ಹಾರಾಡಿ: ಹೆತ್ತವರು ಅತಿಯಾದ ಆಕಾಂಕ್ಷೆ, ಆಶೋತ್ತರಗಳು ವಿದ್ಯಾರ್ಥಿಗಳಿಗೆ ಹೊರೆಯಾಗುವಂತಹ ಒತ್ತಡ ಒಳಿತಲ್ಲ. ವಿಜ್ಞಾನ, ತಂತ್ರಜ್ಞಾನಗಳ ಬಳಕೆ ಜತೆಗೆ ಮಕ್ಕಳು ಮಾನವೀಯ ಮೌಲ್ಯ ಅಳವಡಿಸಿಕೊಳ್ಳುವಂತೆ ಪ್ರಯತ್ನಿಸೋಣ ಎಂದು ವಿಟ್ಠಲ ಪ.ಪೂ. ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ರಾಧಾಕೃಷ್ಣ ಭಟ್ ನುಡಿದರು.
ಹಾರಾಡಿ ಸ.ಹಿ.ಪ್ರಾ. ಶಾಲೆಯಲ್ಲಿ ಜರಗಿದ ರಾಷ್ಟ್ರೀಯ ಆವಿಷ್ಕಾರ ಅಭಿಯಾನದ ವಿಜ್ಞಾನ ಮತ್ತು ಗಣಿತ ಶಿಕ್ಷಕರ ತರಬೇತಿ ಕಾರ್ಯಾಗಾರ ಹಾಗೂ ವಿಜ್ಞಾನ ಮತ್ತು ಗಣಿತ ಮಾದರಿಗಳ ಪ್ರದರ್ಶನ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ನಮ್ಮ ಮಕ್ಕಳು ನಮ್ಮೆಲ್ಲರ ಕನಸಿನ ಪ್ರತಿರೂಪಗಳು. ಅವರನ್ನು ಸಹಜ ವಿಕಾಸದೆಡೆಗೆ ನಡೆಸುವ ಜವಾಬ್ದಾರಿ ನಮ್ಮದಾಗಲಿ ಎಂದು ಅವರು ನುಡಿದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ದಿನೇಶ್ ಮಾಚಾರ್ ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನದ ಕುರಿತಾದ ಆಸಕ್ತಿ ಬೆಳೆಸುವ ಕಾರ್ಯ ನಡೆಯಬೇಕಿದೆ. ಕುತೂಹಲ ಹೊಂದಿರುವ ಪ್ರತಿ ಮಗುವೂ ವಿಜ್ಞಾನಿಯೇ ಎಂದು ನುಡಿದರು.
ಉದ್ಘಾಟನೆ
ಹಾರಾಡಿ ಶಾಲೆಯ ನಿವೃತ್ತ ಶಿಕ್ಷಕಿ ರತ್ನಮ್ಮ ವಿ. ಅವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಪ್ರತಿಮಾ ಯು. ರೈ ಸಭಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿವೇಕಾನಂದ ಬಿಎಡ್ ಕಾಲೇಜಿನ ಉಪನ್ಯಾಸಕಿ ಅನುರಾದಾ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಅಬೂಬಕ್ಕರ್ ಬಲ್ನಾಡು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಮುದರ ಎಸ್. ಅವರು ಸ್ವಾಗತಿಸಿದರು. ಶಾಲಾ ಪ್ರೌಢಶಾಲಾ ಸಹಶಿಕ್ಷಕಿ ಪ್ರಿಯಾಕುಮಾರಿ ವಂದಿಸಿದರು. ಸಹಶಿಕ್ಷಕ ಪ್ರಶಾಂತ್ ಅನಂತಾಡಿ ಕಾರ್ಯಕ್ರಮ ನಿರ್ವಹಿಸಿದರು. ಹಾರಾಡಿ, ಕೋಡಿಂಬಾಡಿ ಹಾಗೂ ನಗರಸಭಾ ಕ್ಲಸ್ಟರ್ ವ್ಯಾಪ್ತಿಯ ಸುಮಾರು 30 ಮಂದಿ ಗಣಿತ-ವಿಜ್ಞಾನ ಶಿಕ್ಷಕರು ಹಾಗೂ 35 ಬಿಎಡ್ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು. ಗಣಿತ ವಿಷಯದ ಸಂಪನ್ಮೂಲ ವ್ಯಕ್ತಿಯಾಗಿ ರಾಧಾಕೃಷ್ಣ ಭಟ್ ಹಾಗೂ ವಿಜ್ಞಾನ ವಿಷಯದ ಸಂಪನ್ಮೂಲ ವ್ಯಕ್ತಿಯಾಗಿ ಪಶುಪತಿ ಶಾಸ್ತ್ರಿ ಮೂಡಬಿದಿರೆ ನಿರ್ವಹಿಸಿದರು. ಈ ಸಂದರ್ಭ ಕ್ಷೇತ್ರ ಸಮನ್ವಯಾಧಿಕಾರಿ ವಿಷ್ಣುಪ್ರಸಾದ್ ಸಿ., ಬಿ.ಆರ್.ಪಿ. ಪ್ರದೀಪ್, ಸಿ.ಆರ್. ಪಿ. ನಾರಾಯಣ ಪುಣಚ, ತಾಲೂಕು ಯುವಜನ ಕ್ರೀಡಾಧಿಕಾರಿ ಮಾಮಚ್ಚನ್ ಉಪಸ್ಥಿತರಿದ್ದರು. ಕುದ್ಮಾರು, ಕೃಷ್ಣನಗರ ಶಾಲೆಯ ವಿದ್ಯಾರ್ಥಿಗಳು ಭೇಟಿ ನೀಡಿ ಪ್ರದರ್ಶನ ವೀಕ್ಷಿಸಿದರು.
ಮಾದರಿಗಳ ಪ್ರದರ್ಶನ
ಹಾರಾಡಿ ಶಾಲಾ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ, ತಂತ್ರಜ್ಞಾನ, ಗಣಿತ ವಿಷಯಾಧಾರಿತ ಮಾದರಿಗಳ ಪ್ರದರ್ಶನ ಹಾಗೂ ರಂಗವಲ್ಲಿ ಪ್ರದರ್ಶನಗಳು ನಡೆದವು.