Advertisement

ನಾಟ್ಯ ವಸಂತದ ನೃತ್ಯ ಪಲ್ಲವ

11:15 AM Dec 29, 2017 | Team Udayavani |

ಕುಂದಾಪುರದ “ನಾಟ್ಯವಸಂತ’ ನೃತ್ಯಸಂಸ್ಥೆಯು ಕಳೆದ ಕೆಲವು ವರ್ಷಗಳಿಂದ, ಸದ್ದಿಲ್ಲದೆ ಶಾಸ್ತ್ರೀಯ ಭರತನಾಟ್ಯ ಶೈಲಿಯ ಕ್ಷೇತ್ರದಲ್ಲಿ ನೃತ್ಯ ಶಿಕ್ಷಣ, ಪ್ರದರ್ಶನಗಳು, ನೃತ್ಯ ಶಿಬಿರ ಮುಂತಾದ ಹಲವು ನೃತ್ಯ ಸಂಬಂಧಿ ಚಟುವಟಿಕೆಗಳನ್ನು ನಡೆಸುತ್ತಿದೆ. ಇತ್ತೀಚೆಗೆ ಕುಂದಾಪುರದ ಕುಂದೇಶ್ವರ ಸಭಾಂಗಣದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಪ್ರದರ್ಶನ ನೀಡಿದರು. 

Advertisement

ಈ ಪ್ರದರ್ಶನದಲ್ಲಿ ಯುಗಳ ಹಾಗೂ ತ್ರಿವಳಿ ಗಳ ಕಾರ್ಯಕ್ರಮ ನಿರ್ವಹಿಸಲ್ಪಟ್ಟಿತು. ಮೈತ್ರಿ ಹಾಗೂ ರೋಷನ್‌ ಜತೆಯಾಗಿ ನರ್ತಿಸಿದರೆ, ಯುಕ್ತಿ, ಸುರಭಿ ಹಾಗೂ ನಿಯತಿಯವರು ಒಂದಾಗಿ ನರ್ತಿಸಿದರು. ಒಡೆಯರ ಕೃತಿ ಅಠಾಣ ರಾಗದ ಮಹಾಗಣಪತಿಂನಿಂದ ಯುಗಳ ನೃತ್ಯ ಪ್ರಾರಂಭಗೊಂಡರೆ, ಮುಂದೆ ತ್ರಿವಳಿಯವರು ಕುಪ್ಪು ಸ್ವಾಮಿಯವರ ನಾಟಿ ಕುರಂಜಿ ಪದವರ್ಣವನ್ನು ಅಭಿನಯಿಸಿ ದರು. ದೀಕ್ಷಿತರ ಕುಮುದಪ್ರಿಯ ರಾಗದ ಅರ್ಧನಾರೀಶ್ವರ ಕೃತಿಯನ್ನು ಮೈತ್ರಿ ಹಾಗೂ ರೋಶನ್‌ ಜಂಟಿಯಾಗಿ ಪ್ರದರ್ಶಿಸಿದರು. ಪರಮೇಶ್ವರನ ಅರ್ಧನಾರೀಶ್ವರ ವ್ಯಕ್ತಿತ್ವವನ್ನು ವರ್ಣಿಸುವ ಲಾಸ್ಯ, ತಾಂಡವ ಭಂಗಿಗಳ ಹಾಗೂ ಭಾವಾಭಿನಯದ ನರ್ತನ ಕಳೆಗಟ್ಟಿತು. ಪೂರ್ವಿ ಕಲ್ಯಾಣಿ ರಾಗದ ಆನಂದ ನಟನಂ ಎಂಬ ಚಿದಂಬರೇಶ್ವರ ನಟರಾಜನ ಭಂಗಿಗಳ ವರ್ಣನೆ ಹಾಗೂ ಅಲಂಕಾರಗಳ ಚಿತ್ರಣವನ್ನು ತ್ರಿವಳಿಗಳು ಹಂಚಿಕೊಂಡು ನರ್ತಿಸಿದ ರೀತಿ ಚೆನ್ನಾಗಿತ್ತು. ಮುಂದೆ ಚಾರುಕೇಶಿ ರಾಗದ ಲಾಲ್‌ಗ‌ುಡಿಯವರ “ಇನ್ನುಂ ಎನ್‌ ಮನಂ’ ಎಂಬ ಪದವರ್ಣವು ಮಾಧವ ಹಾಗೂ ನಾಯಕಿಯ ನಡುವಿನ ಪ್ರೇಮ ನಿವೇದನೆ ಸಮರ್ಪಣೆಗಳನ್ನು ರೋಶನ್‌ ಮಾಧವನಾಗಿ, ಮೈತ್ರಿ ನಾಯಕಿಯಾಗಿ ಮನಸ್ಸಿಗೆ ಆಪ್ತವಾಗುವಂತೆ ಅಭಿನಯಿಸಿದ್ದಲ್ಲದೆ, ವರ್ಣದ ನೃತ್ತಭಾಗದ ಜತಿ, ಚರಣಸ್ವರಗಳನ್ನೂ ಅಂಗಶುದ್ಧಿ, ಉತ್ತಮ ಅಡವು ವಿನ್ಯಾಸಗಳ ಸಹಿತ ನಿರ್ವಹಿಸಿ ಕೃತಿಯ ಭಾವ ಪೋಷಣೆಗೆ ನ್ಯಾಯವಿತ್ತರು. ಕೊನೆಯದಾಗಿ ಅತ್ಯಂತ ಕ್ಲಿಷ್ಟ ಹಾಗೂ ಚುಂಬಕ ಶಕ್ತಿಯುಳ್ಳ ಊತ್ತುಕಾಡು ಅವರ ಗಂಭೀರ ನಾಟದ ಕಾಳಿಂಗ ನರ್ತನ ತಿಲ್ಲಾನವನ್ನು ತ್ರಿವಳಿಗಳು ಬಾಲಕೃಷ್ಣನ ನೃತ್ಯೋಪಾದಿಯಲ್ಲೇ ಕುಣಿದು ಕುಪ್ಪಳಿಸಿ ನರ್ತಿಸಿದ್ದು ಒಂದು ಸವಾಲೇ ಸೈ. 

