ಹೊಸದಿಲ್ಲಿ: ರಸ್ತೆ ಸುರಕ್ಷತಾ ತಿದ್ದುಪಡಿ ಮಸೂದೆ ವಿರೋಧಿಸಿ ಸಾರಿಗೆ ಇಲಾಖೆಯ ವಿವಿಧ ಸಂಘಟನೆಗಳು ಜನವರಿ 8 ಮತ್ತು 9 ರಂದ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿವೆ.
ಎಐಟಿಯುಸಿ, ಸಿಐಟಿಯು, ಐಎನ್‍ಟಿಯುಸಿ, ಎಲ್‍ಪಿಎಫ್ ಸೇರಿ ಹಲವು ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿ ಮೋಟಾರು ವಾಹನ ತಿದ್ದುಪಡಿ ಮಸೂದೆ 2017 ನ್ನು ಹಿಂಪಡೆಯಲು ಆಗ್ರಹಿಸಲಿದ್ದಾರೆ.
ರಾಜ್ಯದಲ್ಲಿ ಸರ್ಕಾರಿ ಬಸ್‌ಗಳು ಸಂಚರಿಸುವುದಿಲ್ಲ ಎಂದು ತಿಳಿದು ಬಂದಿದ್ದು, ಖಾಸಗಿ ಬಸ್ ಮಾಲೀಕರೂ ಬಂದ್‌ಗೆ ಬೆಂಬಲ ನೀಡಲು ತೀರ್ಮಾನಿಸಿದ್ದಾರೆ.
ಬಂದ್‌ಗೆ ರಾಜ್ಯದ ಮೈತ್ರಿ ಸರ್ಕಾರವೂ ಬೆಂಬಲ ಸೂಚಿಸುವ ಸಾಧ್ಯತೆಗಳಿವೆ. ಆಟೋ ಸಂಘಟನೆಗಳು, ಟ್ಯಾಕ್ಸಿ ಕ್ಯಾಬ್‌ಗಳ ಸಂಘಟನೆಗಳು ಬೆಂಬಲ ಸೂಚಿಸಲಿದ್ದು, ರಾಜ್ಯದಲ್ಲಿ ಸಾರಿಗೆ ಸಂಚಾರ ಸಂಪೂರ್ಣ ಸ್ತಬ್ಧವಾಗಲಿದ್ದು ಖಾಸಗಿ ವಾಹನಗಳು ಮತ್ತು ಅಂಬುಲೆನ್ಸ್‌ಗಳು ಮಾತ್ರ ರಸ್ತೆಗಿಳಿಯಲಿವೆ.
ಬ್ಯಾಂಕ್ ನೌಕರರೂ ಎರಡು ದಿನ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನಲೆಯಲ್ಲಿ ದೇಶಾದ್ಯಂತ ಬಂದ್ ವಾತಾವರಣ ಕಂಡು ಬರುವ ಸಾಧ್ಯತೆಗಳಿವೆ. ಶಾಲಾ ಕಾಲೇಜುಗಳಿಗೆ ಸಂಚಾರ ಸಾಧ್ಯವಾಗದ ಹಿನ್ನಲೆಯಲ್ಲಿ ರಜೆ ಸಾರುವ ಸಾಧ್ಯತೆಗಳಿವೆ.
ಅಂಗಡಿ ಮುಂಗಟ್ಟುಗಳು, ಹೊಟೇಲ್ ಸೇವೆ ಎಂದಿನಂತೆ ಇರಲಿದ್ದು ಬೆಂಗಳೂರಿನಲ್ಲಿ ಮೆಟ್ರೋ ರೈಲುಗಳು ಸಂಚರಿಸಲಿವೆ ಎಂದು ತಿಳಿದು ಬಂದಿದೆ.