Advertisement

ಧಾರ್ಮಿಕ ಚಿಂತನೆಗಳು ನಮ್ಮ ಸಮಾಜವನ್ನು ಎತ್ತರಕ್ಕೆ ಬೆಳೆಸಿವೆ: ಪದ್ಮನಾಭ ಎಸ್‌. ಪಯ್ಯಡೆ

12:24 PM Oct 11, 2021 | Team Udayavani |

ಬೊರಿವಲಿ: ಪ್ರತಿಷ್ಠಿತ ಸಮಾಜವಾಗಿ ಪರಿಗಣಿಸಲ್ಪಟ್ಟ ಬಂಟ ಸಮಾಜವು ಹಿಂದಿನಿಂದಲೂ ಸಾಂಸ್ಕೃತಿಕ ಕಲೆಯನ್ನು ಆರಾಧಿಸುವ ಸಮಾಜವಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಕಂಡ ನಮ್ಮ ಭಾರತ ದೇಶದ ಪರಂಪರೆಯಲ್ಲಿ  ಬಂಟ ಸಮಾಜವು ಮಹಿಳೆಯರಿಗೆ ವಿಶೇಷ ಸ್ಥಾನಮಾನ, ಗೌರವ ನೀಡಿ ಪ್ರೋತ್ಸಾಹಿಸುತ್ತಿದೆ. ಸ್ವಾತಂತ್ರ್ಯ ಇದ್ದರೆ ಮಹಿಳೆಯರು ವ್ಯಕ್ತಿಗತವಾಗಿ ತಮ್ಮ ಬದುಕಿನಲ್ಲಿ ಸಾಂಸ್ಕೃತಿಕವಾಗಿ ಬೆಳೆಯಲು ಸಾಧ್ಯ ಎಂಬುವುದನ್ನು ಇಂದಿನ ಕಾರ್ಯಕ್ರಮ ದೃಢಪಡಿಸಿದೆ ಎಂದು ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅಭಿಪ್ರಾಯಪಟ್ಟರು.

Advertisement

ಅ. 8ರಂದು ಬೊರಿವಲಿ ಪಶ್ಚಿಮದ ಎಕ್ಸಾರ್‌ ರೋಡಿನ ಹೊಟೇಲ್‌ ವೆಜ್‌ ಸ್ಟ್ರೀಟ್‌ ರಾಯಲ್‌ ಬ್ಯಾಂಕ್ವೆಟ್‌ ಹಾಲ್‌ನಲ್ಲಿ  ಬಂಟರ ಸಂಘ ಜೋಗೇಶ್ವರಿ ದಹಿಸರ್‌ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗವು ಆಯೋಜಿಸಿದ ವಾರ್ಷಿಕ ಶರವನ್ನವರಾತ್ರಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಸಂದರ್ಭ ಜರಗಿದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಪರಿಶ್ರಮ, ಧಾರ್ಮಿಕ ಚಿಂತನೆಗಳು ನಮ್ಮ ಸಮಾಜವನ್ನು ಎತ್ತರಕ್ಕೆ ಬೆಳೆಸಿದೆ. ಕೊರೊನಾ ಸಾಂಕ್ರಾಮಿಕದಿಂದ ನೊಂದು, ಬೆಂದ ಮನಸ್ಸುಗಳಿಗೆ ಈ ಪ್ರಾದೇಶಿಕ ಸಮಿತಿಯು ಇನ್ನಷ್ಟು ಮುದ ನೀಡುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಿ ಎಂದು ತಿಳಿಸಿ ಮಹಿಳಾ ವಿಭಾಗವು ಆಯೋಜಿಸಿದ ಕಾರ್ಯಕ್ರಮವನ್ನು ಅಭಿನಂದಿಸಿದರು.

ಬಂಟರ ಸಂಘ ಪಶ್ಚಿಮ ವಲಯ ಪ್ರಾದೇಶಿಕ ಸಮಿತಿಯ ಸಮನ್ವಯಕ ಶಶಿಧರ್‌ ಕೆ. ಶೆಟ್ಟಿ ಇನ್ನಂಜೆ ಮಾತನಾಡಿ, ಸಮಾಜ ಬಾಂಧವರ ಮನೆ, ಮನಗಳಲ್ಲಿ ಸಂಸ್ಕಾರ ಬೆಳೆಯಲು ಪ್ರಾದೇಶಿಕ ಸಮಿತಿಯ ಮಹಿಳೆಯರ ಕೊಡುಗೆ ಅನನ್ಯ. ಊರಿನ ದೈವಾತ್ಮ ಕಲೆಯನ್ನು ಇನ್ನಷ್ಟು ಸುಂದರಗೊಳಿಸಿ ಅದನ್ನು ಯಶಸ್ವಿಗೊಳಿಸಿದ ಮಹಿಳೆಯರ ಸಾಧನೆಯನ್ನು ಹೊಗಳಲು ಮಾತುಗಳಿಲ್ಲ. ಇದೊಂದು ವಿಶೇಷ ಅನುಭವದ ಕಾರ್ಯಕ್ರಮ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ಜರಗುತ್ತಿರಲಿ ಎಂದು ಹಾರೈಸಿದರು.

