Advertisement

ರಾಷ್ಟ್ರ ಮಟ್ಟದ ಹಾಕಿ ಆಟಗಾರನ ಶವ ಪತ್ತೆ; ಆತ್ಮಹತ್ಯೆ, ಕೊಲೆ?

11:18 AM Dec 06, 2017 | Team Udayavani |

ಹೊಸದಿಲ್ಲಿ : ಪಶ್ಚಿಮ ದಿಲ್ಲಿಯ ಸುಭಾಶ್‌ ನಗರ ನಿವಾಸಿಯಾಗಿರುವ, ರಾಷ್ಟ್ರ ಮಟ್ಟದ ಹಾಕಿ ಆಟಗಾರ,  22ರ ಹರೆಯದ ರಿಜ್ವಾನ್‌ ಖಾನ್‌, ತನ್ನ ಸ್ನೇಹಿತೆಯ ಮನೆಯ ಎದುರು ನಿಲ್ಲಿಸಿದ್ದ ತನ್ನ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

Advertisement

ಜಾಮಿಯಾ ಮಿಲಿಯಾ ಇಸ್ಲಾಮಿಯಾ ಕಾಲೇಜಿನಲ್ಲಿ ಎರಡನೇ ವರ್ಷದ ಕಲಾ ಪದವಿ ಶಿಕ್ಷಣದ ವಿದ್ಯಾರ್ಥಿಯಾಗಿರುವ ರಿಜ್ವಾನ್‌, 16ರ ಕೆಳಹರೆಯದವರ ಹಾಕಿ ಪಂದ್ಯಾವಳಿಗಳಲ್ಲಿ ದಿಲ್ಲಿಯನ್ನು ಪ್ರತಿನಿಧಿಸಿದ್ದಾನೆ.

ಪೊಲೀಸರು ರಿಜ್ವಾನ್‌ ಸಾವನ್ನು ಆತ್ಮಹತ್ಯೆ ಎಂದು ಕರೆದಿದ್ದಾರೆ; ಆದರೆ ರಿಜ್ವಾನ್‌ನ ಮನೆಯವರು ಇದೊಂದು ಕೊಲೆ ಕೃತ್ಯವೆಂದು ಆರೋಪಿಸಿದ್ದಾರೆ.

ಪೊಲೀಸರು ಘಟನೆಯ ವಿವರ ನೀಡಿರುವ ಪ್ರಕಾರ ರಿಜ್ವಾನ್‌ ಖಾನ್‌, ಹಾಕಿ ಆಟಗಾರ್ತಿಯಾಗಿರುವ ತನ್ನ ಸ್ನೇಹಿತೆಯನ್ನು ಕಾಣಲು ಮಂಗಳವಾರ ಸಂಜೆ ಆಕೆಯ ಮನೆಗೆ ಹೋಗಿದ್ದಾನೆ; ಅಲ್ಲಿ ಆತ ಆಕೆಯ ಸೋದರ ಸಂಬಂಧಿಯನ್ನು ಭೇಟಿಯಾಗಿದ್ದಾನೆ. ರಿಜ್ವಾನ್‌ ತನ್ನ ಸ್ನೇಹಿತೆಯ ಮನೆಯಲ್ಲಿ ಹಣ ಹಾಗೂ ತನ್ನ ಸೆಲ್‌ ಫೋನ್‌ ಇದ್ದ ಬ್ಯಾಗನ್ನು ಬಿಟ್ಟಿದ್ದಾನೆ. ರಾತ್ರಿ ಸುಮಾರು 10.30ರ ಹೊತ್ತಿಗೆ ಸ್ನೇಹಿತೆಯ ಮನೆ ಮುಂದೆ ನಿಲ್ಲಿಸಿಟ್ಟಿದ್ದ  ತನ್ನ ಸ್ವಿಫ್ಟ್ ಕಾರಿನಲ್ಲಿ ಗುಂಡೆಸೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರಿಜ್ವಾನ್‌ ಖಾನ್‌ ತಂದೆ ಹೇಳುವ ಪ್ರಕಾರ “ನಾನು ನನ್ನ ಮಗನಿಗೆ ಬೈಕ್‌  ಕೊಳ್ಳಲು 2 ಲಕ್ಷ ರೂ. ನಗದು ಕೊಟ್ಟಿದ್ದೆ. ನನ್ನ ಮಗನನ್ನು ಸೆಲ್‌ ಫೋನ್‌ ಮೂಲಕ ಸಂಪರ್ಕಿಸಲು ನಾನು ಯತ್ನಿಸಿದೆ; ಆದರೆ ಆತನ ಫೋನ್‌ ಸ್ವಿಚ್‌ ಆಫ್ ಆಗಿತ್ತು”. 

Advertisement

“ಅನಂತರ ನಾನು ಆತನ ಇನ್ನೊಂದು ಫೋನ್‌ಗೆ ಕರೆ ಮಾಡಿದೆ. ಹುಡುಗಿಯೊಬ್ಬರು ಕರೆ ಸ್ವೀಕರಿಸಿದಳು; ಆದರೆ ಆಕೆ ತನ್ನ ಹೆಸರು, ವಿಳಾಸ ನನಗೆ ತಿಳಿಸಲಿಲ್ಲ. ಅನಂತರ ಆ ಹುಡುಗಿಯ ತಂದೆ ಫೋನ್‌ ಕರೆಯನ್ನು ಸ್ವೀಕರಿಸಿದರು ಮತ್ತು ಅವರು ತನ್ನ ವಿಳಾಸವನ್ನು ನನಗೆ ಕೊಟ್ಟರು”.

ಪೊಲೀಸ್‌ ಡೆಪ್ಯುಟಿ ಕಮಿಶನರ್‌ (ದಕ್ಷಿಣ) ರೋಮಿಲ್‌ ಬಾನಿಯಾ ಅವರು, “ಮೃತ ರಿಜ್ವಾನ್‌ ಶವದ ಬಲಗೈಯಲ್ಲಿ ನಾಡ ಪಿಸ್ತೂಲ್‌ ಒಂದು ನಮಗೆ ಸಿಕ್ಕಿದೆ. ಶವದ ತಲೆಯಲ್ಲಿ ಗುಂಡೇಟು ಆಗಿರುವುದು ಕಂಡು ಬಂದಿದೆ. ಆದರೆ ಸ್ಥಳದಲ್ಲಿ ನಮಗೆ ಯಾವುದೇ ಡೆತ್‌ ನೋಟ್‌ ಸಿಕ್ಕಿಲ್ಲ” ಎಂದು ಹೇಳಿದ್ದಾರೆ.

ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಭೋಪಾಲ್‌ ಪಂದ್ಯಾವಳಿಗೆಂದು ಹೋಗಿರುವ ರಿಜ್ವಾನ್‌ ಖಾನ್‌ನ ಸ್ನೇಹಿತರು ಮತ್ತು ಕಾಲನಿ ನಿವಾಸಿಗಳನ್ನು ಕೂಡ ನಾವು ಪ್ರಶ್ನಿಸಲಿದ್ದೇವೆ ಎಂದು ಬಾನಿಯಾ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next