Advertisement

ನವ ಕರ್ನಾಟಕ ವಿಷನ್‌-2025

06:15 AM Mar 04, 2018 | |

ಬೆಂಗಳೂರು : ರಾಜ್ಯದ ಅಭಿವೃದ್ಧಿ ಮತ್ತು ಆದ್ಯತಾ ವಲಯಕ್ಕೆ ಸಂಬಂಧಿಸಿದಂತೆ ಸಾಮಾನ್ಯರಿಂದ ಹಿಡಿದು ಸಂಬಂಧಪಟ್ಟ ಎಲ್ಲ ವರ್ಗದವರ ಅಭಿಪ್ರಾಯ, ಸಲಹೆಗಳನ್ನು ಕ್ರೋಢೀಕರಿಸಿ ಮುಂದಿನ ಏಳು ವರ್ಷಗಳಲ್ಲಿ ಕರ್ನಾಟಕದ ಬೆಳವಣಿಗೆಗೆ ಬೇಕಾದ ರೂಪುರೇಷೆ ಒಳಗೊಂಡ ನವ ಕರ್ನಾಟಕ ವಿಷನ್‌-2025 ಡಾಕ್ಯುಮೆಂಟ್‌ ಸಿದ್ಧವಾಗಿದೆ.

Advertisement

ಕೃಷಿ, ಇಂಧನ, ಆಡಳಿತ, ಗ್ರಾಮೀಣಾಭಿವೃದ್ಧಿ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಮೂಲಭೂತ ಸೌಕರ್ಯ, ಕೈಗಾರಿಕಾಭಿವೃದ್ಧಿ, ಉದ್ಯೋಗ ಮತ್ತು ಕೌಶಲಾಭಿವೃದ್ಧಿ, ನಗರಾಭಿವೃದ್ಧಿ ಮತ್ತು ಸಾರಿಗೆ, ಆರೋಗ್ಯ ಮತ್ತು ಪೌಷ್ಠಿಕತೆ, ವಿದ್ಯಾಭ್ಯಾಸ ಹಾಗೂ ಕಾನೂನು ಮತ್ತು ನ್ಯಾಯ ಹೀಗೆ ಬೆಳವಣಿಗೆಯ 13 ವಲಯಗಳು, ವಸತಿ, ವಿದ್ಯುತ್ಛಕ್ತಿ, ಕುಡಿಯುವ ನೀರು, ಆರೋಗ್ಯ ಆರೈಕೆ, ಆಹಾರ ಭದ್ರತೆ, ಶಿಕ್ಷಣ, ರಸ್ತೆ ಸಂಪರ್ಕ, ಡಿಜಿಟಲ್‌ ಸಂಪರ್ಕ, ಸುರಕ್ಷತೆ ಮತ್ತು ಭದ್ರತೆ ಸೇರಿ ಸಂಧಾನ ಮಾಡಿಕೊಳ್ಳಲಾಗದ 10 ಆದ್ಯತಾ ವಿಷಯಗಳು ಹಾಗೂ ಸಮಾನತೆ, ಆರ್ಥಿಕ ಬೆಳವಣಿಗೆಯ ಸಾಕಾರ, ನಾಗರಿಕರ ಸರ್ವತೋಮುಖ ಯೋಗಕ್ಷೇಮ, ಜಾಗತಿಕ ಸ್ಪರ್ಧಾತ್ಮಕ ರಾಜ್ಯ, ಸಂಪೂರ್ಣ ಸಾಮರ್ಥ್ಯವನ್ನು ಸಾಧಿಸಲು ಬೆಳವಣಿಗೆಯ ತಾರ್ಕಿಕತೆ, ಆವಿಷ್ಕಾರ ಸಂಸ್ಕೃತಿ ಮತ್ತು ಉದ್ಯಮಶೀಲತೆ, ಸ್ಮಾರ್ಟ್‌ ಆಡಳಿತ ಹಾಗೂ ಸುಸ್ಥಿರ ಅಭಿವೃದ್ಧಿಯೊಳಗಂಡ 8 ಸೂತ್ರಗಳನ್ನು ಮುಂದಿಟ್ಟುಕೊಂಡು ರಾಜ್ಯದ 30 ಜಿಲ್ಲೆಯ ಎಲ್ಲಾ ವರ್ಗದ ಜನಾಭಿಪ್ರಾಯ ಸಂಗ್ರಹಿಸಿ ಮುಂದಿನ 7 ವರ್ಷದ ಅಭಿವೃದ್ಧಿಯ ಪರಿಕಲ್ಪನೆಯಡಿ 30 ದಿನದಲ್ಲಿ  ನವ ಕರ್ನಾಟಕ ವಿಷನ್‌-2025 ಡಾಕ್ಯುಮೆಂಟ್‌ ತಯಾರಿಸಲಾಗಿದೆ.

