Advertisement

ತಾಯಿ ಮರಣ ಪ್ರಮಾಣ ಇಳಿಕೆ: ರಾಜ್ಯಕ್ಕೆ 8ನೇ ಸ್ಥಾನ

10:30 PM Apr 10, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಹೆರಿಗೆ ವೇಳೆ ಸಂಭವಿಸುವ ತಾಯಿ ಮರಣ ಪ್ರಮಾಣ ಇಳಿಮುಖವಾಗುತ್ತಿದ್ದು, ಕೇಂದ್ರ ಆರೋಗ್ಯ ಮಂತ್ರಾಲಯದ ತಾಯಿ ಮತ್ತು ಮಕ್ಕಳ ಆರೋಗ್ಯ ವಿಭಾಗ 2022ರ ಮಾರ್ಚ್‌ನಲ್ಲಿ ಬಿಡುಗಡೆ ಮಾಡಿದ ಎಸ್‌ಆರ್‌ಎಸ್‌ (ಸ್ಯಾಂಪಲ್‌ ರಿಜಿಸ್ಟ್ರೇಷನ್‌ ಸಿಸ್ಟಮ್ ) ನ ಕಡಿಮೆ ತಾಯಿ ಮರಣ ಪ್ರಮಾಣ ಸಂಭವಿಸುವ ರಾಜ್ಯಾವಾರು ಪಟ್ಟಿಯಲ್ಲಿ ಕರ್ನಾಟಕ 8ನೇ ಸ್ಥಾನ ಪಡೆದುಕೊಂಡಿದೆ.

Advertisement

ಒಂದು ಲಕ್ಷಕ್ಕಿಂತ ಹೆಚ್ಚು ಹೆರಿಗೆ ಪ್ರಕರಣಗಳು ನಡೆಯುವ ರಾಜ್ಯಗಳನ್ನು ಈ ಸಮೀಕ್ಷೆಗೆ ಪರಿಗಣಿಸಲಾಗಿದೆ. ಹೀಗಾಗಿ 19 ರಾಜ್ಯಗಳಿಗೆ ಸಂಬಂಧಿಸಿದಂತೆ ಮಾತ್ರ ಸಮೀಕ್ಷೆ ನಡೆಸಿ ವರದಿ ಬಿಡುಗಡೆ ಮಾಡಲಾಗಿದೆ. ಕರ್ನಾಟಕದಲ್ಲಿ ಜನಿಸುವ 1,000 ಮಕ್ಕಳಲ್ಲಿ 2015-2017ರಲ್ಲಿ 97, 2016-18ರಲ್ಲಿ 92, 2017-19ರಲ್ಲಿ 83 ತಾಯಂದಿರು ಮೃತ ಪಟ್ಟಿದ್ದಾರೆ. ಕಳೆದ ಸಾಲಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಈ ಬಾರಿ ಶೇ. 9.78ಕ್ಕೆ ಇಳಿಕೆಯಾಗಿದೆ. ಕೇರಳ 30, ಮಹಾರಾಷ್ಟ್ರ 38, ತೆಲಂಗಾಣ 56, ಆಂಧ್ರ ಪ್ರದೇಶ 58, ಜಾರ್ಖಾಂಡ್‌ 61, ಗುಜರಾತ್‌ನಲ್ಲಿ 70 ಮಂದಿ ಮಹಿಳೆಯರು ಪ್ರಸವದ ಹಾಗೂ ಗರ್ಭಾವಸ್ಥೆ ಸಂದರ್ಭ ಮೃತಪಟ್ಟಿದ್ದಾರೆ.

ಸಾವಿನ ಅನುಪಾತ ಕಡಿಮೆ
ಗರ್ಭಾವಸ್ಥೆಯಲ್ಲಿ ಮಹಿಳೆಯು ಸತ್ತಾಗ ಅಥವಾ ಹೆರಿಗೆಯ 42 ದಿನಗಳ ಬಳಿಕ ಮಹಿಳೆ ಮೃತಪಟ್ಟರೆ ತಾಯಿ ಮರಣ ಎನ್ನುವುದಾಗಿ ಉಲ್ಲೇಖೀಸಲಾಗುತ್ತದೆ. ರಾಜ್ಯದಲ್ಲಿ ಗರ್ಭಿಣಿಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ರಾಜ್ಯ ಆರೋಗ್ಯ ಇಲಾಖೆ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳಿಂದಾಗಿ ಹೆರಿಗೆ ಸಂದರ್ಭ ತಾಯಿಯ ಮರಣದ ಅನುಪಾತ ಸಾಕಷ್ಟು ಕಡಿಮೆಯಾಗುತ್ತಿದೆ.

