ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಯ (Varanasi) ಎರಡು ದೇವಸ್ಥಾನಗಳಿಂದ ಸಾಯಿ ಬಾಬಾ ಮೂರ್ತಿಗಳನ್ನು (Sai Baba Idols) ತೆರವುಗೊಳಿಸಲಾಗಿದ್ದು, ಇದೀಗ ವಿವಾದದ ರೂಪ ಪಡೆದಿದೆ. ಬಡಾ ಗಣೇಶ ದೇವಸ್ಥಾನ ಮತ್ತು ಪುರುಷೋತ್ತಮ ದೇವಸ್ಥಾನದಲ್ಲಿ ಸಾಯಿ ಬಾಬಾ ಮೂರ್ತಿಗಳನ್ನು ತೆರವು ಮಾಡಲಾಗಿದೆ.
ಹಿಂದೂ ರಾಷ್ಟ್ರೀಯತಾವಾದಿ ಸಂಘಟನೆಗಳು ಸಾಯಿ ವಿಗ್ರಹಗಳ ಉಪಸ್ಥಿತಿಯನ್ನು ವಿರೋಧಿಸಿದ್ದವು. ಸಾಯಿ ಬಾಬಾ ಮೂರ್ತಿಗಳು ಹಿಂದೂ ದೇವತೆಗಳಿಗೆ ಸಮರ್ಪಿತವಾದ ದೇವಾಲಯಗಳಿಗೆ ಸಂಬಂಧಿಸಿಲ್ಲ ಎಂದು ಸಂಘಟನೆಗಳು ವಾದಿಸಿವೆ.
ಒತ್ತಡದ ಕಾರಣದಿಂದ ದೇವಾಲಯದ ಆಡಳಿತವು ಸಾಯಿ ಬಾಬಾ ಮೂರ್ತಿಗಳನ್ನು ತೆಗೆದುಹಾಕಲು ಒಪ್ಪಿಕೊಂಡಿತ್ತು. ಧಾರ್ಮಿಕ ಆಚರಣೆಗಳು ಮತ್ತು ಹಿಂದೂ ಆರಾಧನೆಯಲ್ಲಿ ಸಾಯಿ ಬಾಬಾ ಸ್ಥಾನದ ಬಗ್ಗೆ ಚರ್ಚೆಗಳನ್ನು ಇದು ಹುಟ್ಟುಹಾಕಿದೆ.
ಸನಾತನ ರಕ್ಷಕ ದಳದ ಅಭಿಯಾನದ ಭಾಗವಾಗಿ ವಾರಾಣಸಿಯ ಬಡಾ ಗಣೇಶ ದೇವಸ್ಥಾನದಲ್ಲಿರುವ ಸಾಯಿಬಾಬಾ ಪ್ರತಿಮೆಯನ್ನು ತೆಗೆದು ಹಾಕಲಾಗಿದೆ. ಸನಾತನ ಧರ್ಮಕ್ಕೆ ಪವಿತ್ರವಾದ ಜಾಗದಲ್ಲಿ ಸಾಯಿಬಾಬಾ ಆರಾಧನೆಯು ಅನುಚಿತವಾಗಿದೆ ಎಂದು ಆರೋಪಿಸಿ ಗುಂಪಿನ ಸದಸ್ಯರು ಭಾನುವಾರ ರಾತ್ರಿ ಪ್ರತಿಮೆಯನ್ನು ತೆಗೆದು ಹಾಕಿದ್ದಾರೆ.
ಪ್ರತಿ ದಿನ ಸಾವಿರಾರು ಭಕ್ತರು ಭೇಟಿ ನೀಡುವ ಲೋಹಾತಿಯಾದ ಬಡಾ ಗಣೇಶ ದೇವಸ್ಥಾನಕ್ಕೆ ಸೋಮವಾರ ಸನಾತನ ರಕ್ಷಕ ದಳ ಸದಸ್ಯರು ಆಗಮಿಸಿ ಸಭೆ ನಡೆಸಿದ್ದಾರೆ. ಈ ವೇಳೆ, ಗುಂಪು ಐದು ಅಡಿ ಸಾಯಿ ಪ್ರತಿಮೆಯನ್ನು ಬಟ್ಟೆಯಲ್ಲಿ ಸುತ್ತಿ ದೇವಾಲಯದ ಸಂಕೀರ್ಣದಿಂದ ಹೊರತೆಗೆದು ಆವರಣದ ಹೊರಗೆ ಇರಿಸಿದ್ದಾರೆ.