ಅಭಿವೃದ್ದಿ ವಲಯಗಳು :
ಕೃಷಿ:

ಕೃಷಿ ಮತ್ತು ಸಂಬಂಧಿತ  ಉದ್ಯಮ ಉದ್ಯೋಗದಲ್ಲಿ ಉತ್ಪಾದಕತೆ ಹೆಚ್ಚುವುದು, ಮಾರುಕಟ್ಟೆ ಸೌಲಭ್ಯ ಬಲಪಡಿಸಿ ಲಭ್ಯತೆ ಹೆಚ್ಚುವುದು, ತೋಟಗಾರಿಕೆ ಉತ್ಪಾದನೆ ಮತ್ತು ಸುಗ್ಗಿ ನಂತರ ನಿರ್ವಹಣೆ, ರೈತರ ಕೌಶಲ್ಯ ಹೆಚ್ಚಿಸುವುದು, ಪಶುಸಂಗೋಪನೆ, ಮೀನುಗಳ ಉತ್ಪಾದನೆ ಹೆಚ್ಚಿಸುವುದು.

ಇಂಧನ :
ಕಡ್ಡಾಯವಾಗಿ ಗೃಹ ವಿದ್ಯುದ್ಧೀಕರಣ ಮತ್ತು ಶುದ್ಧ ಇಂಧನ ಮೂಲದ ಅಳವಡಿಕೆ, ವಿದ್ಯುತ್‌ ಶಕ್ತಿಯ ಬಳಕೆಯ ಖಾತ್ರಿಪಡಿಸುವುದು, ನವೀಕರಿಸಿದ ಇಂಧನ, ವಿದ್ಯುತ್ಛಕ್ತಿ, ಡಿಆರ್‌ಇ ಮತ್ತು ಎಲೆಕ್ಟ್ರಿಕಲ್‌ ವೆಹಿಕಲ್‌ಗ‌ಳ ಸಮನ್ವಯಕ್ಕೆ ಗ್ರಿಡ್‌ ಯೋಜನೆ ಉತ್ತಮಗೊಳಿಸುವುದು, ಶಕ್ತಿ ಸಂಬಂಧಿಸಿದ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಹೆಚ್ಚಿಸುವುದು.

ಆಡಳಿತ:
ಸಾಂಸ್ಥಿಕ ಶಸಕ್ತಿಕರಣ, ಇ-ಆಡಳಿತ ಮೂಲಸೌಕರ್ಯ, ಕಂಪ್ಯೂಟಿಂಗ್‌, ದತ್ತಾಂಶ ಸಂಗ್ರಹ, ಸೇವೆ ಸಂಪರ್ಕ ಸಾಮರ್ಥ್ಯ ನಿರ್ಮಾಣ, ನೇರ ನಗದು ವರ್ಗಾವಣೆ, ನಾಗರಿಕ ಜಾಗೃತಿ, ಪಾರದರ್ಶಕತೆ, ಡಿಜಿಟಲೀಕರಣ.

