Advertisement

ನಾಟ್ಯಾಭಿನಯ ಪ್ರವೀಣ ಯಕ್ಷಗುರು ಕರ್ಗಲ್ಲು ವಿಶ್ವೇಶ್ವರ ಭಟ್‌

06:00 AM Jul 06, 2018 | |

ಯಕ್ಷ ಶಿಕ್ಷಣಕ್ಕೆ ಹೊಸ ಆಯಾಮ ನೀಡಿದ ಅನುಭವಿ ಯಕ್ಷಗುರು ಕರ್ಗಲ್ಲು ವಿಶ್ವೇಶ್ವರ ಭಟ್‌ ತೆಂಕುತಿಟ್ಟಿನ ನೃತ್ಯ ತಜ್ಞ. ಯಕ್ಷಗಾನ ಕುಣಿತ, ಭರತನಾಟ್ಯ, ಕಥಕ್‌, ರಾಮನಾಟ್ಟಂ, ಕೊರಿಯಾಗ್ರಫಿ, ಮೂಡಲಪಾಯಗಳನ್ನು ಬಲ್ಲವರಾದ ವಿಶ್ವೇಶ್ವರ ಭಟ್‌ ಬಹುಮುಖ ಪ್ರತಿಭೆಯ ಯಕ್ಷಗುರು.

Advertisement

ನಾಲ್ಕು ದಶಕಗಳಿಂದ ಸಹಸ್ರಾರು ಯಕ್ಷಗಾನ ಆಸಕ್ತರಿಗೆ ಶುದ್ಧ ಶಾಸ್ತ್ರೀಯ ಯಕ್ಷನಾಟ್ಯದ ಪಾಠವನ್ನು ಬೋಧಿಸುತ್ತಿರುವ, ಮಕ್ಕಳನ್ನು ತಿದ್ದಿ ರಂಗದಲ್ಲಿ ಕುಣಿಸಿದ ಕಲಾಗುರು. ಕೋಡಪದವು ವಿಟ್ಲಗಳಲ್ಲಿ ಪ್ರಾಥಮಿಕ ಪ್ರೌಢ ವಿದ್ಯಾರ್ಜನೆ. ತಂದೆಯಿಂದಲೇ ಯಕ್ಷಗಾನದ ಪ್ರಾಥಮಿಕ ಅಭ್ಯಾಸ. ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಭಸ್ಮಾಸುರ ಮೋಹಿನಿ ನಾಟಕದಲ್ಲಿ ಭಸ್ಮಾಸುರನ ಪಾತ್ರ, ಪಂಚವಟಿ ಪ್ರಸಂಗದಲ್ಲಿ ಲಕ್ಷ್ಮಣನ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಧರ್ಮಸ್ಥಳದ ಯಕ್ಷಗಾನ ಕೇಂದ್ರದಲ್ಲಿ ವಿದ್ಯಾರ್ಥಿಯಾಗಿ ಸೇರಿಕೊಂಡರು. ಪಡ್ರೆ ಚಂದು ಅವರು ಗುರುಗಳಾಗಿದ್ದರು. 

ಉಡುಪಿಯ ಬಡಗುತಿಟ್ಟು ಯಕ್ಷಗಾನ ಕೇಂದ್ರದಲ್ಲಿ ಬಡಗುತಿಟ್ಟು ನಾಟ್ಯಾಭ್ಯಾಸ ಮಾಡಿದರು. ತೆಂಕು ಬಡಗು ಎರಡೂ ಶೈಲಿಗಳ ನಾಟ್ಯ ತಿಳಿದಿದ್ದಾರೆ. ಮೂಲ್ಕಿ ರಮೇಶ ಅವರಿಂದ ಭರತನಾಟ್ಯ, ಚೆನ್ನೈಯ ಎಂ.ವಿ.ಗೋಪಾಲಕೃಷ್ಣನ್‌ ಅವರಿಂದ ಕಥಕ್‌ ನೃತ್ಯ ಅಭ್ಯಾಸ ಮಾಡಿದ್ದಾರೆ. ಕೇರಳದ ಪಾಲ್ಗಾಟ್‌ನ ಕೇಶವನ್‌ ನಂಬೂದಿರಿ ಅವರಿಂದ ರಾಮನಾಟ್ಟಂ ಅನ್ನೂ ಕಲಿತಿದ್ದಾರೆ. ಡಾ.ಮಾಯಾರಾವ್‌ ಅವರಿಂದ ಕಥಕ್‌ ಮತ್ತು ಕೊರಿಯಾಗ್ರಫಿ ಕಲಿತ ಇವರ ಕಲಾಸಕ್ತಿ ವಿಸ್ತಾರವಾಗಿದೆ. 