ಬಂಟರ ಸಂಘ ಜೋಗೇಶ್ವರಿ ದಹಿಸರ್‌ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಎಂ. ಜಿ. ಶೆಟ್ಟಿ  ಅವರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪಕಾರ್ಯಾಧ್ಯಕ್ಷ ಪ್ರೇಮ್‌ನಾಥ್‌ ಶೆಟ್ಟಿ ಕೊಂಡಾಡಿ ವಹಿಸಿದ್ದರು. ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ ಶುಭ ಹಾರೈಸಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೈಲಜಾ ಅಮರ್‌ನಾಥ್‌ ಶೆಟ್ಟಿ ಅತಿಥಿ-ಗಣ್ಯರನ್ನು ಸ್ವಾಗತಿಸಿದರು. ಅತಿಥಿ-ಗಣ್ಯರನ್ನು ಶಾಲು ಹೊದೆಸಿ, ಫಲಪುಷ್ಪ ನೀಡಿ ಸಮ್ಮಾನಿಸಲಾಯಿತು. ಮುಂಬಯಿ ಯಕ್ಷಲೋಕದ ಕಂಠಸಿರಿ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಭ್ರಾಮರಿ ಯಕ್ಷ ಕಲಾ ನಿಲಯದ ಸಂಚಾಲಕರಾದ ಯಕ್ಷಗುರು ಕಟೀಲು ಸದಾನಂದ ಶೆಟ್ಟಿ ಅವರನ್ನು ಗೌರವಿಸಲಾಯಿತು.

ಮಹಿಳಾ ವಿಭಾಗದ ಸದಸ್ಯೆಯರಿಂದ ಕಟೀಲು ಸದಾನಂದ ಶೆಟ್ಟಿ ಅವರ ದಕ್ಷ ನಿರ್ದೇಶನದಲ್ಲಿ ಶ್ರೀ ಶನೀಶ್ವರ ಮಹಾತ್ಮೆ ಯಕ್ಷಗಾನ ತಾಳಮದ್ದಳೆ ಯಶಸ್ವಿಯಾಗಿ ಜರಗಿತು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೈಲಜಾ ಅಮರನಾಥ ಶೆಟ್ಟಿಯವರ ಭಾಗವತಿಕೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ  ಪ್ರಧಾನ ಭಾಗವತರಾಗಿ ಗಾನಕೋಗಿಲೆ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಚೆಂಡೆ-ಮದ್ದಳೆಯಲ್ಲಿ  ಇನ್ನ ಆನಂದ ಶೆಟ್ಟಿ  ಮತ್ತು ಪ್ರವೀಣ್‌ ಶೆಟ್ಟಿ ಕಟೀಲು ಸಹಕರಿಸಿದರು.

Advertisement

ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಸುನೀತಾ ನಿತ್ಯಾನಂದ ಹೆಗ್ಡೆ, ರೇಖಾ ಯೋಗೀಶ್‌ ಶೆಟ್ಟಿ, ಕವಿತಾ ಭೋಜ ಶೆಟ್ಟಿ, ಶರ್ಮಿಳಾ ಶೇಖರ್‌ ಶೆಟ್ಟಿ, ಸುನಂದಾ ಭುಜಂಗ ಶೆಟ್ಟಿ, ನೇತ್ರಾ ಗಣೇಶ್‌ ಶೆಟ್ಟಿ, ಸುನಂದಾ ಪಿ. ಶೆಟ್ಟಿ, ಶುಭಾಂಗಿ ಶೇಖರ್‌ ಶೆಟ್ಟಿ, ಜಯಲಕ್ಷ್ಮೀ ಪ್ರಸಾದ್‌ ಶೆಟ್ಟಿ, ಸಾರಿಕಾ ಮಹೇಶ್‌ ಶೆಟ್ಟಿ  ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ  ಭಾಗವಹಿಸಿದ ಎಲ್ಲ ಮಹಿಳೆಯರಿಗೆ ಅರಸಿನ-ಕುಂಕುಮವನ್ನಿತ್ತು ಸ್ವಾಗತಿಸಲಾಯಿತು.