Advertisement

ಗ್ರಾಮೀಣಾಭಿವೃದ್ಧಿ :
ಗ್ರಾಮ ಪಂಚಾಯತಿಯಲ್ಲೊಂದು ಸ್ಮಾಟ್‌ ವಿಲೇಜ್‌, ಗ್ರಾಪಂಗಳಲ್ಲಿ ಆಹಾರ ಭದ್ರತೆ, ಸರ್ವರಿಗೂ ಆರೊಗ್ಯದ ಆರೈಕೆ, ಮಗುವಿನ ಮೂಲಭೂತ ಶಿಕ್ಷಣ, ಕುಡಿಯುವ ನೀರು, ನೈರ್ಮಲ್ಯ, ತ್ಯಾಜ್ಯ ನಿರ್ವಹಣೆಗೆ ಆದ್ಯತೆ, ರಸ್ತೆ ಸಂಪರ್ಕ, ಮಾರುಕಟ್ಟೆಗಳ ಮೂಲಭೂತ ಸೌಕರ್ಯ ಹೆಚ್ಚಳ, ಗ್ರಾಮೀಣ ಜೀವನಾವಕಾಶ ಸುಧಾರಿಸುವುದು ಮತ್ತು ಲಿಂಗ ಅಸಮಾನತೆ ನಿವಾರಣೆ.

ಮಾಹಿತಿ ತಂತ್ರಜ್ಞಾನ :
ಕೌಶಲ್ಯ ಉನ್ನತೀಕರಣ ಮತ್ತು ಐಟಿ ಚಾಲಿತ ಪಠ್ಯಕ್ರಮದ ಮೂಲಕ 30 ಲಕ್ಷಕ್ಕೂ ಅಧಿಕ ಐಟಿ ಕೆಲಸಗಳಿಗೆ ಸಹಾಯವಾಗುವಂತೆ ಉನ್ನತ ತಂತ್ರಜ್ಞಾನದ ಕೌಶಲ್ಯ ಪಡೆ ನಿರ್ಮಿಸುವುದು. ಸ್ಪಾರ್ಟ್‌ಅಪ್‌ ವ್ಯವಸ್ಥೆಗೆ ಉತ್ತೇಜಿಸಲು 20 ಸಾವಿರ ಸ್ಟಾರ್ಟ್‌ ಅಪ್‌ ಸ್ಥಾಪನೆ, ಎಲ್ಲಾ ವಿನೂತನ ತಂತ್ರಜ್ಞಾನಕ್ಕೆ ರಾಜ್ಯವನ್ನು ಪರೀಕ್ಷಾ ಕೇಂದ್ರ ಬಿಂದುವಾಗಿ ಪರಿವರ್ತಿಸುವುದು.

ಸಾಮಾಜಿಕ ನ್ಯಾಯ:
ಅಲ್ಪಸಂಖ್ಯಾತ ಅಭಿವೃದ್ಧಿ, ಬಹು ಸಂಸ್ಕೃತಿ, ಧಾರ್ಮಿಕ ಗುಣಲಕ್ಷಣ ಹೆಚ್ಚಿಸುವುದು, ಹಿಂದುಳಿದ ವರ್ಗದ ಸಬಲೀಕರಣಕ್ಕೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಬೆಂಬಲ, ವಿಕಲಚೇತನರಿಗೆ ಸಮಾನ ಅವಕಾಶ, ಹಿರಿಯ ನಾಗರಿಕರಿಗಾಗಿ ಸಮಾನ ನೀತಿ.

ಮೂಲಭೂತ ಸೌಕರ್ಯ :
ಹಳ್ಳಿ ಸಂಪರ್ಕಕ್ಕಾಗಿ ಪ್ರಾದೇಶಿಕ ರಸ್ತೆಯ ಉನ್ನತೀಕರಣ, ವಾಯುನೆಲೆ ನಿಲ್ದಾಣ ಅಭಿವೃದ್ಧಿ, ರೈಲು ಸಂಪರ್ಕ ಅಭಿವೃದ್ಧಿ, ಬಹುವಿಧದ ಸಾರಿಗೆ ಸಂಪರ್ಕ ಅಭಿವೃದ್ಧಿ, ಬಂದರುಗಳ ಮೂಲಸೌಕರ್ಯ ಅಭಿವೃದ್ಧಿ, ಕರಾವಳಿ ಶಿಪ್ಪಿಂಗ್‌ ಉತ್ತೇಜನ, ಅಂತಾರಾಜ್ಯ ಕಾರಿಡಾರ್‌ ಅಭಿವೃದ್ಧಿ.