ತಾಯಿ ಮರಣ ಕಾರಣ?
ಪ್ರಸವ ಅನಂತರದ ಅತಿಯಾದ ರಕ್ತಸ್ರಾವ, ಅಧಿಕ ರಕ್ತದೊತ್ತಡ, ಎಕ್ಲಾಂಪ್ಸಿಯ, ಸೋಂಕಿಗೆ ತುತ್ತಾಗಿ ತಾಯಿಯ ಮರಣ ಸಂಭವಿಸುತ್ತದೆ. ಜತೆಗೆ ಅನಪೇಕ್ಷಿತ ಗರ್ಭಪಾತ ಹೊಂದಿರುವ ಮಹಿಳೆಯರಲ್ಲಿ ಅಸುರಕ್ಷಿತ ಗರ್ಭಪಾತ, ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಾವಿನ ಪ್ರಮುಖ ಕಾರಣವಾಗಿದೆ. ಪರೋಕ್ಷವಾಗಿ ಎಚ್‌ಐವಿ ಮತ್ತು ಹೃದಯ ಖಾಯಿಲೆ, ಮಧುಮೇಹ ಮತ್ತು ರಕ್ತಹೀನತೆ ಸೇರಿದಂತೆ ಹಲವು ಕಾರಣಗಳಿಂದ ತಾಯಿ ಮರಣ ಹೊಂದುವ ಸಾಧ್ಯತೆಗಳಿವೆ.

ಶೇಕಡಾವಾರು ಸಾವು
ಕೇಂದ್ರ ಆರೋಗ್ಯ ಮಂತ್ರಾಲಯದ ಎಸ್‌ಆರ್‌ಎಸ್‌ನ ವರದಿಯಲ್ಲಿ ಪ್ರಸವದ ಸಂದರ್ಭದಲ್ಲಿ ಮೃತಪಡುವವರಲ್ಲಿ 15-19 ವರ್ಷದೊಳಗಿನವರು ಶೇ. 6, 20ರಿಂದ 24 ವರ್ಷದೊಳಗಿನವರು ಶೇ. 32, 25ರಿಂದ 29ವರ್ಷದೊಳಗಿನ ಶೇ. 31, 30-34 ವರ್ಷದೊಳಗಿನ ಶೇ. 18, 35ರಿಂದ 39 ವರ್ಷದೊಳಗಿನ ಶೇ. 8, 40ರಿಂದ 44 ವರ್ಷದೊಳಗಿನ ಶೇ. 3 ಹಾಗೂ 45ರಿಂದ 49 ವರ್ಷದೊಳಗಿನ ಶೇ. 2ರಷ್ಟು ಮಹಿಳೆಯರು ಮೃತಪಟ್ಟಿದ್ದಾರೆ.

Advertisement

ಹೈರಿಸ್ಕ್ ಪ್ರಗ್ನೆನ್ಸಿಗಳಿಂದ ತಾಯಿಯ ಮರಣಕ್ಕೆ ಕಾರಣವಾಗಬಹುದು. ಈ ನಿಟ್ಟಿನಲ್ಲಿ ಮಹಿಳೆಯರು ಗರ್ಭಿಣಿಯಾಗುವ ಮೊದಲು ಕೌನ್ಸಿಲಿಂಗ್‌ ಒಳಗಾಗುವುದು ಉತ್ತಮ. ಗರ್ಭಿಣಿಯಾದ ಸಂದರ್ಭ ಉತ್ತಮ ಆರೈಕೆ ಹಾಗೂ ತುರ್ತು ವೈದ್ಯಕೀಯ ಚಿಕಿತ್ಸೆಯು ಅಗತ್ಯವಿದೆ. ನಿಯಮಿತ ವ್ಯಾಯಾಮ, ಪೌಷ್ಠಿಕ ಆಹಾರಗಳನ್ನು ಗರ್ಭಿಣಿಯರು ಸೇವನೆ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
– ಡಾ| ರಮ್ಯಾಶಂಕರ್‌, ಪ್ರಸೂತಿ ತಜ್ಞೆ

-ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next