Advertisement

ಅಭಿವೃದ್ಧಿ ಕಾರ್ಯಗಳ ವಸ್ತುಸ್ಥಿತಿಗೆ ವಿಕೃತ ರೂಪ ನೀಡುವ ಹುನ್ನಾರ

06:00 AM Mar 04, 2018 | |

ಬೆಂಗಳೂರು : ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭಿವೃದ್ಧಿ, ರೈತರ ಸಾಲಮನ್ನಾ, ವಿದ್ಯಾರ್ಥಿಗಳಿಗೆ ವಿಶೇಷ ಯೋಜನೆ ಸೇರಿದಂತೆ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳ ವಸ್ತುಸ್ಥಿತಿಗೆ ವಿಕೃತ ರೂಪ ನೀಡುವ ಹುನ್ನಾರ ಕೆಲವರು ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

Advertisement

ರಾಜ್ಯ ಸರ್ಕಾರದಿಂದ ಸಿದ್ಧಪಡಿಸಿರುವ ನವ ಕರ್ನಾಟಕ-2025 ವಿಷನ್‌ ಡಾಕ್ಯುಮೆಂಟ್‌ ಅನ್ನು ಶನಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ವಿವರಿಸುತ್ತಾ, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಪರೋಕ್ಷವಾಗಿ ವಾಗ್ಧಾಳಿ ನಡೆಸಿದರು.

ಆಹಾರ ಭದ್ರತೆ, ಉದ್ಯೋಗ ಸೃಷ್ಟಿ, ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ನುಡಿದಂತೆ ನಡೆದಿದ್ದೇವೆ. ಕರ್ನಾಟಕ ಅನೇಕ ವಲಯದಲ್ಲಿ ಮುಂದಿದೆ. ಪ್ರಗತಿ ಎಂಬುದು ಬಾಯಿ ಮಾತಿನಿಂದ ಬರುವುದಿಲ್ಲ. ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಕೇಂದ್ರದ ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದರು.

ಅನ್ನಭಾಗ್ಯ ಯೋಜನೆ ಅನುಷ್ಠಾನ ಮಾಡಿದ ನಂತರ ವಲಸೆ ಕುಟುಂಬಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗುವುದು ಕಡಿಮೆಯಾಗಿದೆ. ಬಡವರ ಆರೋಗ್ಯದಲ್ಲಿ ಸುಧಾರಣೆಯಾಗಿದೆ. ರಾಜ್ಯವು ಹಸಿವು ಮುಕ್ತವಾಗುತ್ತಿದೆ. ಇದನ್ನು ಅನೇಕರು ವಿರೋಧಿಸಿದ್ದರು. ಹೊಟ್ಟೆ ತುಂಬಿದವರು ಮಾತ್ರ ಇಂತಹ ಕಾರ್ಯಕ್ರಮವನ್ನು ವಿರೋಧಿಸಲು ಸಾಧ್ಯ ಎಂದು ತಿರುಗೇಟು ನೀಡಿದರು.

ಹೂಡಿಕೆಯಲ್ಲಿ ಕರ್ನಾಟಕ ದೇಶದಲ್ಲೇ ನಂ.1ಆಗಿದೆ. ಅಂತರ್ಜಲ ಗುಣಮಟ್ಟ ಸುಧಾರಣೆಗೆ ಇಂಗುಗುಂಡಿಗಳ ಜತೆಗೆ 36 ಸಾವಿರ ಕೆರೆಗಳ ಅಭಿವೃದ್ಧಿಗೆ 9 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇವೆ. 13 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಸಿದ್ದೇವೆ ಎಂದು ರಾಜ್ಯ ಸರ್ಕಾರದ ಸಾಧನೆಯನ್ನು ವಿವರಿಸಿ ಹೇಳುವ ಮೂಲಕ ಬಿಜೆಪಿ ನಾಯಕರಿಗೆ ಟಾಂಗ್‌ ನೀಡಿದರು.

Advertisement

ದೇಶದ 24 ಲಕ್ಷ ಕೋಟಿ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಭಿವೃದ್ಧಿಗೆ 54 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದಾರೆ. ಕರ್ನಾಟಕದಲ್ಲಿ 2 ಲಕ್ಷ ಕೋಟಿ ಬಜೆಟ್‌ನಲ್ಲಿ 28 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇವೆ. ಕೇಂದ್ರಕ್ಕಿಂತ ಮೂರು ಪಟ್ಟು ಹೆಚ್ಚು ಕರ್ನಾಟಕದಲ್ಲಿ ಪರಿಶಿಷ್ಟರ ಅಭಿವೃದ್ಧಿಗೆ ನೀಡಿದ್ದೇವೆ. ಮೊಸಳೆ ಕಣ್ಣೀರಿಟ್ಟರೇ ಏನು ಆಗುವುದಿಲ್ಲ. ಬದ್ಧತೆ ಇರಬೇಕು ಎಂದರು.