ಕೈಗಾರಿಕೆ ಮತ್ತು ಪ್ರವಾಸೋದ್ಯಮ :
ರಾಜ್ಯ ಜಿಡಿಪಿಯನ್ನು ಶೇ.16.87ರಿಂದ ಶೇ.20ಕ್ಕೆ ಏರಿಸುವುದು, ಔಷಧ, ಅರೊಗ್ಯ ಇಲಾಖೆಯಲ್ಲಿ 15 ಲಕ್ಷ ಉದ್ಯೋಗ, ಹೂಡಿಕೆ ಆಕರ್ಷಿಸಲು ಸಾರ್ವಜನಿಕ ಖಾಸಗಿ ಸಹಭಾಗಿತ್ವ, ವೃತ್ತಿಪರ ಕೌಶಲ್ಯಾಭಿವೃದ್ಧಿ, ಎಂಎಸ್‌ಎಂಇ ಮತ್ತು ಸಾಂಪ್ರದಾಯಿಕ ಕೈಗಾರಿಕೆಗಳ ಮೇಲೆ ಗಮನ, ಜಿಎಸ್‌ಡಿಪಿಗೆ ಪ್ರವಾಸೋದ್ಯಮ ಕೊಡುಗೆಯನ್ನು ಶೇ.20ಕ್ಕೆ ಹೆಚ್ಚಿಸುವುದು, 6.5 ದಶಲಕ್ಷ ಪ್ರಸೋದ್ಯಮ ಉದ್ಯೋಗ ಸೃಷ್ಟಿಸುವುದು.

ಉದ್ಯೋಗ ಮತ್ತು ಕೌಶಲ್ಯ:
ಕುಶಲ ಕಾರ್ಮಿಕ ಪಡೆಯ ಸಂಖ್ಯೆ ಹೆಚ್ಚಳ, ಮಹಿಳೆ ಪಾಲ್ಗೊಳ್ಳುವಿಕೆಯ ಸುಧಾರಣೆ, ಕೌಶಲಾಭಿವೃದ್ಧಿಗೆ ಹೂಡಿಕೆ, ಕೌಶಲ್ಯ ಮಾರುಕಟ್ಟೆ ಅಭಿವೃದ್ಧಿ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ತಾಂತ್ರಿಕತೆ ಬಲಗೊಳಿಸುವುದು.

ನಗರಾಭಿವೃದ್ಧಿ ಮತ್ತು ಸಾರಿಗೆ :
ಉದ್ಯೋಗ ಮತ್ತು ಆರ್ಥಿಕ ವಲಯದ ಜೋಡಣೆ, ನಗರ ಪ್ರದೇಶದ ಭೂಮಿ ಮತ್ತು ಸಂಪನ್ಮೂಲಗಳ ಸಮರ್ಥ ಬಳಕೆ, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ನೈರ್ಮಲ್ಯದ ಮೂಲಭೂತ ಸೌಕರ್ಯ ಮತ್ತು ಸೇವೆಗೆ ಸುರಕ್ಷತೆ, ಯುಎಂಟಿಎ ಸ್ಥಾಪನೆ, ಕೈಗೆಟುಕುವ ದರದಲ್ಲಿ ವಸತಿ ಸೌಲಭ್ಯ, ಸುರಕ್ಷಿತ ಸುಲಭ ಸಾರಿಗೆ ಆದ್ಯತೆ.

ಆರೋಗ್ಯ ಮತ್ತು ಪೌಷ್ಠಿಕತೆ:
ಆರೋಗ್ಯ ವ್ಯವಸ್ಥೆ ಸುಧಾರಣೆ, ಗುಣಮಟ್ಟ ಸುಧಾರಣೆಯ ದೃಢೀಕರಣ, ಆರೋಗ್ಯ ತಂತ್ರಜ್ಞಾನದ ಸುಧಾರಣೆ, ಮಹಿಳಾ ಮತ್ತು ಮಕ್ಕಳ ಅಪೌಷ್ಠಿಕತೆ ಹಾಗೂ ಸೂಕ್ಷ್ಮ ಪೌಷ್ಠಿಕಾಂಶದ ಕೊರತೆ ನೀಗಿಸುವುದು.