ಕಾರ್ಯಕ್ರಮದಲ್ಲಿ  ಮಾತೃಭೂಮಿ ಕೋ-ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಕಾರ್ಯಾಧ್ಯಕ್ಷ ಮುಂಡ್ಕೂರು ರತ್ನಾಕರ ಶೆಟ್ಟಿ, ಸಿಟಿ ಪ್ರಾದೇಶಿಕ ಸಮಿತಿಯ ಸಮನ್ವಯಕ ಐಕಳ ಗುಣಪಾಲ್‌ ಶೆಟ್ಟಿ, ಪೂರ್ವ ವಲಯ ಪ್ರಾದೇಶಿಕ ಸಮಿತಿಯ ಸಮನ್ವಯಕ ಸುಬ್ಬಯ್ಯ ಶೆಟ್ಟಿ, ಬಂಟರ ಸಂಘದ ನಿಕಟಪೂರ್ವ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಪ್ರಾಪರ್ಟಿ ಡೆವಲಪ್‌ಮೆಂಟ್‌ ವಿಭಾಗದ ಕಾರ್ಯಾಧ್ಯಕ್ಷ ವಿಟuಲ ಆಳ್ವ, ಸ್ಥಳೀಯ ಪ್ರಾದೇಶಿಕ ಸಮಿತಿಯ ಸಂಚಾಲಕ ರವೀಂದ್ರ ಎಸ್‌. ಶೆಟ್ಟಿ, ಸಲಹೆಗಾರರಾದ ಮನೋಹರ್‌ ಎನ್‌. ಶೆಟ್ಟಿ, ವಿಜಯ ಆರ್‌. ಭಂಡಾರಿ, ಪ್ರಭಾಕರ್‌ ಬಿ. ಶೆಟ್ಟಿ, ಕೋಶಾಧಿಕಾರಿ ಗಂಗಾಧರ ಎ. ಶೆಟ್ಟಿ, ಜತೆ ಕೋಶಾಧಿಕಾರಿ ಅವಿನಾಶ್‌ ಶೆಟ್ಟಿ, ಮಹಿಳಾ ವಿಭಾಗದ ಸಲಹೆಗಾರ್ತಿ ವಿನೋದಾ ಎ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯದರ್ಶಿ ರೇಖಾ ವೈ. ಶೆಟ್ಟಿ, ಕೋಶಾಧಿಕಾರಿ ಯೋಗಿನಿ ಎಸ್‌. ಶೆಟ್ಟಿ, ಜತೆ ಕಾರ್ಯದರ್ಶಿ ಸರಿತಾ ಎಂ. ಶೆಟ್ಟಿ, ಜತೆ ಕೋಶಾಧಿಕಾರಿ ಶುಭಾಂಗಿ ಎಸ್‌. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಧೀರಜ್‌ ರೈ ಹಾಗೂ ಎಲ್ಲ  ಉಪಸಮಿತಿಗಳ ಕಾರ್ಯಾಧ್ಯಕ್ಷರು ಮಹಿಳಾ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ, ಉಪಸಮಿತಿಗಳ ಕಾರ್ಯಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

ಜತೆ ಕಾರ್ಯದರ್ಶಿ ರಘುನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಅಶೋಕ್‌ ಶೆಟ್ಟಿ ಸಹಕರಿಸಿದರು. ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಸುನೀತಾ ಎನ್‌. ಹೆಗ್ಡೆ ವಂದಿಸಿದರು. ಬಳಿಕ ಪ್ರಾದೇಶಿಕ ಸಮಿತಿಯ ಸದಸ್ಯರಿಂದ ದಾಂಡಿಯಾ ರಾಸ್‌ ಕಾರ್ಯಕ್ರಮ ಜರಗಿತು.

