Advertisement

ಕ್ರೀಡಾ ಬಾಂದಳದಲ್ಲಿ ಗೋಚರಿಸುತ್ತಿದೆ ಆಶಾಕಿರಣ

01:26 AM Aug 29, 2021 | Team Udayavani |

ವರ್ಷದ 365 ದಿನವೂ ಒಂದಲ್ಲ ಒಂದು ಕ್ರೀಡೆಯೊಂದಿಗೆ ನಂಟು ಬೆಳೆಸಿಕೊಂಡು, ಇದರ ಗೆಲುವು, ಸೋಲು, ಸಂಭ್ರಮ, ಹತಾಶೆಯಲ್ಲಿ ಮುಳುಗೇಳುತ್ತಲೇ ಇರುವ ಭಾರತೀಯರಿಗೆ ಆಗಸ್ಟ್‌ 29 ವಿಶೇಷ ದಿನ. ಇದು ರಾಷ್ಟ್ರೀಯ ಕ್ರೀಡಾ ದಿನ. ಹಾಕಿ ಮಾಂತ್ರಿಕ ಮೇಜರ್‌ ಧ್ಯಾನ್‌ಚಂದ್‌ ಅವರ ಜನ್ಮದಿನದ ಗೌರವಾರ್ಥ ಕ್ರೀಡೆಯನ್ನು ಹಬ್ಬವನ್ನಾಗಿ ಆಚರಿಸುವ ದಿನ.

Advertisement

ದೇಶದ ಕ್ರೀಡಾ ಸಾಧಕರಿಗೆ ರಾಷ್ಟ್ರಪತಿಗಳು ಖೇಲ್‌ರತ್ನ, ಅರ್ಜುನ, ದ್ರೋಣಾಚಾರ್ಯ ಮೊದಲಾದ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ಗೌರವಿಸುವ ದಿನವೂ ಇದಾಗಿದೆ. ಗತ ವರ್ಷದ ಸಾಧನೆ, ಮುಂಬರುವ ವರ್ಷಗಳ ಸಾಧನೆಗೆ ಸ್ಫೂರ್ತಿಯಾಗುವ ನಿಟ್ಟಿನಲ್ಲಿ ಈ ಪ್ರಶಸ್ತಿಗಳ ಪಾತ್ರ ಬಹಳ ದೊಡ್ಡದು. ಆದರೆ ಈ ಬಾರಿ ಒಲಿಂಪಿಕ್ಸ್‌ ಹಾಗೂ ಪ್ಯಾರಾಲಿಂಪಿಕ್ಸ್‌ ಸಾಧಕರನ್ನೂ ಗಣನೆಗೆ ತೆಗೆದು ಕೊಳ್ಳಲು ನಿರ್ಧರಿಸಿ ದ್ದರಿಂದ ಪ್ರಶಸ್ತಿ ಪ್ರದಾನ ಸಮಾರಂಭ ವಿಳಂಬವಾಗುತ್ತಿದೆ. ಆದರೆ ಕ್ರೀಡಾ ದಿನದ ಆಶಯ, ಶುಭಾಶಯಕ್ಕೇನೂ ಕೊರತೆ ಕಾಡದು.

ಕ್ರೀಡಾ ದಿನವೆಂದರೆ ಕೇವಲ ಹಾಕಿ ಮಾಂತ್ರಿಕ ಧ್ಯಾನ್‌ಚಂದ್‌ ಅವರನ್ನು ಸ್ಮರಿಸಿಕೊಳ್ಳುವುದೇ, ಪ್ರಶಸ್ತಿಗಳನ್ನು ಸ್ವೀಕರಿಸಿ ಪುಳಕಿತರಾಗುವುದೇ ಅಥವಾ ಇದನ್ನು ಒಂದು ದಿನದ ಆಚರಣೆಗಷ್ಟೇ ಸೀಮಿತಗೊಳಿಸಿ ಮತ್ತೆ ಎಂದಿನಂತೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದೇ… ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಒದಗಿಸುವ ದಿನವೂ ಇದಾಗಬೇಕಿರುವುದು ಇಂದಿನ ತುರ್ತು ಅಗತ್ಯ. ಕ್ರೀಡಾವಲೋಕನದಂತೆ ದೇಶದ ಕ್ರೀಡಾರಂಗದ ಭವಿಷ್ಯ, ಬೆಳವಣಿಗೆಯ ಅವಲೋಕನಕ್ಕೂ ಇದು ವೇದಿಕೆಯಾಗಬೇಕಿದೆ.

