Advertisement

ರಾಷ್ಟ್ರೀಯ ವಯೋಶ್ರೇಷ್ಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಈಶ್ವರಚಂದ್ರ ಚಿಂತಾಮಣಿ ನಿಧನ

08:13 AM Aug 09, 2021 | Team Udayavani |

ವಿಜಯಪುರ : ಶ್ರೇಷ್ಠ ಶಿಕ್ಷಕ ರಾಷ್ಟ್ರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ಹಿರಿಯ ಸಾಹಿತಿ ಈಶ್ವರಚಂದ್ರ ಚಿಂತಾಮಣಿ (96) ಸೋಮವಾರ ನಸುಕಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ನಗರದಲ್ಲಿ ಇರುವ ತಮ್ಮ ಮನೆಯಲ್ಲಿ ಬೆಳಗಿನ 3 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.

Advertisement

ಮೃತರು ಪತ್ನಿ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ‌ ಕನ್ನಡ ವಿಭಾಗದ ಡೀನರಾಗಿರುವ ಡಾ.ಮಹೇಶ ಚಿಂತಾಮಣಿ ಸೇರಿ ಇಬ್ಬರು ಪುತ್ರರು, ಮೂವರು ಪುತ್ರಿಯರು,  ಮೊಮ್ಮಕ್ಕಳು, ಸಾಹಿತ್ಯದ ಅಪಾರ ಬಳಗವನ್ನು ಅಗಲಿದ್ದಾರೆ.

ಹಲಸಂಗಿ ಗೆಳೆಯರ ಬಳಗದ ಸದಸ್ಯರಾಗಿದ್ದ ಈಶ್ವರಚಂದ್ರ ಚಿಂತಾಮಣಿ ಅವರು, ಜಾನಪದ ಸಂಶೋಧನೆ, ಸಂಗ್ರಹ, ವಿಶೇಷವಾಗಿ ಮಕ್ಕಳ ಸಾಹಿತ್ಯದ ವೈವಿಧ್ಯಮಯ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ.ರಾಜ್ಯದ ನವ ಸಾಕ್ಷರರಿಗಾಗಿ ಇವರು ರಚಿಸಿದ ಕಥೆಗಳು, ನಾಟಕಗಳು ಪಠ್ಯವಾಗಿದ್ದು, ರಾಜ್ಯದ ಬಹುತೇಕ ಎಲ್ಲ ಆಕಾಶವಾಣಿ ಕೇಂದ್ರಗಳಲ್ಲಿ ಪ್ರಸಾರವಾಗಿವೆ.

ಈಶ್ವರಚಂದ್ರರ ಶಿಕ್ಷಣ ಸೇವೆಗೆ ರಾಜ್ಯ, ರಾಷ್ಟ್ರೀಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ದಕ್ಕಿದ್ದರೆ, ಸಾಹಿತ್ಯ ಹಾಗೂ ಸಂಶೋಧನೆಗಾಗಿ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಕಳೆದ ಮುರು ವರ್ಷದ ಹಿಂದೆ ಕೇಂದ್ರ ಸರ್ಕಾರದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ರಾಷ್ಟ್ರೀಯ ವಯೋಶ್ರೇಷ್ಠ ಪ್ರಶಸ್ತಿಗೂ ಚಿಂತಾಮಣಿ ಅವರು ಭಾಜನರಾಗಿದ್ದರು.

Advertisement

ಮೃತ ಈಶ್ವರಚಂದ್ರ ಚಿಂತಾಮಣಿ ಅವರು ವೈದ್ಯಕೀಯ ಸಂಶೋಧನೆಗಾಗಿ ನಗರದ ಬಿಎಲ್ ಡಿಇ ಸಂಸ್ಥೆಯ ಬಿ.ಎಂ.ಪಾಟೀಲ ವೈದ್ಯಕೀಯ ಸಂಶೋಧನಾ ಕಾಲೇಜಿಗೆ ತಮ್ಮ ದೇಹ ದಾನದ ವಾಗ್ದಾನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಇಚ್ಛಾನುಸಾರ ದೇಹವನ್ನು ಸೋಮವಾರ ಬೆ.11 ಕ್ಕೆ ವೈದ್ಯಕೀಯ ಕಾಲೇಜಿಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಮೃತರ ಪುತ್ರ ಸಾಹಿತಿ ಡಾ.ಮಹೇಶ ಚಿಂತಾಮಣಿ ತಿಳಿಸಿದ್ದಾರೆ.

ಗಣ್ಯರ ಸಂತಾಪ : ಹಿರಿಯ ಸಾಹಿತಿ ಈಶ್ವರಚಂದ್ರ ಚಿಂತಾಮಣಿ ಅವರ ನಿಧನಕ್ಕೆ ಮಾಜಿ ಸಚಿವರಾದ ಶಾಸಕ ಡಾ.ಎಂ.ಬಿ.ಪಾಟೀಲ, ಬಸವನ ಬಾಗೇವಾಡಿ ಶಾಸಕರಾದ ಮಾಜಿ ಸಚಿವ ಶಿವಾನಂದ ಪಾಟೀಲ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಶರಣ ಸಾಹಿತ್ಯ ಪರಿಷತ್ತ ಜಿಲ್ಲಾಧ್ಯಕ್ಷ ಜಂಬುನಾಥ ಕಂಚ್ಯಾಣಿ, ಡಾ.ನಾರಾಯಣ ಪವಾರ ಸೇರಿದಂತೆ ಗಣ್ಯರು ಈಶ್ವರಚಂದ್ರ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next