ನವರಾತ್ರಿಯ ಪುಣ್ಯ ಪರ್ವ ಕಾಲದಲ್ಲಿ  ಜರಗುವ ಕಾರ್ಯಕ್ರಮಗಳು ನವರತ್ನದಂತೆ. ಸದಾ ಕಾರ್ಯಚಟುವಟಿಕೆಗಳಲ್ಲಿ  ನಿರಂತರವಾಗಿ ತೊಡಗಿಸಿಕೊಂಡಿರುವ ಈ ಪ್ರಾದೇಶಿಕ ಸಮಿತಿಯ ಕಾರ್ಯಕ್ರಮಗಳು ಪ್ರಶಂಸನೀಯ. ಬಂಟರ ಸಂಘವು ಸದಾ ಮಹಿಳೆಯರಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಸಂಸ್ಥೆಯಾಗಿದ್ದು, ಈ ಕೊರೊನಾ ಮಹಾಮಾರಿಯಿಂದ ಶ್ರೀ ದೇವಿಯ ಅನುಗ್ರಹದಿಂದ ಆದಷ್ಟು ಬೇಗ ಮುಕ್ತಿ ಪಡೆದು ಮತ್ತೆ ಎಲ್ಲರ ಜೀವನದಲ್ಲಿ ಸಂತೋಷದ ಹೊನಲು ಹರಿಯಲಿ.ಇಂದ್ರಾಳಿ ದಿವಾಕರ ಶೆಟ್ಟಿ ಜತೆ ಕಾರ್ಯದರ್ಶಿ, ಬಂಟರ ಸಂಘ ಮುಂಬಯಿ

ಮಹಿಳೆಯರಿಗೆ ನಾವು ಪ್ರೋತ್ಸಾಹ ನೀಡಿದರೆ ಅವರಿಂದ ನಿರೀಕ್ಷೆಗಿಂತಲೂ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯ. ಮಹಿಳೆಯ ಸಾಧನೆ ಏನೆಂಬುದು ಇಂದಿನ ಕಾರ್ಯಕ್ರಮದಿಂದ ದೃಢಪಟ್ಟಿದೆ. ಸುದೀರ್ಘ‌ ಅವಧಿಯಲ್ಲಿ ಪ್ರೇಕ್ಷಕರನ್ನು ಯಕ್ಷ ಲೋಕದಲ್ಲಿ ಮುಳುಗಿಸುವಲ್ಲಿ ಅವರ ಅವಿರತ ಶ್ರಮ ಅಡಗಿದೆ. ಮುಂದೆಯೂ ಅವರಿಂದ ಇಂತಹ ಕಾರ್ಯಕ್ರಮಗಳು ಮೂಡಿ ಬರಲಿ. ನಮ್ಮ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಮಾಜ ಬಾಂಧವರ ಸಹಕಾರ ಸದಾಯಿರಲಿ. -ಪ್ರೇಮ್‌ನಾಥ್‌ ಶೆಟ್ಟಿ  ಕೊಂಡಾಡಿ-ಉಪ ಕಾರ್ಯಾಧ್ಯಕ್ಷ ಬಂಟರ ಸಂಘ ಜೋಗೇಶ್ವರಿ ದಹಿಸರ್‌ ಪ್ರಾದೇಶಿಕ ಸಮಿತಿ

ಹೆಣ್ಣು ಸಂಸಾರದ ಕಣ್ಣಾಗಿ ದೈನಂದಿನ ಬದುಕಿನಲ್ಲಿ ಮನೆ ಮಂದಿಗೆಲ್ಲ ಆಸರೆಯಾಗಿ ಬದುಕುವವಳು. ಮಕ್ಕಳನ್ನು ಸಂಸ್ಕಾರಯುತವಾಗಿ ಬೆಳೆಸಿ ತಾನು ಪರಿಶ್ರಮ ಜೀವಿಯಾಗಿ ಬದುಕುವ ಮಹಿಳೆಗೆ ಬಂಟ ಸಮಾಜ ವಿಶೇಷ ಸ್ಥಾನಮಾನ, ಗೌರವ ನೀಡಿದೆ. ನಮ್ಮ ಇಂದಿನ ಜೀವನವನ್ನು ಮಕ್ಕಳಿಗೆ ಮನವರಿಕೆ ಮಾಡುವುದರ ಜತೆಗೆ ನಾವೆಲ್ಲ ಕೌಟುಂಬಿಕವಾಗಿ ಶ್ರೀಕೃಷ್ಣನ ಸಂದೇಶವನ್ನು ಧನಾತ್ಮಕವಾಗಿ ಪಾಲಿಸಬೇಕು. ಮುಂಡಪ್ಪ  ಎಸ್‌. ಪಯ್ಯಡೆ ಜತೆ ಕೋಶಾಧಿಕಾರಿ, ಬಂಟರ ಸಂಘ ಮುಂಬಯಿ

ಚಿತ್ರ-ವರದಿ: ರಮೇಶ್‌ ಉದ್ಯಾವರ್‌

Advertisement

Udayavani is now on Telegram. Click here to join our channel and stay updated with the latest news.

Next