ಕ್ರೀಡಾ ಪ್ರಗತಿಯ ಚಿತ್ತಾರ
ಶಾಲಾ ಮಟ್ಟದಲ್ಲಿ ಚಿಗುರೊಡೆಯುವ ಕ್ರೀಡಾ ಸಾಧನೆಯ ಮುಂದಿನ ಪಥ ಭಾರತದಂಥ ದೇಶದಲ್ಲಿ ನಿಜಕ್ಕೂ ದುರ್ಗಮ. ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರುವ ಹಾದಿಯಲ್ಲಿ ಕಷ್ಟ ಕಾರ್ಪಣ್ಯಗಳ ಸರಮಾಲೆಯೇ ಎದುರಾಗುತ್ತದೆ. ಸೂಕ್ತ ಕೋಚ್‌, ಗಾಡ್‌ಫಾದರ್‌, ಕ್ರೀಡಾ ಕೇಂದ್ರಗಳು ಹಾಗೂ ಸರಕಾರಗಳ ಪ್ರೋತ್ಸಾ ಹವಿಲ್ಲದೇ ಹೋದರೆ ಅಷ್ಟೂ ಪ್ರಯತ್ನ ವ್ಯರ್ಥ!

ಆದರೆ ಕಳೆದ ಕೆಲವು ವರ್ಷಗಳಿಂದ ಭಾರತದ ಕ್ರೀಡಾ ನಕಾಶೆಯಲ್ಲಿ ಪ್ರಗತಿಯ ಚಿತ್ತಾರವೊಂದು ಗೋಚರಿಸಿದೆ. ಕೇಂದ್ರ, ರಾಜ್ಯ ಸರಕಾರಗಳು, ಕ್ರೀಡಾ ಕೇಂದ್ರಗಳು, ಪ್ರಾಯೋಜಕರೆಲ್ಲ ದೇಶದ ಕ್ರೀಡಾ ಬೆಳವಣಿಗೆಗೆ ನೀಡುತ್ತಿರುವ ಪ್ರೋತ್ಸಾಹ ಗಮನಾರ್ಹ ಮಟ್ಟದಲ್ಲಿದೆ. ಇದರ ಫ‌ಲಿತಾಂಶವೂ ಟೋಕಿಯೊ ಒಲಿಂಪಿಕ್ಸ್‌ ಮೂಲಕ ಗೋಚರಕ್ಕೆ ಬರಲಾರಂಭಿಸಿದೆ. ಆದರೆ ಪದಕ ಗಳಿಕೆಯಲ್ಲಿ ದೊಡ್ಡ ಪವಾಡವೇನೂ ಸಂಭವಿಸಿಲ್ಲ. ನಮ್ಮ ಮಿತಿಯೇ 10 ಪದಕಗಳಾಗಿದ್ದವು. “ಒಲಿಂಪಿಕ್ಸ್‌ ನಲ್ಲಿ ಭಾಗವಹಿಸುವುದೇ ಗೌರವ’ ಎಂಬ ಮಾತು ಈಗಿಲ್ಲ, ಬದಲು ಎಲ್ಲೆಡೆ ವೃತ್ತಿಪರತೆಯ ಮಾತು ಕೇಳಿಬರುತ್ತಿದೆ. ಹೀಗಾಗಿ ಪದಕ ಗಳಿಕೆಗೆ ಪ್ರಾಶಸ್ತ್ಯ ಬಂದಿದೆ. ಇಲ್ಲಿ ಭಾರತದ ಸಾಧನೆ ನಿರಾಶೆ ಮೂಡಿಸುತ್ತದೆ.