ಕಟೀಲು, ಇಡಗುಂಜಿ, ಧರ್ಮಸ್ಥಳ ಮೇಳದಲ್ಲಿ ಕಲಾವಿದರಾಗಿಯೂ ಕೆಲವು ವರ್ಷ ವೃತ್ತಿ ನಿರ್ವಹಿಸಿದ್ದಾರೆ. ವಿಷ್ಣು, ದೇವೇಂದ್ರ, ದಕ್ಷ, ಈಶ್ವರ ಮೊದಲಾದ ವೇಷಗಳು ಇವರಿಗೆ ಪ್ರಸದ್ಧಿ ತಂದುಕೊಟ್ಟಿವೆ. ಪರಂಪರೆಯ ಹನುಮಂತ, ಈಶ್ವರ, ಷಣ್ಮುಖ ಸುಬ್ರಾಯ ಮೊದಲಾದ ವೇಷಗಳನ್ನು ಮತ್ತೆ ರಂಗಸ್ಥಳದಲ್ಲಿ ಕಾಣಿಸಿದರು. 

ತಕಿಟ(ತಿಶ್ರ), ತಕದಿಮಿ(ಚತುರಶ್ರ) ತಕತಕಿಟ(ಖಂಡ), ತಕದಿಮಿ ತಕತಕಿಟ ಸಂಕೀರ್ಣ, ತಾಳಸೂತ್ರದ ಪಂಚಾಂಗವನ್ನು ಆಧರಿಸಿದ ನಾಟ್ಯಪಾಠದ ಪ್ರಥಮ ಪ್ರಯೋಗ ಮಾಡಿದ ಕರ್ಗಲ್ಲು ವಿಶ್ವೇಶ್ವರ ಭಟ್‌ ವಿಶೇಷ ಸಾಧಕರು. 10 ವರ್ಷಗಳ ಕಾಲ ಧರ್ಮಸ್ಥಳದ ಲಲಿತಕಲಾ ಕೇಂದ್ರದಲ್ಲಿ ಯಕ್ಷಗಾನ ನಾಟ್ಯ ಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ.

Advertisement

ತೆಂಕುತಟ್ಟು ಯಕ್ಷಗಾನಕ್ಕಾಗಿ ಕರ್ನಾಟಕ ಪಠ್ಯ ಪುಸ್ತಕ ಇಲಾಖೆಯವರಿಗೆ ಯಕ್ಷಗಾನ ಪ್ರಾಥಮಿಕ ಮತ್ತು ಮಾಧ್ಯಮಿಕ ಪಠ್ಯವನ್ನು ರಚಿಸಿದ್ದಾರೆ. ಮೂಡಲಪಾಯ ಯಕ್ಷಗಾನಕ್ಕೆ ಶಾಸ್ತ್ರೀಯ ಪಠ್ಯ ರಚನೆ ಮಾಡಿದ್ದಾರೆ. ಈ ಕಾರ್ಯದಲ್ಲಿ ಜಿ.ಎನ್‌.ಅನಂತವರ್ಧನರು ವಿಶೇಷ ಸಹಕಾರ ಒದಗಿಸಿದ್ದಾರೆ. ಡಾ.ಎಚ್‌.ಎಲ್‌.ನಾಗೇಗೌಡರ ಸಹಾಯದಿಂದ ಮೂಡಲಪಾಯ ಯಕ್ಷಗಾನ ಅಭ್ಯಾಸವನ್ನು ಮಾಡಿದ್ದಾರೆ.

 ಜಿ.ಎಂ.ಲಕ್ಷ್ಮೀ ನರಸಿಂಹ ಭಟ್‌ 

Advertisement

Udayavani is now on Telegram. Click here to join our channel and stay updated with the latest news.

Next