ಕೆಲಸದಲ್ಲಿ ಶ್ರದ್ಧೆಯನ್ನಿಡಲು ಸಾಧ್ಯವಾಗುವುದು. ಇದರಿಂದ ಬದುಕಿನಲ್ಲಿ ಯಶಸ್ಸು ಸಾಧಿಸುವುದು ಸುಲಭವಾಗುವುದು ಎಂಬುದನ್ನು ನವರಾತ್ರಿಯ 8ನೇ ದಿನ ಪೂಜಿಸಲ್ಪಡುವ ದೇವಿಯ ಈ ರೂಪ ಸಾರುತ್ತದೆ.

ಹೀಗೆ ನವದುರ್ಗೆಯರ ಪ್ರತಿಯೊಂದು ರೂಪವು ಬದುಕಿಗೆ ಅದಮ್ಯ ಚೈತನ್ಯವನ್ನೊದಗಿಸುವ, ನಮ್ಮೊಳಗಿನ ಶಕ್ತಿಯನ್ನು ಪರಿಚಯಿಸುತ್ತದೆ. ಜೀವನದಲ್ಲಿ ವಿದ್ಯೆ, ಶಕ್ತಿ, ಚಾತುರ್ಯ, ಮಿತ್ರ, ಮನಸ್ಸು, ಶಸ್ತ್ರ, ಧರ್ಮ, ಧನ ಎಷ್ಟು ಮುಖ್ಯವೋ ಅದನ್ನು ಸರಿಯಾಗಿ ಬಳಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ ಎಂಬುದನ್ನು ತಿಳಿಸುತ್ತದೆ. ಇವುಗಳ ಸದ್ವಿನಿಯೋಗವಾದಾಗಲೇ ನಮ್ಮ ಬದುಕು ಶ್ರೇಷ್ಠವಾಗುತ್ತದೆ, ಜೀವನದಲ್ಲಿ ನಾವು ಬಯಸುವ ಪ್ರತಿಯೊಂದು ಇಚ್ಛೆಯೂ ಈಡೇರಲು ಸಾಧ್ಯವಿದೆ ಎಂಬುದನ್ನು ನವರಾತ್ರಿಯ ಈ ಒಂಬತ್ತು ದಿನಗಳು ಸಾರುತ್ತವೆ.

ವಿದ್ಯಾ ಕೆ. ಇರ್ವತ್ತೂರು

Advertisement

Udayavani is now on Telegram. Click here to join our channel and stay updated with the latest news.

Next