Advertisement
ಬೆಳೆಯನ್ನು ತೀವ್ರವಾಗಿ ಬಾಧಿಸುವ ಕೀಟಗಳಲ್ಲಿ ದುಂಡು ಹುಳು ಸಹ ಸೇರಿದೆ. ಈ ಮಾರಕ ಕೀಟ ರಾಸಾಯನಿಕ ಕೀಟನಾಶಕಗಳಿಗೂ ಬಗ್ಗುವುದಿಲ್ಲ. ಇದನ್ನು ನಿಯಂತ್ರಿಸಲು ಖರ್ಚು ಮಾಡುವ ಹಣ, ತೊಡಗಿಸುವ ಶ್ರಮ ಕೂಡ ವ್ಯರ್ಥವಾಗುತ್ತದೆ. ದುಂಡು ಹುಳುಗಳು ಜಮೀನಿನ ಮಣ್ಣಿನಲ್ಲಿ ವೃದ್ದಿಯಾಗುತ್ತವೆ. ಇವುಗಳನ್ನು ನಿಯಂತ್ರಿಸಲು ಕೆಲವು ಕ್ರಮಗಳಿವೆ. ಕೆಲ ಅವಧಿಯವರೆಗೆ ಜಮೀನನ್ನು ಬೇಸಾಯ ಮಾಡದೇ ಬಿಡುವುದು, ಜಮೀನಿನಲ್ಲಿ ಹುಲ್ಲು- ಸತ್ತೆ- ಸದೆ ಹಾಕಿ ಬೆಂಕಿ ಹಾಕಿ ಹುಳುಗಳನ್ನು ನಾಶ ಮಾಡುವುದು, ದುಂಡು ಹುಳು ಬಾಧೆ ನಿರೋಧಕ ತಳಿ ಬೆಳೆಸುವುದು, ದುಂಡು ಹುಳು ಆಕರ್ಷಿಸದ ಬೆಳೆ ಬೆಳೆಯುವುದು ಇತ್ಯಾದಿ ಕ್ರಮಗಳು. ಆದರೆ ಇವ್ಯಾವುವೂ ಪರಿಣಾಮಕಾರಿಯಲ್ಲ.
ಚೆಂಡು ಹೂ ಇರುವ ಜಮೀನುಗಳಲ್ಲಿ ದುಂಡುಹುಳು ನಿಯಂತ್ರಣದಲ್ಲಿರುವುದು ಕಂಡು ಬಂದಿದೆ. ಈ ಕೀಟಗಳನ್ನು ಹೆಚ್ಚಾಗಿ ಆಕರ್ಷಿಸುವ ಆಲೂಗೆಡ್ಡೆ, ಟೊಮೆಟೋ, ಸ್ಟ್ರಾಬೆರಿ, ಗುಲಾಬಿ ಇತ್ಯಾದಿ ಬೆಳೆಗಳಲ್ಲಿ ಚೆಂಡು ಹೂ ಅನ್ನು ಬಲೆ ಬೆಳೆಯಾಗಿ ಬೆಳೆಯುವುದು ಪರಿಣಾಮಕಾರಿ. ಈ ಹೂ ಬೆಳೆಯತೊಡಗಿದಂತೆ, ಇದರ ಬೇರು ವಿಶಿಷ್ಟ ಬಗೆಯ ದ್ರವ ಒಸರಿಸುತ್ತದೆ. ಇದು ಮಣ್ಣಿನಲ್ಲಿ ವೃದ್ಧಿಯಾದ ದುಂಡುಹುಳು ನಾಶಪಡಿಸಲು ಸಹಕಾರಿ. ಟೊಮೇಟೋ, ಮೆಣಸಿನಕಾಯಿ, ಸ್ಟ್ರಾಬೆರಿ, ಇತ್ಯಾದಿ ಬೆಳೆ ಬೆಳೆಯುವ ರೈತರು ಇವುಗಳನ್ನು ನಾಟಿ ಮಾಡುವಾಗ ಪ್ರತಿ ಎಂಟು ಸಾಲುಗಳ ಅನಂತರ ಒಂದು ಸಾಲು ಚೆಂಡು ಹೂವು ಸಸ್ಯಗಳನ್ನು ನಾಟಿ ಮಾಡಬೇಕು. ಇದಕ್ಕಾಗಿಯೇ ಪ್ರತ್ಯೇಕ ಸಸಿ ಮಡಿಯಲ್ಲಿ ಚೆಂಡು ಹೂವು ಸಸಿ ಬೆಳೆಸಿಕೊಂಡಿರಬೇಕು. ಹುಳುಗಳ ನಿಯಂತ್ರಣ
ಕಪ್ಪು ಮಣ್ಣಿನಲ್ಲಿ ನೀರಾವರಿಯಲ್ಲಿ ಹತ್ತಿ ಬೆಳೆದಾಗ ಕಂದುಕಾಯಿ ಕೊರಕ, ಅಮೆರಿಕನ್ ಕಾಯಿಕೊರಕ ಬಾಧೆ ಸಾಮಾನ್ಯವೆನ್ನಿಸಿದೆ. ಇವುಗಳನ್ನು ನಿಯಂತ್ರಿಸಲು ಚೆಂಡು ಹೂ ಬೆಳೆಯನ್ನು ಪೂರಕವಾಗಿ ಬೆಳೆಯಬೇಕು. ಹತ್ತಿಗಿಡಗಳ ನಡುವೆ ಚದುರಿದಂತೆ ಚೆಂಡು ಹೂ ಸಸಿಗಳನ್ನು ನೆಡಬೇಕು. ಆಗ ಕಾಯಿಕೊರಕಗಳು ಚೆಂಡುಹೂವಿನತ್ತ ಆಕರ್ಷಿತವಾಗುತ್ತವೆ. ಅಲ್ಲೇ ಮೊಟ್ಟೆಗಳನ್ನು ಇಡುತ್ತವೆ. ಇದರಿಂದ ಹತ್ತಿಗೆ ಇವುಗಳ ಬಾಧೆ ಗಣನೀಯವಾಗಿ ಕಡಿಮೆಯಾಗುತ್ತದೆ.
Related Articles
ಹೆಚ್ಚಿನ ಮಾಹಿತಿಗೆ ಮೊ. ಸಂ.: 7406768999
Advertisement
- ಕುಮಾರ ರೈತ