ಕೇಂದ್ರದ ಮಾಜಿ ಸಚಿವ ಜೈರಾಮ್‌ ರಮೇಶ್‌ ಮಾತನಾಡಿ ದೇಶದ ಅಭಿವೃದ್ಧಿಯಲ್ಲಿ ಜನಸಂಖ್ಯೆಯನ್ನು ನಗಣ್ಯ ಮಾಡುವಂತಿಲ್ಲ. ದೇಶದ ಜನಸಂಖ್ಯೆ ಕೆಲವೇ ವರ್ಷದಲ್ಲಿ 140 ಕೋಟಿಗೆ ಏರಿಕೆಯಾಗಲಿದೆ. 2050ರ  ವೇಳೆಗೆ 40 ಕೋಟಿಯಷ್ಟು  ಹೆಚ್ಚಾಗುವ ಸಾಧ್ಯತೆ ಇದೆ. ಕರ್ನಾಟಕ, ತಮಿಳುನಾಡು, ಆಂಧ್ರ, ಕೇರಳ, ತೆಲಂಗಾಣ ಸೇರಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆಯ ಸ್ಥಿರತೆ ಕಾಯ್ದುಕೊಂಡು, ಆರ್ಥಿಕ ಬೆಳವಣಿಗೆ ಆಗುತ್ತಿದೆ. ಆದರೆ, ಉತ್ತರ ಭಾರತದಲ್ಲಿ ಜನಸಂಖ್ಯೆ ಏರಿಕೆಯಾಗುತ್ತಿದೆ. ಆ ಪ್ರಮಾಣದಲ್ಲಿ ಆರ್ಥಿಕ ಅಭಿವೃದ್ಧಿಯಾಗುತ್ತಿಲ್ಲ. ಇದರಿಂದ ಭವಿಷ್ಯದಲ್ಲಿ ಆಂತರಿಕ ವಲಸೆ ಹೆಚ್ಚಾಗುತ್ತದೆ. ಇಂತಹ ಸಾಮಾಜಿಕ ಸವಾಲನ್ನು ದಕ್ಷಿಣ ಭಾರತದ ರಾಜ್ಯಗಳು ಎದುರಿಸಬೇಕಾಗುತ್ತದೆ. ಇದಕ್ಕಾಗಿ ವಿಷನ್‌ ಡಾಕ್ಯುಮೆಂಟ್‌ ಅನುಷ್ಠಾನ ಅಗತ್ಯವಾಗಿದೆ ಎಂದು ಹೇಳಿದರು.

ಸಚಿವರಾದ ಕೆ.ಜೆ.ಜಾರ್ಜ್‌, ಟಿ.ಬಿ.ಜಯಚಂದ್ರ, ಬಸವರಾಜ ರಾಯರಡ್ಡಿ, ಎಚ್‌.ಆಂಜನೇಯ, ತನ್ವೀರ್‌ಸೇಠ್, ವಿನಯ್‌ ಕುಲಕರ್ಣಿ, ಕೃಷ್ಣಬೈರೇಗೌಡ, ಆರ್‌. ಬಿ.ತಿಮ್ಮಾಪುರ, ಪ್ರಿಯಾಂಕ್‌ ಖರ್ಗೆ, ರಾಜ್ಯ ಸಭಾ ಸದಸ್ಯ ಪ್ರೊ.ರಾಜುಗೌಡ, ಸರ್ಕಾರದ ಮುಖ್ಯಕಾರ್ಯದರ್ಶಿ ರತ್ನಪ್ರಭಾ, ವಿಷನ್‌ ಕಚೇರಿ ಮುಖ್ಯಕಾರ್ಯ ನಿರ್ವಹಣಾಧಿಕಾರಿ ರೇಣುಕಾ ಚಿದಂಬರಂ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಗೊಂದಲ ಸೃಷ್ಟಿಸುತ್ತಿದ್ದಾರೆ….
ಮುನ್ನೋಟ ಇಲ್ಲದ ರಾಜ್ಯ ಮತ್ತು ರಾಜಕೀಯ ನಾಯಕರಿಂದ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ. ಭವಿಷ್ಯದ ಚಿಂತನೆಯ ಜತೆಗೆ ಅನುಷ್ಠಾನದ ಬದ್ಧತೆಯೂ ಅಗತ್ಯ. ಗಾರ್ಬೆಜ್‌ ಸಿಟಿ ಮಾಡಿದವರು ಈಗ ಬೆಂಗಳೂರು ಸಿಟಿ ಉಳಿಸಿಲು ಹೋರಾಟ ಮಾಡುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯ ಬೆಂಗಳೂರು ರಕ್ಷಿಸಿ ಪಾದಯಾತ್ರೆಗೆ ತಿರಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next