Advertisement

ಈ ಹತ್ತರ ಗುರಿ ಮುಂದಿನ ವರ್ಷಗಳಲ್ಲಿ ದುಪ್ಪಟ್ಟಾಗಬೇಕು. ಅದಕ್ಕೆ ಈಗಿಂದಲೇ ಸಿದ್ಧತೆ, ಯೋಜನೆ ರೂಪುಗೊಳ್ಳಬೇಕು. ಇದಕ್ಕೆ ರಾಷ್ಟ್ರೀಯ ಕ್ರೀಡಾ ದಿನವೇ ಸೂಕ್ತ ಮತ್ತು ಶುಭ ಮುಹೂರ್ತವಾಗಬೇಕು.

ಖೇಲೋ ಇಂಡಿಯಾ
“ಖೇಲೋ ಇಂಡಿಯಾ’ ಘೋಷವಾಕ್ಯ ದೊಂದಿಗೆ ಕೇಂದ್ರ ಸರಕಾರ ಸಾಕಷ್ಟು ಬಜೆಟ್‌ ಅನ್ನು ಕ್ರೀಡಾಕ್ಷೇತ್ರಕ್ಕೆ ಮೀಸಲಿರಿಸುತ್ತಿದೆ. ಆದರೆ ಒಲಿಂಪಿಕ್ಸ್‌ ವರ್ಷದಲ್ಲಿ ಈ ಬಜೆಟ್‌ ಕಡಿಮೆ ಯಾಗಿದೆ ಎಂಬ ಆರೋಪವಿದೆ. 2019ರಲ್ಲಿ 300 ಕೋ.ರೂ.ಗಳನ್ನು ರಾಷ್ಟ್ರೀಯ ನ್ಪೋರ್ಟ್ಸ್ ಫೆಡರೇಶನ್‌ಗೆ ಒದಗಿಸಲಾಗಿತ್ತು. 2020ರಲ್ಲಿ ಅದು 245ಕೋ.ರೂ.ಗೆ ಇಳಿದಿತ್ತು. ಕ್ರೀಡಾ ಪಟು ಗಳಿಗೆ ಸಿಗುವ ಪ್ರೋತ್ಸಾಹಧನದಲ್ಲೂ ಇಳಿಕೆಯಾ ಗಿದೆ. 2019ರಲ್ಲಿ 111 ಕೋ.ರೂ.ಗಳಾದರೆ, 2020 ರಲ್ಲಿ ದಕ್ಕಿದ್ದು 41 ಕೋಟಿ ರೂ. ಮಾತ್ರ. ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಮೊತ್ತವನ್ನೂ 77.18ಕೋ.ರೂ.ಬದಲು 50 ಕೋ.ರೂ.ಗೆ ಇಳಿಸಿತ್ತು!
ದೇಶದ ಕ್ರೀಡಾ ಪ್ರಾಧಿಕಾರದ ಅಡಿಯಲ್ಲಿ ದೇಶದ 15 ಸಾವಿರ ಕ್ರೀಡಾಳುಗಳಲ್ಲಿ 10 ಸಾವಿರ ಮಂದಿ ಪೋಷಣೆ ಪಡೆಯುತ್ತಿದ್ದಾರೆ. ಬಜೆಟ್‌ ಕಡಿತದಿಂದ ಇವರ ತರಬೇತಿಗೆ ಸಮಸ್ಯೆಯಾದೀತು ಎಂಬ ಆತಂಕವಿದೆ.