ಶಿಕ್ಷಣ:
ಗ್ರಾಪಂಗಳಲ್ಲಿ ಹಸಿರು ಸ್ಮಾರ್ಟ್‌ ಶಾಲಾ ಸಂಕೀರ್ಣಗಳ ರಚನೆ, ಅಂತಾರಾಷ್ಟ್ರೀಯ ಮಾನದಂಡಗಳಿಗೆ ಸಮಾನವಾದ ಶೈಕ್ಷಣಿಕ ಗುಣಮಟ್ಟ, ವಯಸ್ಕರ ಶಿಕ್ಷಣ ಆದ್ಯತೆ, ವಿವಿಗಳಲ್ಲಿ ಸ್ಪರ್ಧಾತ್ಮಕತೆ, ಐದು ವಿವಿಗಳ ಉನ್ನತೀಕರಣ.

ಕಾನೂನು ಮತ್ತು ನ್ಯಾಯ :
ನ್ಯಾಯದ ಆಡಳಿತವನ್ನು ಏಕೀಕೃತಗೊಳಿಸುವುದು, ಅಪರಾಧ ಪ್ರಮಾಣ ಕಡಿಮೆ ಮಾಡುವುದು, ನ್ಯಾಯದಾನದ ವಿತರಣೆಯಲ್ಲಿ ಐಸಿಟಿಗಳ ಅನುಷ್ಠಾನ, ಕಾನೂನು ತರಬೇತಿ ಮತ್ತು ಜಾಗೃತಿ.

ಬೆಳವಣಿಗೆಯ 13 ಕ್ಷೇತ್ರಕ್ಕೆ ನಿರ್ದಿಷ್ಟ ಗುರಿ ಇಟ್ಟುಕೊಂಡು, ಅನುಷ್ಠಾನ ಚೌಕಟ್ಟನ್ನು ಸ್ಪಷ್ಟಪಡಿಸಿಕೊಂಡು ದೇಶದ ಜಿಡಿಪಿ ಮತ್ತು ಕರ್ನಾಟಕದ ಕೊಡುಗೆಯನ್ನು ಉಲ್ಲೇಖೀಸಿ, ಅಭಿವೃದ್ಧಿಗೆ ಬೇಕಾದ ನೂರಾರು ಸಲಹೆಗಳನ್ನು ಸ್ವೀಕರಿಸಿಕೊಂಡು ವಿಸ್ತೃತವಾದ ವಿಷನ್‌ ಡಾಕ್ಯುಮೆಂಟ್‌ನಲ್ಲಿ ಎಲ್ಲಾ ಅಂಶಗಳನ್ನು ವಿಸ್ತೃತವಾಗಿ ವಿವರಿಸಲಾಗಿದೆ.

ಅನುಷ್ಠಾನ ಚೌಕಷ್ಟು
ಹಂತ-1ರಲ್ಲಿ ವಿಷನ್‌ ಮಾಲಿಕತ್ವದಡಿ ಆಡಳಿತ ಮಂಡಳಿ ರಚನೆ, ಹಂತ-2ರಲ್ಲಿ ವಿಷನ್‌ ಜವಾಬ್ದಾರಿ ಮತ್ತು ನಿರ್ಣಯ ಕೈಗೊಳ್ಳುವುದು(ಸಂಯೋಜನ ಮಂಡಳಿ ಅನುಷ್ಠಾನ), ಹಂತ-3ರಲ್ಲಿ ವಿಷನ್‌ ಕಾರ್ಯಕ್ರಮ ಕಾರ್ಯಗತಗೊಳಿಸುವುದು (ವಿಷನ್‌ ಅಭಿವೃದ್ಧಿ ಪ್ರಾಧಿಕಾರ).

ರಾಜ್ಯದ ಎಲ್ಲಾ ಜಿಲ್ಲೆಗಳ ಜನರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಏಳು ವರ್ಷದ ಅಭಿವೃದ್ಧಿಗಾಗಿ ಸಿದ್ಧಪಡಿಸಿದ ಜನರ ವಿಷನ್‌ ಡಾಕ್ಯುಮೆಂಟ್‌ ಇದಾಗಿದೆ. ನಿರಂತರ ಅಭಿವೃದ್ಧಿಯ ಕಲ್ಪನೆಯಡಿ ರಚಿಸಲಾಗಿದೆ.
-ರೇಣುಕಾ ಚಿದಂಬರಂ, ವಿಷನ್‌ ಕಚೇರಿ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next