ಪ್ರವಿತಾ ಅವರ ಹೊಸ ಸಾಧ್ಯತೆಗಳ ಬಗ್ಗೆ ಇರುವ ತುಡಿತ, ಅಂಗ ಶುದ್ಧಿ ಹಸ್ತ ಪಾದಗಳ ನರ್ತನ ವಿನ್ಯಾಸ, ಅಡವು ನಿರ್ವಹಣೆ, ಅಭಿನಯದ ಸಂಯೋಜನೆ, ಭಂಗಿಗಳು, ಜತಿಗಳ ವೈವಿಧ್ಯತೆ, ಮೇಲ್ಪಟ್ಟ ರಂಗ ನಿರ್ದೇಶನ , ಸಂಗೀತ ಕಚೇರಿಯ ಕೃತಿಗಳ ಹೆಚ್ಚಿನ ಆಯ್ಕೆ, ವೇಷ ಭೂಷಣದ ಬಗ್ಗೆ ಇರುವ ಕಲ್ಪನೆ ಇವು ಈ ಪ್ರದರ್ಶನದಲ್ಲಿ ಗುರು ಹಾಗೂ ಶಿಷ್ಯರ ನರ್ತನದ ನಿರ್ದೇಶನದ ವಿಶೇಷ ಪರಿಣಾಮ ಬೀರಿದ ಅಂಶಗಳು. ಒಂದು ಪ್ರದರ್ಶನದಲ್ಲಿ ಎರಡು ಪದವರ್ಣಗಳು, ಎರಡು ಒಂದೇ ವಸ್ತುವಿನ ನೃತ್ಯ ಬಂಧಗಳು ಇರುವುದು ಅಷ್ಟು ಸಮಂಜಸವಲ್ಲದಿದ್ದರೂ ಇಲ್ಲಿ ಈ ಕಲಾ ವಿದ್ಯಾರ್ಥಿಗಳ ಪ್ರೌಢಿಮೆಯ ಪ್ರದರ್ಶನದ ಮಾನದಂಡ ಇದಾದುದರಿಂದ, ಇದು ಸಂಪ್ರದಾಯ ರೀತಿಯ ಪ್ರದರ್ಶನವಾಗದೇ ಇದ್ದುದರಿಂದ ಇದನ್ನು ಸ್ವೀಕರಿಸಬಹುದು. ಒಟ್ಟಾರೆ ಈ ಪ್ರದರ್ಶನ ಗುರು ಮತ್ತು ಶಿಷ್ಯಂದಿರುಗಳಿಗೆ ಉತ್ಕೃಷ್ಟ ವೇದಿಕೆಯಾಯಿತು.

ಹಿಮ್ಮೇಳದಲ್ಲಿ ಪ್ರವಿತಾ ನಟ್ಟುವಾಂಗ ನಡೆಸಿದರು. ಹಾಡು ಗಾರಿಕೆಯಲ್ಲಿ ಸ್ವತಃ ನೃತ್ಯ ಕಲಾವಿದೆಯೂ ಆಗಿರುವ ವಿ| ಪ್ರೀತಿಕಲಾ ಅವರು ಒಪ್ಪವಾಗಿ ಹಾಡಿದರು. ಕಾಳಿಂಗ ನರ್ತನ ತಿಲ್ಲಾನವನ್ನು ಅತ್ಯಂತ ಸುಲಲಿತವಾಗಿ ಹಾಡಿ ನೃತ್ಯಾಂಗನೆಯರಿಗೆ ಉತ್ಸಾಹ ನೀಡಿದರು. ಮೃದಂಗದ ಬಾಲಚಂದ್ರ ಭಾಗವತರು ಚೆನ್ನಾದ ನುಡಿತಗಳಿಂದ ನೃತ್ಯಕ್ಕೆ ಬೆಂಬಲ ನೀಡಿದರು. ಕೊಳಲಿನ ಮುರಲೀಧರ್‌, ವಯಲಿನ್‌ನ ಶರ್ಮಿಲಾ ರಾವ್‌ ತಮ್ಮ ವಾದನದಿಂದ ಭಾವಸು#ರಣೆಗೆ ಸಹಕಾರವಿತ್ತರು. 

ಮನೋರಂಜಿನಿ

Advertisement
Advertisement

Udayavani is now on Telegram. Click here to join our channel and stay updated with the latest news.

Next