ಮಹತ್ವಾಕಾಂಕ್ಷೆಯ ಯೋಜನೆಗಳು
ಬಜೆಟ್‌ ಕಡಿತಕ್ಕೆ ಪ್ರತಿಯಾಗಿ ಕೇಂದ್ರದ ಕೆಲವು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಉಲ್ಲೇಖೀಸ ಬಹುದು. ಖೇಲ್‌ ಅಭಿಯಾನ್‌, ಅರ್ಬನ್‌ ನ್ಪೋರ್ಟ್ಸ್ ಇನ್‌ಫ್ರಾಸ್ಟ್ರಕ್ಚರ್‌ ಸ್ಕೀಮ್‌ ಹಾಗೂ ರಾಷ್ಟ್ರೀಯ ಕ್ರೀಡಾ ಪ್ರತಿಭಾ ಶೋಧನಾ ವ್ಯವಸ್ಥೆ ಎಂಬ ಮೂರು ಯೋಜನೆಗಳನ್ನು ಸೇರಿಸಿ “ಖೇಲೋ ಭಾರತ್‌’ ಎಂದಿದೆ. ಅದಕ್ಕೆ ಬರೋಬ್ಬರಿ 892.42 ಕೋಟಿ ರೂ. ಕೊಟ್ಟಿದೆ. 2016ರಿಂದಲೇ ಈ ಯೋಜನೆ ಜಾರಿಯಲ್ಲಿದೆ. ಪವಾಡ ಇನ್ನಷ್ಟೇ ಸಂಭವಿಸಬೇಕಿದೆ.

ಖೇಲೋ ಇಂಡಿಯಾ ಅಂಡರ್‌-17 ಹಾಗೂ ಅಂಡರ್‌-21 ವ್ಯಾಪ್ತಿಯ ಕ್ರೀಡಾ ಪ್ರತಿಭೆಗಳನ್ನು ಹುಡುಕುವ ಗುರಿ ಹೊಂದಿದೆ. ಆದರೆ ಚೀನ, ರಷ್ಯಾದಂಥ ರಾಷ್ಟ್ರಗಳಲ್ಲಿ 6 ವರ್ಷದಿಂದಲೇ ಪ್ರತಿಭಾನ್ವೇಷಣೆ ಆರಂಭವಾಗುತ್ತದೆ. ಯುರೋಪ್‌ನ ದೇಶಗಳಲ್ಲಿ 10 ವರ್ಷದಿಂದಲೇ ಜಿಮ್ನಾಸ್ಟಿಕ್‌, ಈಜು ತರಬೇತಿ ಮೊದಲ್ಗೊಳ್ಳುತ್ತದೆ.

ಅಂದಮೇಲೆ ಭಾರತದಲ್ಲಿ ಕ್ರೀಡಾ ಪ್ರತಿಭೆ ಗಳನ್ನು ಪತ್ತೆಹಚ್ಚುವಲ್ಲಿ ವಿಳಂಬ ಆಗುತ್ತಿದೆ ಎಂಬುದು ಸ್ಪಷ್ಟ. ಇದಕ್ಕೆ ನಮ್ಮ ಪ್ರಾಥಮಿಕ ವ್ಯವಸ್ಥೆಯ ದೋಷವೇ ಕಾರಣ. 2018ರ ಕ್ರೀಡಾ ಸರ್ವೇ ಪ್ರಕಾರ, ಪರಿಣತ ದೈಹಿಕ ಶಿಕ್ಷಣ ಶಿಕ್ಷಕರಿರುವುದು ದೇಶದ ಶೇ. 20ಕ್ಕಿಂತ ಕಡಿಮೆ ಪ್ರಾಥಮಿಕ ಶಾಲೆಗಳಲ್ಲಿ ಮಾತ್ರ!

ಇನ್ನಷ್ಟು ಎತ್ತರಕ್ಕೆ “ಟಾಪ್ಸ್‌’
“ಟಾಪ್ಸ್‌” (ಟಾರ್ಗೆಟ್‌ ಒಲಿಂಪಿಕ್ಸ್‌ ಪೋಡಿಯಂ ಸ್ಕೀಮ್‌) ಕೂಡ ಕೇಂದ್ರದ ಮಹತ್ವಾಕಾಂಕ್ಷೆಯ ಯೋಜನೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಸಂಭಾವ್ಯ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ವಿದೇಶಿ ತರಬೇತಿ ಸಹಿತ ಸಕಲ ಸೌಲಭ್ಯ ಒದಗಿಸಿ ಒಲಿಂಪಿಕ್ಸ್‌ಗೆ ಅಣಿಗೊಳಿಸುವುದು ಇದರ ಪ್ರಮುಖ ಉದ್ದೇಶ.

2018-19ರಿಂದ ಕಳೆದ ಜುಲೈ ಅಂತ್ಯದ ತನಕ ಇದಕ್ಕಾಗಿ ಕೇಂದ್ರ ಸರಕಾರ ವ್ಯಯಿಸಿದ್ದು ಬರೋಬ್ಬರಿ 765 ಕೋಟಿ ರೂ.. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ವಲ್ಪ ಮಟ್ಟಿಗೆ ಇದರ ಪರಿಣಾಮ ಗೋಚರಿಸಿದೆ. ಆದರೆ ಇಷ್ಟೊಂದು ದೊಡ್ಡ ಮಟ್ಟದ ಯೋಜನೆಗೆ ಪದಕ ಪ್ರಯತ್ನ ಸಾಲದು. ಪ್ಯಾರಿಸ್‌ ಒಲಿಂಪಿಕ್ಸ್‌ ವೇಳೆ ಕನಿಷ್ಠ 25 ಪದಕಗಳ ಯೋಜನೆ ರೂಪಿಸಿದರೆ ಹೆಚ್ಚಿನ ಯಶಸ್ಸು ಶತಃಸಿದ್ಧ.
ಭಾರತದ ಜನಸಂಖ್ಯೆಯಲ್ಲಿ ಬಡ ವರ್ಗದ ಪ್ರತಿನಿಧಿಗಳೇ ಬಹುಸಂಖ್ಯಾಕರು. ಆದರೆ ಇವರು ಕ್ರೀಡಾ ಪ್ರತಿಭೆ ಹುಡುಕಾಟದ ವೇಳೆ ಗೋಚರಕ್ಕೇ ಬರುವುದಿಲ್ಲ. ಅರ್ಹತೆ ಪಡೆದವರನ್ನೆಲ್ಲ ಒಲಿಂಪಿ ಕ್ಸ್‌ಗೆ ಕಳುಹಿಸಬೇಕು ಎಂಬ ಧ್ಯೇಯಕ್ಕಿಂತ ಪದಕ ಗಳ ಸಂಭಾವ್ಯರನ್ನು ಈಗಲೇ ಗುರುತಿಸಿ, ಅವ ರನ್ನೂ ಸಂಪೂರ್ಣ ತರಬೇತಿಯ ಗರಡಿಯಲ್ಲಿ ಪಳಗಿಸುವ ಕೆಲಸ ಆಗಬೇಕು.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲೂ ನಾವು ನೀರಜ್‌ ಚೋಪ್ರಾ ಅವರನ್ನೇ ನಂಬಿ ಕುಳಿತುಕೊಳ್ಳಬಾರದು. ಬೇರೆ ಬೇರೆ ಕ್ರೀಡೆಗಳಲ್ಲಿ ಇನ್ನೂ ಹೆಚ್ಚಿನ ಚೋಪ್ರಾ ಗಳನ್ನು ಹುಡುಕಿ ಅವರನ್ನು ಪದಕ ಬೇಟೆಗೆ ಸಜ್ಜುಗೊಳಿಸಬೇಕು. ಆಗಲೇ “ಟಾಪ್ಸ್‌ ‘ನಂಥ ಯೋಜನೆ ಸಾರ್ಥಕ್ಯ ಕಾಣುವುದು.

– ಪ್ರೇಮಾನಂದ ಪ್ರಸಾದ್‌

 

Advertisement

Udayavani is now on Telegram. Click here to join our channel and stay updated with the latest news.

Next